ಲಡಾಖ್​ನ ಪ್ಯಾಂಗೋಂಗ್ ಸರೋವರ ಬಳಿಯ ಎಲ್ಲ ಪ್ರಮುಖ ಪ್ರದೇಶಗಳು ಭಾರತದ ಸುಪರ್ದಿಯಲ್ಲಿ

ಲಡಾಖ್​ನ ಗಾಲ್ವನ್ ಕಣಿವೆ ಬಳಿ ಕಿತಾಪತಿ ಮಾಡಿದಂತೆ ಪ್ಯಾಂಗೋಂಗ್ ಸರೋವರದ ದಕ್ಷಿಣ ಭಾರತದ ಪ್ರದೇಶಗಳಲ್ಲಿ ಅತಿಕ್ರಮಣಕ್ಕೆ ಮುಂದಾದ ಚೀನಾಗೆ ಪ್ರಯತ್ನ ವಿಫಲಗೊಂಡಿದೆ. ಪ್ರಮುಖವೆನಿಸಿರುವ ಎಲ್ಲಾ ಎತ್ತರದ ಕಣಿವೆಗಳು ಭಾರತದ ವಶದಲ್ಲಿವೆ ಎನ್ನಲಾಗಿದೆ.

ಪ್ಯಾಂಗೋಂಗ್ ಕೆರೆ

ಪ್ಯಾಂಗೋಂಗ್ ಕೆರೆ

 • Share this:
  ನವದೆಹಲಿ(ಸೆ. 02): ಲಡಾಖ್​ನ ಗಾಲ್ವನ್ ಕಣಿವೆ ರೀತಿಯಲ್ಲಿ ಪ್ಯಾಂಗೋಂಗ್ ಸರೋವರದ ದಕ್ಷಿಣ ಭಾಗದ ಪ್ರದೇಶಗಳ ಅತಿಕ್ರಮಣಕ್ಕೆ ಚೀನಾ ಮಾಡಿದ ಪ್ರಯತ್ನವನ್ನು ಭಾರತದ ಸೈನಿಕರು ವಿಫಲಗೊಳಿಸಿದ್ದಾರೆ. ಸರೋವರದ ದಕ್ಷಿಣ ದಂಡೆಯ ಕಣಿವೆ ಪ್ರದೇಶಗಳಲ್ಲಿರುವ ಎಲ್ಲಾ ಎತ್ತರದ ಪ್ರದೇಶಗಳನ್ನ ಭಾರತ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಮೂಲಗಳು ಹೇಳಿವೆ. ಗಡಿ ಕಾಯಲು ಮತ್ತು ಸಮರ ಸಂದರ್ಭದಲ್ಲಿ ಈ ಎತ್ತರದ ಪ್ರದೇಶಗಳು ಬಹಳ ಮುಖ್ಯವೆನಿಸುತ್ತವೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶಗಳನ್ನ ಚೀನಾ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿತ್ತು. ಆದರೆ, ಗಾಲ್ವನ್ ಘಟನೆಯಿಂದ ಎಚ್ಚೆತ್ತುಕೊಂಡಿರುವ ಭಾರತೀಯ ಸೇನೆ ಈಗ ಚೀನಾದ ಕಿತಾಪತಿಯನ್ನು ಸರಿಯಾಗಿ ಅಂದಾಜಿಸಿ ತನ್ನ ಪ್ರದೇಶಗಳ ರಕ್ಷಣೆ ಮಾಡಿವೆ.

  “ನಾವು ಚೀನೀಯರ ಪ್ರದೇಶವನ್ನು ಪ್ರವೇಶಿಸಿಲ್ಲ. ನಮ್ಮ ಪ್ರದೇಶದಲ್ಲಿ ಬಂದು ನಿಂತಿದ್ದೇವೆ. ನಮ್ಮ ಗಡಿ ಭದ್ರತೆಗೆ ನಾವು ಬದ್ಧರಾಗಿದ್ದೇವೆ. ಈಗ ಚೀನಾ ಶಾಂತಿಯುತವಾಗಿ ಗಡಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಮಾತುಕತೆ ಬರಬಹುದು ಎಂದು ಆಶಿಸಿದ್ದೇವೆ” ಎಂದು ನ್ಯೂಸ್18ಗೆ ಮೂಲಗಳು ಹೇಳಿವೆ.

  ಇದನ್ನೂ ಓದಿ: Indo-China Crisis: ಮಾಸ್ಕೋದಲ್ಲಿ ಚೀನಾ ವಿದೇಶಾಂಗ ಸಚಿವರ ಜೊತೆ ನಡೆಯಲಿರುವ ಮಾತುಕತೆಯಲ್ಲಿ ಭಾಗವಹಿಸುವರೇ ಜೈಶಂಕರ್‌?

  ಕೆಲ ತಿಂಗಳ ಹಿಂದೆ ಚೀನಾ ಕಿತಾಪತಿ ಮಾಡಿದ ಗಾಲ್ವನ್ ಕಣಿವೆ ಪ್ರದೇಶವು ಪ್ಯಾಂಗೋಂಗ್ ಸರೋವರದ ಉತ್ತರದ ಭಾಗದಲ್ಲಿದೆ. ಈಗ ಆಗಸ್ಟ್ 29-30ರಂದು ಸರೋವರದ ದಕ್ಷಿಣ ಭಾಗದಲ್ಲಿ ಚೀನಾ ಅತಿಕ್ರಮಣಕ್ಕೆ ಮುಂದಾಗಿತ್ತು. ಇಲ್ಲಿರುವ ಕೆಲ ಎತ್ತರದ ಪ್ರದೇಶಗಳು ಚೀನಾದ ಕೈವಶವಾಗಿದ್ದರೆ ಭಾರತಕ್ಕೆ ಹಿನ್ನಡೆಯಾಗಿರುತ್ತಿತ್ತು. ಆದರೆ, ಜಾಗೃತಗೊಂಡಿದ್ದ ಭಾರತೀಯ ಸೈನಿಕರು ಶತ್ತುಗಳ ಚಿತಾವಣಿಯನ್ನು ಪೂರ್ವಗ್ರಹಿಸಿ ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ನಿನ್ನೆ ಎಲ್​ಎಸಿಯ ಭಾರತೀಯ ಭಾಗದಲ್ಲಿರುವ ಚುಶುಲ್​ನಲ್ಲಿ ಎರಡೂ ದೇಶಗಳ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆಸಿವೆ. ಆದರೆ, ಚೀನಾ ತಾನು ಯಾವುದೇ ಅತಿಕ್ರಮಣ ಮಾಡಿಲ್ಲ. ಭಾರತವೇ ಅತಿಕ್ರಮಣ ಮಾಡಿ ಚೀನೀ ಸೈನಿಕರನ್ನು ರೊಚ್ಚಿಗೆಬ್ಬಿಸುತ್ತಿದೆ ಎಂದು ವಾದ ಮಾಡುತ್ತಿದೆ.

  ಇದನ್ನೂ ಓದಿ: ನಿರ್ಣಾಯಕ ಹಂತದತ್ತ ಇಂಡೋ-ಚೀನಾ ಗಡಿ ವಿವಾದ?; ಪಾಂಗೋಂಗ್ ಟ್ಸೋ ಪ್ರದೇಶದಲ್ಲಿ ಯುದ್ಧದ ವಾತಾವರಣ

  ಜೂನ್ ತಿಂಗಳಲ್ಲಿ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನೀ ಸೈನಿಕರ ಮಧ್ಯೆ ಸಂಘರ್ಷ ನಡೆದಿತ್ತು. ಅದರಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆಂದು ಭಾರತೀಯ ಸೇನೆ ಹೇಳಿದೆ. ಆದರೆ, ಚೀನಾ ಕಡೆ ಎಷ್ಟು ಮಂದಿ ಸತ್ತಿದ್ದಾರೆಂದು ಆ ದೇಶ ಎಲ್ಲೂ ಹೇಳಿಲ್ಲ. ಅಮೆರಿಕದ ಗುಪ್ತಚರ ಮಾಹಿತಿ ಪ್ರಕಾರ ಗಾಲ್ವನ್ ಸಂಘರ್ಷದಲ್ಲಿ 35 ಚೀನೀ ಸೈನಿಕರು ಹತರಾಗಿದ್ದಾರೆ. ಅದಕ್ಕೆ ಇಂಬು ಕೊಡುವಂತೆ ನಿನ್ನೆ ಚೀನಾ ಗಡಿ ಬಳಿ ಸೈನಿಕರ ಸಮಾಧಿಗಳ ಚಿತ್ರವೊಂದು ಮಾಧ್ಯಮಗಳಿಗೆ ಸಿಕ್ಕಿತ್ತು. ಗಾಲ್ವನ್ ಸಂಘರ್ಷದಲ್ಲಿ ಮಡಿದ ಚೀನೀ ಸೈನಿಕರ ಸಮಾಧಿ ಎಂದು ಕೆಲವರು ವಾದಿಸಿದರೆ, ಅದು 1962ರ ಯುದ್ಧದಲ್ಲಿ ಸಾವನ್ನಪ್ಪಿದವರ ಸಮಾಧಿ ಎಂದು ಇನ್ನೂ ಕೆಲವರು ಹೇಳುತ್ತಾರೆ.
  Published by:Vijayasarthy SN
  First published: