ಹುತಾತ್ಮ ಯೋಧರಿಗೆ ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯರಿಂದ ಶ್ರದ್ಧಾಂಜಲಿ

ಒಂದು ಕಡೆ ಇಡೀ ವಿಶ್ವವನ್ನೇ ಕೊರೊನಾ ಮಹಾಮಾರಿಗೆ ಸಿಲುಕಿಸಿರುವ ಚೀನಾ, ಇನ್ನೊಂದು ಕಡೆ ಭಾರತದ ಭೂಮಿಯನ್ನು ಅತಿಕ್ರಮಣ ಮಾಡಲು ಸಂಚುಮಾಡುತ್ತಿದೆ. ಚೀನಾಕ್ಕೆ ಆರ್ಥಿಕ ಪೆಟ್ಟು ಕೂಡಲೇಬೇಕು ಎಎಪಿ ಮುಖಂಡರು ಅಭಿಪ್ರಾಯಪಟ್ಟರು.

ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪ್ರತಿಭಟನೆ

  • News18
  • Last Updated :
  • Share this:
ಹುಬ್ಬಳ್ಳಿ: ಭಾರತ-ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರಿಗೆ ಆಮ್ ಆದ್ಮಿ ಪಕ್ಷದ ಸದಸ್ಯರು ಮತ್ತು ಜನಸಾಮಾನ್ಯರು ಸೋಮವಾರ ಸಂಜೆ 6 ಗಂಟೆಗೆ ಇಲ್ಲಿಯ ದುರ್ಗದಬೈಲ್ ವೃತ್ತದಲ್ಲಿ ಸೇರಿ ಮೇಣದ ಬತ್ತಿ ಹೊತ್ತಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಆಪ್ ಪಕ್ಷದ ಹು-ಧಾ ಘಟಕದ ಜಂಟಿ ಕಾರ್ಯದರ್ಶಿ ಅನಂತಕುಮಾರ್, "ಹುತಾತ್ಮರಾದ ಪ್ರತಿಯೊಬ್ಬ ಯೋಧನ ಅಗಲುವಿಕೆಯಿಂದ ಅವರ ಪರಿವಾರಗಳು ಅತಿಯಾದ ನೋವನ್ನು ಅನುಭವಿಸುತ್ತಿವೆ. ವೀರಮರಣವನ್ನಪ್ಪಿದ ಈ ಸೈನಿಕರ ಕುಟುಂಬದ ಸದಸ್ಯರ ದುಃಖದಲ್ಲಿ ನಾವೂ ಸಹಭಾಗಿಗಳಾಗಿದ್ದೇವೆ. ಅವರಿಗೆ ನಮ್ಮ ಸಾಂತ್ವನಗಳನ್ನು ತಿಳಿಸುತ್ತಾ ವೀರ ಯೋಧರ ಸ್ಮರಣೆಗೆ ಶೃದ್ಧಾ ಸುಮನಗಳನ್ನು ಅರ್ಪಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇವೆ" ಎಂದು ಹೇಳಿದರು.

"ಭಾರತದ ಸೇನಾ ಪಡೆಗಳು ನಮ್ಮ ಗಡಿಗಳ ರಕ್ಷಣೆ ಮಾಡುವ ಸಂಪೂರ್ಣ ಸಾಮರ್ಥ್ಯ ಹೊಂದಿವೆ. ಇವತ್ತು ಇಡೀ ದೇಶ ಪ್ರಾಣ ಕಳೆದುಕೊಂಡ ಸೈನಿಕರ ಕುಟುಂಬಗಳ ಜೊತೆ ನಿಂತಿದೆ. ಒಂದು ಕಡೆ ಇಡೀ ವಿಶ್ವವನ್ನೇ ಕೊರೊನಾ ಮಹಾಮಾರಿಗೆ ಸಿಲುಕಿಸಿರುವ ಚೀನಾ, ಇನ್ನೊಂದು ಕಡೆ ಭಾರತದ ಭೂಮಿಯನ್ನು ಅತಿಕ್ರಮಣ ಮಾಡಲು ಸಂಚುಮಾಡುತ್ತಿದೆ. ಚೀನಾಕ್ಕೆ ಆರ್ಥಿಕ ಪೆಟ್ಟು ಕೂಡಲೇಬೇಕು. ಚೀನಾದ ವಸ್ತುಗಳ ಬಳಕೆ ಮತ್ತು ಆಮದನ್ನ ಕೇಂದ್ರ ಸರಕಾರ ನಿಲ್ಲಿಸಬೇಕು. ಚೀನಾದ ಕಂಪನಿಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ಟೆಂಡರುಗಳು ಸಿಗದೇ ಇರುವ ಹಾಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು. ವಿಶ್ವದ ಬೇರೆ ರಾಷ್ಟ್ರಗಳು ಕೂಡ ಚೀನಾದ ಮೇಲೆ ಆರ್ಥಿಕ ಒತ್ತಡ ತರಲು ಮತ್ತು ಚೀನಾದಿಂದ ಆಮದು ಬಹಿಷ್ಕಾರ ಹಾಕಲು ಭಾರತ ಸರಕಾರ ಗಂಭೀರ ರಾಜತಾಂತ್ರಿಕ ಪ್ರಯತ್ನ ನಡೆಸಬೇಕು. ಅದೂ ಅಲ್ಲದೆ, ಗಡಿ ರಾಷ್ಟ್ರಗಳ ಕುರಿತು ಭಾರತ ಸರಕಾರ ಈಗಲಾದರೂ ಒಂದು ಸಮರ್ಪಕ ನೀತಿ ರೂಪಿಸ ಬೇಕು" ಎಂದು ಈ ಸಂದರ್ಭದಲ್ಲಿ ಮಾತನಾಡಿದ ಎಎಪಿ ಧಾರವಾಡ ಜಿಲ್ಲಾ ಅಧ್ಯಕ್ಷ ಸಂತೋಷ್ ನರಗುಂದ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಬಂಡವಾಳ ಹೂಡಿಕೆಗಾಗಿ ಜಪಾನ್ ರಾಯಭಾರಿ ಜೊತೆ ಡಿಸಿಎಂ ಅಶ್ವಥ್ ನಾರಾಯಣ್ ಮಾತುಕತೆ

ಜೂನ್ 15, ಸೋಮವಾರ ರಾತ್ರಿ, ಲಡಾಖ್ ಪ್ರದೇಶದ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ದೇಶದ ಸೈನಿಕ ತುಕಡಿಗಳ ನಡುವೆ ನಡೆದ ಸಂಘರ್ಷದಲ್ಲಿ ಭಾರತದ ಇಪ್ಪತ್ತು ಸೈನಿಕರು ಸಾವನ್ನಪ್ಪಿರುವುದು ನಮಗೆಲ್ಲ ದೊಡ್ಡ ಆಘಾತ ಉಂಟು ಮಾಡಿದೆ. ಹಿಮದ ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಈ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ತಮ್ಮ ತಾಯ್ನಾಡಿಗಾಗಿ ಹೋರಾಡಿ ವೀರ ಸ್ವರ್ಗವನ್ನೇರಿದ್ದಾರೆ ಎಂದು ನೆರೆದಿದ್ದ ಗಣ್ಯರು ಸ್ಮರಿಸಿದ್ರು.ಪ್ರತಿಭಾ ದಿವಾಕರ್, ಶಶಿಕುಮಾರ್ ಸುಳ್ಳದ, ತ್ಯಾಗರಾಜ ಅಲ್ಲಂಪಟ್ಟಿ, ಶಿವಲಿಂಗಪ್ಪ ಜಡೆಣ್ಣವರ, ಶಿವಕುಮಾರ, ಮೆಹಬೂಬ್ ಹರವಿ, ವಿಜಯ ಸಾಯಿ, ಲಕ್ಷ್ಮಣ ರಾಠೋಡ, ನವೀನ ರಜಪೂತ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.
First published: