ರಷ್ಯಾದಲ್ಲಿ ಮುಂದಿನ ತಿಂಗಳು ಭಾರತ, ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಸಮರಾಭ್ಯಾಸ

ರಷ್ಯಾ, ಭಾರತ, ಚೀನಾ, ಪಾಕಿಸ್ತಾನ ಸೇರಿದಂತೆ ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ಸೈನಿಕರು ಸೆ. 15ರಿಂದ 12 ದಿನಗಳ ಕಾಲ ಸಮರಕ್ರೀಡೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

2019, ಡಿ. 4ರಂದು ಭಾರತೀಯ ನೌಕಾ ದಿನ ಆಚರಣೆಯಲ್ಲಿ ಭಾಗಿಯಾಗಿದ್ದ ಸೈನಿಕರು

2019, ಡಿ. 4ರಂದು ಭಾರತೀಯ ನೌಕಾ ದಿನ ಆಚರಣೆಯಲ್ಲಿ ಭಾಗಿಯಾಗಿದ್ದ ಸೈನಿಕರು

  • Share this:
ನವದೆಹಲಿ(ಆ. 27): ಲಡಾಖ್ ಗಡಿಭಾಗದಲ್ಲಿ ಭೀಕರ ಸಂಘರ್ಷ ನಡೆಸಿದ್ದ ಭಾರತ ಮತ್ತು ಚೀನಾ ಸೇನೆ ಇದೀಗ ಜಂಟಿಯಾಗಿ ವಾರ್​​ಗೇಮ್​ನಲ್ಲಿ ಪಾಲ್ಗೊಳ್ಳಲಿವೆ. ಮುಂದಿನ ತಿಂಗಳು ರಷ್ಯಾದಲ್ಲಿ ನಡೆಯಲಿರುವ “Kavkaz 2020” ಸಮರ ಕ್ರೀಡೆಯಲ್ಲಿ ಭಾರತ, ಚೀನಾ ಸೇರಿದಂತೆ ಅನೇಕ ದೇಶಗಳು ಪಾಲ್ಗೊಳ್ಳಲಿವೆ. ಶಾಂಘೈ ಸಹಕಾರ ಸಂಘಟನೆಯ (ಎಸ್​ಸಿಒ) ಸದಸ್ಯರಾದ ಪಾಕಿಸ್ತಾನ ಮತ್ತಿತರ ಹಲವು ದೇಶಗಳೂ ಕೂಡ ಈ ಮಲ್ಟಿಲ್ಯಾಟರಲ್ ವಾರ್​ಗೇಮ್​ನಲ್ಲಿ ಭಾಗವಹಿಸಲಿವೆ. ಭಾರತದ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ತುಕಡಿಗಳನ್ನ ಇದಕ್ಕಾಗಿ ರಷ್ಯಾಗೆ ಕಳುಹಿಸಿಕೊಡಲಾಗಲಿದೆ.

ಇದೇ ಜೂನ್ ತಿಂಗಳಲ್ಲಿ ಮಾಸ್ಕೋದ ಐತಿಹಾಸಿಕ ರೆಡ್ ಸ್ಕ್ವಯರ್​ನಲ್ಲಿ ನಡೆದಿದ್ದ ವಿಜಯೋತ್ಸವ ಮೆರವಣಿಗೆಯಲ್ಲಿ (ವಿಕ್ಟರಿ ಡೇ ಪೆರೇಡ್) ಭಾರತ ಮತ್ತು ಚೀನಾದ ಸೈನಿಕರು ಪಾಲ್ಗೊಂಡಿದ್ದರು. ಎರಡನೇ ವಿಶ್ವ ಮಹಾಯುದ್ಧದಲ್ಲಿ ಹಿಟ್ಲರ್ ಆಡಳಿತದ ಜರ್ಮನಿ ವಿರುದ್ಧ ಸೋವಿಯತ್ ಒಕ್ಕೂಟ ಗೆಲುವು ಸಾಧಿಸಿದ 75ನೇ ವರ್ಷದ ವಿಜಯೋತ್ಸವ ಆಚರಣೆ ಅದಾಗಿತ್ತು. ಆಗ ಒಟ್ಟಿಗೆ ಪೆರೇಡ್ ಮಾಡಿದ್ದ ಭಾರತ ಮತ್ತು ಚೀನಾ ಸೈನಿಕರು ಮುಂದಿನ ತಿಂಗಳು ಮತ್ತೊಮ್ಮೆ ಜೊತೆ ಸೇರಲಿದ್ದಾರೆ.

ರಷ್ಯಾದ ದಕ್ಷಿಣ ಭಾಗದಲ್ಲಿರುವ ಅಸ್ಟ್ರಖಾನ್ ಪ್ರದೇಶದಲ್ಲಿ ಸೆಪ್ಟೆಂಬರ್ 15ರಿಂದ 26ರವರೆಗೆ ಸಮರ ಕ್ರೀಡೆ ನಡೆಯುವ ಸಾಧ್ಯತೆ ಇದೆ. ಒಟ್ಟು 150 ಭಾರತೀಯ ಸೈನಿಕರು ಮುಂದಿನ ತಿಂಗಳು ಅಲ್ಲಿಗೆ ತೆರಳಲಿದ್ದಾರೆ. ಅವರಲ್ಲಿ ವಾಯುಪಡೆಯ 45 ಸೈನಿಕರು ಇರಲಿದ್ದಾರೆ.

ಇದನ್ನೂ ಓದಿ: ನೀಟ್​​, ಜೆಇಇ ಎಕ್ಸಾಂಗೆ ಮೂಹೂರ್ತ ಫಿಕ್ಸ್​ - ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ನಾಳೆ ದೇಶಾದ್ಯಂತ ಕಾಂಗ್ರೆಸ್​ ಪ್ರತಿಭಟನೆ

ಕೊರೋನಾ ವೈರಸ್ ಬಿಕ್ಕಟ್ಟು ವಕ್ಕರಿಸಿದ ನಂತರ ಭಾರತ ಬಹುದೇಶಗಳ ಮಿಲಿಟರಿ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲಾಗಿದೆ. ಹಿಂದೆಲ್ಲಾ ಅನೇಕ ಬಾರಿ ಚೀನಾ ಜೊತೆ ಜಂಟಿ ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದಿದೆ. ಪಾಕಿಸ್ತಾನದ ಜೊತೆಯೂ ಭಾರತ ಇಂಥ ಕಾರ್ಯಗಳಲ್ಲಿ ಕೈಜೋಡಿಸಿರುವುದುಂಟು. ವಿಶ್ವದ ಹಲವು ದೇಶಗಳು ಪರಸ್ಪರ ಇಂಥ ಜಂಟಿ ಸಮರಾಭ್ಯಾಸಗಳನ್ನ ಮಾಡುತ್ತವೆ.

ಆದರೆ, ಗಾಲ್ವನ್ ಕಣಿವೆಯಲ್ಲಿ ಚೀನೀ ಸೈನಿಕರು ಅತಿಕ್ರಮಣ ಮಾಡಿ ಭಾರತೀಯ ಸೈನಿಕರ ಮೇಲೆ ಅಮಾನುಷ ಹಲ್ಲೆ ಮಾಡಿದ ಘಟನೆ ಹಿನ್ನೆಲೆಯಲ್ಲಿ ಎರಡೂ ಕಡೆಯ ಸೈನಿಕರು ಜಂಟಿಯಾಗಿ ಸಮರಕ್ರೀಡೆಯಲ್ಲಿ ಪಾಲ್ಗೊಳ್ಳಲಿರುವುದು ಕುತೂಹಲ ಮೂಡಿಸಿದೆ. ಭಾರತ ಮತ್ತು ಚೀನಾ ಮಧ್ಯೆ ಶಾಂತಿಯುತ ಸಂಬಂಧ ಇದ್ದರೆ ಈ ಪ್ರದೇಶದಲ್ಲಿ ಸ್ಥಿರತೆ ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ರಷ್ಯಾದ ಅಭಿಪ್ರಾಯ. ಅಂತೆಯೇ, ದ್ವಿಪಕ್ಷೀಯ ಮಾತುಕತೆ ಮೂಲಕ ವಿವಾದ ಮತ್ತು ವೈಮಸನ್ನ ಶಮನಗೊಳಿಸಬೇಕೆಂದು ರಷ್ಯಾ ತಿಳಿಹೇಳುತ್ತಿದೆ.

ಇದನ್ನೂ ಓದಿ: ಪುಲ್ವಾಮಾ ದಾಳಿಗೆ ಸಹಾಯ ಮಾಡಿದ್ದಳು ಉಗ್ರನ ಪ್ರೇಯಸಿ!

ಏನಿದು ಶಾಂಘೈ ಸಹಕಾರ ಸಂಘಟನೆ?

ಅಮೆರಿಕ ಮತ್ತು ಯೂರೋಪ್ ರಾಷ್ಟ್ರಗಳ NATO ಮೈತ್ರಿಗುಂಪಿಗೆ ಪರ್ಯಾಯವಾಗಿ ಚೀನಾ, ರಷ್ಯಾ ನೇತೃತ್ವದಲ್ಲಿ ರೂಪುಗೊಂಡಿರುವುದು ಶಾಂಘೈ ಸಹಕಾರ ಸಂಘಟನೆ (SCO). ರಾಜಕೀಯ, ಆರ್ಥಿಕ ಮತ್ತು ಭದ್ರತಾ ವಿಚಾರಗಳಲ್ಲಿ ಒಗ್ಗಟ್ಟಿನಿಂದ ಇರುವುದು ಈ ಸಂಘಟನೆಯ ಉದ್ದೇಶ. ಸದ್ಯ ಎಂಟು ದೇಶಗಳು ಮಾತ್ರ ಇದರ ಸದಸ್ಯರಾಗಿವೆ. ಅದರಲ್ಲೂ ಭಾರತ ಮತ್ತು ಚೀನಾ 2017ರಲ್ಲಷ್ಟೇ ಇದಕ್ಕೆ ಸೇರ್ಪಡೆಯಾಗಿದ್ದು. 1996ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಶಾಂಘೈ ಫೈವ್ ಸಂಘಟನೆಯನ್ನು ಮಾರ್ಪಡಿಸಿ 2002ರಲ್ಲಿ ಶಾಂಘೈ ಸಹಕಾರ ಸಂಘಟನೆಯನ್ನು ಜಾರಿಗೆ ತರಲಾಯಿತು.

ಚೀನಾ, ರಷ್ಯಾ, ಕಜಕಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ಉಜ್ಬೆಕಿಸ್ತಾನ್, ಭಾರತ ಮತ್ತು ಪಾಕಿಸ್ತಾನ ದೇಶಗಳು ಈ ಎಸ್​ಸಿಒ ಸದಸ್ಯ ದೇಶಗಳಾಗಿವೆ. ವಿಶ್ವದ ಶೇ. 44ರಷ್ಟು ಜನಸಂಖ್ಯೆ ಹೊಂದಿರುವ ಈ ರಾಷ್ಟ್ರಗಳ ಈ ಮೈತ್ರಿಕೂಟವು ವಿಶ್ವದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಬಲ್ಲುದಾ? ಚೀನಾ ಮತ್ತು ಪಾಕಿಸ್ತಾನದಂಥ ಆಕ್ರಮಣಕಾರಿ ದೇಶಗಳ ಜೊತೆ ಭಾರತ ಸೌಹಾರ್ದಯುತವಾಗಿ ಇರಲು ಸಾಧ್ಯವೇ ಎಂಬುದು ಪ್ರಶ್ನೆ.
Published by:Vijayasarthy SN
First published: