ಲಡಾಖ್ ಗಡಿಬಿಕ್ಕಟ್ಟು: ಶಾಂತಿಯುತ ಪರಿಹಾರಕ್ಕೆ ಭಾರತ, ಚೀನಾ ಸೇನಾಧಿಕಾರಿಗಳ ನಿರ್ಧಾರ

ಎರಡೂ ಕಡೆಯವರು ಒಂದು ಪರಿಹಾರ ಕಂಡುಕೊಳ್ಳುವವರೆಗೂ ಸೇನಾ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳನ್ನ ಮುಂದುವರಿಸುತ್ತಾರೆ ಎಂದೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಭಾರತ ಮತ್ತು ಚೀನಾ ಸೈನಿಕರು

ಭಾರತ ಮತ್ತು ಚೀನಾ ಸೈನಿಕರು

 • Share this:
  ನವದೆಹಲಿ(ಜೂನ್ 07): ತಿಂಗಳ ಕಾಲ ಭಾರತ ಮತ್ತು ಚೀನಾ ಮಧ್ಯೆ ಯುದ್ಧದ ಕಾರ್ಮೋಡದ ಸೂಚನೆಗಳನ್ನು ನೀಡುತ್ತಿರುವ ಲಡಾಖ್ ಗಡಿಬಿಕ್ಕಟ್ಟು ಶೀಘ್ರವೇ ಪರಿಹಾರವಾಗುವ ಸಾಧ್ಯತೆ ಕಾಣುತ್ತಿದೆ. ನಿನ್ನೆಯಿಂದಲೇ ಎರಡೂ ದೇಶಗಳ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳು ಫಲಪ್ರದವಾಗುವ ನಿರೀಕ್ಷೆ ಇದೆ. ದ್ವಿಪಕ್ಷೀಯ ಒಪ್ಪಂದದನ್ವಯ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಎರಡೂ ದೇಶಗಳ ಸೇನಾ ಕಮಾಂಡರ್​ಗಳು ಒಪ್ಪಿಕೊಂಡಿದ್ದಾರೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇವತ್ತು ಭಾನುವಾರ ತಿಳಿಸಿದೆ.

  ವಾಸ್ತವಿಕ ಗಡಿನಿಯಂತ್ರಣ ರೇಖೆಯ ಚೀನಾ ಬದಿಯ ಚುಂಶುಲ್ ಸೆಕ್ಟರ್​ನಲ್ಲಿರುವ ಮಾಲ್ಡೋದ ಗಡಿ ಸಿಬ್ಬಂದಿ ಮೀಟಿಂಗ್ ಪಾಯಿಂಟ್ ಬಳಿ ಭಾರತ ಮತ್ತು ಚೀನಾ ಮಿಲಿಟರಿ ಉನ್ನತ ಅಧಿಕಾರಿಗಳು ಮಾತುಕತೆ ನಡೆಸಿ ನಿರ್ಧಾರಕ್ಕೆ ಬಂದಿದ್ಧಾರೆನ್ನಲಾಗಿದೆ.

  ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳನ್ನ ಗಮನದಲ್ಲಿಟ್ಟುಕೊಂಡು, ಹಾಗೂ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಗಡಿಭಾಗದಲ್ಲಿ ಶಾಂತಿ, ಸೌಹಾರ್ದತೆ ಅಗತ್ಯ ಎಂದು ಎರಡೂ ದೇಶಗಳ ನಾಯಕರು ಒಪ್ಪಂದ ಮಾಡಿಕೊಂಡಿರುವುದನ್ನ ಗಮನದಲ್ಲಿಟ್ಟುಕೊಂಡು ಸೇನಾಧಿಕಾರಿಗಳು ಗಡಿಸಮಸ್ಯೆಗೆ ಶಾಂತಿಯುತ ಪರಿಹಾರಕ್ಕೆ ಆಸಕ್ತಿ ತೋರಿದ್ಧಾರೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಹೇಳಿದೆ.

  ಇದನ್ನೂ ಓದಿ: Atlas Cycles: ಸವಾರಿ ನಿಲ್ಲಿಸಿದ ಅಟ್ಲಾಸ್​ ಸೈಕಲ್​; ದೇಶದ ಹೆಮ್ಮೆಯ ಸಂಸ್ಥೆಗೆ ಬೀಗ!

  ಎರಡೂ ಕಡೆಯವರು ಒಂದು ಪರಿಹಾರ ಕಂಡುಕೊಳ್ಳುವವರೆಗೂ ಸೇನಾ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳನ್ನ ಮುಂದುವರಿಸುತ್ತಾರೆ ಎಂದೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

  ಲಡಾಖ್​ನ ಪ್ಯಾಂಗೋಂಗ್ ಟ್ಸೋ ಸರೋವರದ ಬಳಿ ಇರುವ ಎಲ್​ಎಸಿ ಗಡಿಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಚೀನಾ ಸೈನಿಕರು ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದ್ಧಾರೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರೂ ಕೂಡ ಪ್ರತಿರೋಧ ತೋರುತ್ತಿದ್ಧಾರೆ. ಸರೋವರದ ಬಳಿಯ ಗಡಿಭಾಗದ ಒಂದು ಆಯಕಟ್ಟಿನ ಜಾಗದಲ್ಲಿ ಭಾರತ ರಸ್ತೆ ನಿರ್ಮಿಸುತ್ತಿದೆ. ಹಾಗೆಯೇ, ಗಾಲ್ವನ್ ಕಣಿವೆಯಲ್ಲಿ ಡರ್ಬುಕ್-ಶಯೋಕ್-ದೌಲತ್ ಬೇಗ್ ಓಲ್ಡೀ ರಸ್ತೆಯನ್ನು ಸಂಪರ್ಕಿಸುವ ಮತ್ತೊಂದು ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಇದು ಚೀನೀಯರ ಕೆಂಗಣ್ಣಿಗೆ ಕಾರಣವಾಗಿದೆ. ಈ ರಸ್ತೆ ನಿರ್ಮಾಣ ಕಾರ್ಯಕ್ಕೆ ಚೀನೀಯರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ.

  ಇದನ್ನೂ ಓದಿ: Reliance Jio | ಜಿಯೋ ಪ್ಲಾಟ್​ಫಾರಂನಲ್ಲಿ ಮತ್ತೆ 4,546 ಕೋಟಿ ಹೂಡಿಕೆ ಮಾಡಿದ ಸಿಲ್ವರ್ ಲೇಕ್ ಕಂಪನಿ

  ಪ್ಯಾಂಗೋಂಗ್ ಟ್ಸೋ ಮತ್ತು ಗಾಲ್ವನ್ ಕಣಿವೆಯಲ್ಲಿ ಚೀನಾ 2,500 ಸೇನಾ ತುಕಡಿಗಳನ್ನ ನಿಯೋಜಿಸಿದೆ. ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನ ಗಡಿಭಾಗದಲ್ಲಿ ಶೇಖರಿಸುತ್ತಿದೆ. ಭಾರತ ಕೂಡ ಹೆಚ್ಚುವರಿ ತುಕಡಿಗಳನ್ನು ಲಡಾಖ್ ಗಡಿಭಾಗಕ್ಕೆ ನಿಯೋಜಿಸುತ್ತಿದೆ.

  ಈ ಪರಿಸ್ಥಿತಿ ಹೀಗೇ ಮುಂದುವರಿದರೆ ಎರಡೂ ದೇಶಗಳ ಮಧ್ಯೆ ಯುದ್ಧದ ಕಾರ್ಮೋಡ ಕವಿಯಬಹುದು ಎಂದು ಹಲವರು ಎಚ್ಚರಿಸಿದ್ದಾರೆ. ಕೊರೋನಾ ಸಂಕಷ್ಟದಲ್ಲಿರುವಾಗ ಸಣ್ಣ ಮಟ್ಟದ ಯುದ್ಧವೂ ದುಬಾರಿಯಾದೀತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  First published: