ಕೆಂಪು ಮೂತಿಯ, ಹಸಿರು ರೆಕ್ಕೆ ಪುಕ್ಕ ಹೊಂದಿದ ಗಿಳಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಅದು ಬಾಯಿಯಿಂದ ಹೊರಹೊಮ್ಮಿಸೋ ಶಬ್ದ ಎಷ್ಟೋ ಜನರಿಗೆ ಖುಷಿ ಕೊಡುತ್ತೆ. ಗಿಳಿ ಮಾತನಾಡೋದನ್ನ ನೀವು ನೋಡಿರಬಹುದು, ಆದ್ರೆ ಇಲ್ಲೊಂದು ಗಿಳಿ ಹೋಟೆಲ್ಗೆ ಬಂದವರಿಗೆ ಏನು ಬೇಕು ಕೇಳುತ್ತೆ, ಗ್ರಾಹಕರ ಕುಶಲೋಪರಿ ವಿಚಾರಿಸುತ್ತೆ! ಚಹಾ ಕುಡಿಯೋಕೆ ಹೇಳಿ ಗ್ರಾಹಕರು ಕೊಡುವ ಹಣವನ್ನು ಗಲ್ಲಾಪೆಟ್ಟಿಗೆಗೆ ಸೇರಿಸುತ್ತೆ!
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಸಂಶಿಯ ಬಸ್ ನಿಲ್ದಾಣದ ಎದುರಿಗಿರೋ ಹೋಟೆಲ್ ಮಾತನಾಡೊ ಗಿಳಿ ಇದೆ. ಹೋಟೆಲ್ ಮಾಲೀಕ ಶಾಂತರಾಜ್, "ಈ ಗಿಳಿ ಇಪ್ಪತ್ತು ವರ್ಷಗಳ ಹಿಂದೆ ಜಾಲಿ ಗಿಡದ ಪೊದೆಯಲ್ಲಿ ಮರಿ ರೂಪದಲ್ಲಿ ಸಿಕ್ಕಿತ್ತು. ಅಂದಿನಿಂದ ಈ ಗಿಳಿಯನ್ನು ಸಾಕಿದ್ದೇನೆ. ದಿನ ಕಳೆದಂತೆ ಗಿಳಿಗೆ ಮಾತು ಕಲಿಸಿದ್ದೇನೆ. ಅದಕ್ಕೆ ಮತ್ತೊಂದು ಗಿಳಿಯನ್ನೂ ಜೋಡಿಯಾಗಿಸಿದ್ದು, ಒಂದರ್ಥದಲ್ಲಿ ಮನೆಯ ಸದಸ್ಯನೇ ಆಗಿಬಿಟ್ಟಿದೆ" ಎನ್ನುತ್ತಾರೆ ಹೋಟೆಲ್ ಮಾಲೀಕ ಶಾಂತರಾಜ್.
ಚಹಾ ಕುಡಿಯುತ್ತೆ ಈ ಗಿಳಿ
ಈ ಗಿಳಿ ತಾನೂ ಚಹಾದ ರುಚಿ ನೋಡಿ ಖುಷಿಪಡುತ್ತೆ. ಹೋಟೆಲ್ ಮಾಲೀಕ ಸೇರಿ ಮನೆಯವರನ್ನು ಹೆಸರಿನಿಂದ ಕರೆಯೋ ಈ ಗಿಣಿ, ಒಂದರ್ಥದಲ್ಲಿ ಕ್ಯಾಷಿಯರ್ ಜೊತೆಗೆ ಹೋಟೆಲ್ ಮಾಲೀಕನೂ ಆಗಿದೆ.
ಗಿಳಿಯ ಕೈಗೆ ಹಣ ನೀಡುವ ಗ್ರಾಹಕರು
ಈ ಮಾತನಾಡೋ ಗಿಳಿಯೇ ಹೋಟೆಲ್ನ ಆಕರ್ಷಣೆಯಾಗಿದೆ. ಗಿಳಿ ಹೋಟೆಲ್ ಅಂತಲೇ ಈ ಹೋಟೆಲ್ ಖ್ಯಾತಿ ಪಡೆದಿದೆ. ಚಹಾ, ತಿಂಡಿ ತಿನ್ನೋಕೆ ಬರೋರಿಗೆ ಗಿಳಿಯೇ ಮನರಂಜನೆ ಕೇಂದ್ರಬಿಂದುವಾಗಿದೆ. ಗಿಳಿಯನ್ನು ಮಾತಾಡಿಸೋ ಗ್ರಾಹಕರು, ಅದರ ಕೈಗೇ ಹಣಕೊಟ್ಟು ಹೋಗುತ್ತಾರೆ. ಹೋಟೆಲ್ಗೆ ಬಂದವರಿಗೆಲ್ಲಾ ಭರಪೂರ ಮನರಂಜನೆ ಸಿಗುತ್ತಿದೆ.
ಇದನ್ನೂ ಓದಿ: Siddaroodha Swami: ಇದೇ ನೋಡಿ ಸಿದ್ಧಾರೂಢರ ಮಹಿಮೆ! ಓಂ ನಮಃ ಶಿವಾಯ, ಹರ ಹರ ಮಹಾದೇವ!
ಹತ್ತಾರು ವರ್ಷಗಳಿಂದ ಗಿಳಿಯನ್ನ ನೋಡ್ತಿದ್ದೇವೆ. ಈ ಹೋಟೆಲ್ ಗೆ ಬರೋಕೆ ಖುಷಿಯೋ ಖುಷಿ. ಗಿಳಿಯನ್ನ ಮಾತನಾಡಿಸಲೆಂದೇ ಬರ್ತೇವೆ. ಅದರ ಜೊತೆ ಕೆಲ ಸಮಯ ಕಳೆಯುತ್ತೇವೆ. ನಮಗೆಲ್ಲಾ ಗಿಳಿ ವಿಶಿಷ್ಟ ಅನುಭೂತಿ ನೀಡುತ್ತೆ ಅಂತಾರೆ ಗ್ರಾಮಸ್ಥರು.
ಇದನ್ನೂ ಓದಿ: Hubballi: ಹೃದಯದ ಮೇಲೆ ಗಡ್ಡೆ ಬೆಳೆದು ಬಳಲುತ್ತಿದ್ದ 54 ವರ್ಷದ ಮಹಿಳೆಗೆ ಮರುಜೀವ ನೀಡಿದ ಕಿಮ್ಸ್ ವೈದ್ಯರು!
ಹೀಗೆ ಮನೆ ಮಾಲೀಕರು, ಊರಿನ ಗ್ರಾಹಕರ ಆಕರ್ಷಣೆಯ ಕೇಂದ್ರಬಿಂದುವಾಗಿರೋ ಗಿಳಿ, ಪಂಜರ ಬಿಟ್ಟು ಹೋಗು ಅಂದ್ರೆ ಸುತಾರಾಂ ಹೋಗಲ್ಲ ಅನ್ನುತ್ತೆ. ಯಾಕ್ರೀ ಅಂತ ರಚ್ಚೆ ಹಿಡಿಯುತ್ತೆ. ಒಟ್ಟಾರೆ ಸಂಶಿಯಲ್ಲಿರೂ ಈ ಪುಟ್ಟ ಹೋಟೆಲ್ ಸದಾ ಜನನಿಬಿಡವಾಗುತ್ತಿರೋದಕ್ಕೆ ಈ ಗಿಳಿಯೇ ಕಾರಣವಾಗಿದೆ.
ವರದಿ: ಕ್ಯಾಮರಾಮೆನ್ ರವಿ ಲಮಾಣಿ ಜೊತೆ ಶಿವರಾಮ ಅಸುಂಡಿ, ನ್ಯೂಸ್ 18, ಹುಬ್ಬಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ