ಲಡಾಖ್, ಅರುಣಾಚಲದಲ್ಲಿ ಚೀನಾದಿಂದ 1.28 ಲಕ್ಷ ಚ.ಕಿ. ಪ್ರದೇಶ ಅತಿಕ್ರಮಣ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ಲಡಾಖ್​ನಲ್ಲಿ 38,000 ಚ.ಕಿ.ಮೀ., ಅರುಣಾಚಲದಲ್ಲಿ 90,000 ಚ.ಕಿ.ಮೀ. ಪ್ರದೇಶಗಳನ್ನ ಚೀನಾ ಅತಿಕ್ರಮಿಸಿದೆ ಎಂದು ರಾಜ್ಯಸಭೆಯಲ್ಲಿಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.

 • News18
 • 3-MIN READ
 • Last Updated :
 • Share this:

  ನವದೆಹಲಿ(ಸೆ. 17): ಭಾರತದ ಗಡಿಭಾಗದಲ್ಲಿ ನಿರಂತರವಾಗಿ ತಂಟೆ ಮಾಡುತ್ತಿರುವ ಚೀನಾ ದೇಶ ಸಾಕಷ್ಟು ಪ್ರದೇಶಗಳನ್ನ ಅತಿಕ್ರಮಿಸಿಕೊಂಡಿರುವುದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಒಪ್ಪಿಕೊಂಡಿದ್ದಾರೆ. ರಾಜ್ಯಸಭೆಯಲ್ಲಿ ಭಾರತ ಮತ್ತು ಚೀನಾ ಗಡಿವಿಚಾರದ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್, ಲಡಾಖ್ ಮತ್ತು ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಸುಮಾರು 1,28,000 ಚದರ ಕಿಲೋಮೀಟರ್​ನಷ್ಟು ಭೂಭಾಗವನ್ನು ಅಕ್ರಮವಾಗಿ ವಶದಲ್ಲಿರಿಸಿಕೊಂಡಿರುವ ವಿಚಾರವನ್ನು ಹೊರಗೆಡವಿದರು. ಪೂರ್ವ ವಲಯದ ಅರುಣಾಚಲ ಪ್ರದೇಶ ಗಡಿಭಾಗದಲ್ಲಿ ಚೀನಾ 90 ಸಾವಿರ ಚದರ ಕಿಮೀ ಪ್ರದೇಶವನ್ನು ಅತಿಕ್ರಮಣ ಮಾಡಿದೆ. ಲಡಾಖ್​ನಲ್ಲಿ ಭಾರತಕ್ಕೆ ಸೇರಿದ 38 ಸಾವಿರ ಚದರ ಕಿಲೋಮೀಟರ್ ಭಾಗವನ್ನು ಆಕ್ರಮಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.


  ಭಾರತದೊಂದಿಗಿನ ಎಲ್​ಎಸಿ ಗಡಿಯಲ್ಲಿ ಸೇನಾಪಡೆಗಳನ್ನ ನಿಯೋಜಿಸುವ ಮೂಲಕ ಚೀನಾ 1993 ಮತ್ತು 1996ರ ಒಪ್ಪಂದಗಳ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ ರಕ್ಷಣಾ ಸಚಿವರು, ವಾಸ್ತವ ಗಡಿ ನಿಯಂತ್ರಣ ರೇಖೆಯ ವಿಚಾರದಲ್ಲಿ ಎರಡೂ ದೇಶಗಳು ತಮ್ಮದೇ ಕಲ್ಪನೆಗಳನ್ನ ಹೊಂದಿವೆ. ಆದರೆ, ಗಡಿಭಾಗದಲ್ಲಿ ಶಾಂತಿ ವಾತಾವರಣ ಇರಬೇಕೆಂದರೆ ಎಲ್​ಎಸಿಯನ್ನು ಗೌರವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


  ಇದಷ್ಟೇ ಅಲ್ಲ, ಪಾಕ್ ಆಕ್ರಮಿತ ಕಾಶ್ಮೀರದ 5,180 ಚದರ ಕಿಮೀ ಪ್ರದೇಶವನ್ನು ಪಾಕಿಸ್ತಾನ ಚೀನಾಗೆ ಅಕ್ರಮವಾಗಿ ನೀಡಿದೆ. ಇದು 1963ರ ಗಡಿ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ರಾಜನಾಥ್ ಸಿಂಗ್ ಆರೋಪಿಸಿದರು.


  ಇದನ್ನೂ ಓದಿ: ಭಾರತೀಯ ಇತಿಹಾಸ ಅಧ್ಯಯನ ಸಮಿತಿಯಲ್ಲಿಲ್ಲ ದ್ರಾವಿಡರು, ಮಹಿಳೆಯರು; ವಿವಾದಕ್ಕೆ ನಾಂದಿ


  ಜೂನ್ 15ರಂದು ಲಡಾಖ್​ನ ಗಾಲ್ವನ್ ಕಣಿವೆಯಲ್ಲಿ ಚೀನಾದ ಅತಿಕ್ರಮಣ ಪ್ರಯತ್ನದ ವಿರುದ್ಧ ಹೋರಾಡಿ ಸಾವನ್ನಪ್ಪಿದ 20 ಭಾರತೀಯ ವೀರಯೋಧರ ಬಲಿದಾನವನ್ನು ರಕ್ಷಣಾ ಸಚಿವರು ಈ ಸಂದರ್ಭದಲ್ಲಿ ಸ್ಮರಿಸಿದರು. ಭಾರತದ ಭೂಭಾಗದ ರಕ್ಷಣೆಗೆ ಕರ್ನಲ್ ಸಂತೋಷ್ ಬಾಬು ಹಾಗೂ ಇತರ 19 ಸೈನಿಕರು ಗಾಲ್ವನ್ ಕಣಿವೆಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ನಮ್ಮ ಸೈನಿಕರ ನೈತಿಕ ಬಲ ಹೆಚ್ಚಿಸಲು ಸ್ವತಃ ಪ್ರಧಾನಿಯವರೇ ಲಡಾಖ್​ಗೆ ಹೋದರೆಂದು ಅವರು ಹೇಳಿದರು.


  ಈ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರುತ್ತೇವೆ ಎಂದು ವಿಪಕ್ಷ ನಾಯಕರು ಹೇಳಿದರು. ಗಡಿಭಾಗದಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ನಮ್ಮ ಸೇನೆಗೆ ಇಡೀ ದೇಶ ಬೆಂಬಲವಾಗಿ ನಿಲ್ಲುತ್ತದೆ ಎಂದು ಸಂಸದರು ತಿಳಿಸಿದರು. ಚೀನಾ ಅತಿಕ್ರಮಣ ಮಾಡಿರುವ ಗಡಿಭಾಗದಲ್ಲಿ ಯಥಾಸ್ಥಿತಿ ಮರುಸ್ಥಾಪನೆಯಾಗಲಿ ಎಂದು ಕಾಂಗ್ರೆಸ್ ಪಕ್ಷದ ಸಂಸದ ಆನಂದ್ ಶರ್ಮಾ ಒತ್ತಾಯಿಸಿದರು.


  ಚೀನಾ ದೇಶ ಕೆಲವಾರು ತಿಂಗಳುಗಳಿಂದಲೂ ಲಡಾಖ್ ಗಡಿಭಾಗದಲ್ಲಿ ಪ್ರಮುಖ ಸ್ಥಳಗಳನ್ನ ಅತಿಕ್ರಮಿಸಿಕೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದೆ. ಇದು ಗೊತ್ತಾದ ಬಳಿಕ ಭಾರತೀಯ ಸೈನಿಕರು ತೀವ್ರ ಪ್ರತಿರೋಧ ಒಡ್ಡಿದ್ಧಾರೆ. ತತ್​ಪರಿಣಾಮವಾಗಿ ಒಂದೆರಡು ಬಾರಿ ಎರಡೂ ಕಡೆಯ ಸೈನಿಕರ ಮಧ್ಯೆ ಸಂಘರ್ಷಗಳು ನಡೆದಿವೆ. ಹಿಂದಿನ ಗಡಿಒಪ್ಪಂದಗಳ ನಿಯಮದಂತೆ ಸಂಘರ್ಷದಲ್ಲಿ ಗುಂಡಿನ ಬಳಕೆಯಾಗದಿದ್ದರೂ ಚೀನೀ ಸೈನಿಕರು ಹರಿತವಾದ ಆಯುಧಗಳನ್ನ ಬಳಸಿ ಭಾರತೀಯ ಸೇನೆಯ ಮೇಲೆ ಹಲ್ಲೆ ಮಾಡಿದ್ದಾರೆ. ಜೂನ್ 15ರಂದು ನಡೆದ ಇಂಥ ಒಂದು ಘರ್ಷಣೆಯಲ್ಲಿ ಭಾರತದ 20 ಸೈನಿಕರು ಬಲಿಯಾಗಿದ್ದರು. ಆ ಸಂಘರ್ಷದಲ್ಲಿ ಚೀನಾದ ಅನೇಕ ಸೈನಿಕರೂ ಕೂಡ ಮೃತಪಟ್ಟಿರುವ ಅನಧಿಕೃತ ಮಾಹಿತಿ ಇದೆ.


  ಇದನ್ನೂ ಓದಿ: PM Modi Birthday - ನರೇಂದ್ರ ಮೋದಿಗೆ 70 ವರ್ಷ; ಇಲ್ಲಿದೆ ಅವರು ಬೆಳೆದುಬಂದ ಹಾದಿ


  ದುರಂತವೆಂದರೆ ಚೀನಾ ಲಡಾಖ್​ನಲ್ಲಷ್ಟೇ ಅಲ್ಲ, ಸಾವಿರಾರು ಕಿಮೀ ಉದ್ದವಿರುವ ಎಲ್​ಎಸಿ ಗಡಿಯಾದ್ಯಂತ ಕಿತಾಪತಿ ಮಾಡುತ್ತಿದೆ. ಅರುಣಾಚಲ ಪ್ರದೇಶದಲ್ಲೂ ಅನೇಕ ಕಡೆ ಚೀನಾ ಅತಿಕ್ರಮಣ ಮಾಡಿದೆ. ಈಗ ಭಾರತ ಎಲ್​ಎಸಿಯಾದ್ಯಂತ ಚೀನಾ ಸೇನೆ ಸರಿಸಮಾನವಾಗಿ ಸೇನೆಯನ್ನ ನಿಯೋಜಿಸುವ ಕೆಲಸ ಮಾಡುತ್ತಿದೆ.


  ಚೀನಾ ಲಡಾಖ್ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಮಾಡಿರುವ 1.28 ಲಕ್ಷ ಚದರ ಕಿಮೀ ಸ್ಥಳದ ಅತಿಕ್ರಮಣ ಸಾಮಾನ್ಯವಲ್ಲ. ಇದು ಕರ್ನಾಟಕದ ಮುಕ್ಕಾಗಲು ಭಾಗದ ಪ್ರದೇಶಕ್ಕೆ ಸಮವಾಗುತ್ತದೆ. ರಾಜನಾಥ್ ಸಿಂಗ್ ಅವರು ಹೇಳಿದ ಅತಿಕ್ರಮಣದ ಮಾಹಿತಿ ಈ ವರ್ಷಕ್ಕಷ್ಟೇ ಸೀಮಿತವಲ್ಲ. ಅಕ್ಸಾಯ್ ಚಿನ್ ಪ್ರದೇಶವನ್ನೂ ಸೇರಿ ಈವರೆಗೆ ಚೀನಾ ಅತಿಕ್ರಮಣ ಮಾಡಿರುವ ಭಾರತದ ಭೂಭಾಗದ ಮಾಹಿತಿಯನ್ನು ರಕ್ಷಣಾ ಸಚಿವರು ಒದಗಿಸಿದ್ದಾರೆ.

  Published by:Vijayasarthy SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು