ನವದೆಹಲಿ (ಜೂ. 17): ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಲಡಾಖ್ನಲ್ಲಿರುವ ಭಾರತ-ಚೀನಾ ಗಡಿಯಲ್ಲಿ ಚೀನೀ ಸೈನಿಕರು ತಗಾದೆ ತೆಗೆದಿದ್ದರು. ಮಂಗಳವಾರ ಲಡಾಖ್ ಗಡಿಯ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಇದರ ಜೊತೆಗೆ ಚೀನಾದ 43 ಸೈನಿಕರು ಕೂಡ ಸಾವನ್ನಪ್ಪಿದ್ದಾರೆ. ಈ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೊರೋನಾ ಸಂಕಷ್ಟ ಕಾಲದಲ್ಲೂ ನಡೆದ ಈ ಗುಂಡಿನ ದಾಳಿ ಬಗ್ಗೆ ಅನೇಕ ದೇಶಗಳ ಮಾಧ್ಯಮಗಳು ವರದಿ ಮಾಡಿವೆ. ಹಾಗಿದ್ದರೆ ಈ ಘಟನೆ ಬಗ್ಗೆ ಚೀನಾ ಮಾಧ್ಯಮಗಳಲ್ಲಿ ಯಾವ ರೀತಿಯ ವರದಿಗಳು ಬಿತ್ತರವಾಗಿವೆ? ಇಲ್ಲಿದೆ ಮಾಹಿತಿ..
ಸೋಮವಾರ ರಾತ್ರಿ ಲಡಾಖ್ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತೀಯ ಸೇನಾಧಿಕಾರಿ, ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎನ್ನಲಾಗಿತ್ತು. ಆದರೆ, ಮಂಗಳವಾರ ಸಂಜೆಯ ವೇಳೆಗೆ ಈ ಸಂಖ್ಯೆ 20ಕ್ಕೆ ಏರಿಕೆಯಾಗಿತ್ತು ಚೀನಾ ದೇಶದ 43 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಗಡಿಯಲ್ಲಿ ಮೃತಪಟ್ಟ ಚೀನಾ ಸೈನಿಕರನ್ನು ಏರ್ಲಿಫ್ಟ್ ಮಾಡಲಾಗಿದೆ. ಉಭಯ ದೇಶಗಳ ಸೇನಾ ಕಮಾಂಡರ್ಗಳು ಜೂ. 6ರಂದು ಸಭೆ ನಡೆಸಿ, ಗಡಿಯಿಂದ ಸೈನ್ಯವನ್ನು ಹಿಂಪಡೆಯುವ ಚರ್ಚೆ ನಡೆಸಿದ್ದರು. ಆದರೆ, ದಿಢೀರನೆ ಉಂಟಾದ ದಾಳಿಯಿಂದ ಎರಡೂ ದೇಶಗಳಲ್ಲಿ ಆತಂಕ ಎದುರಾಗಿದೆ.
ಇದನ್ನೂ ಓದಿ: ಗಾಲ್ವನ್ ಕಣಿವೆಯಲ್ಲಿ ಭಾರತ-ಚೀನಾ ನಡುವೆ ಘರ್ಷಣೆ; ದೇಶದ 20 ಸೈನಿಕರು ಹುತಾತ್ಮ
ಈ ಬಗ್ಗೆ ಚೀನಾ ಮಾಧ್ಯಮಗಳು ವರದಿ ಮಾಡಿದ್ದು, ಜೂನ್ 15ರ ಸಂಜೆ ಭಾರತೀಯ ಸೈನಿಕರು ಮತ್ತೊಮ್ಮೆ ಗಡಿ ವಾಸ್ತವ ರೇಖೆ (ಎಲ್ಎಸಿ) ದಾಟಿದ್ದರು. ಈ ಕಾರಣಕ್ಕೆ ದಾಳಿ ನಡೆಸಲಾಯಿತು. ಇದರಿಂದ ಎರಡೂ ಸೇನೆಯ ಸೈನಿಕರಿಗೆ ಗಂಭೀರ ಗಾಯಗಳಾಗಿತ್ತು ಎಂದು ಚೀನಾ ಮಿಲಿಟರಿ ವಕ್ತಾರ ಸೀನಿಯರ್ ಕೊಲೋನಿಲ್ ಝಾಂಗ್ ಶೂಲಿ ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಗಾಲ್ವಾನ್ ಕಣಿವೆ ಪ್ರದೇಶದ ಸಂಪೂರ್ಣ ಹಕ್ಕು ಚೀನಾ ದೇಶಕ್ಕೆ ಮಾತ್ರ ಇದೆ. ಭಾರತೀಯ ಸೇನೆಯೇ ಗಡಿ ಒಪ್ಪಂದವನ್ನು ಉಲ್ಲಂಘಿಸಿ, ಎಲ್ಎಸಿ ಒಳಗೆ ನುಸುಳಿತ್ತು. ಹೀಗಾಗಿ, ಅವರಿಗೆ ತಕ್ಕ ಪಾಠ ಕಲಿಸಲು ದಾಳಿ ನಡೆಸಲಾಯಿತು. ಭಾರತೀಯ ಸೇನೆ ತಕ್ಷಣ ಈ ರೀತಿಯ ಉದ್ರೇಕಕಾರಿ ದಾಳಿಯನ್ನು ನಿಲ್ಲಿಸಬೇಕು. ಹಾಗೇ, ಗಡಿಯ ಬಳಿ ನಿಯೋಜನೆ ಮಾಡಲಾಗಿರುವ ಹೆಚ್ಚುವರಿ ಸೈನಿಕರನ್ನು ವಾಪಾಸ್ ಕರೆಸಿಕೊಳ್ಳಬೇಕು. ಗಡಿಯ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದು ಝಾಂಗ್ ಶೂಲಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ ಎಂದು ಚೀನಾದ ಪತ್ರಿಕೆಗಳು ವರದಿ ಮಾಡಿವೆ.
ಇದನ್ನೂ ಓದಿ: ಇಂದು ಕೂಡ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸಭೆ; ಕೊರೋನಾ ಪರಿಸ್ಥಿತಿ ಅವಲೋಕನ
ಚೀನಾದ ಮತ್ತೊಂದು ಪತ್ರಿಕೆ ಗ್ಲೋಬಲ್ ಟೈಮ್ಸ್ ಕೂಡ ಈ ಬಗ್ಗೆ ವರದಿ ಮಾಡಿದ್ದು, ಭಾರತ ಮತ್ತು ಚೀನಾ ಸೈನಿಕರ ನಡುವಿನ ಇದುವರೆಗಿನ ದಾಳಿಗಳಲ್ಲಿ ಈ ದಾಳಿ ಅತಿ ಭೀಕರವಾಗಿದ್ದಾಗಿದೆ. ಭಾರತೀಯ ಮಾಧ್ಯಮಗಳ ಪ್ರಕಾರ 1975ರ ಬಳಿಕ ಇದೇ ಮೊದಲ ಬಾರಿಗೆ ಎರಡು ದೇಶಗಳ ಗಡಿ ವಿವಾದದಲ್ಲಿ ಭಾರತೀಯ ಸೈನಿಕರು ಹತರಾಗಿದ್ದಾರೆ. ಗಾಲ್ವಾನ್ ಕಣಿವೆಯಲ್ಲಿ ದಾಳಿ ನಡೆದಿದ್ದು ನಿಜವೆಂದು ಚೀನಾ ಸೇನೆ ಕೂಡ ಒಪ್ಪಿಕೊಂಡಿದೆ. ಆದರೆ, ಚೀನಾದ ಎಷ್ಟು ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ನೀಡಿಲ್ಲ ಎಂದು ವರದಿ ಮಾಡಲಾಗಿದೆ.
ಚೀನಾ ದೇಶಕ್ಕೆ ಭಾರತದ ಜೊತೆ ಸಂಘರ್ಷ ನಡೆಸುವುದು ಇಷ್ಟವಿಲ್ಲ. ಹೀಗಾಗಿ, ಎರಡೂ ದೇಶಗಳ ನಾಯಕರು ಗಡಿ ಬಿಕ್ಕಟ್ಟಿನ ಬಗ್ಗೆ ಮಾತುಕತೆ ನಡೆಸಿ, ಈ ಸಮಸ್ಯೆಯನ್ನು ಬಗೆಹರಿಸಿಕೊಂಡರೆ ಉತ್ತಮ. ಗಾಲ್ವಾನ್ ಕಣಿವೆಯ ಮೇಲೆ ಚೀನಾಗೆ ಸಂಪೂರ್ಣ ಹಕ್ಕಿದೆ. ಹೀಗಿರುವಾಗ ಭಾರತೀಯ ಸೇನೆ ಗಾಲ್ವಾನ್ ಒಳಗೆ ನುಸುಳಿದರೂ ಕಣ್ಮುಚ್ಚಿ ಕೂರಬೇಕೆಂದರೆ ಹೇಗೆ ಸಾಧ್ಯ? ಅತಿದೊಡ್ಡ ದೇಶಗಳಾಗಿರುವ ಭಾರತ- ಚೀನಾ ಗಡಿಯಲ್ಲಿ ಶಾಂತಿಯನ್ನು ಕಾಯ್ದುಕೊಂಡರೆ ಉತ್ತಮ. ಚೀನಾದಿಂದ ಯಾವುದೇ ರೀತಿಯ ಗಡಿ ಉಲ್ಲಂಘನೆಯಾಗಿಲ್ಲ ಎಂಬ ಬಗ್ಗೆ ಈಗಾಗಲೇ ಚೀನಾ ಸೇನೆ ಸ್ಪಷ್ಟಪಡಿಸಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ