ಸಂಘರ್ಷ ಸ್ಥಳದಿಂದ ಕಾಲ್ತೆಗೆದಿಲ್ಲ ಚೀನೀ ಸೇನೆ: ಲಡಾಖ್ ಸಮೀಪವೇ ಇದ್ಧಾರಾ 40 ಸಾವಿರ ಚೀನೀ ಸೈನಿಕರು?
ಇತ್ತೀಚೆಗೆ ಗಡಿಭಾಗದಲ್ಲಿ ಸಂಘರ್ಷ ನಡೆದ ಸ್ಥಳದ ಸಮೀಪವೇ ಚೀನೀ ಸೈನಿಕರು ನಿಯೋಜನೆಗೊಂಡಿದ್ದಾರೆ ಎಂದು ಮೂಲಗಳನ್ನ ಉಲ್ಲೇಖಿಸಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈಚೆಗೆ ನಡೆದ ಯಾವುದೇ ಮಾತುಕತೆಗಳಿಗೂ ಚೀನೀಯರು ಕವಡೆಕಾಸಿನ ಕಿಮ್ಮತ್ತು ಕೊಟ್ಟಿರುವಂತೆ ತೋರುತ್ತಿಲ್ಲದಿರುವುದು ಸ್ಪಷ್ಟವಾಗಿದೆ.
ನವದೆಹಲಿ(ಜುಲೈ 23): ಭಾರತ ಮತ್ತು ಚೀನೀ ಸೈನಿಕರ ಸಂಘರ್ಷ ನಡೆದ ಗಡಿಭಾಗದಿಂದ ಎರಡೂ ಕಡೆಯ ಸೈನಿಕರು ನಿರ್ಗಮಿಸಿ ವಾತಾವರಣ ತಿಳಿಗೊಳಿಸಬೇಕೆಂದು ನಿರ್ಧಾರವಾಗಿದೆ. ಆದರೆ, ಚೀನೀ ಸೈನಿಕರು ಅಲ್ಲಿಂದ ಕಾಲ್ತೆಗೆಯುತ್ತಿದ್ದಂತಿಲ್ಲ. ಅಷ್ಟೇ ಅಲ್ಲ, ಲಡಾಖ್ನ ಪೂರ್ವಭಾಗದ ಗಡಿ ಪ್ರದೇಶದ ಸಮೀಪ 40 ಸಾವಿರ ಚೀನೀ ಸೈನಿಕರು ಇದ್ದಾರೆ. ಎಎನ್ಐ ಸುದ್ದಿ ಸಂಸ್ಥೆ ವರದಿ ಪ್ರಕಾರ ಸಂಘರ್ಷ ನಡೆದ ಸ್ಥಳದಿಂದ ನಿರ್ಗಮಿಸುವ ವಾಗ್ದಾನಕ್ಕೆ ಚೀನೀಯರು ಕಟ್ಟುಬಿದ್ದಿಲ್ಲ. ಈ ವಿಚಾರದಲ್ಲಿ ವಿವಿಧ ಮಟ್ಟಗಳಲ್ಲಿ ಹಲವು ಸುತ್ತುಗಳ ಮಾತುಕತೆ ನಡೆದರೂ ಚೀನಾದ ಪಿಎಲ್ಎ ತುಕಡಿಗಳು ವಾಪಸ್ ಹೋಗುತ್ತಿಲ್ಲವೆನ್ನಲಾಗಿದೆ.
ಗಡಿಭಾಗದಲ್ಲಿ ಚೀನೀ ಸೈನಿಕರಿಗೆ ಏರ್ ಡಿಫೆನ್ಸ್ ಸಿಸ್ಟಂಗಳು, ದೂರ ಶ್ರೇಣಿಯ ಆರ್ಟಿಲರರಿ ಮೊದಲಾದ ಶಸ್ತ್ರಾಸ್ರ್ಗಗಳ ಬಲ ಇದೆ. ಸಂಘರ್ಷ ನಡೆದ ಸ್ಥಳದ ಸಮೀಪವೇ ಚೀನೀ ಸೈನಿಕರು ನಿಯೋಜನೆಗೊಂಡಿದ್ದಾರೆ. ಇತ್ತೀಚೆಗೆ ನಡೆದ ಯಾವುದೇ ಮಾತುಕತೆಗಳಿಗೂ ಚೀನೀಯರು ಕವಡೆಕಾಸಿನ ಕಿಮ್ಮತ್ತು ಕೊಟ್ಟಿರುವಂತೆ ತೋರುತ್ತಿಲ್ಲವೆನ್ನಲಾಗಿದೆ.
ಫಿಂಗರ್ 5 ಎಂದು ಹೇಳಲಾಗುವ ಪ್ರದೇಶದಿಂದಲೂ ಚೀನೀಯರು ವಾಪಸ್ ಹೋಗುತ್ತಿಲ್ಲ. ಮಾತುಕತೆ ಪ್ರಕಾರ ಚೀನೀ ಸೈನಿಕರು ಸಿರಿಜಪ್ ಎಂಬಲ್ಲಿರುವ ತಮ್ಮ ಮೂಲ ನೆಲೆಗೆ ಮರಳಬೇಕಿತ್ತು. ಆದರೆ, ಇನ್ನೂ ಫಿಂಗರ್ 5 ಪ್ರದೇಶದಲ್ಲೇ ಇರುವುದು ತಿಳಿದುಬಂದಿದೆ. ಇದೇ ಫಿಂಗರ್ 5 ಪ್ರದೇಶದ ವ್ಯಾಪ್ತಿಯಲ್ಲಿರುವ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಪೋಸ್ಟ್ ಏರಿಯಾದಲ್ಲಿ ಚೀನೀಯರು ಬಹಳಷ್ಟು ಕಟ್ಟಡ ನಿರ್ಮಾಣಗಳನ್ನ ಮಾಡಿದ್ದಾರೆ. ಲಡಾಖ್ ಪೂರ್ವ ಭಾಗದಲ್ಲಿರುವ ಈ ಎರಡು ಪೋಸ್ಟ್ಗಳ ಬಳಿಯೇ ಹೆಚ್ಚು ಸಂಘರ್ಷ ಆಗಿದ್ದು. ಇದು ಎತ್ತರದ ಪ್ರದೇಶವಾದ್ದರಿಂದ ತಾವು ವಾಪಸ್ ಹೋಗಿಬಿಟ್ಟರೆ ಭಾರತೀಯರು ಅತಿಕ್ರಮಿಸಿಕೊಂಡುಬಿಡುತ್ತಾರೆ ಎಂದು ನೆವ ಹೇಳಿಕೊಂಡು ಚೀನೀ ಸೇನೆ ತನ್ನ ಸೈನಿಕರ ನಿಯೋಜನೆಯನ್ನು ಇಲ್ಲಿ ಮುಂದುವರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ.
ಕಾರ್ಪ್ಸ್ ಕಮಾಂಡರ್ ಅಧಿಕಾರಿಗಳ ಮಟ್ಟದಲ್ಲಿ ಜುಲೈ 14-15ರಂದು ಸಂಧಾನ ನಡೆದಿತ್ತು. ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಅಂಗೀಕಾರವಾಗಿತ್ತು. ಆದರೂ ಕೂಡ ಪಿಎಲ್ಎ ತುಕಡಿಗಳು ಸಂಘರ್ಷ ಸ್ಥಳದಿಂದ ಕಾಲ್ತೆಗೆಯುತ್ತಿಲ್ಲ. ಚೀನೀಯರು ಅಲ್ಲಿಂದ ವಾಪಸ್ ಹೋಗುವವರೆಗೂ ಭಾರತೀಯ ಸೈನಿಕರು ಅಲ್ಲಿಯೇ ಇರಲಿದ್ದಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ