ಎಚ್ಚರ ಕಟ್ಟೆಚ್ಚರ; 1962ರ ಯುದ್ಧಕ್ಕೆ ಮೊದಲೂ ಕೂಡ ಚೀನೀ ಸೇನೆ ಗಾಲ್ವನ್ ಕಣಿವೆಯಿಂದ ವಾಪಸ್ಸಾಗಿತ್ತು

1962ರಲ್ಲಿ ಚೀನಾ ಸೈನಿಕರು ಆವರಿಸಿಕೊಂಡಾಗ ಭಾರತೀಯ ಯೋಧರು ಕೆಚ್ಚೆದೆಯಿಂದ ಹೋರಾಡಿ ಪ್ರತಿರೋಧ ತೋರಿದ್ದರು. ಆಗ ಚೀನೀ ಸೈನಿಕರು ಅಲ್ಲಿಂದ ಕಾಲ್ತೆಗೆದಿದ್ದರು. ಅದಾಗಿ 3 ತಿಂಗಳಿಗೆ ಚೀನಾ ಯುದ್ಧ ನಡೆಸಿತು. ಚೀನಾದವರನ್ನ ಈಗ ಯಾವ ಕಾರಣಕ್ಕೂ ನಂಬಬೇಡಿ ಎನ್ನುತ್ತಾರೆ ಕೆಲ ಸೇನಾಧಿಕಾರಿಗಳು.

ಚೀನಾ- ಭಾರತ ಗಡಿಯಲ್ಲಿ ಸೈನಿಕರು

ಚೀನಾ- ಭಾರತ ಗಡಿಯಲ್ಲಿ ಸೈನಿಕರು

 • News18
 • Last Updated :
 • Share this:
  ನವದೆಹಲಿ: ಗಾಲ್ವನ್ ಕಣಿವೆಯಿಂದ ಭಾರತ ಮತ್ತು ಚೀನಾ ದೇಶಗಳ ಸೈನಿಕರನ್ನ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ. ನಿಧಾನವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ. ಚೀನೀ ಸೈನಿಕರೂ ಅಲ್ಲಿಂದ ನಿರ್ಗಮಿಸುತ್ತಿದ್ಧಾರೆ. ಕೆಲ ಮಾಧ್ಯಮಗಳು ಹಾಗೂ ಜನರು ಚೀನೀ ಸೈನಿಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದು ಭಾರತ ಸೇನೆಗೆ ಸಿಕ್ಕ ಜಯ ಎಂದು ವಿಜಯೋತ್ಸವ ಆಚರಿಸುತ್ತಿದ್ದಾರೆ. ಆದರೆ, 1962ರ ಯುದ್ಧವನ್ನು ಪ್ರತ್ಯಕ್ಷವಾಗಿ ಕಂಡಿದ್ದವರು ಎಚ್ಚರಿಕೆ ಸಂದೇಶಗಳನ್ನ ರವಾನಿಸುತ್ತಿದ್ದಾರೆ. ದೂರ್ತತನದ ಚೀನೀ ಸರ್ಕಾರವನ್ನು ನಂಬಬಾರದು ಎಂದು ಎಚ್ಚರಿಸುತ್ತಿದ್ದಾರೆ.

  1962ರ ಯುದ್ಧ ಈಗ ಮರುಕಳಿಸುತ್ತದೆಯಾ ಎಂಬಂತಹ ಅನುಮಾನ ಹುಟ್ಟುವ ರೀತಿಯಲ್ಲಿ ಘಟನೆಗಳು ನಡೆಯುತ್ತಿವೆ. 1962 ಮತ್ತು 2020ರ ಸಂದರ್ಭಗಳ ಹೋಲಿಕೆಯಲ್ಲಿ ದೊಡ್ಡ ವ್ಯತ್ಯಾಸವೇನಿಲ್ಲ. ಭಾರತ ಆಗಿಗಿಂತ ಈಗ ಶಕ್ತಿಶಾಲಿಯಾಗಿದೆ. ಹಾಗೇ ಚೀನಾ ಕೂಡ ಸಾಕಷ್ಟು ಬಲ ವೃದ್ಧಿಸಿಕೊಂಡಿದೆ. ಅಂದು ಲಡಾಖ್​ನ ಗಾಲ್ವನ್ ಕಣಿವೆಯಲ್ಲೇ ಚೀನಾ ಕಿತಾಪತಿ ನಡೆಸಿ ಯುದ್ಧ ಆರಂಭಿಸಿದ್ದು. ಈಗಲೂ ಗಾಲ್ವನ್ ಕಣಿವೆಯಲ್ಲೇ ಚೀನಾ ಕಿತಾಪತಿ ಮಾಡುತ್ತಿದೆ.

  1962ರ ಜುಲೈ 15ರಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮುಖಪುಟದಲ್ಲಿ ಬರೆದ ಹೆಡ್​ಲೈನ್ ಹೆಚ್ಚೂಕಡಿಮೆ ಇವತ್ತಿನ ಸಂದರ್ಭಕ್ಕೆ ತಾಳೆಯಾಗುವಂತಿದೆ. “ಗಾಲ್ವನ್ ಪೋಸ್ಟ್​ನಿಂದ ವಾಪಸ್ ಹೋದ ಚೀನೀ ಸೇನೆ”; ‘ಶೌರ್ಯ ಮೆರೆದ ಭಾರತೀಯ ಸೈನಿಕರು’; ‘ಭಾರತ ಸರ್ಕಾರದ ಎಚ್ಚರಿಕೆಯ ಪರಿಣಾಮ ಇದು’ – ಈ ಮೂರು ಹೆಡ್​ಲೈನ್​ಗಳು ಆ ದಿನದ ಪತ್ರಿಕೆಯಲ್ಲಿ ಕಣ್ಣಿಗೆ ಕುಕ್ಕಿದ್ದವು. ಭಾರತೀಯರಲ್ಲಿ ರಣ ಉತ್ಸಾಹ ಮೂಡಿಸಿದ್ದವು. ಆದರೆ, ಅದಾಗಿ ಮೂರು ತಿಂಗಳಲ್ಲಿ ಚೀನಾ ಸೇನೆ ಭಾರತದ ಮೇಲೆ ಯುದ್ಧ ಪ್ರಾರಂಭಿಸಿತು. ಅದೇ ಗಾಲ್ವನ್ ಕಣಿವೆಯಲ್ಲೇ ಚೀನಾ ಆಕ್ರಮಣ ಶುರುವಾಗಿದ್ದು.

  ಇದನ್ನೂ ಓದಿ: India-China Conflict: ಚೀನಾ ಮತ್ತೆ ವಾಪಾಸ್ ಬರಬಹುದು; ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ ಭಾರತ

  1962ರ ಬೇಸಿಗೆ ಸಂದರ್ಭದಲ್ಲಿ ಗಾಲ್ವನ್ ಕಣಿವೆಯಲ್ಲಿ ಗೂರ್ಖಾ ರೆಜಿಮೆಂಟ್​ನ ಸೈನಿಕರು ಭದ್ರತೆ ಒದಗಿಸಿದ್ದರು. ಜುಲೈ 6ರಂದು ಚೀನೀ ಸೈನಿಕರು ಈ ವಿಚಾರವನ್ನು ತಮ್ಮ ಮುಖ್ಯಸೇನಾ ಕಚೇರಿಯ ಗಮನಕ್ಕೆ ತಂದರು. ನಾಲ್ಕು ದಿನಗಳ ನಂತರ 300 ಚೀನೀ ಸೈನಿಕರು ಬಂದು ಭಾರತೀಯ ಸೈನಿಕರನ್ನು ಸುತ್ತುವರಿದರು. ನಂತರ ಉನ್ನತ ಮಟ್ಟದಲ್ಲಿ ಮಾತುಕತೆಯಾಗಿ ಚೀನೀಯರು 200 ಮೀಟರ್ ಹಿಂದಕ್ಕೆ ಸರಿದರೆಂದು ಪತ್ರಿಕೆಗಳಲ್ಲಿ ವರದಿಯಾಯಿತು. ಅಂದಿನ ಪ್ರಧಾನಿ ನೆಹರೂ ಅವರು ತಾವು ಯಾವುದೇ ವಿದೇಶೀ ಶಕ್ತಿಗೆ ಜಗ್ಗುವುದಿಲ್ಲ ಎಂದು ವೀರೋಚಿತ ಮಾತುಗಳನ್ನಾಡಿದ್ದರು. ಚೀನೀ ಸೈನಿಕರನ್ನು ಹಿಮ್ಮೆಟ್ಟಿಸಿದ್ದ ಪ್ರಬಲ ಗೂರ್ಖಾ ಪಡೆಯನ್ನ ಇಡೀ ಭಾರತವೇ ಕೊಂಡಾಡಿತು.

  times of india headline in `962
  1962ರಲ್ಲಿ ಟೈಮ್ಸ್ ಆಫ್ ಇಂಡಿಯಾದ ಒಂದು ಹೆಡ್​ಲೈನ್


  ಅದಾಗಿ ಮೂರು ತಿಂಗಳ ಕಾಲ ಭಾರತ ಮತ್ತು ಚೀನಾ ಸರ್ಕಾರಗಳು ಆರೋಪ ಪ್ರತ್ಯಾರೋಪಗಳ ಪತ್ರಗಳನ್ನ ವಿನಿಮಯ ಮಾಡಿಕೊಂಡಿದ್ದೇ ಆಯಿತು. ಅಷ್ಟರಲ್ಲಿ ಗಾಲ್ವನ್ ಕಣಿವೆಯಲ್ಲಿ ಉಷ್ಣಾಂಶ ಮೈನಸ್ ಡಿಗ್ರಿಗೆ ಇಳಿದಿತ್ತು. ಅಂಥ ದಟ್ಟ ಚಳಿಯಲ್ಲಿ ಗೂರ್ಖಾ ಪಡೆಯನ್ನ ವಾಪಸ್ ಕರೆಯಿಸಿಕೊಂಡು ಜಾಟ್ಸ್ ಆಲ್ಫಾ ತುಕಡಿಗಳನ್ನ ನಿಯೋಜಿಸಲಾಯಿತು.

  ಇದನ್ನೂ ಓದಿ: Indian Economy - ಭಾರತದ ಆರ್ಥಿಕತೆ ತೀರಾ ಕ್ಷೀಣಿಸುವ ಸಾಧ್ಯತೆ ಇಲ್ಲ: ಕೆ.ವಿ. ಕಾಮತ್

  1962ರಲ್ಲಿ ತುಮಕೂರಿನಲ್ಲಿ ಅಂದಿನ ಪ್ರಧಾನಿ ನೆಹರೂ ಮಾತನಾಡಿದ ವರದಿ


  ಇದಾಗಿ ಸ್ವಲ್ಪ ದಿನಗಳಲ್ಲಿ, ಅಂದರೆ 1962ರ ಅಕ್ಟೋಬರ್ 20ರಂದು ಚೀನೀಯರು ಗಾಲ್ವನ್ ಪೋಸ್ಟ್ ಮೇಲೆ ಗುಂಡಿ ದಾಳಿ ನಡೆಸಿ 36 ಸೈನಿಕರನ್ನು ಬಲಿಪಡೆದರು. ಆಗ ಜಾಟ್ ತುಕಡಿಯ ನೇತೃತ್ವ ವಹಿಸಿದ್ದು ಮೇಜರ್ ಹಸಬ್ನಿಸ್. ಚೀನಾದವರು ಗುಂಡಿನ ದಾಳಿ ನಡೆಸಿದ ಆ ದಿನವೇ ಮೇಜರ್ ಹಸಬ್ನಿಸ್ ಸೇರಿದಂತೆ ಹಲವು ಭಾರತೀಯ ಸೈನಿಕರನ್ನ ವಶಕ್ಕೆ ಪಡೆದು ಸೆರೆಯಾಳಾಗಿಸಿಕೊಂಡರು. ಆಗಲೇ ಭಾರತ ಮತ್ತು ಚೀನಾ ಮಧ್ಯೆ 1962ರ ಯುದ್ಧ ಪ್ರಾರಂಭವಾಗಿದ್ದು. ಆ ಯುದ್ಧದಲ್ಲಿ ಚೀನಾ ಬಹುತೇಕ ಮೇಲುಗೈ ಸಾಧಿಸಿತು. ಅಕ್ಸಾಯ್ ಚಿನ್ ಪ್ರದೇಶವನ್ನು ಅತಿಕ್ರಮಿಸಿತು. ಭಾರತೀಯ ಸೈನಿಕರು ಹಲವು ಪ್ರತಿಕೂಲ ಪರಿಸ್ಥಿತಿಯಲ್ಲೂ ವೀರೋಚಿತವಾಗಿ ಹೋರಾಡಿ ಪ್ರತಿರೋಧ ತೋರಿದ್ದರು.  ಈಗ 1962ರ ಯುದ್ಧಕ್ಕೆ ಮುನ್ನಾ ಆದ ಬೆಳವಣಿಗೆಗಳಿಗೂ ಈಗ ಆಗುತ್ತಿರುವ ವಿದ್ಯಮಾನಗಳಿಗೂ ಹೋಲಿಕೆ ಮಾಡಲಡ್ಡಿಯಿಲ್ಲ. ಚೀನಾದವರು ಒಂದು ಹೆಜ್ಜೆ ಹಿಂದೆ ಸರಿಯುತ್ತಿದ್ದಾರೆಂದರೆ ಅವರು ಯಾವುದೋ ಲೆಕ್ಕಾಚಾರ ಹಾಕುತ್ತಿರುವುದು ಸ್ಪಷ್ಟ. ಅವರನ್ನ ಯಾವುದೇ ಕಾರಣಕ್ಕೂ ನಂಬಲು ಸಾಧ್ಯವಿಲ್ಲ. ಇತಿಹಾಸ ಯಾವಾಗಲೂ ಮರುಕಳಿಸುತ್ತದಂತೆ. ಈಗಲೂ 1962ರ ಇತಿಹಾಸ ಮರುಕಳಿಸಿಬಿಟ್ಟರೆ ಅಚ್ಚರಿ ಇಲ್ಲ. ಎಲ್ಲದಕ್ಕೂ ಸನ್ನದ್ಧರಾಗಿರಿ ಎಂದು ಕೆಲ ಸೇನಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

  ಕೃಪೆ: Shreya Dhoundial, CNN-News18
  Published by:Vijayasarthy SN
  First published: