ಗಾಲ್ವನ್ ಸಂಘರ್ಷದಲ್ಲಿ 5 ಪಿಎಲ್ಎ ಸೈನಿಕರ ಸಾವು; ಮೊದಲ ಬಾರಿ ಲೆಕ್ಕ ಕೊಟ್ಟ ಚೀನಾ
ಜೂನ್ 15ರಂದು ಪೂರ್ವ ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ನಡೆದ ಚೀನಾ-ಭಾರತ ಸೈನಿಕರ ಸಂಘರ್ಷದಲ್ಲಿ ಭಾರತದ 20 ಸೈನಿಕರು ಬಲಿಯಾಗಿದ್ದರು. ಆ ಘಟನೆಯಲ್ಲಿ 5 ಪಿಎಲ್ಎ ಸೈನಿಕರು ಸತ್ತಿದ್ದಾರೆಂದು ಚೀನಾ ಮೊದಲ ಬಾರಿ ಒಪ್ಪಿಕೊಂಡಿದೆ.
ನವದೆಹಲಿ(ಸೆ. 25): ಪೂರ್ವ ಲಡಾಖ್ನ ಟಿಬೆಟ್ ಗಡಿ ಬಳಿಯ ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ನಡೆದ ಸಂಘರ್ಷದಲ್ಲಿ ತನ್ನ ಕಡೆಯ 5 ಸೈನಿಕರು ಮೃತಪಟ್ಟಿದ್ಧಾರೆಂದು ಚೀನಾ ಹೇಳಿದೆ. ಭಾರತದೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆಯ ವೇಳೆ ಚೀನಾ ಈ ವಿಚಾರವನ್ನು ಒಪ್ಪಿಕೊಂಡಿದೆ. ಜೂನ್ 15ರಂದು ಚೀನಾ ಪಿಎಲ್ಎ ಸೈನಿಕರು ಗಾಲ್ವನ್ ಕಣಿವೆಯಲ್ಲಿ ಭಾರತದ ಸೈನಿಕರ ಮೇಲೆ ಅನಿರೀಕ್ಷಿತ ದಾಳಿ ನಡೆಸಿದ್ದರು. ಆ ಘಟನೆಯಲ್ಲಿ ತನ್ನ 20 ಸೈನಿಕರು ಮೃತಪಟ್ಟಿದ್ಧಾರೆಂದು ಭಾರತ ಆಗಲೇ ಸ್ಪಷ್ಪಪಡಿಸಿತ್ತು. ಆದರೆ, ಚೀನಾ ತನ್ನ ಸೇನೆಯ ಕಮಾಂಡಿಂಗ್ ಆಫೀಸರ್ವೊಬ್ಬ ಸತ್ತನೆಂದು ಹೇಳಿದ್ದು ಬಿಟ್ಟರೆ ಇದೂವರೆಗೂ ತನ್ನ ಸೈನಿಕರ ಸಾವಿನ ಲೆಕ್ಕ ಕೊಟ್ಟಿರಲಿಲ್ಲ. ಇದೀಗ ಅದು ರಾಜತಾಂತ್ರಿಕ ಮಾತುಕತೆ ವೇಳೆ ಬಾಯಿಬಿಟ್ಟಿದೆ. ಆದರೆ, ಸರ್ಕಾರಿ ಮೂಲಗಳು ಆ ಸಂಘರ್ಷದಲ್ಲಿ ಚೀನಾ ಕಡೆ ಇನ್ನೂ ಹೆಚ್ಚು ಹಾನಿಯಾಗಿರಬಹುದು ಎಂದು ಶಂಕಿಸಿವೆ. ಚೀನಾ 5 ಸಾವು ಎಂದು ಹೇಳುತ್ತಿದೆಯಾದರೆ ಸಾವಿನ ಸಂಖ್ಯೆ ಮೂರು ಪಟ್ಟಾದರೂ ಹೆಚ್ಚಿರುತ್ತದೆ ಎಂಬುದು ಈ ಮೂಲಗಳ ಅಭಿಪ್ರಾಯ. ಅಂದರೆ ಚೀನಾದ 15 ಸೈನಿಕರು ಸಾವನ್ನಪ್ಪಿರುವ ಸಾಧ್ಯತೆ ಇದ್ದಂತಿದೆ.
ಇದೇ ಏಪ್ರಿಲ್ ತಿಂಗಳಿನಿಂದ ಪೂರ್ವ ಲಡಾಖ್ನ ಗಡಿ ಭಾಗದಲ್ಲಿ ಚೀನಾ ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಲೇ ಬಂದಿತ್ತು. ಇದಕ್ಕೆ ಭಾರತದ ಸೇನೆ ಪ್ರತಿರೋಧ ಒಡ್ಡಿದ ಪರಿಣಾಮ ಮೇ ತಿಂಗಳಿಂದ ಎರಡೂ ಕಡೆಯ ಸೈನಿಕರ ಮಧ್ಯೆ ವಿವಿಧ ಸ್ಥಳಗಳಲ್ಲಿ ಸಂಘರ್ಷ ಏರ್ಪಟ್ಟಿತ್ತು. ಚೀನಾ ಹೆಚ್ಚಿನ ಸೈನಿಕರನ್ನು ಗಡಿಭಾಗಕ್ಕೆ ನಿಯೋಜಿಸಿದರೆ ಅದಕ್ಕೆ ಪ್ರತಿಯಾಗಿ ಭಾರತವೂ ಅಷ್ಟೇ ಸಂಖ್ಯೆಯಲ್ಲಿ ಗಡಿಭಾಗದಲ್ಲಿ ಸೇನಾ ಪಡೆ ನಿಯೋಜಿಸುತ್ತಾ ಬಂದಿದೆ. ಪರಿಸ್ಥಿತಿ ತಿಳಿಯಾಗಿಸಲು ನಡೆದ ಮಾತುಕತೆಯಲ್ಲಿ ಎರಡೂ ಸೇನೆಗಳು ತಮ್ಮ ಸೈನಕರನ್ನು ಹಿಂಪಡೆಯಲು ತೀರ್ಮಾನಿಸಿದ್ದವು. ಆದರೆ, ಜೂನ್ 15ರಂದು ರಾತ್ರಿ ದಿಢೀರನೇ ಚೀನಾದ ನೂರಾರು ಸೈನಿಕರು ಮಾರಕ ಆಯುಧ ಮತ್ತು ದೊಣ್ಣೆಗಳಿಂದ ಭಾರತದ ಸೈನಿಕರ ಮೇಲೆ ಅಮಾನುಷ ಹಲ್ಲೆ ಎಸಗಿದ್ದರು. ಈ ಭೀಕರ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಿದ್ದರು. ಚೀನಾ ಕಡೆ 30ಕ್ಕೂ ಹೆಚ್ಚು ಸಾವು ನೋವುಗಳು ಸಂಭವಿಸಿರಬಹುದು ಎಂಬುದು ಕೆಲ ಮೂಲಗಳ ಲೆಕ್ಕಾಚಾರ. ಆದರೆ, ಚೀನಾ ತನ್ನ ಸೈನಿಕರ ಸಾವಿನ ಲೆಕ್ಕ ತಿಳಿಸಲು ನಿರಾಕರಿಸಿತ್ತು. ಇದೀಗ ಮೊದಲ ಬಾರಿಗೆ ಅದು ಲೆಕ್ಕ ಹೇಳಿದೆ.
2017ರಲ್ಲಿ ಸಿಕ್ಕಿಮ್ ಪಕ್ಕದಲ್ಲಿರುವ ಚೀನಾ-ಭೂತಾನ್ ಗಡಿಭಾಗದ ಡೋಕ್ಲಾಮ್ ಬಳಿ ಭಾರತ ಮತ್ತು ಚೀನಾ ಸೈನಿಕರು ಮುಖಾಮುಖಿಯಾಗಿದ್ದರು. ಭೂತಾನ್ಗೆ ಸೇರಿದ್ದೆನ್ನಲಾದ ಡೋಕ್ಲಾಮ್ನಲ್ಲಿ ಚೀನಾ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಭೂತಾನ್ ದೇಶದ ಮಿತ್ರದೇಶವಾದ ಭಾರತ ತನ್ನ ಕರ್ತವ್ಯ ಭಾಗವಾಗಿ ಡೋಕ್ಲಾಮ್ನಲ್ಲಿ ಚೀನಾಗೆ ಎದುರಾಗಿ ಸೈನಿಕರನ್ನು ನಿಲ್ಲಿಸಿತು. ಅದೂ ಕೂಡ ಆಗಿದ್ದು ಜೂನ್ ತಿಂಗಳಲ್ಲೇ. ಹಲವು ದಿನಗಳ ಕಾಲ ನಡೆದ ತಿಕ್ಕಾಟದ ಬಳಿಕ ಚೀನಾ ಅಲ್ಲಿಂದ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿತು. ಆ ಘಟನೆ ಆದ ಬಳಿಕ ಚೀನಾ ಭಾರತದೊಂದಿಗಿನ ಎಲ್ಎಸಿ ಗಡಿಭಾಗದಲ್ಲಿ ಅತಿಕ್ರಮಣಕ್ಕೆ ಪ್ರಯತ್ನ ಹೆಚ್ಚು ಮಾಡಿದೆ. ಗಡಿ ಪಾಲನೆಯ ಕೆಲ ಶಿಷ್ಟಾಚಾರಗಳನ್ನ ಅದು ಮುರಿಯುತ್ತಲೇ ಬಂದಿದೆ.
ಗಡಿಯಲ್ಲಿ ಗಸ್ತು ತಿರುಗಲು 15-20 ಸೈನಿಕರ ತಂಡವನ್ನು ಮಾತ್ರ ಕಳುಹಿಸಬೇಕು ಎಂಬ ನಿಯಮ ಇದೆ. ಆದರೆ, ಚೀನಾದವರು 50-100 ಸೈನಿಕರಿರುವ ತಂಡವನ್ನು ಗಸ್ತಿಗೆ ನಿಯೋಜಿಸುತ್ತದೆ. ಇದು ಗಡಿಭಾಗದಲ್ಲಿ ನಿಯಮದ ಪ್ರಕಾರ ಕಡಿಮೆ ಸಂಖ್ಯೆಯಲ್ಲಿ ಗಸ್ತು ತಿರುಗುವ ಭಾರತೀಯ ಸೈನಿಕರನ್ನು ಬೆದರಿಸಲು ಚೀನಾ ಅನುಸರಿಸುತ್ತಿದ್ದ ತಂತ್ರವೆನ್ನಲಾಗಿದೆ.
ಇನ್ನು, ಪೂರ್ವ ಲಡಾಖ್ನಲ್ಲಿ ಚೀನಾ ಕಳೆದ ಒಂದು ವರ್ಷದಿಂದ ಅತಿಕ್ರಮಣ ಮಾಡಲು ಹೊಂಚು ಹಾಕಿತ್ತೆನ್ನಲಾಗುತ್ತಿದೆ. ಕೋವಿಡ್ ಬಿಕ್ಕಟ್ಟು ಚೀನಾದ ಈ ದುಸ್ಸಾಹಸಕ್ಕೆ ಒಳ್ಳೆಯ ಸಮಯ ಕೊಟ್ಟಿತ್ತು. ಭಾರತದಲ್ಲಿ ಕೊರೋನಾ ಹೆಚ್ಚಾಗುತ್ತಿರುವಾಗ ಹಾಗೂ ತನ್ನ ದೇಶದಲ್ಲಿ ಕೊರೋನಾ ಕಡಿಮೆಯಾಗಿ ಚೇತರಿಸಿಕೊಳ್ಳುತ್ತಿರುವ ಏಪ್ರಿಲ್ ತಿಂಗಳಿನಿಂದ ಚೀನಾ ಕಿತಾಪತಿ ಪ್ರಾರಂಭಿಸಿತ್ತು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ