ಭಾರತದ ಮೇಲೆ ಚೀನಾ ಹದ್ದಿನ ಕಣ್ಣು; ಮೋದಿ, ರಾಷ್ಟ್ರಪತಿ ಸೇರಿ 1,350ಕ್ಕೂ ಹೆಚ್ಚು ರಾಜಕಾರಣಿಗಳ ಡೇಟಾ ಸಂಗ್ರಹ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

China is Watching: ಚೀನಾ ಮೂಲದ ಝೆನ್​ಹುವಾ ಡೇಟಾ ಇನ್​ಫಾರ್ಮೇಷನ್ ಟೆಕ್ನಾಲಜಿ ಕೋ ಎಂಬ ಸಂಸ್ಥೆ ಭಾರತದ ಪ್ರಧಾನಿ, ಸಚಿವರು, ರಾಷ್ಟ್ರಪತಿ ಸೇರಿದಂತೆ ಗಣ್ಯರ ಆನ್​ಲೈನ್ ಮಾಹಿತಿ ಕಲೆಹಾಕುತ್ತಿದೆ. ಭಾರತದ 1,350ಕ್ಕೂ ಹೆಚ್ಚು ರಾಜಕಾರಣಿಗಳು, 350ಕ್ಕೂ ಹೆಚ್ಚು ಸಂಸದರ ಆನ್​ಲೈನ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಮುಂದೆ ಓದಿ ...
  • Share this:

ನವದೆಹಲಿ (ಸೆ. 14): ಚೀನಾದಿಂದ ಭಾರತದ ವಿರುದ್ಧ 'ಹೈಬ್ರೀಡ್ ವಾರ್' ಶುರುವಾಗಿದೆ. ಪ್ರತಿದಿನ ಭಾರತದ 150 ಮಿಲಿಯನ್ ಡೇಟಾಗಳ ಪರಿಶೀಲನೆ ಮಾಡಲಾಗುತ್ತಿದೆ. ಪ್ರಧಾನಿ, ಮುಖ್ಯಮಂತ್ರಿಗಳು, ಮಿಲಿಟರಿ, ಉದ್ಯಮಿಗಳು, ರಕ್ಷಣಾ ಸಚಿವಾಲಯದ ಸಿಬ್ಬಂದಿ, ಸಂಸದರು, ಕೆಲವು ರೌಡಿ ಶೀಟರ್​ಗಳ ಆನ್​ಲೈನ್ ಡೇಟಾವನ್ನು ಕೂಡ ಚೀನಾ ಮೂಲದ ಸಂಸ್ಥೆ ಕಲೆಹಾಕಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಸಾಲಿನ ಕರ್ನಾಟಕದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆನ್​ಲೈನ್ ಮಾಹಿತಿ ಕೂಡ ಸೇರಿದೆ. ಸೈಬರ್ ಬಗ್ಗೆ ಭಾರತ ಯಾವುದಾದರೂ ಹೊಸ ಕಾನೂನು ತರಲು ಮುಂದಾಗಿದೆಯಾ? ಈ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚೆಯಾಗಲಿದೆಯಾ? ಎಂಬ ಬಗ್ಗೆ ಚೀನಾ ಮಾಹಿತಿ ಕಲೆಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ 3 ಬಿಲಿಯನ್ ಡೇಟಾವನ್ನು ಸಂಗ್ರಹಿಸಲಾಗಿದ್ದು, ದೇಶದ ಎಲ್ಲ ವಲಯಗಳ, ಎಲ್ಲ ಪಕ್ಷಗಳ ಗಣ್ಯರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಚೀನಾದ ಕಮ್ಯುನಿಸ್ಟ್​ ಪಾರ್ಟಿ ಮತ್ತು ಚೀನಾ ಸರ್ಕಾರದ ಜೊತೆ ಸಂಪರ್ಕ ಹೊಂದಿರುವ ಶೆನ್​ಜೆನ್ ಜೆನ್​ಹುವಾ ಎಂಬ ಮಾಹಿತಿ ಸಂಸ್ಥೆ ಭಾರತದ ಗಣ್ಯರ ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಅವರ ಆನ್​ಲೈನ್ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ.


ಈ ಬಗ್ಗೆ ಇಂಡಿಯನ್ ಎಕ್ಸ್​​ಪ್ರೆಸ್​ ವಿವರವಾದ ವರದಿ ಮಾಡಿದ್ದು, ಚೀನಾ ಮೂಲದ ಝೆನ್​ಹುವಾ ಡೇಟಾ ಇನ್​ಫಾರ್ಮೇಷನ್ ಟೆಕ್ನಾಲಜಿ ಕೋ ಎಂಬ ಸಂಸ್ಥೆ ಭಾರತದ ಪ್ರಧಾನಿ, ಸಚಿವರು, ರಾಷ್ಟ್ರಪತಿ ಸೇರಿದಂತೆ ಗಣ್ಯರ ಆನ್​ಲೈನ್ ಮಾಹಿತಿ ಕಲೆಹಾಕುತ್ತಿದೆ ಎಂದು ತಿಳಿಸಿದೆ. ಭಾರತದ ಮಿಲಿಟರಿ ಹಾಗೂ ವೈಜ್ಞಾನಿಕ ಸಂಸ್ಥೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಮೃತಪಟ್ಟಿರುವ ಖ್ಯಾತ ರಾಜಕಾರಣಿಗಳ ಮಾಹಿತಿಯನ್ನೂ ಕಲೆಹಾಕಲಾಗುತ್ತಿದ್ದು, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಅಬ್ದುಲ್ ಕಲಾಂ ಅವರ ಕುಟುಂಬಸ್ಥರು, ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್, ವಾಜಪೇಯಿ ಅವರ ಕುಟುಂಬಸ್ಥರ ಡೇಟಾ ಮೇಲೂ ಕಣ್ಣಿಡಲಾಗಿದೆ. ಹಾಗೇ, ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ದೇವೇಗೌಡರ ಆನ್​ಲೈನ್ ಚಟುವಟಿಕೆಗಳ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ.


ಇದನ್ನೂ ಓದಿ: Monsoon Session 2020: ಇಂದಿನಿಂದ ಸಂಸತ್ ಅಧಿವೇಶನ; ಹತ್ತು-ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಸಾಧ್ಯತೆ


ಭಾರತದ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಮಿಲಿಟರಿಯ 60ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿಗಳು ಕೂಡ ಈ ಪಟ್ಟಿಯಲ್ಲಿದ್ದಾರೆ. ಹಾಗೇ, ವಾಯುಪಡೆ, ನೌಕಾದಳ, ಭೂಸೇನೆಯ 14ಕ್ಕೂ ಹೆಚ್ಚು ನಿವೃತ್ತ ಮುಖ್ಯಸ್ಥರು ಮತ್ತು ಇಸ್ರೋದ ಅಣು ವಿಜ್ಞಾನಿಗಳ ಆನ್​​ಲೈನ್ ಡೇಟಾ ಕೂಡ ಚೀನಾದ ಕೈಸೇರುತ್ತಿದೆ. ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, RAWದ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್, ನೌಕಾದಳದ ಮಾಜಿ ಅಡ್ಮಿರಲ್ ಹಾಗೂ ಅಂಡಮಾನ್ ನಿಕೋಬಾರ್​ನ ಮಾಜಿ ಲೆಫ್ಟಿನೆಂಟ್ ಗವರ್ನರ್ ದೇವೇಂದ್ರ ಕುಮಾರ್ ಜೋಷಿ ಸೇರಿದಂತೆ ಹಲವರ ಹೆಸರು ಜೆನ್​ಹುವಾ ನೀಡುತ್ತಿರುವ ಡೇಟಾದ ಪಟ್ಟಿಯಲ್ಲಿದೆ.


ಭಾರತದ ಸ್ಟಾರ್ಟ್ ಅಪ್​ಗಳು ಚೀನಾ ಹೂಡಿಕೆ ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಿವೆಯೇ? ಚೀನಾ ನಿರ್ಮಿಸಿದ ಸಿಸಿ ಟಿವಿಗಳ ಬಳಕೆಯನ್ನು ನಿಲ್ಲಿಸಲಾಗುತ್ತಿದೆಯಾ? ಭಾರತ ತನ್ನ ಸೈಬರ್ ಶಕ್ತಿ ವೃದ್ಧಿಸಿಕೊಳ್ಳುತ್ತಿದೆಯಾ? ಎಂಬ ಮಾಹಿತಿಯನ್ನು ಜೆನ್​ಹುವಾ ಚೀನಾಗೆ ರವಾನಿಸುತ್ತಿದೆ. ಇದುವರೆಗೂ ಭಾರತದ 1,350ಕ್ಕೂ ಹೆಚ್ಚು ರಾಜಕಾರಣಿಗಳು, 350ಕ್ಕೂ ಹೆಚ್ಚು ಸಂಸದರ ಆನ್​ಲೈನ್ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಹಾಗೇ, ಅವರ 460ಕ್ಕೂ ಹೆಚ್ಚು ಕುಟುಂಬಸ್ಥರ ಮಾಹಿತಿಯನ್ನೂ ಸಂಗ್ರಹಿಸಲಾಗಿದೆ.


ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರ ಮಾಹಿತಿಯನ್ನೂ ಸಂಗ್ರಹಿಸಿ ಚೀನಾಗೆ ರವಾನೆ ಮಾಡಲಾಗುತ್ತಿದೆ. ಹಾಗೇ, ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಪಶ್ಚಿಮ ಬಂಗಾಳ, ದೆಹಲಿಯ ಸಿಎಂ ಹಾಗೂ ಅಲ್ಲಿನ ರಾಜಕಾರಣಿಗಳ ಮಾಹಿತಿಯೂ ಸಂಗ್ರಹವಾಗಿದೆ. ಸಿಎಂಗಳಾದ ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ, ನವೀನ್ ಪಟ್ನಾಯಕ್, ಹೇಮಂತ್ ಸೋರೆನ್ ಅವರ ಟ್ವಿಟ್ಟರ್​, ಫೇಸ್​ಬುಕ್ ಡೇಟಾ ಕೂಡ ಚೀನಾಗೆ ರವಾನೆಯಾಗುತ್ತಿದೆ. ಇದರ ಜೊತೆಗೆ ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ ಮುಂತಅದ ಮಹಾನಗರ ಪಾಲಿಕೆಗಳ ಮೇಯರ್​ಗಳ ಮಾಹಿತಿ ಮೇಲೆ ಕೂಡ ಚೀನಾ ಕಣ್ಣಿಟ್ಟಿದೆ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು