HOME » NEWS » India-china » CHINA ARMY ASSAULT SQUADS HUNTED DOWN INDIAN TROOPS IN GALWAN IN HOURS OF HAND TO HAND COMBAT SNVS

ಹಾಲಿವುಡ್ ಸಿನಿಮಾ ಶೈಲಿಯಲ್ಲಿ ಫೈಟಿಂಗ್; ಭಾರತೀಯ ಸೈನಿಕರ ಮೇಲೆ ಚೀನೀ ಡೆತ್ ಸ್ಕ್ವಾಡ್ ರಕ್ಕಸತನ

India China battle - 1967ರ ನಂತರ ಭಾರತ ಮತ್ತು ಚೀನಾ ಸೇನೆಗಳ ಮಧ್ಯೆ ಇಷ್ಟು ತೀವ್ರತೆಯಲ್ಲಿ ಸಂಘರ್ಷ ನಡೆದಿರಲಿಲ್ಲ. 1999ರಲ್ಲಿ ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದ ನಂತರ ಭಾರತೀಯ ಸೈನಿಕರು ಹೆಚ್ಚು ನಷ್ಟ ಅನುಭವಿಸಿದ್ದೂ ಇದೇ ಮೊದಲು.

news18
Updated:June 17, 2020, 4:41 PM IST
ಹಾಲಿವುಡ್ ಸಿನಿಮಾ ಶೈಲಿಯಲ್ಲಿ ಫೈಟಿಂಗ್; ಭಾರತೀಯ ಸೈನಿಕರ ಮೇಲೆ ಚೀನೀ ಡೆತ್ ಸ್ಕ್ವಾಡ್ ರಕ್ಕಸತನ
ಗಾಲ್ವನ್ ಕಣಿವೆ
  • News18
  • Last Updated: June 17, 2020, 4:41 PM IST
  • Share this:
ನವದೆಹಲಿ(ಜೂನ್ 17): ಸೋಮವಾರ ರಾತ್ರಿ ಗಾಲ್ವನ್ ನದಿ ಕಣಿವೆಯಲ್ಲಿ ಭಾರತ ಮತ್ತು ಚೀನೀ ಸೈನಿಕರ ಮಧ್ಯೆ ನಡೆದ ಕದನ ಅಂತಿಂಥದ್ದಲ್ಲ. ಆಧುನಿಕ ಮಿಲಿಟರಿ ಇತಿಹಾಸದಲ್ಲಿ ಅಪರೂಪಕ್ಕೆ ಕಂಡು ಕೇಳಿಬರುವ ಘನಘೋರ ಬೀಭತ್ಸ ಕಾದಾಟ ಅದಾಗಿತ್ತು. ಹಾಲಿವುಡ್ ಮತ್ತು ಚೀನೀ ಸಿನಿಮಾಗಳಲ್ಲಿ ಕಂಡುಬರುವ ಭಯಾನಕತೆಗೆ ಕಣಿವೆ ಸಾಕ್ಷಿಯಾಗಿತ್ತು. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್​ಎ) ಸೇನೆಯ ಅತ್ಯಂತ ಅಪಾಯಕಾರಿ ಪಡೆಗಳ ಪೈಕಿ ಇರುವ ಪ್ರಹಾರ ಪಡೆ ಅಥವಾ ಡೆತ್ ಸ್ಕ್ವಾಡ್​ನ ಸೈನಿಕರು ಗಾಲ್ವನ್ ಕಣಿವೆಯಲ್ಲಿ ಅಕ್ಷರಶಃ ನರಮೇಧ ನಡೆಸಿದರು.

ಸೋಮವಾರ ರಾತ್ರಿ ಸುಮಾರು 8 ಗಂಟೆ ಕಾಲ ನಡೆದ ಈ ಕಾದಾಟದಲ್ಲಿ ಯಾವುದೇ ಗುಂಡಿನ ಚಕಮಕಿಯಾಗಲಿಲ್ಲ. ಕೈಕೈ ಮಿಲಾಯಿಸಿದ್ದೇ ಹೆಚ್ಚು. ಆದರೂ ಆ ಕಾದಾಟ ಮಾರಕವಾಗಿತ್ತು. ಭಾರತೀಯ ತುಕಡಿ 16ನೇ ಬಿಹಾರ ರೆಜಿಮೆಂಟ್ ಸೈನಿಕರ ಮೇಲೆ ಚೀನಾದ ಡೆತ್ ಸ್ಕ್ವಾಡ್ ಅನಿರೀಕ್ಷಿತವಾಗಿ ಕ್ಷಿಪ್ರ ದಾಳಿ ನಡೆಸಿತ್ತು. ಐರನ್ ರಾಡ್, ಮುಳ್ಳಿನ ತಂತಿ ಸುತ್ತಿದ ಬೇಟಾನ್​ಗಳನ್ನ ಕೈಯಲ್ಲಿಡಿದಿದ್ದ ಚೀನಾದ ಅಸಾಲ್ಪ್ ಪಡೆ ಸೈನಿಕರು ಭಾರತೀಯ ಸೈನಿಕರನ್ನ ಹುಡುಕಿ ಹುಡುಕಿ ಪ್ರಹಾರ ನಡೆಸಿದರು. ಮೈನಸ್ ಡಿಗ್ರಿ ಇರುವ ಚಳಿಗೆ ಮೊದಲೇ ಥರಗುಟ್ಟುಹೋಗಿದ್ದ ಭಾರತೀಯ ಯೋಧರು ಶತ್ರು ಸೈನಿಕರ ಇಂಥ ದಿಢೀರ್ ದಾಳಿ ಎದುರಿಸಲು ಸಿದ್ಧವೇ ಇರಲಿಲ್ಲ. ಮೇಲಾಗಿ, ವಿವಿಧ ಹಂತಗಳಲ್ಲಿ ಸೇನಾಧಿಕಾರಿಗಳ ಮಧ್ಯೆ ಸಂಧಾನವಾಗಿ ಎರಡೂ ಕಡೆಯವರು ಸೇನೆಗಳನ್ನ ಹಿಂಪಡೆಯಲು ನಿರ್ಧರಿಸಿ ಆ ಪ್ರಕ್ರಿಯೆ ಕೂಡ ನಡೆದಿತ್ತು. ಹೀಗಾಗಿ, ಚೀನೀ ಸೈನಿಕರು ಇದ್ದಕ್ಕಿದ್ದಂತೆ ದಾಳಿ ನಡೆಸಬಹುದು ಎಂದು ಭಾರತೀಯರು ಎಣಿಸಿರಲಿಲ್ಲ.

ಚೀನಾದ ಈ ಡೆತ್ ಸ್ಕ್ವಾಡ್ ಸೈನಿಕರು ಎಷ್ಟು ಅಮಾನುಷರಾಗಿದ್ದರೆಂದರೆ ಗುಡ್ಡಗಳ ಬಳಿ ತಪ್ಪಿಸಿಕೊಂಡ ಭಾರತೀಯ ಯೋಧರನ್ನ ಹುಡುಕಿಹುಡುಕಿ ಹಲ್ಲೆ ಎಸಗಿದ್ದರು. ಕೆಲ ಭಾರತೀಯ ಸೈನಿಕರಂತೂ ಚೀನೀಯರ ಮಾರಕ ದಾಳಿಯಿಂದ ತಪ್ಪಿಸಿಕೊಳ್ಳಲು ಗಾಲ್ವನ್ ನದಿಗೆ ಹಾರಿ ಪ್ರಾಣಾರ್ಪಣೆ ಮಾಡಿಕೊಂಡರು.

ಒಂದು ಅಂದಾಜು ಪ್ರಕಾರ, ಚೀನೀಯರ ದಾಳಿಯಲ್ಲಿ 200ಕ್ಕೂ ಹೆಚ್ಚು ಭಾರತೀಯ ಸೈನಿಕರು ಗಾಯಗೊಂಡಿದ್ದಾರೆ. 23 ಮಂದಿ ಸಾವನ್ನಪ್ಪಿದ್ದಾರೆಂದು ಭಾರತೀಯ ಸೇನೆ ಅಧಿಕೃತ ಮಾಹಿತಿ ನೀಡಿದೆ. ಇನ್ನೂ 25ಕ್ಕೂ ಹೆಚ್ಚು ಸೈನಿಕರ ಪರಿಸ್ಥಿತಿ ಗಂಭೀರವಾಗಿದ್ದು ಜೀವನ್ಮರಣ ಹೋರಾಟದಲ್ಲಿದ್ಧಾರೆ. ನೂರಕ್ಕೂ ಹೆಚ್ಚು ಸೈನಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಭಾರತೀಯ ಸೇನಾಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗಬಹುದು.

ಆದರೆ, ಈ ಸಂಘರ್ಷದಲ್ಲಿ ಚೀನಾ ಕಡೆ ಎಷ್ಟು ಹಾನಿಯಾಗಿದೆ ಎಂಬುದು ಗೊತ್ತಾಗಿಲ್ಲ. ಎಎನ್​ಐ ವರದಿ ಪ್ರಕಾರ 49 ಪಿಎಲ್​ಎ ಸೈನಿಕರಿಗೆ ಸಾವು ಅಥವಾ ಗಾಯಗಳಾಗಿರಬಹುದು ಎಂಬ ಅಂದಾಜು ಇದೆ. ಚೀನಾ ಸೇನೆಯಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.

ಇದನ್ನೂ ಓದಿ: Indo-China Conflict: ಗಾಲ್ವಾನ್‌ ಕಣಿವೆಯಲ್ಲಿ ಸತ್ತ ಚೀನಾ ಸೈನಿಕರ ಸಂಖ್ಯೆ ಎಷ್ಟು? ಪ್ರತಿಕ್ರಿಯಿಸಲು ನಿರಾಕರಿಸಿದ ಚೀನಾ

ಚೀನೀಯರ ಈ ದಾಳಿಗೆ ಕಾರಣವಾಗಿದ್ದು ಆ ಒಂದು ಟೆಂಟ್:ಗಾಲ್ವನ್ ಕಣಿವೆಯಲ್ಲಿ ಹಲವು ದಿನಗಳಿಂದ ಇದ್ದ ಯುದ್ಧದ ಕಾರ್ಮೋಡವನ್ನ ನೀಗಿಸಲು ಸಾಕಷ್ಟು ಮಾತುಕತೆಗಳಾಗಿದ್ದವು. ಎರಡೂ ಕಡೆಯ ಸೈನಿಕರನ್ನ ಹಿಂದಕ್ಕೆ ಕರೆಸಲು ತೀರ್ಮಾನವಾಯಿತು. ಹಂತ ಹಂತವಾಗಿ ಪಡೆಗಳ ಹಿಂಸರಿಯುವಿಕೆ ಆಗುತ್ತಿತ್ತು. ಈ ಹಂತದಲ್ಲಿ ಪ್ಯಾಟ್ರೋಲ್ ಪಾಯಿಂಟ್ 14 ಎಂದು ಗುರುತಿಸಲಾಗಿರುವ ಸ್ಥಳದಲ್ಲಿ ಚೀನೀಯರು ಹೊಸದಾಗಿ ಟೆಂಟ್ ಹಾಕಿದರು. ಈ ಸ್ಥಳ ಭಾರತಕ್ಕೆ ಸೇರಿದ್ದು ಎಂಬುದು ನಮ್ಮ ಸೇನೆಯ ವಾದ. ಕರ್ನಲ್ ಬಾಬು ಕಮಾಂಡರ್ ಆಗಿರುವ 16ನೇ ಬಿಹಾರ್ ರೆಜಿಮೆಂಟ್​ನ ತುಕಡಿಗೆ ಈ ಟೆಂಟ್ ಅನ್ನ ತೆಗೆದುಹಾಕುವಂತೆ ಸೂಚಿಸಲಾಯಿತು. ಆಗ ಭಾರತೀಯ ಸೈನಿಕರು ಈ ಟೆಂಟ್ ತೆಗೆಯುವಂತೆ ಚೀನೀಯರಿಗೆ ಹೇಳಿದರು. ಅದಕ್ಕೆ ಅವರು ಒಪ್ಪಲಿಲ್ಲ. ಆಗ ವಾಗ್ವಾದ ಶುರುವಾಗಿ ಭಾರತೀಯ ಸೈನಿಕರು ಆ ಟೆಂಟನ್ನ ಸುಟ್ಟುಹಾಕಿದರು. ಇದಾಗಿದ್ದು ಶನಿವಾರದಂದು. ಅದಾದ ಒಂದು ದಿನದ ಬಳಿಕ, ಅಂದರೆ ಭಾನುವಾರದಂದು ಚೀನೀ ಸೈನಿಕರು ಭಾರತೀಯ ತುಕಡಿಗಳತ್ತ ಕಲ್ಲು ತೂರಾಟ ನಡೆಸಿದರು. ಮೊನ್ನೆ ಸೋಮವಾರ ರಾತ್ರಿ ಡೆತ್ ಸ್ಕ್ವಾಡ್ ಕಳುಹಿಸಿ ಚೀನಾ ಸೇನೆ ನರಮೇಧವನ್ನೇ ಮಾಡಿತು.

ಚೀನೀ ಸೇನೆ ಮಾಡಿರುವ ಆರೋಪದ ಪ್ರಕಾರ, ಭಾರತೀಯ ಸೈನಿಕರು ಗಡಿಭಾಗದ ಬಫರ್ ಝೋನ್​ನಲ್ಲಿ ಭಾರತೀಯರು ಯಾವುದೇ ಸೂಚನೆ ನೀಡದೆ ಬಂದಿದ್ದರು. ಇದು ಗಡಿ ನಿಯಮಾವಳಿಯ ಉಲ್ಲಂಘನೆಯಾಗಿತ್ತೆಂದು ಹೇಳಿದೆ.

ಭಾರತೀಯ ಸೇನೆಗೆ ಈ ಮಟ್ಟಕ್ಕೆ ಆಘಾತ ಅನುಭವಿಸಿದ್ದು 20 ವರ್ಷಗಳಲ್ಲಿ ಇದೇ ಮೊದಲು. ಈ ಹಿಂದೆ 1999ರ ಕಾರ್ಗಿಲ್ ಯುದ್ಧದಲ್ಲಿ ಅನೇಕ ಭಾರತೀಯ ಸೈನಿಕರು ಹತರಾಗಿದ್ದರು. 1962ರಲ್ಲಂತೂ ಮರೆಯಲಾಗದ ರೀತಿಯಲ್ಲಿ ಚೀನೀಯರು ಭಾರತೀಯ ಸೇನೆಗೆ ಮರ್ಮಾಘಾತ ಕೊಟ್ಟಿದ್ದರು. 1967ರಲ್ಲೂ ಭಾರತ ಮತ್ತು ಚೀನಾ ಸೇನಾ ಸಂಘರ್ಷವಾಗಿತ್ತು. ಆಗ 88 ಭಾರತೀಯ ಸೈನಿಕರು ಹತರಾಗಿದ್ದರು. ಆದರೆ, ನಾಥು ಲಾ ಮತ್ತು ಚೋ ಲಾ ಪಾಸ್​ಗಳ ಬಳಿ ನಡೆದ ಆ ಘರ್ಷಣೆಯಲ್ಲಿ ಭಾರತೀಯ ಸೈನಿಕರು 340 ಪಿಎಲ್​ಎ ಯೋಧರನ್ನು ಸಂಹರಿಸಿದ್ದರು. 1967ರ ನಂತರ ಚೀನೀಯರು ಭಾರತದೊಂದಿಗೆ ನೇರ ಸಂಘರ್ಷಕ್ಕೆ ಬಂದೇ ಇರಲಿಲ್ಲ.

ವರದಿ: ಪ್ರವೀಣ್ ಸ್ವಾಮಿ, CNN-News18
First published: June 17, 2020, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading