ಗಡಿತಂಟೆ ಮಾಡಿದ ಚೀನಾಗೆ ಆಯಕಟ್ಟಿನ ಜಾಗಗಳಿಗೆ ಪೆಟ್ಟು ಕೊಟ್ಟಿರುವ ಭಾರತ

ಚೀನಾದಂಥ ಶಕ್ತಿಶಾಲಿ ದೇಶವನ್ನ ಎದುರುಹಾಕಿಕೊಳ್ಳಲು ಬಹಳಷ್ಟು ದೇಶಗಳು ಭಯಪಡುತ್ತಿವೆ. ಈಗ ಭಾರತ ಬಹಳ ಧೈರ್ಯವಾಗಿ ಚೀನೀ ಕಂಪನಿಗಳನ್ನ ಹೊರಗಿಡುತ್ತಿರುವುದು ಬೇರೆ ದೇಶಗಳಲಿಗೆ ಪ್ರೇರೇಪಣೆ ನೀಡಬಹುದು. ವಿಶ್ವ ಮಾರುಕಟ್ಟೆಯಲ್ಲಿ ಚೀನಾಗೆ ಹಿನ್ನಡೆಯಾಗಬಹುದು.

ನರೇಂದ್ರ ಮೋದಿ ಮತ್ತು ಕ್ಸಿ ಜಿನ್​ಪಿಂಗ್

ನರೇಂದ್ರ ಮೋದಿ ಮತ್ತು ಕ್ಸಿ ಜಿನ್​ಪಿಂಗ್

 • Share this:
  ನವದೆಹಲಿ(ಜುಲೈ 02): ತನ್ನ ಮಿಲಿಟರಿ ಮತ್ತು ತಂತ್ರಜ್ಞಾನ ಸಾಮರ್ಥ್ಯದಿಂದ ಇಡೀ ವಿಶ್ವವನ್ನ ಹತೋಟಿಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಚೀನಾಗೆ ಭಾರತ ಒಂದು ಪ್ರಬಲ ಗುದ್ದು ಕೊಟ್ಟಿದೆ. ಲಡಾಖ್​ನ ಗಡಿಭಾಗದಲ್ಲಿ ಭಾರತೀಯ ಭೂಭಾಗವನ್ನು ಅತಿಕ್ರಮಿಸಿಕೊಂಡು 20 ಭಾರತೀಯ ಸೈನಿಕರನ್ನ ಬಲಿತೆಗೆದುಕೊಂಡ ಚೀನಾ ದೇಶಕ್ಕೆ ಭಾರತ ಡಿಜಿಟಲ್ ಸ್ಟ್ರೈಕ್ ಸೇರಿದಂತೆ ವಿವಿಧ ಕ್ರಮಗಳ ಮೂಲಕ ಚೀನಾದ ಆಯಕಟ್ಟಿನ ಕ್ಷೇತ್ರಗಳಿಗೆ ಪೆಟ್ಟು ನೀಡಿದೆ.

  ಟಿಕ್ ಟಾಕ್ ಸೇರಿದಂತೆ 59 ಚೀನೀ ಆ್ಯಪ್​ಗಳನ್ನ ಭದ್ರತಾ ಅಪಾಯದ ಕಾರಣವೊಡ್ಡಿ ನಿಷೇಧಿಸಿದೆ. ಬಿಎಸ್​ಎಲ್​ಎಲ್ ಮತ್ತು ಎಂಟಿಎನ್​ಎಲ್​ನ 4ಜಿ ಉನ್ನತೀಕರಣದಲ್ಲಿ ಚೀನಾದ ಕಂಪನಿಗಳನ್ನ ಹೊರಗಿಡಲಾಗುವಂತೆ ಟೆಂಡರ್​ಗಳನ್ನ ರದ್ದುಗೊಳಿಸಿದೆ. ಹೆದ್ದಾರಿ ಯೋಜನೆಗಳಲ್ಲಿ ಚೀನೀ ಕಂಪನಿಗಳನ್ನ ಹೊರಗಿಟ್ಟಿದೆ. ಇವೆಲ್ಲವೂ ಎರಡೇ ದಿನದ ಅಂತರದಲ್ಲಿ ನಡೆದುಹೋಗಿದೆ. ಸಂದರ್ಭ ಬಂದರೆ ಭಾರತ ಕ್ಷಿಪ್ರವಾಗಿ ನಿರ್ಣಯಗಳನ್ನ ತೆಗೆದುಕೊಳ್ಳಬಲ್ಲುದು ಎಂಬ ಸಂದೇಶ ಈಗ ಚೀನಾಗೆ ರವಾನೆಯಾದಂತಾಗಿದೆ.

  ಚೀನೀ ಆ್ಯಪ್​ಗಳನ್ನ ನಿಷೇಧಿಸಿದ್ದು ಚೀನಾ ಮೇಲೆ ಭಾರತ ನಡೆಸಿದ ಡಿಜಿಟಲ್ ಸ್ಟ್ರೈಕ್ ಎಂದೇ ಬಣ್ಣಿಸಲಾಗುತ್ತಿದೆ. ಇನ್ನು, ವಿಶ್ವ ಮಾರುಕಟ್ಟೆಯನ್ನ ಆಕ್ರಮಿಸಿಕೊಳ್ಳಲು ಹೋಗುತ್ತಿರುವ ಚೀನಾ ಹುವಾವೇ, ಝಡ್​ಟಿಇಯಂಥ ಕಂಪನಿಗಳಿಗೆ ಭಾರತದ 4ಜಿ ನೆಟ್​ವರ್ಕ್ ಉನ್ನತೀಕರಣ ಯೋಜನೆ ಕೈತಪ್ಪುತ್ತಿರುವುದು ಹಿನ್ನಡೆಯಾಗಿದೆ. ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹೆದ್ದಾರಿ ಯೋಜನೆಗಳು ಚಾಲನೆಯಲ್ಲಿವೆ. ಇಲ್ಲಿಯೂ ಚೀನೀ ಕಂಪನಿಗಳು ಪಾರಮ್ಯ ಮೆರೆಯುವ ಸನ್ನಾಹದಲ್ಲಿದ್ದವು. ಈಗ ಅದಕ್ಕೂ ಕುತ್ತು ಬಂದಿದೆ.

  ಇದನ್ನೂ ಓದಿ: ಚೀನೀ ಉತ್ಪನ್ನಕ್ಕೆ ಸರ್ಕಾರದ ನಕಾರ ಹಿನ್ನೆಲೆ, ಬಿಎಸ್ಸೆನ್ನೆಲ್, ಎಂಟಿಎನ್ನೆಲ್ 4ಜಿ ಟೆಂಡರ್ ರದ್ದು

  ತಂತ್ರಜ್ಞಾನಗಳ ಮೂಲಕ ವಿಶ್ವದ ಮೇಲೆ ಹಿಡಿತ ಸಾಧಿಸುವುದು ಚೀನಾದ ಕಮ್ಯೂನಿಸ್ಟ್ ಪಾರ್ಟಿ ಸರ್ಕಾರದ ಮಹತ್ವಾಕಾಂಕ್ಷೆ. ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದು ಬೈಟ್​ಡ್ಯಾನ್ಸ್, ಅಲಿಬಾಬಾ, ಟೆನ್ಸೆಂಟ್, ಬೈಡು ಮೊದಲಾದ ಕಂಪನಿಗಳು. ಗೂಗಲ್, ಫೇಸ್​ಬುಕ್, ಟ್ವಿಟರ್​ನಂಥ ಅಮೆರಿಕನ್ ಕಂಪನಿಗಳ ಸೋಷಿಯಲ್ ಮೀಡಿಯಾವನ್ನ ಚೀನಾದಲ್ಲಿ ಬ್ಲಾಕ್ ಮಾಡಿ ದೇಶೀಯವಾಗಿ ತಂತ್ರಜ್ಞಾನ ಸಂಸ್ಥೆಗಳನ್ನ ಹುಲುಸಾಗಿ ಬೆಳೆಸಲಾಯಿತು. ಈಗ ಹುವಾವೇ ಸಂಸ್ಥೆ ಇಡೀ ವಿಶ್ವಕ್ಕೆ 5ಜಿ ತಂತ್ರಜ್ಞಾನ ಸೌಕರ್ಯ ಒದಗಿಸಲು ಮುಂಚೂಣಿಯಲ್ಲಿದೆ.

  ಭಾರತ ಈಗ 4ಜಿ ನೆಟ್ವರ್ಕ್ ಅಪ್​ಗ್ರೇಡಿಂಗ್ ವಿಚಾರದಲ್ಲಿ ಹುವಾವೇಯನ್ನು ಹೊರಗಿಟ್ಟಿರುವುದು ಒಂದು ಸ್ಟ್ರಾಂಗ್ ಸಿಗ್ನಲ್ ಆಗಿದೆ. ಭಾರತದಲ್ಲಿ 5ಜಿ ತಂತ್ರಜ್ಞಾನ ಅಳವಡಿಕೆಯಾಗಬೇಕಿದ್ದು ಹುವಾವೇಯನ್ನೂ ಭಾಗೀದಾರನನ್ನಾಗಿಸಬೇಕೆಂದು ಚೀನಾ ಸರ್ಕಾರ ಅವಿರತವಾಗಿ ಪ್ರಯತ್ನಿಸುತ್ತಿದೆ. ಆದರೆ, ಭಾರತ ತೆಗೆದುಕೊಳ್ಳುತ್ತಿರುವ ಗಟ್ಟಿ ನಿರ್ಧಾರ ಗಮನಿಸಿದರೆ 5ಜಿ ಯೋಜನೆಯಿಂದಲೂ ಹುವಾವೇಗೆ ಗೇಟ್​ಪಾಸ್ ಸಿಗುವ ಸಾಧ್ಯತೆ ಇದೆ.

  ಇದನ್ನೂ ಓದಿ: ಖಾಸಗೀಕರಣದತ್ತ ಭಾರತೀಯ ರೈಲ್ವೆ; ಖಾಸಗಿ ಹೂಡಿಕೆಗೆ ಕೇಂದ್ರ ಸರ್ಕಾರದಿಂದ ಮುಕ್ತ ಆಹ್ವಾನ

  ಆದರೆ, ಇಷ್ಟು ಮಾತ್ರ ಆದರೆ ಚೀನಾ ತಲೆಕೆಡಿಸಿಕೊಳ್ಳುವುದೇನೋ. ಇಲ್ಲಿ ಒಂದು ಸಂಗತಿಯನ್ನ ಗಮನಿಸಬಹುದು. ಅನೇಕ ದೇಶಗಳಿಗೆ ಚೀನಾ ಒಂದು ರೀತಿಯಲ್ಲಿ ಮಗ್ಗುಲಮುಳ್ಳಾಗಿದೆ. ವಿಶ್ವದ ಅನೇಕ ದೇಶಗಳ ಮಾರುಕಟ್ಟೆಗಳನ್ನ ಚೀನಾ ಆಕ್ರಮಿಸಿಕೊಂಡಿದೆ. ಅಮೆರಿಕವೇ ಈ ಹಿಡಿತದಿಂದ ಪಾರಾಗಲು ಒದ್ದಾಡುತ್ತಿದೆ. ಚೀನಾದಂಥ ಶಕ್ತಿಶಾಲಿ ದೇಶವನ್ನ ಎದುರುಹಾಕಿಕೊಳ್ಳಲು ಬಹಳಷ್ಟು ದೇಶಗಳು ಭಯಪಡುತ್ತಿವೆ. ಈಗ ಭಾರತ ಬಹಳ ಧೈರ್ಯವಾಗಿ ಚೀನೀ ಕಂಪನಿಗಳನ್ನ ಹೊರಗಿಡುತ್ತಿರುವುದು ಬೇರೆ ದೇಶಗಳಲಿಗೆ ಪ್ರೇರೇಪಣೆ ನೀಡಬಹುದು. ವಿಶ್ವ ಮಾರುಕಟ್ಟೆಯಲ್ಲಿ ಚೀನಾಗೆ ಹಿನ್ನಡೆಯಾಗಬಹುದು. ಇದು ಚೀನಾಗೆ ತುಸು ಭಯ ಮೂಡಿಸುತ್ತಿದೆ.
  First published: