ನವದೆಹಲಿ (ಜುಲೈ 15): ಕಳೆದ ವರ್ಷ ಸೇನಾ ಜಟಾಪಟಿಗೆ ಕಾರಣವಾದ ಲಡಾಖ್ನ ಗಡಿಭಾಗದಿಂದ ಸಂಪೂರ್ಣ ಸೇನೆಗಳನ್ನ ಹಿಂಪಡೆಯಬೇಕೆಂದು ನಿರ್ಧಾರವಾದರೂ ಚೀನಾ ಮಾತ್ರ ಅದಕ್ಕೆ ಹೆಚ್ಚು ಮಹತ್ವ ಕೊಡುತ್ತಿಲ್ಲ. ಆ ಗಡಿಭಾಗದಲ್ಲಿ ತನ್ನ ಸೇನಾ ಚಟುವಟಿಕೆ ಹೆಚ್ಚಿಸುವ ಕೆಲಸ ಮಾಡುತ್ತಿದೆ. ಹೀಗಾಗಿ, ಪೂರ್ವ ಲಡಾಖ್ನಲ್ಲಿರುವ ಭಾರತ-ಚೀನಾ ಎಲ್ಎಸಿ ಗಡಿಭಾಗ ಇನ್ನೂ ಸೂಕ್ಷ್ಮವಾಗಿಯೇ ಇದೆ. ಈ ವಿಚಾರವನ್ನು ಕೇಂದ್ರ ಸಚಿವ ಎಸ್ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವರೊಂದಿಗೆ ಪ್ರಸ್ತಾಪಿಸಿ ಚರ್ಚಿಸಿದ್ದಾರೆ. ತಜಿಕಿಸ್ತಾನ ದೇಶದ ರಾಜಧಾನಿ ದುಶಾಂಬೆಯಲ್ಲಿ ನಡೆಯುತ್ತಿರುವ ಶಾಂಘೈ ಕೋ ಆಪರೇಷನ್ ಆರ್ಗನೈಸೇಶನ್ (SCO – Shanghai Cooperation Organization) ಸಭೆಯ ಸಂದರ್ಭದಲ್ಲಿ ನಿನ್ನೆ ಭಾರತ ಮತ್ತು ಚೀನಾದ ವಿದೇಶಾಂಗ ಸಚಿವರು ಭೇಟಿಯಾಗಿ ಮಾತುಕತೆ ನಡೆಸಿರುವುದು ತಿಳಿದುಬಂದಿದೆ.
ಪೂರ್ವ ಲಡಾಖ್ನ ಪ್ಯಾಂಗಾಂಗ್ ಸರೋವರ ಪ್ರದೇಶಗಳಿಂದ ಎರಡೂ ಕಡೆಯ ಸೇನೆಗಳನ್ನ ವಾಪಸ್ ಕರೆಸಿಕೊಳ್ಳಬೇಕೆಂದು ಫೆಬ್ರವರಿಯಲ್ಲಿ ನಿರ್ಧಾರವಾದರೂ ಚೀನಾದಿಂದ ಯಾವುದೇ ಸಕಾರಾತ್ಮಕ ಪ್ರಯತ್ನವಾಗಿಲ್ಲ. ಇದರಿಂದ ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧಕ್ಕೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಚೀನಾದ ಮಂತ್ರಿಗೆ ಗಡಿಭಾಗದ ಸೂಕ್ಷ್ಮ ಸ್ಥಿತಿಯನ್ನು ವಿವರಿಸಿದ್ದಾರೆ. ಶಾಂಘೈ ಸಹಕಾರ ಸಂಘಟನೆಯ ಈ ಸಭೆಯ ಹೊರಗೆ ಒಂದು ಗಂಟೆ ನಡೆದ ಈ ಮಾತುಕತೆಯಲ್ಲಿ, ಭಾರತ ಮತ್ತು ಚೀನಾದ ವಾಸ್ತವ ಗಡಿ ರೇಖೆ (LAC) ಯಲ್ಲಿ ಏಪಕ್ಷೀಯವಾಗಿ ಏನಾದರೂ ಬದಲಾವಣೆ ಮಾಡಲು ಹೋದರೆ ಅದನ್ನ ಭಾರತ ಸಹಿಸುವುದಿಲ್ಲ. ಪೂರ್ವ ಲಡಾಖ್ನಲ್ಲಿ ಶಾಂತಿಯುತ ವಾತಾವರಣ ಮರುನಿರ್ಮಾಣ ಆಗುವವರೆಗೂ ಎರಡೂ ದೇಶಗಳ ಒಟ್ಟಾರೆ ಸಂಬಂಧಕ್ಕೆ ಪುಷ್ಟಿ ಸಿಗಲು ಸಾಧ್ಯ ಎಂದು ಎಸ್ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವ್ಯಾಗ್ ಯಿ ಅವರಿಗೆ ಸ್ಪಷ್ಟಪಡಿಸಿದ್ದಾರೆ.
“ದ್ವಿಪಕ್ಷೀಯ ಒಪ್ಪಂದ ಮತ್ತು ಪ್ರೋಟೊಕಾಲ್ಗಳಿಗೆ ಸಂಪೂರ್ಣ ಬದ್ಧವಾಗಿದ್ದುಕೊಂಉಡ, ಪೂರ್ವ ಲಡಾಖ್ನ ಎಲ್ಎಸಿಯಾದ್ಯಂತ ಉಳಿದಿರುವ ಎಲ್ಲಾ ಸಮಸ್ಯೆಗೆ ಬೇಗ ಪರಿಹಾರ ಕಂಡುಕೊಳ್ಳುವುದು ಎರಡೂ ದೇಶಗಳಿಗೆ ಒಳಿತು ಎಂದು ವ್ಯಾಂಗ್ ಯಿ ಅವರಿಗೆ ಸಚಿವ ಎಸ್ ಜೈಶಂಕರ್ ಹೇಳಿದರು” ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ರಷ್ಯಾದ ಮಾಸ್ಕೋ ನಗರದಲ್ಲಿ ನಡೆದ ಇದೇ ಎಸ್ಸಿಒ ಸಭೆಯಲ್ಲಿ ಈ ಎರಡು ಸಚಿವರು ಭೇಟಿಯಾಗಿದ್ದನ್ನ ಇಲ್ಲಿ ಸ್ಮರಿಸಬಹುದು. ಅಂದು ಭಾರತ ಚೀನಾ ಗಡಿಬಿಕ್ಕಟ್ಟನ್ನು ಶಮನಗೊಳಿಸಲು ಐದು ಅಂಶಗಳ ಒಪ್ಪಂದಕ್ಕೆ ಬರಲಾಗಿತ್ತು. ಗಡಿಬಿಕ್ಕಟ್ಟಿಗೆ ಕಾರಣವಾದ ಸ್ಥಳಗಳಿಂದ ಸೇನೆಗಳನ್ನ ಹಿಂದಕ್ಕೆ ಕರೆಸಿಕೊಳ್ಳುವುದು; ತಿಕ್ಕಾಟಕ್ಕೆ ಕಾರಣವಾಗುವ ಕಾರ್ಯಗಳನ್ನ ಕೈಬಿಡುವುದು; ಹಿಂದಿನ ಎಲ್ಲಾ ಒಪ್ಪಂದಗಳಿಗೆ ಬದ್ಧವಾಗಿರುವುದು ಹೀಗೆ ಐದು ಅಂಶಗಳನ್ನ ಅನುಸರಿಸಲು ನಿರ್ಧರಿಸಲಾಗಿತ್ತು.
ಇದನ್ನೂ ಓದಿ: ನಾನು ರಾಷ್ಟ್ರಪತಿ ಚುನಾವಣೆಗೆ ನಿಲ್ಲುವುದಿಲ್ಲ, ಎಲ್ಲಾ ಊಹಾಪೋಹಗಳು ಸುಳ್ಳು: ಎನ್ಸಿಪಿ ನಾಯಕ ಶರದ್ ಪವಾರ್
ಅದಾದ ಬಳಿಕ ಪ್ಯಾಂಗಾಂಗ್ ಸರೋವರದ ಸ್ಥಳಗಳಿಂದ ಚೀನಾ ದೇಶದ ಸೇನೆಗಳು ವಾಪಸ್ ಹೋದವು. ಆದರೆ, ನಂತರ ಚೀನಾದ ಧೋರಣೆ ಬದಲಾಯಿತು. ಪೂರ್ವ ಲಡಾಖ್ನ ಎಲ್ಎಸಿ ಗಡಿಭಾಗದಲ್ಲಿ ಬೇರೆ ಸೂಕ್ಷ್ಮ ಸ್ಥಳಗಳಿಂದ ಚೀನಾ ಕಾಲ್ತೆಗೆಯುವ ಮನಸು ಮಾಡಿಲ್ಲ. ಇಲ್ಲಿ ಇನ್ನೂ ಸೂಕ್ಷ್ಮ ವಾತಾವರಣ ಹಾಗೆಯೇ ನೆಲಸಿದೆ. ಈ ವಿಚಾರವನ್ನು ದುಶಾಂಬೆಯಲ್ಲಿ ಚೀನಾ ಬಳಿ ಎಸ್ ಜೈಶಂಕರ್ ತಿಳಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಚೀನಾದ ವಿದೇಶಾಂಗ ಸಚಿವ ವ್ಯಾಂಗ್ ಯಿ ಅವರು ಜೈಶಂಕರ್ ಮಾತಿಗೆ ಸಕಾರಾತ್ಮಕ ಸ್ಪಂದನೆ ನೀಡಿರುವುದು ತಿಳಿದುಬಂದಿದೆ. ಆದಷ್ಟೂ ಶೀಘ್ರದಲ್ಲಿ ಭಾರತ ಮತ್ತು ಚೀನಾ ಮಧ್ಯೆ ಮತ್ತೊಂದು ಸುತ್ತಿನ ಮಿಲಿಟರಿ ಮಾತುಕತೆ ಏರ್ಪಡಿಸಲು ಇಬ್ಬರೂ ಒಪ್ಪಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ