ನವದೆಹಲಿ (ಜೂ. 19): ಲಡಾಖ್ನಲ್ಲಿರುವ ಗಾಲ್ವಾನ್ ಕಣಿವೆಯ ಬಳಿ 4 ದಿನಗಳ ಹಿಂದೆ ನಡೆದ ಚೀನಾ ವಿರುದ್ಧದ ದಾಳಿಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದರು. ಇನ್ನೂ 76 ಸೈನಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಚೀನಾ ದೇಶದ ವಶದಲ್ಲಿದ್ದ 10 ಭಾರತೀಯ ಸೈನಿಕರನ್ನು ಗುರುವಾರ ಸಂಜೆ ಬಿಡುಗಡೆ ಮಾಡಲಾಗಿದೆ.
ಈ ಬಗ್ಗೆ ಪಿಟಿಐ ಅಧಿಕೃತ ಮಾಹಿತಿ ನೀಡಿದ್ದು, ಇಬ್ಬರು ಮೇಜರ್ಗಳು ಸೇರಿದಂತೆ 10 ಭಾರತೀಯ ಸೇನಾ ಸಿಬ್ಬಂದಿಯನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದೆ. ಮೂರು ದಿನಗಳ ಕಾಲ ಎರಡೂ ದೇಶಗಳ ನಡುವೆ ನಡೆದ ಮಾತುಕತೆಯ ಬಳಿಕ ಭಾರತದ 10 ಯೋಧರನ್ನು ಬಿಡುಗಡೆ ಮಾಡಲಾಗಿದೆ. ಮೇಜರ್ ಜನರಲ್ ಮಟ್ಟದಲ್ಲಿ ಮಾತುಕತೆ ನಡೆಸಲಾಗಿದ್ದು, ಕೆಲವು ಒಪ್ಪಂದಗಳಿಗೆ ಒಪ್ಪಿದ ಬಳಿಕ ಚೀನಾ ಸೇನಾಪಡೆ ಭಾರತೀಯ ಸೇನಾ ಸಿಬ್ಬಂದಿಯನ್ನು ಹಸ್ತಾಂತರಿಸಿದೆ.
ಇದನ್ನೂ ಓದಿ: ಚೀನಾ ವಿರುದ್ಧದ ಸಂಘರ್ಷದಲ್ಲಿ ಗಾಯಗೊಂಡಿದ್ದ 76 ಯೋಧರು ಚೇತರಿಕೆ; ಭಾರತೀಯ ಸೇನೆ ಮಾಹಿತಿ
ಆದರೆ, ಇದುವರೆಗೂ ಭಾರತೀಯ ಸೇನಾಪಡೆಯ ಅಧಿಕಾರಿಗಳಿಂದ ಹಾಗೂ ಸರ್ಕಾರದಿಂದ ಭಾರತೀಯ ಸೇನಾ ಸಿಬ್ಬಂದಿಯ ಬಿಡುಗಡೆಯ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಸೋಮವಾರ ರಾತ್ರಿಯಿಂದ ಮಂಗಳವಾರದವರೆಗೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಮಾರಣಾಂತಿಕ ದಾಳಿಯಲ್ಲಿ ಭಾರತ-ಚೀನಾ ದೇಶಗಳೆರಡರ ಸೈನಿಕರೂ ಮೃತಪಟ್ಟಿದ್ದರು. ಆದರೆ, ಭಾರತೀಯ ಸೇನಾಪಡೆ ಅಧಿಕಾರಿಗಳು ನಮ್ಮ ದೇಶದ ಯಾವೊಬ್ಬ ಸೈನಿಕರೂ ನಾಪತ್ತೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ