ನವದೆಹಲಿ(ಮೇ 26): ಕೆಲ ದಿನಗಳ ಹಿಂದೆ ಲಡಾಕ್ನಲ ಪ್ಯಾಂಗೋಂಗ್ ಟ್ಸೋ ಸರೋವರ ಬಳಿ ಗಡಿರೇಖೆ (LAC) ಪಹರೆ ಮಾಡುವ ಭಾರತ ಮತ್ತು ಚೀನೀ ಸೈನಿಕರು ಮುಖಾಮುಖಿಯಾಗಿದ್ದರು. ಚೀನೀ ಸೈನಿಕರು ಉಗ್ರ ವರ್ತನೆ ತೋರಿದ್ದು ಭಾರತದಲ್ಲಿ ಸಾಕಷ್ಟು ಚರ್ಚೆಗೆ ಮತ್ತು ಕೋಪಕ್ಕೆ ಕಾರಣವಾಗಿದೆ. ಪಶ್ಚಿಮ ಭಾಗದಲ್ಲಿ ಪಾಕಿಸ್ತಾನೀಯರದ್ದು ಒಂದು ರೀತಿಯ ಕಾಟವಾದರೆ, ಉತ್ತರ ಭಾಗದಲ್ಲಿ ಚೀನೀಯರ ತಂಟೆಯೇ ವಿಭಿನ್ನ ಸ್ವರೂಪದ್ದು. ಅವರ ಗಡಿತಂಟೆ ಹೊಸದಲ್ಲ. ಸದಾ ಏನಾದರೂ ತಂಟೆ ಮಾಡುತ್ತಲೇ ಇರುತ್ತಾರೆ. 2017ರಲ್ಲಿ ಡೋಕ್ಲಾಮ್ ಸಂಘರ್ಷ, ಮೇ 20ರ ಸಿಕ್ಕಿಮ್ನ ನಕುಲಾದಲ್ಲಿ ಸೈನಿಕರು ಕೈಕೈ ಮಿಲಾಯಿಸುವ ಮಟ್ಟೆ ಹೋಗಿದ್ದರು. ಈಗ ಲಡಾಕ್ ಸಂಘರ್ಷ ಆಗಿದೆ. ಈ ಬೆಳವಣಿಗೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಭದ್ರತಾ ಸಲಹೆಗಾರ ಮಂಡಳಿ ಸದಸ್ಯ ಲೆ| ಜ| ಎಸ್.ಎಲ್. ನರಸಿಂಹನ್ ಅವರು, ಭಾರತ ಮತ್ತು ಚೀನಾ ನಡುವೆ ಇರುವ ವಾಸ್ತವ ಗಡಿ ನಿಯಂತ್ರಣ ರೇಖೆ (LAC) ವಿಚಾರವೇ ಕಾರಣ ಇರಬಹುದು ಎಂದು ತರ್ಕಿಸಿದ್ದಾರೆ.
“ಚೀನಾದವರು ಯಾಕೆ ಇಷ್ಟು ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ? ಕೊರೋನಾದಿಂದ ಬಾಧಿತರಾಗುತ್ತಿದ್ದರೂ ಚೀನಾ ಯಾಕಿಂಥ ಒತ್ತಡ ಹಾಕುತ್ತಿದೆ? ನಕುಲಾ ಘಟನೆಗೂ ಲಡಾಕ್ ಘಟನೆಗೂ ಏನಾದರೂ ಕೊಂಡಿ ಇದೆಯಾ? ಅಂತಾರಾಷ್ಟ್ರೀಯ ಪರಿಸ್ಥಿತಿಯ ಪ್ರಭಾವ ಈ ಘಟನೆಗಳ ಹಿಂದಿದೆಯಾ? ತನ್ನ ವೈಫಲ್ಯಗಳನ್ನ ಮುಚ್ಚಿಟ್ಟುಕೊಳ್ಳಲು ಚೀನೀ ಸರ್ಕಾರ ಜನರ ಗಮನ ಬೇರೆಡೆ ಸೆಳೆಯುತ್ತಿರುವ ಪ್ರಯತ್ನವೇ? ಎಂಬ ಪ್ರಶ್ನೆಗಳು ಮೂಡುತ್ತವೆ. ಆದರೆ, ಭಾರತ ಮತ್ತು ಚೀನಾ ದೇಶಗಳ ಮಧ್ಯೆ ಎಲ್ಎಸಿ ಗಡಿರೇಖೆ ಬಗ್ಗೆ ಸ್ಪಷ್ಟತೆ ಇಲ್ಲ. ತಮ್ಮ ತಮ್ಮ ದೃಷ್ಟಿಯಲ್ಲಿ ಗಡಿನಿಯಂತ್ರಣ ರೇಖೆ ಅಂದಾಜು ಮಾಡಿದ್ದಾರೆ. ಆದ್ದರಿಂದ ಎರಡೂ ಪಡೆಗಳು ಏಕಕಾಲದಲ್ಲಿ ಪಹರೆ ನಡೆಸುವಾಗ ಆಗಾಗ ಸಂಧಿಸುತ್ತಾರೆ. ಸಂಘರ್ಷಗಳಾಗುತ್ತವೆ” ಎಂದು ಸೇನಾಧಿಕಾರಿ ಅವರು ನ್ಯೂಸ್18ಗೆ ಬರೆದಿರುವ ವಿಶ್ಲೇಷಣೆ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಶತ್ರುದೇಶಗಳ ಗಡಿ ಕಾಯುವ ಅರೆಸೇನಾ ಪಡೆಗಳಲ್ಲಿ ಕಾಡುತ್ತಿದೆ ಟಾಪ್ ಆಫೀಸರ್ಗಳ ಕೊರತೆ
ಚೀನಾದವರ ಆಕ್ರಮಣಕಾರಿ ವರ್ತನೆ ಭಾರತದ ಮೇಲಷ್ಟೇ ಅಲ್ಲ ವಿಶ್ವದ ಇತರ ದೇಶಗಳ ಮೇಲೂ ಇದೆ ಎಂಬುದನ್ನು ಎಸ್.ಎಲ್. ನರಸಿಂಹನ್ ಎತ್ತಿತೋರಿಸುತ್ತಾರೆ.
“2001ರಲ್ಲಿ ಹೈನನ್ ದ್ವೀಪದಲ್ಲಿ ಅಮೆರಿಕದ ಸ್ಪೈ ವಿಮಾನವನ್ಉ ಚೀನಾದವರು ಬಲವಂತವಾಗಿ ಕೆಳಗಿಳಿಸಿದ್ದು; ಹಲವು ವರ್ಷಗಳ ಹಿಂದೆ ಚೀನಾ ತನ್ನ ಸಬ್ಮರೀನ್ಗಳನ್ನ ಜಪಾನ್ನ ಸಮುದ್ರ ವ್ಯಾಪ್ತಿಗೆ ಕಳುಹಿಸಿದ್ದು; ತೈವಾನ್ ಸ್ಟ್ರೈಟ್ನಲ್ಲಿ ತನ್ನ ಹಡಗು ಮತ್ತು ವಿಮಾನಗಳ ತಾಲೀಮು ನಡೆಸಿದ್ದು; ಸೌತ್ ಚೀನಾ ಸಮುದ್ರದಲ್ಲಿರುವ ಹವಳದ ಬಂಡೆಗಳನ್ನ (Coral Reef) ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು; ಫಿಲಿಪ್ಪೈನ್ಸ್, ಇಂಡೋನೇಷ್ಯಾ, ಮಲೇಷ್ಯಾ ಮತ್ತು ವಿಯೆಟ್ನಾಂ ದೇಶಗಳ ಮೀನುಗಾರಿಕೆ ದೋಣಿಗಳ ಪ್ರಕರಣಗಳು ನಮ್ಮ ಕಣ್ಮುಂದೆ ಇವೆ ಸೌತ್ ಚೀನಾ ಸಮುದ್ರದಲ್ಲಿ ಅಮೆರಿಕದ ನೌಕಾ ಹಡಗುಗಳೊಂದಿಗೂ ಚೀನೀಯರು ಮುಖಾಮುಖಿಯಾಗಿದ್ದರು. ಮಲೇಷ್ಯಾಗೆ ಸೇರಿದ ಸಮುದ್ರ ಪ್ರದೇಶದಲ್ಲಿ ಆಸ್ಟ್ರೇಲಿಯಾದ ಹಡಗುಗಳ ತಂಟೆಗೂ ಚೀನೀಯರು ಹೋಗಿದ್ದರು. ಇವೆಲ್ಲವೂ ಚೀನಾ ಭಾರತವಲ್ಲದೆ ಹಲವು ದೇಶಗಳೊಂದಿಗೆ ತಂಟೆ ತಕರಾರು, ಆಕ್ರಮಣಕಾರಿ ಪ್ರವೃತ್ತಿ ತೋರುತ್ತಿರುವುದನ್ನು ತೋರಿಸುತ್ತವೆ” ಎಂದು ಲೆಫ್ಟಿನೆಂಟ್ ಜನರಲ್ ಹೇಳಿದ್ದಾರೆ.
ಇದನ್ನೂ ಓದಿ: ಕೊರೋನಾ ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್: ತಾತ್ಕಾಲಿಕವಾಗಿ ಪ್ರಯೋಗ ನಿಲ್ಲಿಸಿದ ಡಬ್ಲ್ಯೂಎಚ್ಒ
ಪೂರ್ವ ಲಡಾಕ್ನಲ್ಲಿರುವ ಪ್ರದೇಶಗಳು ಈ ಹಿಂದೆ ಸಾಕಷ್ಟು ಬಾರಿ ವಿವಾದಗಳಿಗೆ ಮತ್ತು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದ್ದಿದೆ. ಸಿಕ್ಕಿಂನ ನಾಕುಲಾ ಭಾಗ ಕೂಡ ಕೆಲ ವಿವಾದದ ಸ್ಥಳವಾಗಿತ್ತು. ಚೀನಾ ಬಹಳ ಆಲೋಚಿಸಿ ಆ ಭಾಗದ ಮೇಲೆ ಕಣ್ಣಿಟ್ಟಿತು. ಭಾರತದ ಪ್ರತಿರೋಧ ಬಂದ ಮೇಲೆ ಆ ಪ್ರದೇಶದಲ್ಲಿ ಈಗ ಯಾವ ತಂಟೆ ಇಲ್ಲದೆ ಸಹಜವಾಗಿದೆ. ಲಡಾಕ್ನಲ್ಲಿ ನಡೆದಿರುವ ಘಟನೆಗೂ ಸಿಕ್ಕಿಂನ ನಕುಲಾ ಘಟನೆಗೂ ಸಂಬಂಧ ಇದ್ದಂತಿಲ್ಲ. ಆದರೆ, ಲಡಾಕ್ನಲ್ಲಿ ಚೀನೀ ಸೈನಿಕರು ಹೆಚ್ಚು ನಿಯೋಜನೆಗೊಂಡಿದ್ದು ಒಂದೇ ವ್ಯತ್ಯಾಸ ಎಂದು ಅವರು ಬರೆದಿದ್ದಾರೆ.
ಆದರೂ ಚೀನಾದವರು ಗಡಿಭಾಗದಲ್ಲಿ ತಂಟೆ ಮಾಡುವುದು ಯಾಕೆ ಎಂಬ ಪ್ರಶ್ನೆ ಮತ್ತೆ ಕೇಳಿಬರುತ್ತದೆ. ತನ್ನ ದೃಷ್ಟಿಯಂತೆ ವಾಸ್ತವ ಗಡಿನಿಯಂತ್ರಣ ರೇಖೆ ಇರಬೇಕೆಂಬುದನ್ನು ಚೀನೀ ಸೇನೆ ಹೇರಲು ಯತ್ನಿಸುತ್ತಿರುವಂತೆ ತೋರುತ್ತಿದೆ. ಆದ್ದರಿಂದ ಭಾರತ ತನ್ನ ಭಾಗವನ್ನು ಉಳಿಸಿಕೊಳ್ಳಲು ಸುದೀರ್ಘ ಸಂಘರ್ಷಕ್ಕೆ ಸಿದ್ಧವಾಗಿರಬೇಕು. ಹಾಗೆಯೇ, ಈ ಎಲ್ಎಸಿಯಲ್ಲಿರುವ ಗೊಂದಲವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು ಎಂದು ಲೆಫ್ಟಿನೆಂಟ್ ಜನರಲ್ ಎಸ್.ಎಲ್. ನರಸಿಂಹನ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ