ಲಡಾಖ್ನ ಗಡಿಭಾಗಕ್ಕೆ ಮತ್ತಷ್ಟು ಸೈನಿಕರ ನಿಯೋಜನೆ ಮಾಡದಿರಲು ಭಾರತ-ಚೀನಾ ಸೇನೆ ನಿರ್ಧಾರ
ಮೊನ್ನೆ 14 ಗಂಟೆ ಕಾಲ ನಡೆದ ಆರನೇ ಸುತ್ತಿನ ಮಾತುಕತೆಯಲ್ಲಿ ಪೂರ್ವ ಲಡಾಖ್ನ ಗಡಿಭಾಗದಲ್ಲಿ ಎರಡೂ ಕಡೆ ಮತ್ತಷ್ಟು ಸೇನಾಪಡೆಗಳ ನಿಯೋಜನೆ ಮಾಡದಿರಲು ಒಪ್ಪಲಾಗಿದೆ. ಈ ಸಂಬಂಧ ಎರಡೂ ಸೇನೆಯಿಂದ ಜಂಟಿ ಹೇಳಿಕೆ ಬಂದಿದೆ.
ನವದೆಹಲಿ(ಸೆ. 23): ಭಾರತ ಮತ್ತು ಚೀನಾದ ಎಲ್ಎಸಿ ಗಡಿಯಾದ್ಯಂತ ಪೈಪೋಟಿಯ ಮೇಲೆ ಎರಡೂ ದೇಶಗಳ ಸೇನಾ ಪಡೆಗಳ ನಿಯೋಜನೆಯಾಗಿ ಏರ್ಪಡುತ್ತಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನ ಮಾಡುವ ಪ್ರಯತ್ನ ಮುಂದುವರಿದಿದೆ. ಸದ್ಯಕ್ಕೆ ಪೂರ್ವ ಲಡಾಖ್ ಭಾಗದ ಎಲ್ಎಸಿಯಲ್ಲಿ ಎರಡೂ ಕಡೆಯ ಮತ್ತಷ್ಟು ಸೇನಾಪಡೆಗಳ ನಿಯೋಜನೆ ಮಾಡದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಎರಡೂ ಸೇನೆಗಳ ಹಿರಿಯ ಕಮಾಂಡರ್ ಮಟ್ಟದಲ್ಲಿ ಮೊನ್ನೆ (ಸೆ. 21ರಂದು) ನಡೆದ ಆರನೇ ಸುತ್ತಿನ ಮಾತುಕತೆಯಲ್ಲಿ ಈ ಬಗ್ಗೆ ಸುದೀರ್ಘ ಮಾತುಕತೆ ನಡೆದಿರುವುದು ತಿಳಿದುಬಂದಿದೆ. ಆದರೆ, ಎಲ್ಎಸಿಯಿಂದ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದಾಗಲೀ ಅಥವಾ ಏಪ್ರಿಲ್ಗೆ ಮುಂಚೆ ಇದ್ದ ಎಲ್ಎಸಿ ಸ್ಥಿತಿಗೆ ಮರಳುವುದಾಗಲೀ ಈ ಬಗ್ಗೆ ನಿರ್ಧಾರ ಆಗಿಲ್ಲ. ಈಗಿರುವ ಸೂಕ್ಷ್ಮ ಪರಿಸ್ಥಿತಿ ಹೀಗೇ ಮುಂದುವರಿಯಲಿದೆಯಾದರೂ ಇನ್ನಷ್ಟು ಸೇನಾ ನಿಯೋಜನೆ ತಪ್ಪಿಸುವುದರಿಂದ ಪರಿಸ್ಥಿತಿ ಉಲ್ಬಣಗೊಳ್ಳುವುದು ತಪ್ಪಿದಂತಾಗುತ್ತದೆ.
ಎರಡೂ ದೇಶಗಳ ಮುಖಂಡರು ಕೈಗೊಂಡ ಒಮ್ಮತದ ನಿರ್ಧಾರಗಳನ್ನ ಪ್ರಾಮಾಣಿಕವಾಗಿ ಜಾರಿಗೆ ತರಲು; ಪರಸ್ಪರ ಸಂವಹನ ಹೆಚ್ಚಿಸಲು; ಅಪಾರ್ಥಕ್ಕೆ ಎಡೆ ಮಾಡಿಕೊಡದಿರಲು ನಿರ್ಧರಿಸಲಾಗಿದೆ. ಗಡಿಭಾಗದಲ್ಲಿ ಇನ್ನಷ್ಟು ಸೇನಾ ಪಡೆಗಳನ್ನ ಕಳುಹಿಸದರಿಲು ಒಪ್ಪಲಾಗಿದೆ. ಏಕಪಕ್ಷೀಯವಾಗಿ ಗಡಿಸ್ಥಿತಿ ಬದಲಾವಣೆ ಮಾಡುವುದಾಗಲೀ, ಪರಿಸ್ಥಿತಿ ಹದಗೆಡಿಸುವಂಥ ಯಾವುದೇ ಕಾರ್ಯವನ್ನು ಕೈಗೊಳ್ಳುವುದಾಗಲೀ ಮಾಡಬಾರದು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಭಾರತ ಮತ್ತು ಚೀನಾ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
14 ಗಂಟೆಗಳ ಸುದೀರ್ಘ ಕಾಲ ನಡೆದ ಆರನೇ ಸುತ್ತಿನ ಮಾತುಕತೆಯಲ್ಲಿ ಚೀನಾ ಯಥಾಪ್ರಕಾರ ಏಕಪಕ್ಷೀಯವಾಗಿ ಒತ್ತಡ ಹಾಕಲು ಯತ್ನಿಸಿದೆ. ಆದರೆ, ಇದಕ್ಕೆ ಭಾರತ ಜಗ್ಗಿಲ್ಲ ಎಂದು ಹೇಳಲಾಗುತ್ತಿದೆ. ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯ ಬಳಿ ಇರುವ ಕೆಲ ಎತ್ತರದ ಪ್ರದೇಶಗಳು ಭಾರತೀಯ ಸೈನಿಕರ ವಶದಲ್ಲಿವೆ. ಈ ಪ್ರದೇಶದಿಂದ ಸೈನಿಕರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಮಾತುಕತೆಯಲ್ಲಿ ಚೀನಾ ಬೇಡಿಕೆ ಇಟ್ಟಿತು. ಆದರೆ, ಚೀನೀ ಸೈನಿಕರು ಅತಿಕ್ರಮಿಸಿಕೊಂಡಿರುವ ಫಿಂಗರ್ 4 ಮತ್ತು ಫಿಂಗರ್ 8 ಪ್ರದೇಶಗಳಿಂದ ಮೊದಲು ಕಾಲ್ತೆಗೆಯಿರಿ ಎಂದು ಭಾರತ ಸ್ಪಷ್ಟವಾಗಿ ಹೇಳಿತೆನ್ನಲಾಗಿದೆ.
ಏಪ್ರಿಲ್ಗಿಂತ ಮುಂಚೆ ಇದ್ದ ಸ್ಥಿತಿ ಇಲ್ಲಿ ಮರಳಬೇಕೆಂಬುದು ಭಾರತದ ಗುರಿಯಾಗಿದೆ. ಆದರೆ, ಚೀನಾ ಏಪ್ರಿಲ್ನಿಂದೀಚೆ ಬಹಳಷ್ಟು ಜಾಗಗಳನ್ನ ಅತಿಕ್ರಮಿಸಿಕೊಂಡು ಪಟ್ಟು ಹಿಡಿದು ಕೂತಿದೆ. ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಪಡೆಗಳನ್ನ ನಿಯೋಜಿಸಿ ಬಲಪ್ರದರ್ಶನ ಮಾಡುತ್ತಿದೆ. ಚೀನಾಗೆ ತಕ್ಕಂತೆ ಭಾರತ ಕೂಡ ಅಷ್ಟೇ ಪ್ರಮಾಣದಲ್ಲಿ ಸೇನಾ ಪಡೆಗಳನ್ನ ನಿಯೋಜಿಸಿ ಏಟಿಗೆ ಎದುರೇಟು ಕೊಡಲು ಅಣಿಯಾಗಿದೆ. ಹೀಗಾಗಿ, ಲಡಾಖ್ ಭಾಗದಲ್ಲಿ ಪರಿಸ್ಥಿತಿ ಯುದ್ಧಕ್ಕೆ ಹೋಗುವಷ್ಟರ ಮಟ್ಟಿಗೆ ಸೂಕ್ಷ್ಮವಾಗಿದೆ.
ಆದರೆ, ಮುಂದಿನ ತಿಂಗಳು ಲಡಾಖ್ ಭಾಗದಲ್ಲಿ ವಿಪರೀತ ಚಳಿ ವಾತಾವರಣ ಬರಲಿದೆ. ಇಲ್ಲಿ ಉಷ್ಣಾಂಶ ಮೈನಸ್ 25 ಡಿಗ್ರಿ ತಲುಪಲಿದೆ. ಆಕ್ಸಿಜನ್ ಪ್ರಮಾಣ ಕೂಡ ತೀರಾ ಕಡಿಮೆ ಮಟ್ಟಕ್ಕೆ ಬಂದಿರುತ್ತದೆ. ಈ ಪರಿಸ್ಥಿತಿಯಲ್ಲಿ ಇಲ್ಲಿ ಗಡಿ ಕಾಯುವುದೇ ಕಷ್ಟವಾಗುತ್ತದೆ. ಯುದ್ಧ ಭೀತಿ ನೆಲಸಿದರೆ ಎರಡೂ ಕಡೆಯ ಸೇನೆಗೆ ಬಹಳ ಹಾನಿಯಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಈಗ ನಡೆದ 6ನೇ ಸುತ್ತಿನ ಮಾತುಕತೆ ಅಂತಿಮ ಅಲ್ಲ. ಪರಿಸ್ಥಿತಿ ತಿಳಿಯಾಗುವವರೆಗೂ ಮಾತುಕತೆಯ ಪ್ರಯತ್ನಗಳು ಮುಂದುವರಿಯಲಿವೆ. ಶೀಘ್ರದಲ್ಲೇ ಏಳನೇ ಸುತ್ತಿನ ಮಾತುಕತೆ ನಡೆಸಲು ಎರಡೂ ಕಡೆಯ ಸೇನೆ ಒಪ್ಪಿಕೊಂಡಿವೆ ಎನ್ನಲಾಗಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ