ನವದೆಹಲಿ(ಜೂನ್ 30): ಟಿಕ್ ಟಾಕ್ ಸೇರಿದಂತೆ 59 ಚೀನೀ ಮೂಲದ ಆ್ಯಪ್ಗಳನ್ನ ನಿಷೇಧಿಸುವ ಭಾರತ ಸರ್ಕಾರದ ಕ್ರಮಕ್ಕೆ ಚೀನಾ ಬಲವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಚೀನಾದ ಕಂಪನಿಗಳು ಅಂತಾರಾಷ್ಟ್ರೀಯ ವ್ಯಾಪಾರ ನಿಯಮಗಳನ್ನ ಮತ್ತು ಸ್ಥಳೀಯ ಕಾನೂನುಗಳನ್ನ ಮುರಿದಿಲ್ಲ ಎಂದು ಹೇಳಿರುವ ಚೀನಾ, ಈಗ ಭಾರತದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವುದಾಗಿ ಹೇಳಿದೆ.
“ಚೀನೀ ವ್ಯವಹಾರ ಸಂಸ್ಥೆಗಳು ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ನೀತಿ ನಿಯಮಾವಳಿಗಳಿಗೆ ಸಂಬದ್ಧವಾಗಿರಬೇಕೆಂದು ಚೀನಾ ಸರ್ಕಾರ ಸದಾ ಒತ್ತುಕೊಡುತ್ತದೆ. ಚೀನಾದ್ದು ಸೇರಿದಂತೆ ಅಂತಾರಾಷ್ಟ್ರೀಯ ಹೂಡಿಕೆದಾರರ ಕಾನೂನು ಹಕ್ಕುಗಳನ್ನ ಕಾಪಾಡುವ ಜವಾಬ್ದಾರಿ ಭಾರತ ಸರ್ಕಾರಕ್ಕೆ ಇದೆ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.
ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ನಿನ್ನೆ 59 ಚೀನೀ ಆ್ಯಪ್ಗಳನ್ನ ನಿಷೇಧಿಸಿ ಸುತ್ತೋಲೆ ಹೊರಡಿಸಿದೆ. ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ಟಿಕ್ ಟಾಕ್, ಹೆಲೋ, ಶೇರ್-ಇಟ್, ಕ್ಯಾಮ್ ಸ್ಕ್ಯಾನ್ ಇತ್ಯಾದಿ ಆ್ಯಪ್ಗಳು ಇದರಲ್ಲಿವೆ. ಈ ಆ್ಯಪ್ಗಳು ಬಳಕೆದಾರರ ದತ್ತಾಂಶವನ್ನ ಅನುಮತಿ ಇಲ್ಲದೆಯೇ ಪಡೆದು ಚೀನಾದಲ್ಲಿರುವ ಸರ್ವರ್ಗಳಿಗೆ ರವಾನಿಸಲಾಗುತ್ತಿದೆ ಎಂಬ ದೂರು ಸಾಕಷ್ಟು ಕೇಳಿಬಂದಿದ್ದವು. ಭಾರತದ ಐಕ್ಯತೆ, ಭದ್ರತೆಗೆ ಅಪಾಯ ತರುತ್ತಿವೆ ಎಂಬ ಕಾರಣವೊಡ್ಡಿ 59 ಆ್ಯಪ್ಗಳನ್ನ ನಿಷೇಧಿಸುವ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಬಳಕೆದಾರರ ಮಾಹಿತಿಯನ್ನು ಚೀನಾಗೆ ಮಾರುವುದಿಲ್ಲ, ಎಲ್ಲಾ ನಿಯಮಗಳನ್ನು ಪಾಲಿಸುತ್ತೇವೆ; ಸ್ಪಷ್ಟನೆ ನೀಡಿದ ಟಿಕ್ ಟಾಕ್
ಭಾರತದ ಗಡಿಭಾಗದಲ್ಲಿ ಚೀನಾ ಆಕ್ರಮಣಕಾರಿ ಪ್ರವೃತ್ತಿ ತೋರುತ್ತಲೇ ಬಂದಿದೆ. ಇತ್ತೀಚೆಗೆ 20 ಮಂದಿ ಭಾರತೀಯ ಸೈನಿಕರನ್ನೂ ಬಲಿತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಚೀನೀ ವಸ್ತುಗಳನ್ನ ತಿರಸ್ಕರಿಸುವ ಮತ್ತು ಚೀನೀ ಆ್ಯಪ್ಗಳನ್ನ ಅನ್ ಇನ್ಸ್ಟಾಲ್ ಮಾಡುವ ದೊಡ್ಡ ಅಭಿಯಾನವೇ ಹುಟ್ಟಿಕೊಂಡಿತ್ತು. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಚೀನೀ ಆ್ಯಪ್ಗಳನ್ನ ನಿಷೇಧಿಸಿದೆ ಎಂಬಂಥ ಮಾತುಗಳೂ ಕೇಳಿಬರುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ