ಚೀನೀ ಸೇನೆಯಿಂದ ಐವರು ಯುವಕರ ಅಪಹರಣದ ಆರೋಪ; ರಕ್ಷಿಸಿ ಎಂದ ಕುಟುಂಬ ಸದಸ್ಯರು

ಚೀನಾ ಗಡಿಭಾಗದಿಂದ 50-100 ಕಿಮೀ ಒಳಗಿರುವ ಸೆರಾ-7 ಪ್ರದೇಶದಿಂದ ಐವರು ಅರುಣಾಚಲಿ ಯುವಕರು ನಾಪತ್ತೆಯಾಗಿದ್ಧಾರೆ. ಅವರನ್ನು ಚೀನೀ ಸೇನೆ ಅಪಹರಿಸಿದೆ ಎಂದು ಅವರ ಒಬ್ಬ ಕುಟುಂಬ ಸದಸ್ಯರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಭಾರತ ಚೀನಾ ಗಡಿ ಭಾಗ

ಭಾರತ ಚೀನಾ ಗಡಿ ಭಾಗ

  • News18
  • Last Updated :
  • Share this:
ಅರುಣಾಚಲ ಪ್ರದೇಶ(ಸೆ. 05): ಚೀನಾದ ಗಡಿಭಾಗದಲ್ಲಿ ಅರುಣಾಚಲ ಪ್ರದೇಶದ ಐವರು ಯುವಕರು ನಾಪತ್ತೆಯಾಗಿದ್ದಾರೆ. ಚೀನಾದ ಪಿಎಲ್​ಎ ಸೇನೆ ಈ ಐವರನ್ನು ಅಪಹರಣ ಮಾಡಿರುವ ಆರೋಪ ಇದೆ. ಗಡಿಭಾಗದ ಸೆರಾ 7 ಪ್ರದೇಶದಿಂದ ಇವರ ಕಿಡ್ನಾಪ್ ಆಗಿರುವ ಶಂಕೆ ಇದೆ. ನಾಪತ್ತೆಯಾದ ಒಬ್ಬ ಯುವಕನ ಸಹೋದರ ತನ್ನ ಫೇಸ್​ಬುಕ್​ನಲ್ಲಿ ಈ ವಿಚಾರ ಬರೆದಿದ್ದು, ಚೀನೀ ಸೇನೆಯಿಂದ ಅಪಹೃತಗೊಂಡಿರುವ ಈ ಐವರನ್ನು ರಕ್ಷಣೆ ಮಾಡಬೇಕೆಂದು ಸರ್ಕಾರವನ್ನು ಕೋರಿಕೊಂಡಿದ್ದಾರೆ. ಸ್ಥಳೀಯ ಟಾಗಿನ ಸಮುದಾಯಕ್ಕೆ ಸೇರಿದ ತನು ಬಾಕರ್, ಪ್ರಸಾದ್ ರಿಂಗ್​ಲಿಂಗ್, ಎನ್​ಗರು ಡಿರಿ, ಡೋಂಗ್ಟು ಎಬಿಯಾ ಮತ್ತು ಟೋಚ್ ಸಿಂಕಮ್ ಅವರು ನಾಪತ್ತೆಯಾಗಿರುವ ಐವರು ಯುವಕರು.

“ನನ್ನ ಸಹೋದರ ಪ್ರಸಾದ್ ರಿಂಗ್​ಲಿಂಗ್ ಹಾಗೂ ನಾಚೋ ಸರ್ಕಲ್​ನ ಇತರ ನಾಲ್ವರು ಯುವಕರನ್ನು ಸೆರಾ-7 ಪ್ರದೇಶದಿಂದ ಪಿಎಲ್​ಎ ಸೈನಿಕರು ಅಪಹರಣ ಮಾಡಿದ್ದಾರೆ. ರಾಜ್ಯ ಸರ್ಕಾರ ಹಾಗೂ ಸೇನೆಗೆ ಕೂಡಲೇ ಕ್ರಮ ತೆಗೆದುಕೊಂಡು ಈ ಹುಡುಗರು ವಾಪಸಾಗುಂತೆ ಮಾಡಬೇಕೆಂದು ಕೋರುತ್ತೇನೆ. ಈ ಯುವಕರ ಕುಟುಂಬ ಸದಸ್ಯರಿಂದ ಈ ಮನವಿ” ಎಂದು ಪ್ರಕಾಶ್ ರಿಂಗ್​ಲಿಂಗ್ ತನ್ನ ಫೇಸ್​​ಬುಕ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.ಪಾಸಿಘಾಟ್ ವೆಸ್ಟ್ ಕ್ಷೇತ್ರದ ಶಾಸಕ ನಿನೋಂಗ್ ಎರಿಂಗ್ ಕೂಡ ಈ ಐವರು ಯುವಕರ ಕಿಡ್ನಾಪ್ ಆಗಿರುವ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ, ಪೊಲೀಸ್ ಮತ್ತು ಮಿಲಿಟರಿ ಅಧಿಕಾರಿಗಳು ಈ ಅಪಹರಣವಾಗಿರುವುದನ್ನು ಇನ್ನೂ ಖಚಿತಪಡಿಸಿಲ್ಲ.

“ಹುಡುಗರ ಕುಟುಂಬಗಳಿಂದ ಇನ್ನೂ ಅಧಿಕೃತ ದೂರು ಬಂದಿಲ್ಲ. ಸೋಷಿಯಲ್ ಮೀಡಿಯಾದ ಮೂಲಕ ನಮಗೆ ವಿಷಯ ಗೊತ್ತಾಗಿದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದೇವೆ” ಎಂದು ಸುಬಾನ್​ಸಿರಿ ಜಿಲ್ಲೆಯ ಎಸ್​ಪಿ ತಾರು ಗುಸರ್ ಸ್ಪಷ್ಟಪಡಿಸಿದ್ಧಾರೆ.

ಇದನ್ನೂ ಓದಿ: Indo-China Crisis: ಮಾತುಕತೆಯಿಂದ ಮಾತ್ರ ಚೀನಾ ಜೊತೆಗಿನ ಬಿಕ್ಕಟನ್ನು ಪರಿಹರಿಸಿಕೊಳ್ಳಲು ಸಾಧ್ಯ; ವಿದೇಶಾಂಗ ಸಚಿವ ಜಯಶಂಕರ್

ಅರುಣಾಚಲ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಉಪಾಧ್ಯಾಯ ಅವರು ಈ ಐವರು ಯುವಕರು ನಾಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ. “ಕಾಡಿಗೆ ಹೋಗಿದ್ದ ಐವರು ಯುವಕರು ನಿನ್ನೆಯಿಂದ ಕಾಣೆಯಾಗಿದ್ಧಾರೆ. ಆದರೆ, ಇವರ ಕುಟುಂಬದವರು ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಿಲ್ಲ. ಈ ಐವರಿಗೆ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ… ಘಟನೆ ಬಗ್ಗೆ ಸೇನೆಗೆ ಮಾಹಿತಿ ನೀಡಿದ್ದೇವೆ. ಅವರ ಸ್ಥಳವನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದು ಡಿಜಿಪಿ ತಿಳಿಸಿದ್ದಾರೆ.

ಆದರೆ, ರಕ್ಷಣಾ ಪಡೆಯ ಪ್ರತಿನಿಧಿ ಹರ್ಷ ವರ್ಧನ್ ಪಾಂಡೆ ಅವರು ಯಾವುದೇ ದುರ್ಘಟನೆಯಾಗಿಲ್ಲ. ಯುವಕರು ವಾಪಸ್ ಬರಬಹುದು ಎಂದು ಆಶಯ ವ್ಯಕ್ತಪಡಿಸಿದ್ಧಾರೆ. ಅರುಣಾಚಲ ಪ್ರದೇಶದಲ್ಲಿ ಯುವಕರ ಅಪಹರಣ ಆಗಿರುವ ಯಾವುದೇ ವರದಿಗಳು ಬಂದಿಲ್ಲ. ನಾಪತ್ತೆಯ ದೂರು ಕೂಡ ದಾಖಲಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿರುವ ಹುಡುಗರು ಬೇಟೆಗಾರರಂತೆ ತೋರುತ್ತಿದ್ದಾರೆ. ಬೇಟೆಗಾರರು ಮೂರ್ನಾಲ್ಕು ದಿನ ಬೇಟೆಗೆ ಹೋಗುವುದು ಸಾಮಾನ್ಯ. ಅವರೂ ಕೂಡ ಮೂರು ದಿನ ಹೋಗಿರುವಂತಿದೆ ಎಂದು ತೇಜ್​ಪುರ್ ಮುಖ್ಯಕಚೇರಿಯ ಡಿಫೆನ್ಸ್ ಪಿಆರ್​ಓ ಹರ್ಷ ವರ್ಧನ್ ಪಾಂಡೆ ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತಾದ ಮುಂಬೈ ಎಂಬ ನಟಿ ಕಂಗನಾ ಹೇಳಿಕೆಯ ವಿರುದ್ಧ ತಿರುಗಿಬಿದ್ದ ಮಹಾರಾಷ್ಟ್ರ

ಒಂದು ವೇಳೆ, ಚೀನೀ ಸೇನೆ ಈ ಅಪಹರಣ ಮಾಡಿರುವುದು ನಿಜವೇ ಆಗಿದ್ದರೆ ಬಹಳ ಅಪಾಯದ ಪರಿಸ್ಥಿತಿಯ ಸಾಧ್ಯತೆಯನ್ನು ತೋರಿಸುತ್ತದೆ. ಯಾಕೆಂದರೆ ಸೆರಾ-7 ಪ್ರದೇಶವು ಎಲ್​ಎಸಿಯಿಂದ 100 ಕಿಮೀ ಒಳಗೆ ಇದೆ. ಇಲ್ಲಿ ಕಿಡ್ನಾಪ್ ಆಗಿದೆ ಎಂದರೆ ಚೀನೀ ಸೇನೆ ಗಡಿದಾಟಿ ಬಹಳ ಒಳಗೆ ಬಂದಿರುವುದರ ಕುರುಹು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ಧಾರೆ.
Published by:Vijayasarthy SN
First published: