ಚೀನಾ ವಿಚಾರದಲ್ಲಿ ಅವರಿಗೆ ಮಾಹಿತಿ ಇಲ್ಲ, ಹಕ್ಕೂ ಇಲ್ಲ: ರಾಹುಲ್ ಹೇಳಿಕೆಗೆ ಅಮಿತ್ ತಿರುಗೇಟು
ಚೀನಾದ ಅತಿಕ್ರಮಣದ ವಿಚಾರದಲ್ಲಿ ಕೇಂದ್ರ ಸರ್ಕಾರ ದೇಶವನ್ನು ದುರ್ಬಲಗೊಳಿಸುತ್ತಿದೆ ಎಂದು ರಾಹುಲ್ ಗಾಂಧಿ ಮಾಡಿದ ಟೀಕೆಗೆ ಅಮಿತ್ ಶಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ತಾತ ನೆಹರೂ ಅವರು 1982ರಲ್ಲಿ ಚೀನಾಗೆ ಎಷ್ಟು ಭೂಭಾಗ ಬಿಟ್ಟುಕೊಟ್ಟರೆಂಬ ಮಾಹಿತಿ ತಿಳಿಸಲಿ ಎಂದು ಆಗ್ರಹಿಸಿದ್ದಾರೆ.
ನವದೆಹಲಿ: ಭಾರತ ಮತ್ತು ಚೀನಾ ನಡುವಿನ ವಿವಾದದ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಟೀಕೆಗಳನ್ನ ಅಲ್ಲಗಳೆದಿರುವ ಗೃಹ ಸಚಿವ ಅಮಿತ್ ಶಾ, ಈ ವಿಚಾರದಲ್ಲಿ ರಾಹುಲ್ ಗಾಂಧಿಗೆ ಬೆರಳು ತೋರಿಸುವ ಯಾವ ಹಕ್ಕೂ ಇಲ್ಲ ಎಂದಿದ್ದಾರೆ. ರಾಹುಲ್ ಗಾಂಧಿ ಯಾವಾಗಲೂ ಆಧಾರರಹಿತ ಹೇಳಿಕೆ ನೀಡುತ್ತಲೇ ಇರುತ್ತಾರೆ. ಅವರ ಹೇಳಿಕೆಗೆ ಪೂರಕವಾದ ಮಾಹಿತಿ ಅವರಲ್ಲಿ ಇರುವುದಿಲ್ಲ. ಈ ಹೇಳಿಕೆಗಳನ್ನ ನೀಡುವ ಯಾವ ಹಕ್ಕೂ ಅವರಿಗೆ ಇಲ್ಲ ಎಂದು ರಾಹುಲ್ ಗಾಂಧಿ ಅವರನ್ನ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ.
ನ್ಯೂಸ್18 ವಾಹಿನಿಯ ಮುಖ್ಯ ಸಂಪಾದಕ ರಾಹುಲ್ ಜೋಷಿ ಅವರೊಂದಿಗಿನ ಸಂದರ್ಶನದಲ್ಲಿ ರಾಹುಲ್ ಗಾಂಧಿ ಟೀಕೆಯ ವಿಚಾರದ ಬಗ್ಗೆ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಎಷ್ಟು ಭೂಭಾಗವನ್ನು ಚೀನಾಗೆ ನೀಡಿತು ಎಂಬ ಮಾಹಿತಿಯನ್ನು ರಾಹುಲ್ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಹಾಗೆಯೇ, 1962ರಲ್ಲಿ ಅವರ ತಾತ ಜವಾಹರಲಾಲ್ ನೆಹರೂ ಅವರು ಪ್ರಧಾನಿಯಾಗಿದ್ದಾಗಿನ ಸಂದರ್ಭದ ಬಗ್ಗೆ ತಾನು ಇಲ್ಲಿ ಹೇಳಿದ್ದಾಗಿ ಶಾ ಸ್ಪಷ್ಟಪಡಿಸಿದ್ದಾರೆ.
ಲಡಾಖ್ನಲ್ಲಿನ ಎಲ್ಎಸಿ ಗಡಿಭಾಗದಲ್ಲಿ ಚೀನಾ ಅತಿಕ್ರಮಣ ಮಾಡಲು ಯತ್ನಿಸಿದ ಘಟನೆ ಹಾಗೂ ನಮ್ಮ ಭಾಗಕ್ಕೆ ಬಂದು 20 ಭಾರತೀಯ ಸೈನಿಕರನ್ನು ಕೊಂದು ಹ ಆಕಿದ ಘಟನೆಯನ್ನ ರಾಹುಲ್ ಗಾಂಧಿ ಉಲ್ಲೇಖಿಸುತ್ತಾ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶವನ್ನು ದುರ್ಬಲಗೊಳಿಸುತ್ತಿದೆ. ಈ ಸಂದರ್ಭದಲ್ಲಿ ಯುಪಿಎ ಅಧಿಕಾರದಲ್ಲಿದ್ದಿದ್ದರೆ ಚೀನಾವನ್ನು 15 ನಿಮಿಷಗಳ ಅಂತರದಲ್ಲಿ ಹೊರಗೆ ವಾಪಸ್ ಕಳುಹಿಸುತ್ತಿದ್ದೆವು ಎಂದು ಟೀಕಿಸಿದ್ದರು. ಈ ಬಗ್ಗೆ ಅಮಿತ್ ಶಾ ನ್ಯೂಸ್18 ಸಂದರ್ಶನದಲ್ಲಿ ತೀಕ್ಷ್ಣ ಪ್ರತಿ್ಕ್ರಿಯೆ ನೀಡಿದ್ದಾರೆ.
ಇದೇ ವೇಳೆ, ಚೀನಾದ ಪಿಎಲ್ಎ ಸೇನೆಗೆ ಯುದ್ಧಕ್ಕೆ ಸನ್ನದ್ಧರಾಗಿರಬೇಕೆಂದು ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸೂಚಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಭಾರತೀಯ ಸೇನೆ ಯಾವುದೇ ಸಂದರ್ಭ ಬಂದರೂ ಎದುರಿಸಲು ಸದಾ ಸಿದ್ಧವಿರುತ್ತದೆ ಎಂದಿದ್ದಾರೆ.