ಚೀನಾ ಗಡಿಭಾಗದಲ್ಲಿ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ: ಸೇನಾ ಮುಖ್ಯಸ್ಥರ ಸ್ಪಷ್ಟನೆ

ಐಎಂಎಯಲ್ಲಿ ಅತ್ಯುಚ್ಚ ಮಿಲಿಟರಿ ತರಬೇತಿ ಪಡೆದ ಜೆಂಟಲ್​ಮನ್ ಕೆಡೆಟ್​ಗಳ ಪೆರೇಡ್ ನಡೆಯಿತು. ನಿನ್ನೆಯವರೆಗೂ ಇವರು ನಿಮ್ಮ ಮಕ್ಕಳು. ನಾಳೆಯಿಂದ ಇವರು ನಮ್ಮವರು ಎಂದು ಸೇನಾ ಮುಖ್ಯಸ್ಥರು ಈ ಕೆಡೆಟ್​ಗಳ ಪಾಲಕರಿಗೆ ಸಂದೇಶ ರವಾನಿಸಿದ್ಧಾರೆ.

ಸೇನಾ ಮುಖ್ಯಸ್ಥ ಎಂಎಂ ನರವಣೆ

ಸೇನಾ ಮುಖ್ಯಸ್ಥ ಎಂಎಂ ನರವಣೆ

  • News18
  • Last Updated :
  • Share this:
ನವದೆಹಲಿ(ಜೂನ್13): ಭಾರತ ಮತ್ತು ಚೀನಾ ನಡುವಿನ ಗಡಿಬಿಕ್ಕಟ್ಟು ಒಂದು ತಹಬದಿಗೆ ಬರುತ್ತಿದೆ. ಎರಡೂ ದೇಶಗಳು ವಿವಿಧ ಹಂತಗಳಲ್ಲಿ ಮಾತುಕತೆಗಳನ್ನ ನಡೆಸುತ್ತಿವೆ. ಪರಿಸ್ಥಿತಿ ಶಾಂತವಾಗಿದೆ ಎಂದು ಸೇನಾ ಮುಖ್ಯಸ್ಥ (ಸಿಎಎಸ್) ಎಂಎಂ ನರವಣೆ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಮಿಲಿಟರಿ ಅಕಾಡೆಮಿಯ ಜೆಂಟಲ್​ಮೆನ್ ಕೆಡೆಟ್​ಗಳನ್ನ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಭಾರತ ಮತ್ತು ಚೀನಾ ಮಧ್ಯೆ ಕಾರ್ಪ್ಸ್ ಕಮಾಂಡರ್ ಮಟ್ಟದಲ್ಲಿ ಆರಂಭವಾದ ಮಾತುಕತೆ ನಂತರ ಸ್ಥಳೀಯ ಕಮಾಂಡರ್ ಮಟ್ಟ ಸೇನಾಧಿಕಾರಿಗಳ ಮಧ್ಯೆ ಮಾತುಕತೆ ನಡೆದಿವೆ ಎಂದು ಹೇಳಿದ್ದಾರೆ.

“ಈ ಮಾತುಕತೆಗಳ ಪರಿಣಾಮವಾಗಿ ಎರಡೂ ಕಡೆಯ ಸೈನಿಕರು ಹಿಂಸರಿಯುತ್ತಿದ್ದಾರೆ. ಇದೇ ರೀತಿ ಮಾತುಕತೆ, ಸಂವಾದ ಮುಂದುವರಿದರೆ ನಮ್ಮೊಳಗಿನ ಕಲ್ಪಿತ ಭಿನ್ನಾಭಿಪ್ರಾಯಗಳು ಶಮನಗೊಳ್ಳುವ ಆಶಯ ಇದೆ. ಸದ್ಯಕ್ಕೆ ಎಲ್ಲವೂ ನಿಯಂತ್ರಣದಲ್ಲಿವೆ” ಎಂದು ಜನರಲ್ ಎಂಎಂ ನರವಣೆ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಈ ಸಮಾರಂಭದಲ್ಲಿ ಮಾತನಾಡಿದ ಅವರು, “ಜಮ್ಮು-ಕಾಶ್ಮೀರ ಮತ್ತು ಪಶ್ಚಿಮ ಭಾಗದ ಗಡಿಯ ವಿಚಾರದಲ್ಲಿ ನಾವು ಬಹಳಷ್ಟು ಯಶಸ್ವಿಯಾಗಿದ್ದೇವೆ. ಕಳೆದ 10-15 ದಿನಗಳಲ್ಲೇ 15ಕ್ಕೂ ಹೆಚ್ಚು ಭಯೋತ್ಪಾದಕರನ್ನ ಕೊಂದಿದ್ದೇವೆ. ಜಮ್ಮು-ಕಾಶ್ಮೀರದಲ್ಲಿ ನಿಯೋಜಿತವಾಗಿರುವ ಎಲ್ಲಾ ಭದ್ರತಾ ಪಡೆಗಳ ಮಧ್ಯೆ ನಿಕಟ ಸಹಕಾರದಿಂದ ಇದು ಸಾಧ್ಯವಾಗಿದೆ” ಎಂದು ಭೂಸೇನಾ ಮುಖ್ಯಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಲಡಾಖ್ ಗಡಿಬಿಕ್ಕಟ್ಟು: ಶಾಂತಿಯುತ ಪರಿಹಾರಕ್ಕೆ ಭಾರತ, ಚೀನಾ ಸೇನಾಧಿಕಾರಿಗಳ ನಿರ್ಧಾರ

ಇನ್ನು, ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಅತ್ಯುಚ್ಚ ತರಬೇತಿ ಪಡೆದು ಸೇನಾಧಿಕಾರಿಗಳಾಗಿ ನಿಯೋಜಿತಗೊಳ್ಳಲು ಅಣಿಗೊಂಡಿರುವ ಜಂಟಲ್​ಮೆನ್ ಕೆಡೆಟ್​ಗಳನ್ನು ಸೇನಾ ಮುಖ್ಯಸ್ಥರು ಹುರಿದುಂಬಿಸಿದ್ದಾರೆ.

ದೇಶ ಈಗ ಬಹಳ ಕ್ಲಿಷ್ಟಕರ ಘಳಿಗೆಯಲ್ಲಿದೆ. ಯುವ ಮಿಲಿಟರಿ ಅಧಿಕಾರಿಗಳ ಸಾಮರ್ಥ್ಯದ ಮೇಲೆ ಈಗ ದೇಶದ ಸುರಕ್ಷತೆ ಮತ್ತು ಗೌರವ ನಿಂತಿದೆ ಎಂದು ನರವಣೆ ಯುವ ಮಿಲಿಟರಿ ಅಧಿಕಾರಿಗಳಿಗೆ ಜವಾಬ್ದಾರಿ ತಿಳಿಸಿಕೊಟ್ಟಿದ್ದಾರೆ.

ನರವಣೆ ಭಾಷಣಕ್ಕೂ ಮುನ್ನ ಐಎಂಎಯ 423 ಕೆಡೆಟ್​ಗಳಿಂದ ಪಾಸಿಂಗ್ ಔಟ್ ಪೆರೇಡ್ ನಡೆಯಿತು. ಇವರೆಲ್ಲರಿಗೂ ಅತ್ಯುಚ್ಚ ಮಿಲಿಟರಿ ತರಬೇತಿ ನೀಡಲಾಗಿದೆ. ಎಂಥದ್ದೇ ಪರಿಸ್ಥಿತಿಯನ್ನೂ ಎದುರಿಸುವಂಥ ಕ್ಷಮತೆ ಇರುವ ನಾಯಕತ್ವದ ಪಾಠವನ್ನೂ ಅವರಿಗೆ ನೀಡಲಾಗಿರುತ್ತದೆ. ಈ ವರ್ಷ ಐಎಂಎಯಿಂದ ಪಾಸ್​ಔಟ್ ಅಗಿರುವ 423 ಕೆಡೆಟ್​ಗಳ ಪೈಕಿ 333 ಮಂದಿ ಭಾರತೀಯರಾಗಿದ್ದರೆ, 90 ಕೆಡೆಟ್​ಗಳು ಭಾರತದ ಸ್ನೇಹಶೀಲ ರಾಷ್ಟ್ರಗಳಿಂದ ಬಂದವರಾಗಿದ್ದಾರೆ. ಇವರು ಕಮಿಷನ್ಡ್ ಆಫೀಸರ್​ಗಳಾಗಿ ಸೇನೆಗೆ ನಿಯುಕ್ತಿಗೊಳ್ಳಲು ತಯಾರಾಗಿದ್ದಾರೆ.

ಇದನ್ನೂ ಓದಿ: News18 China Sentimeter: ಚೀನಾ ಬಗ್ಗೆ ಭಾರತೀಯರ ಅಭಿಪ್ರಾಯವೇನು?; ಇಲ್ಲಿದೆ ನ್ಯೂಸ್​18 ಸಮೀಕ್ಷೆಯ ವರದಿಪ್ರತೀ ವರ್ಷವೂ ಇದೇ ರೀತಿ ಅತ್ಯುಚ್ಚ ತರಬೇತಿ ಪೂರ್ಣಗೊಳಿಸಿದ ಜೆಂಟಲ್​ಮೆನ್ ಕೆಡೆಟ್​​ಗಳ ಪೆರೇಡ್ ನಡೆಯುತ್ತದೆ. ಯುವ ಸೇನಾಧಿಕಾರಿಗಳ ಪೋಷಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ. ಈ ಬಾರಿ ಕೋವಿಡ್ ರೋಗದ ಕಾರಣ ಪೋಷಕರಿಗೆ ತಮ್ಮ ಮಕ್ಕಳ ಪೆರೇಡ್ ನೋಡುವ ಭಾಗ್ಯ ಸಿಗಲಿಲ್ಲ. ಆದರೆ, ಸೇನಾ ಮುಖ್ಯಸ್ಥರು ಈ ಪೋಷಕರಿಗೆ ಒಂದು ಮಹತ್ವದ ಸಂದೇಶ ರವಾನಿಸಿದರು. “ನಿನ್ನೆಯವರೆಗೂ ಇವರು ನಿಮ್ಮ ಮಕ್ಕಳಾಗಿದ್ದರು. ನಾಳೆಯಿಂದ ಅವರು ನಮ್ಮವರಾಗುತ್ತಾರೆ” ಎಂದು ಎಂಎಂ ನರವಣೆ ತಿಳಿಸಿದ್ದಾರೆ.
First published: