ಮಾಸ್ಕೋದಲ್ಲಿ ಭಾರತ, ಚೀನಾ ವಿದೇಶಾಂಗ ಸಚಿವರ ಭೇಟಿ; 5 ಅಂಶಗಳಿಗೆ ಸಹಮತ

ರಷ್ಯಾದ ಮಾಸ್ಕೋದಲ್ಲಿ ನಡೆದ ಶಾಂಘೈ ಕೋಆಪರೇಶನ್ ಸಂಘಟನೆಯ ಸಮಾವೇಶದ ವೇಳೆ ಭಾರತ ಮತ್ತು ಚೀನಾ ವಿದೇಶಾಂಗ ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಗಡಿ ಕಗ್ಗಂಟು ನಿವಾರಿಸುವ ಸಂಬಂಧ ವಿಚಾರ ವಿನಿಯಮ ಆಗಿದೆ.

ಭಾರತ ಮತ್ತು ಚೀನಾ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಮತ್ತು ವಾಂಗ್ ಯಿ

ಭಾರತ ಮತ್ತು ಚೀನಾ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಮತ್ತು ವಾಂಗ್ ಯಿ

  • Share this:
    ಮಾಸ್ಕೋ(ಸೆ. 11): ಲಡಾಖ್ ಗಡಿಬಿಕ್ಕಟ್ಟು ಭಾರತ ಮತ್ತು ಚೀನಾ ಮಧ್ಯೆ ಯುದ್ಧದ ವಾತಾವರಣ ನಿರ್ಮಿಸಿದೆ. ಕೋವಿಡ್ ಮತ್ತು ಆರ್ಥಿಕ ಸಂಕಷ್ಟದಿಂದ ಜರ್ಝರಿತಗೊಂಡಿರುವ ಈ ಪರಿಸ್ಥಿತಿಯಲ್ಲಿ ಯಾವ ದೇಶಕ್ಕೂ ಯುದ್ಧ ಬೇಕಿಲ್ಲ. ಆದರೂ ಲಡಾಖ್ ಭಾಗದಲ್ಲಿ ಚೀನಾದ ಆಕ್ರಮಣಕಾರಿ ವರ್ತನೆ ಮುಂದುವರಿದಿದೆ. ಇದರಿಂದ ಉದ್ಭವಿಸಿರುವ ಸೂಕ್ಷ್ಮ ಪರಿಸ್ಥಿತಿಯನ್ನು ತಿಳಿಗೊಳಿಸಲು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರಯತ್ನಿಸಿದ್ದಾರೆ. ರಷ್ಯಾದ ಮಾಸ್ಕೋ ನಗರದಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಜೈಶಂಕರ್ ಭೇಟಿಯಾಗಿ ಗಡಿಬಿಕ್ಕಟ್ಟು ವಿಚಾರಗಳನ್ನ ಚರ್ಚಿಸಿದ್ದಾರೆ. 2-3 ಗಂಟೆ ಕಾಲ ನಡೆದ ಈ ಮಾತುಕತೆಯಲ್ಲಿ ಐದು ಅಂಶಗಳಿಗೆ ಇಬ್ಬರೂ ಸಹಮತ ವ್ಯಕ್ತಪಡಿಸಿರುವುದು ತಿಳಿದುಬಂದಿದೆ. ಲಡಾಖ್​ನಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಿದೆ. ಪರಿಸ್ಥಿತಿಯನ್ನು ಬೇಗನೇ ನಿಯಂತ್ರಿಸುವುದು ಎರಡೂ ದೇಶಗಳ ಹಿತಾಸಕ್ತಿ ದೃಷ್ಟಿಯಿಂದ ಒಳ್ಳೆಯದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಚೀನಾಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರೆನ್ನಲಾಗಿದೆ.

    ಚೀನಾ ಕೂಡ ಇದನ್ನ ಅಂಗೀಕರಿಸಿದೆ. ಭಾರತ ಮತ್ತು ಚೀನಾ ಬೃಹತ್ ಅಭಿವೃದ್ಧಿಶೀಲ ದೇಶಗಳಾಗಿದ್ದು, ಪರಸ್ಪರ ಸಂಘರ್ಷದ ಬದಲು ಸಹಕಾರದ ಅಗತ್ಯತೆ ಇದೆ ಎಂಬುದನ್ನು ಚೀನಾ ಒಪ್ಪಿಕೊಂಡಿದೆ. ಹಾಗೆಯೇ, ಗಡಿ ಕಗ್ಗಂಟನ್ನು ನಿವಾರಿಸಲು ಬಹಳಷ್ಟು ಸಮಯ ಮತ್ತು ಪ್ರಯತ್ನಗಳ ಅಗತ್ಯ ಇದೆ. ಗಡಿ ಪ್ರದೇಶಗಳಲ್ಲಿ ಶಾಂತಿ ಪಾಲನೆ ಮಾಡುವುದು ಎರಡೂ ದೇಶಗಳ ಸಂಬಂಧವೃದ್ಧಿಗೆ ಅಗತ್ಯ ಎಂಬುದನ್ನು ಎರಡೂ ದೇಶಗಳು ಒಪ್ಪಿಕೊಂಡಿವೆ.

    ಇದನ್ನೂ ಓದಿ: Rafale Jets Induction: ಭಾರತೀಯ ವಾಯುಪಡೆಗೆ ರಫೆಲ್​ ಸೇರ್ಪಡೆ: ಐಎಎಫ್​ಗೆ ಶುಭಕೋರಿದ ಎಂಎಸ್ ಧೋನಿ

    ನೆರೆಯ ದೇಶಗಳಾಗಿರುವುದರಿಂದ ಭಾರತ ಮತ್ತು ಚೀನಾ ಮಧ್ಯೆ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಈಗ ಸಂಬಂಧ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಒಳಪಡುತ್ತಿದೆ. ನಾವು ಈ ಸವಾಲನ್ನು ಎದುರಿಸಿ ನಿಲ್ಲಬಲ್ಲೆವು ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಗಡಿಭಾಗದಲ್ಲಿ ಭಾರತವೇ ಪ್ರಚೋದನೆ ಮಾಡುತ್ತಿದೆ ಎಂಬ ಆಪಾದನೆಯನ್ನೂ ಅವರು ಮಾಡಿದರು. ಆದರೆ, ಚೀನಾದ ಈ ಆರೋಪವನ್ನು ಭಾರತ ಸ್ಪಷ್ಟವಾಗಿ ಅಲ್ಲಗಳೆಯಿತು. “ಎಲ್​ಎಸಿ ಗಡಿಯಾದ್ಯಂತ ಚೀನಾದ ಸೇನಾ ಪಡೆಗಳ ಆಕ್ರಮಣಕಾರಿ ವರ್ತನೆಯಿಂದಲೇ ಹಲವು ಸಂಘರ್ಷ ಘಟನೆಗಳು ಸಂಭವಿಸಿದ್ದು, ದ್ವಿಪಕ್ಷೀಯ ಒಪ್ಪಂದಗಳ ಆಶಯಕ್ಕೆ ಧಕ್ಕೆ ತಂದಿವೆ” ಎಂದು ಭಾರತ ತಿಳಿಸಿದೆ ಎನ್ನಲಾಗಿದೆ.

    ಎಲ್​ಎಸಿ ಗಡಿಯಾದ್ಯಂತ ಶಸ್ತ್ರಸಜ್ಜಿತರಾಗಿ ಚೀನಾ ಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಭಾರತ, ಇದರಿಂದ 1993 ಮತ್ತು 1996ರ ಒಪ್ಪಂದದ ಆಶಯಕ್ಕೆ ವಿರುದ್ಧವಾಗಿದೆ ಎಂದು ವಾದಿಸಿತು. ಆದರೆ, ಗಡಿಭಾಗದಲ್ಲಿ ಸೇನಾ ಜವಾವಣೆ ಬಗ್ಗೆ ಚೀನಾ ಸರಿಯಾದ ವಿವರಣೆ ನೀಡಲು ವಿಫಲವಾಯಿತು ಎಂದು ಮೂಲಗಳು ಹೇಳಿವೆ.

    ಇದನ್ನೂ ಓದಿ: ಕಂಗನಾ VS ಶಿವಸೇನೆ ಜಟಾಪಟಿ; ನಟಿಯ ಧೈರ್ಯವನ್ನು ಭಗತ್ ಸಿಂಗ್‌ಗೆ ಹೋಲಿಸಿದ ಖ್ಯಾತ ಟಾಲಿವುಡ್‌ ನಟ ವಿಶಾಲ್

    ಗಡಿ ಭಾಗದ ನಿರ್ವವಣೆ ಸಂಬಂಧ ಇರುವ ಎಲ್ಲಾ ಒಪ್ಪಂದಗಳಿಗೆ ಭಾರತ ಸಂಪೂರ್ಣವಾಗಿ ಬದ್ಧವಾಗಿರುತ್ತದೆ. ಏಕಪಕ್ಷೀಯವಾಗಿ ಗಡಿ ಸ್ಥಿತ್ಯಂತರಕ್ಕೆ ಪ್ರಯತ್ನ ಮಾಡುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಬಹಳ ಸ್ಪಷ್ಟವಾಗಿ ಚೀನಾಗೆ ತಿಳಿಸಿದ್ದಾರೆ.

    ಕೆಲ ತಿಂಗಳುಗಳಿಂದಲೂ ಲಡಾಖ್-ಟಿಬೆಟ್ ಗಡಿಭಾಗದಲ್ಲಿ ಚೀನೀ ಸೈನಿಕರು ಆಕ್ರಮಣಕಾರಿಯಾಗಿ ವರ್ತನೆ ತೋರುತ್ತಾ ಬಂದಿದ್ದಾರೆ. ಭಾರತದ ಸೈನಿಕರು ಅಷ್ಟೇ ಪ್ರಬಲವಾಗಿ ಪ್ರತಿರೋಧ ಒಡ್ಡುತ್ತಾ ಬಂದಿದ್ದಾರೆ. ಪ್ಯಾಂಗಾಂಗ್ ಸರೋವರದ ಉತ್ತರ ಭಾಗದಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಸಂಘರ್ಷದ ವಾತಾವರಣಕ್ಕೆ ಎಡೆ ಮಾಡಿಕೊಟ್ಟಿದ್ದರು. ಗಾಲ್ವನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಮೇಲೆ ಅಮಾನುಷವಾಗಿ ದಾಳಿ ನಡೆಸಿ 20 ಮಂದಿಯನ್ನು ಬಲಿತೆಗೆದುಕೊಂಡಿದ್ದರು. ಆ ಘಟನೆಯಲ್ಲಿ ಚೀನೀ ಸೈನಿಕರಿಗೂ ಹಾನಿಯಾಗಿದೆಯಾದರೂ ಎಷ್ಟು ಮಂದಿ ಸಾವನ್ನಪ್ಪಿದರೆಂಬ ಅಧಿಕೃತ ಮಾಹಿತಿ ಬಂದಿಲ್ಲ. ಅದಾದ ಬಳಿಕ ಪ್ಯಾಂಗಾಂಗ್ ಸರೋವರದ ದಕ್ಷಿಣ ಭಾಗದಲ್ಲಿ ಈಗ ಚೀನಾ ಕಿತಾಪತಿ ಮಾಡುತ್ತಿದೆ. ಭಾರತದ ಸೈನಿಕರು ಯಾವುದಕ್ಕೂ ಜಗ್ಗದೆ ಚೀನೀಯರನ್ನು ಹಿಮ್ಮೆಟ್ಟಿಸುತ್ತಿದ್ದಾರೆನ್ನಲಾಗುತ್ತಿದೆ. ಲಡಾಖ್ ಗಡಿಭಾಗದ ಆಯಕಟ್ಟಿನ ಅನೇಕ ಎತ್ತರ ಪ್ರದೇಶಗಳು ಭಾರತದ ವಶದಲ್ಲೇ ಇವೆ.
    Published by:Vijayasarthy SN
    First published: