ಭಾರತ- ಚೀನಾ ಗಡಿ ಬಿಕ್ಕಟ್ಟು; ಮೂರು ಸೇನಾ ಮುಖ್ಯಸ್ಥರ ಜೊತೆ ಪ್ರಧಾನಿ ಮೋದಿ ಸಭೆ

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥರ ಜೊತೆಗೆ ಚೀನಾ ಸಮಸ್ಯೆಯ ಬಗ್ಗೆ ಸುದೀರ್ಘ ಕಾಲ ಸಭೆ ನಡೆಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಸಭೆ ನಡೆಸಿದ್ದಾರೆ.

ಚೀನಾ- ಭಾರತ ಗಡಿಯಲ್ಲಿ ಸೈನಿಕರು

ಚೀನಾ- ಭಾರತ ಗಡಿಯಲ್ಲಿ ಸೈನಿಕರು

  • Share this:
ನವದೆಹಲಿ (ಮೇ 26): ಭಾರತದೊಂದಿಗೆ ಸದಾ ಒಂದಿಲ್ಲೊಂದು ತಗಾದೆ ತೆಗೆಯುವ ನೆರೆಯ ರಾಷ್ಟ್ರ ಚೀನಾ ಇದೀಗ ಲಡಾಕ್​ನಲ್ಲಿ ಮತ್ತೊಂದು ಸಮಸ್ಯೆ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್​ಎಸ್​ಎ) ಅಜಿತ್ ದೋವಲ್, ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಮತ್ತು ಮೂರು ಸೇನಾ ಮುಖ್ಯಸ್ಥರ ಜೊತೆ ಚೀನಾದ ಲಡಾಕ್​ ಗಡಿ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಸೇನಾ ಮುಖ್ಯಸ್ಥರ ಜೊತೆಗೆ ಚೀನಾ ಸಮಸ್ಯೆಯ ಬಗ್ಗೆ ಸುದೀರ್ಘ ಕಾಲ ಸಭೆ ನಡೆಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಸಭೆ ನಡೆಸಿದ್ದಾರೆ. ಚೀನಾ ಗಡಿ ಗಲಾಟೆ ಶುರುವಾದ ಬಳಿಕ ಕಳೆದ 2 ವಾರಗಳಿಂದ ಸೇನಾ ಮುಖ್ಯಸ್ಥರೊಂದಿಗೆ ಒಂದಾದ ಮೇಲೊಂದರಂತೆ ಸಭೆಗಳು ನಡೆಯುತ್ತಿವೆ.

ಇಂದು ಸೇನಾ ಮುಖ್ಯಸ್ಥ ಎಂಎಂ ನರವಾಣೆ ಅವರಿಂದ ರಕ್ಷಣಾ ಸಚಿವ ರಾಜನಾಥ ಸಿಂಗ್ ಚೀನಾ ಗಡಿಯ ಸದ್ಯದ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಎಲ್​ಎಸಿಯಲ್ಲಿನ ಸದ್ಯದ ಪರಿಸ್ಥಿತಿ, ಭಾರತ ಸೇನೆ ತೆಗೆದುಕೊಳ್ಳಬಹುದಾದ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ಲಡಾಕ್ ಗಡಿಭಾಗದಲ್ಲಿ ಚೀನೀಯರು ತಂಟೆ ಮಾಡುತ್ತಿರುವುದು ಯಾಕೆ? ಭಾರತೀಯ ಸೇನಾಧಿಕಾರಿ ಹೇಳುವುದೇನು?

ಭಾರತ- ಚೀನಾ ಗಡಿಯಲ್ಲಿ ಸಾವಿರಾರು ಸಂಖ್ಯೆಯ ಚೀನೀ ಸೈನಿಕರು ಬೀಡುಬಿಟ್ಟಿದ್ದಾರೆ. ಇದರಿಂದಾಗಿ ಭಾರತ ಕೂಡ ಲಡಾಕ್​ನಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜನೆ ಮಾಡಿದೆ. ಎಲ್​ಎಸಿ ವ್ಯಾಪ್ತಿಯಲ್ಲಿರುವ ಪ್ಯಾಂಗ್ಯಾಂಗ್​ ತ್ಸೋ ನದಿ ಹಾಗೂ ಗಾಲ್ವಾನ್​ ಕಣಿವೆಯ ಬಳಿ ಚೀನೀ ಸೈನಿಕರ ಚಟುವಟಿಕೆಗಳು ಹೆಚ್ಚಾಗಿವೆ. ಈ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸಲು ಚೀನಾ ಮುಂದಾಗಿದೆ. ಈ ಬಗ್ಗೆ ಸ್ಯಾಟಲೈಟ್​ ದೃಶ್ಯಾವಳಿಗಳು ಕೂಡ ಭಾರತಕ್ಕೆ ಲಭ್ಯವಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರ ನೆರವಿಗೆ ಧಾವಿಸಿದ ಕೇರಳ; ಮುಂಬೈಗೆ ನುರಿತ ವೈದ್ಯರ ತಂಡ ಕಳುಹಿಸಲಿರುವ ಪಿಣರಾಯಿ ಸರ್ಕಾರ

ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಗಡಿಯಲ್ಲಿ ಚೀನಾ ತನ್ನ ಸೈನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಮೇ 5 ಮತ್ತು 6ರಂದು ಲಡಾಕ್​ನಲ್ಲಿ ಚೀನಾ ಹಾಗೂ ಭಾರತದ ಸೈನಿಕರ ನಡುವೆ ಭಾರೀ ಸಂಘರ್ಷ ನಡೆದಿತ್ತು. ಆಗ ಮಾತುಕತೆಯ ಮೂಲಕ ಅದನ್ನು ಬಗೆಹರಿಸಲಾಗಿತ್ತು. ಆದರೆ, ಚೀನಾ ಗಡಿಯಲ್ಲಿ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ, ಭಾರತದಲ್ಲಿರುವ ಚೀನಾ ಪ್ರಜೆಗಳನ್ನು ತನ್ನ ದೇಶಕ್ಕೆ ಕರೆಸಿಕೊಳ್ಳಲು ಚೀನಾ ವಿಶೇಷ ವಿಮಾನದ ವ್ಯವಸ್ಥೆ ಮಾಡಿರುವುದಾಗಿ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿ ತಿಳಿಸಿದೆ.
First published: