ಹುಬ್ಬಳ್ಳಿ: ಹೋಳಿ ಹುಣ್ಣಿಮೆ ಬಂತೆಂದರೆ ಸಾಕು, ಚಿಕ್ಕಮಕ್ಕಳು, ಯುವಕರು ಹಲಗೆ ಬಾರಿಸುತ್ತ ಪರಸ್ಪರ ಬಣ್ಣ ಎರಚೋದು ಕಾಮನ್. ಈ ಹೋಳಿ ಆಚರಣೆಗೂ (Holi 2023) ಮುನ್ನ ರತಿ – ಮನ್ಮಥರ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಾಮ ದಹನದ ಸಂಪ್ರದಾಯ ನೆರವೇರಿಸಲಾಗುತ್ತದೆ. ನೂರಾರು ವರ್ಷಗಳಿಂದ ಈ ಆಚರಣೆ ಮಾಡಿಕೊಳ್ಳಲಾಗಿದ್ದು, ಅದಕ್ಕಾಗಿ ವಾಣಿಜ್ಯ ನಗರಿ ಹುಬ್ಬಳ್ಳಿ (Hubballi News) ಭರದ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ಹುಬ್ಬಳ್ಳಿಯ ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ರತಿ – ಮನ್ಮಥರ ಮೂರ್ತಿ (Rati Manmatha Idol) ಪ್ರತಿಷ್ಠಾಪಿಸಲಾಗುತ್ತಿದೆ.
ಹುಬ್ಬಳ್ಳಿಯ ಬಮ್ಮಾಪುರ ಓಣಿಯಲ್ಲಿ ರತಿ–ಮನ್ಮಥ ಮೂರ್ತಿ ತಯಾರಿಸೋ ನಾಲ್ಕೈದು ಕುಟುಂಬಗಳಿವೆ. ಇವರು ಜನವರಿ ತಿಂಗಳಿಂದಲೇ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಮತ್ತೆ ಕಳೆಗಟ್ಟಿದ ಹೋಳಿ
ಒಬ್ಬೊಬ್ಬರು 30 ರಿಂದ 40 ಮೂರ್ತಿಗಳನ್ನು ತಯಾರಿಸಿ, ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡುತ್ತಾರೆ. ಕೋವಿಡ್ ನಂತರ ಈ ಬಾರಿ ಹಬ್ಬಕ್ಕೆ ಒಂದಷ್ಟು ಕಳೆ ಬಂದಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಹೊಸ ಮೂರ್ತಿ ಖರೀದಿಯಾಗುತ್ತಿಲ್ಲ ಎನ್ನುತ್ತಾರೆ ಮೂರ್ತಿ ತಯಾರಕರು.
ರತಿ–ಮನ್ಮಥರ ಮೂರ್ತಿ ಹೇಗೆ ತಯಾರಿಸ್ತಾರೆ ಗೊತ್ತಾ?
ರತಿ ಮನ್ಮಥರ ಮೂರ್ತಿಗಳನ್ನು ಕಟ್ಟಿಗೆ ಮತ್ತು ಮಣ್ಣಿನಿಂದ ತಯಾರಿಸಲಾಗುತ್ತದೆ. ಮಣ್ಣಿನ ಮೂರ್ತಿಗಳಲ್ಲಿ ಪ್ರತಿಷ್ಠಾಪಿಸಿ, ಕಾಮದಹನದ ವೇಳೆ ಬೆಂಕಿಯಲ್ಲಿ ದಹನ ಮಾಡಲಾಗುತ್ತದೆ. ಮತ್ತೊಂದೆಡೆ ಬೃಹತ್ ಗಾತ್ರದ ಕಟ್ಟಿಗೆ ಮೂರ್ತಿಗಳನ್ನೂ ರೂಪಿಸಲಾಗಿದ್ದು, ಅವರಗಳನ್ನು ಪ್ರತಿಷ್ಠಾಪಿಸಿ ನಂತರ ತೆಗೆದು ಇಡಲಾಗುತ್ತದೆ. ಇಂತಹ ಹಳೆಯ ಮೂರ್ತಿಗಳಿಗೆ ಕಲಾವಿದರು ಬಣ್ಣದ ಸ್ಪರ್ಷ ನೀಡ್ತಿದ್ದಾರೆ.
ಇಲ್ಲಿಂದಲೇ ತಯಾರಾಗಿ ರವಾನೆಯಾಗುತ್ತೆ!
ಹುಬ್ಬಳ್ಳಿಯ ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳಿಗೂ ಇಲ್ಲಿಂದಲೇ ಮೂರ್ತಿ ಪೂರೈಕೆ ಮಾಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ರಾರಾಜಿಸಲು ಮೂರ್ತಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಎರಡು ಅಡಿಯಿಂದ ನಾಲ್ಕು ಅಡಿಯವರೆಗೂ ಮೂರ್ತಿಗಳ ತಯಾರಿಕೆ ಭರದಿಂದ ಸಾಗಿದೆ.
ಇದನ್ನೂ ಓದಿ: Hubballi: ಗಲ್ಲಾಪೆಟ್ಟಿಗೆ ಮೇಲೆ ಕುಳಿತು ಹೋಟೆಲ್ ನಡೆಸುತ್ತೆ ಗಿಳಿ!
ಕೋವಿಡ್ ನಂತರ ಇದೀಗ ಮೂರ್ತಿಗಳಿಗೆ ಒಂದಷ್ಟು ಬೇಡಿಕೆ ಕುಗ್ಗಿದ್ದರೂ, ಹಬ್ಬದ ಉತ್ಸಾಹ ಮಾತ್ರ ಕುಂದಿಲ್ಲ. ಚಿಗುರು ಮೀಸೆಯ ಮನ್ಮಥ, ಸುಂದರ ಕಾಂತಿಯ ರತಿ ಪ್ರತಿಷ್ಠಾಪನೆಗೆ ಸಿದ್ಧಗೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿವೆ. ಮೇದಾರ ಓಣಿಯಲ್ಲಿ ಬೃಹತ್ ಗಾತ್ರದ ಬಿದಿರಿನ ಕಾಮಣ್ಣ ಮೂರ್ತಿಯೂ ಸಿದ್ಧಗೊಳ್ಳುತ್ತಿದೆ. ಮತ್ತೊಂದೆಡೆ ಹಲಗೆ ಮತ್ತಿತರ ವಾದ್ಯಗಳಿಗೂ ಬೇಡಿಕೆ ಹೆಚ್ಚಾಗಿದೆ.
ಇದನ್ನೂ ಓದಿ: Hubballi: ಹೃದಯದ ಮೇಲೆ ಗಡ್ಡೆ ಬೆಳೆದು ಬಳಲುತ್ತಿದ್ದ 54 ವರ್ಷದ ಮಹಿಳೆಗೆ ಮರುಜೀವ ನೀಡಿದ ಕಿಮ್ಸ್ ವೈದ್ಯರು!
ಹುಬ್ಬಳ್ಳಿಯ ವಿವಿಧೆಡೆ ಹಲಗೆ, ಡೋಲಕ್ ಇತ್ಯಾದಿಗಳ ಮಾರಾಟ ಭರಾಟೆ ಜೋರಾಗಿದೆ. ವಾಣಿಜ್ಯ ನಗರಿ ಜನ ಖರೀದಿಯಲ್ಲಿ ನಿರತರಾಗಿದ್ದಾರೆ.
ವರದಿ: ಶಿವರಾಮ ಅಸುಂಡಿ, ನ್ಯೂಸ್ 18, ಹುಬ್ಬಳ್ಳಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ