ಕಾಶ್ಮೀರದಿಂದ ಲಡಾಕ್​ನತ್ತ ಭಾರತೀಯ ತುಕಡಿಗಳು; ಚೀನಾದಿಂದ ಮುಂದುವರಿದಿದೆ ಒತ್ತಡ ತಂತ್ರ

ಲಡಾಕ್​ನ ಡರ್ಬಕ್ ಗ್ರಾಮದ ಜನರು ಕೆಲ ಪ್ರತ್ಯಕ್ಷ ಮಾಹಿತಿ ನೀಡಿದ್ಧಾರೆ. ಅವರ ಪ್ರಕಾರ ಪ್ರತೀ ರಾತ್ರಿ ಅವರ ಗ್ರಾಮದ ಬಳಿಯಿಂದ 80-90 ಟ್ರಕ್​ಗಳು ಹಾದುಹೋಗುತ್ತಿವೆ.

ಭಾರತ ಚೀನಾ ಗಡಿಭಾಗ

ಭಾರತ ಚೀನಾ ಗಡಿಭಾಗ

 • Share this:
  ನವದೆಹಲಿ(ಜೂ. 01): ಲಡಾಖ್​ನ ಭಾರತ ಮತ್ತು ಚೀನೀ ಗಡಿಬಿಕ್ಕಟ್ಟು 26ನೇ ದಿನವೂ ಮುಂದುವರಿದಿದೆ. ಗಡಿಭಾಗದಲ್ಲಿ ಬಹಳ ಆಕ್ರಮಣಕಾರಿ ವರ್ತನೆ ತೋರುತ್ತಿರುವ ಚೀನೀ ಸೈನಿಕರ ಮೇಲೆ ಒತ್ತಡ ಹಾಕಲು ಭಾರತೀಯ ಸೇನೆ ಹೆಚ್ಚೆಚ್ಚು ತುಕಡಿಗಳನ್ನ ಸ್ಥಳಕ್ಕೆ ಜಮಾಯಿಸುತ್ತಿದೆ. ಸೈನಿಕರು, ಮದ್ದು ಗುಂಡುಗಳು ಇರುವ ಟ್ರಕ್​ಗಳು ಲಡಾಖ್​ನ ಗಾಲ್ವನ್ ಕಣಿವೆಗೆ ತೆರಳಿವೆ. ಹೆಚ್ಚಿನ ತುಕಡಿಗಳು ಕಾಶ್ಮೀರದಿಂದಲೇ ಹೋಗಿವೆ.

  “ವಿಪತ್ತು ಸಂದರ್ಭಗಳಲ್ಲಿ ಗಡಿ ನಿಯಂತ್ರಣ ರೇಖೆ (ಎಲ್​ಓಸಿ)ಯಲ್ಲಿರುವ ತುಕಡಿಗಳನ್ನ ವಾಸ್ತವ ಗಡಿನಿಯಂತ್ರಣ ರೇಖೆಗೆ (ಎಲ್​ಎಸಿ) ತುಕಡಿಗಳನ್ನ ಕಳುಹಿಸುವುದು ಸಹಜ. ಈಗ ಆ ತುರ್ತು ಸಂದರ್ಭ ಬಂದಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ನ್ಯೂಸ್18 ವಾಹಿನಿಗೆ ಮಾಹಿತಿ ನೀಡಿದ್ಧಾರೆ.

  ಇದೇ ವೇಳೆ, ಉಗ್ರ ನಿಗ್ರಹ ಕಾರ್ಯಾಚರಣೆಗೆ ಯಾವುದೇ ಅಡ್ಡಿಯಾಗದಂತೆ ಕಾಶ್ಮಿರದಿಂದ ತುಕಡಿಗಳನ್ನ ಲಡಾಕ್​ಗೆ ಕಳುಹಿಸಲಾಗಿದೆ ಎಂದೂ ಆ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಕಮಾಂಡ್ ಮತ್ತು ಕಾರ್ಪ್ಸ್ ಮಟ್ಟದಲ್ಲಿ ಯಾವುದಕ್ಕೂ ನಿಯೋಜನೆಯಾಗದ ಹೆಚ್ಚುವರಿ ಅಥವಾ ಮೀಸಲು ಪಡೆಗಳನ್ನ ಇರಿಸಲಾಗಿರುತ್ತದೆ. ಈ ಪಡೆಗಳನ್ನೇ ಈಗ ಲಡಾಕ್​ಗೆ ಕಳುಹಿಸಲಾಗಿರುವುದು ಎಂದೂ ಅವರು ಮಾಹಿತಿ ನೀಡಿದ್ಧಾರೆ.

  ಭಾರತ ಮತ್ತು ಚೀನೀ ಸೈನಿಕರು ಮುಖಾಮುಖಿಯಾಗಿರುವ ಸ್ಥಳದ ಸಮೀಪ ಇರುವ ಲಡಾಕ್​ನ ಡರ್ಬಕ್ ಗ್ರಾಮದ ಜನರು ಕೆಲ ಪ್ರತ್ಯಕ್ಷ ಮಾಹಿತಿ ನೀಡಿದ್ಧಾರೆ. ಅವರ ಪ್ರಕಾರ ಪ್ರತೀ ರಾತ್ರಿ ಅವರ ಗ್ರಾಮದ ಬಳಿಯಿಂದ 80-90 ಟ್ರಕ್​ಗಳು ಹಾದುಹೋಗುತ್ತಿವೆ. ಸೇನೆ ಮತ್ತು ನಾಗರಿಕ ಉದ್ದೇಶದ ಆ ವಾಹನಗಳಲ್ಲಿ ಸೈನಿಕರು, ಮದ್ದುಗುಂಡುಗಳು ಹಾಗೂ ಇತರ ಸಂಗ್ರಹಗಳು ಇರುತ್ತವೆ ಎಂದು ಈ ಗ್ರಾಮಸ್ಥರು ತಿಳಿಸುತ್ತಾರೆ.

  ಇದನ್ನೂ ಓದಿ: ಅಮೆರಿಕದ ವೈಟ್​ಹೌಸ್ ಎದುರು ಬೃಹತ್ ಪ್ರತಿಭಟನೆ; ಟ್ರಂಪ್​ಗೆ ಅಂಡರ್​ಗ್ರೌಂಡ್ ಬಂಕರ್ ರಕ್ಷಣೆ

  ಆದರೆ, ಲೆಫ್ಟಿನೆಂಟ್ ಜನರಲ್ ಎಸ್.ಎಲ್. ನರಸಿಂಹನ್ ಅವರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದು, ಸೇನಾ ಟ್ರಕ್​ಗಳ ಓಡಾಟದ ಬಗ್ಗೆ ತಪ್ಪು ಕಲ್ಪನೆಗಳು ಸೃಷ್ಟಿಯಾಗುವ ಅಪಾಯದ ಬಗ್ಗ ಎಚ್ಚರಿಸಿದ್ದಾರೆ. “ಈ ಟ್ರಕ್​ಗಳು ಚಳಿಗಾಲಕ್ಕೆ ಆಹಾರ ಸಾಮಗ್ರಿಗಳನ್ನು ಶೇಖರಿಸಲು ಓಡಾಟ ನಡೆಸುತ್ತಿರಬಹುದು. ಹಿಮ ಕರಗಿ ದಾರಿ ತೆರೆದಾಗ ಮುಂದಿನ ಚಳಿಗಾಲಕ್ಕೆಂದು ಸೇನೆಯ ಸಾಮಗ್ರಿಗಳನ್ನು ಫಾರ್ವರ್ಡ್ ಪೋಸ್ಟ್​ಗಳಿಗೆ ಸಾಗಿಸಲಾಗುತ್ತದೆ. ಈ ಪ್ರಕ್ರಿಯೆ ಪ್ರತೀ ವರ್ಷದ ಈ ತಿಂಗಳುಗಳಲ್ಲೇ ನಡೆಯುತ್ತದೆ” ಎಂದು ನರಸಿಂಹನ್ ಹೇಳಿದ್ದಾರೆ.

  ಲಡಾಕ್​ನಲ್ಲಿರುವ ಎಲ್​ಎಸಿ ಗಡಿಭಾಗದಲ್ಲಿ ಒಂದೇ ಸ್ಥಳದಲ್ಲಿ ಭಾರತ ಮತ್ತು ಚೀನೀ ಸೈನಿಕರು ಗಸ್ತು ತಿರುಗುತ್ತಿದ್ದಾಗ ಮುಖಾಮುಖಿಯಾಗಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಎರಡೂ ಕಡೆಯವರು ಇದು ತಮಗೆ ಸೇರಿದ್ದು ಎಂದು ವಾದಿಸುತ್ತಿದ್ದು, ಹಿಂಸರಿಯಲು ಒಪ್ಪಿಲ್ಲ. ಕೊರೋನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ಸೇನೆಯು ಈ ಎಲ್​ಎಸಿಯಲ್ಲಿ ತನ್ನೆಲ್ಲಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಆದರೆ, ಚೀನಾದವರು ಇದೇ ಸಮಯ ಉಪಯೋಗಿಸಿ ಅತಿಕ್ರಮಣ ಮಾಡಿದ್ದಾರೆ ಎಂಬುದು ಭಾರತೀಯ ಸೇನೆಯ ಆರೋಪ. “ಚೀನಾ ನಮ್ಮ ಬೆನ್ನಿಗೆ ಚೂರಿ ಹಾಕಿದೆ. ಕೊರೋನಾ ಬಿಕ್ಕಟ್ಟಿನ ಮಧ್ಯೆ ಇದನ್ನು ನಿರೀಕ್ಷಿಸಿರಲಿಲ್ಲ” ಎಂದು ಸೇನಾಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ಧಾರೆ.

  “ಗಾಲ್ವನ್ ಕಣಿವೆಯಲ್ಲಿ ಗಡಿಭಾಗದುದ್ದಕ್ಕೂ ಚೀನೀ ಪ್ರೇಶದಲ್ಲಿ ಭಾರತ ಅಕ್ರಮ ನಿರ್ಮಾಣ ಚಟುವಟಿಕೆಗೆ ಪ್ರತಿಯಾಗಿ ಚೀನೀ ಪಡೆಗಳು ಗಡಿ ನಿಯಂತ್ರಣ ಕ್ರಮಗಳನ್ನ ಬಿಗಿಗೊಳಿಸಿದೆ. ಟೈಪ್ 15 ಟ್ಯಾಂಕ್​ಗಳು, ಝಡ್-20 ಹೆಲಿಕಾಪ್ಟರ್​ಗಳು, ಜಿಜೆ-2 ಡ್ರೋನ್​ಗಳು ಚೀನಾದ ಸಮರ ಬತ್ತಳಿಕೆಯಲ್ಲಿವೆ” ಎಂದು ಚೀನಾ ಕಮ್ಯೂನಿಸ್ಟ್ ಪಕ್ಷದ ಮುಖವಾಣಿ ಗ್ಲೋಬಲ್ ಟೈಮ್ಸ್  ಪತ್ರಿಕೆಯಲ್ಲಿ ಬರೆಯಲಾಗಿದೆ.

  ಇದನ್ನೂ ಓದಿ: LPG Cylinder Price: ಜನಸಾಮಾನ್ಯರಿಗೆ ಶಾಕ್; ಅಡುಗೆ ಅನಿಲ ಬೆಲೆಯಲ್ಲಿ ದಿಢೀರ್ ಏರಿಕೆ

  ಇದೇ ವೇಳೆ, ಚೀನಾ ಮತ್ತು ಅಮೆರಿಕ ಮಧ್ಯೆ ನಡೆಯುತ್ತಿರುವ ಶೀತಲ ಸಮರದಲ್ಲಿ ಭಾರತ ಅಮೆರಿಕದ ಪರ ವಾಲದಂತೆ ಚೀನಾ ಒತ್ತಡ ತಂತ್ರ ಹೇರುತ್ತಿರಬಹುದು ಎಂದೆನ್ನಲಾಗುತ್ತಿದೆ. ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ.

  “ಹೊಸ ಶೀತಲ ಸಮರದಲ್ಲಿ ಭಾರತವೇನಾದರೂ ಅಮೆರಿಕ ಪರವಾಗಿ ನಿಂತರೆ, ಅಥವಾ ಅಮೆರಿಕದ ಕೈಗೊಂಬೆಯಾದರೆ ಆ ದೇಶದೊಂದಿಗಿನ ಆರ್ಥಿಕ ಸಂಬಂಧಕ್ಕೆ ದೊಡ್ಡ ಹಿನ್ನಡೆಯಾಗುತ್ತದೆ. ಈ ಹಂತದಲ್ಲಿ ಭಾರತದ ಆರ್ಥಿಕತೆ ಮೇಲೆ ಭಾರೀ ಪ್ರತಿಕೂಲ ಪರಿಣಾಮ ಬೀರುತ್ತದೆ” ಎಂದು ಆ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.

  ವರದಿ: Shreya Dhoundial, CNN-News18

  First published: