Kalaghatagi Jatra: ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಮಹಿಮೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಎದುರಿನಲ್ಲಿ ಅಕ್ಕಿಯನ್ನು ರಾಶಿ ಹಾಕಿ ಅದರ ಮೇಲೆ ಐದು ದೀಪಗಳನ್ನು ಹಚ್ಚಿ ಹಗಲು-ರಾತ್ರಿ ನಂದದಂತೆ ಬೆಳಗಿಸಲಾಗುತ್ತೆ. ಗಾಣಿಗ ಸಮಾಜದವರು ಒಂಬತ್ತು ದಿನಗಳ ಕಾಲ ದೀಪ ಆರದಂತೆ ಕಾಯುತ್ತಾರೆ.

  • News18 Kannada
  • 3-MIN READ
  • Last Updated :
  • Hubli-Dharwad (Hubli), India
  • Share this:

    ಧಾರವಾಡ: ಎಲ್ಲೆಲ್ಲೂ ಉಧೋ ಉಧೋ ಉದ್ಘೋಷ. ಚಂಡೆ, ಮದ್ದಳೆ, ಡೊಳ್ಳು, ನಗಾರಿಗಳ ಮಾರ್ದನಿ. ಜಯ ಘೋಷದೊಂದಿಗೆ ಗ್ರಾಮ ದೇವತೆಯರನ್ನು (Kalaghatagi Jatra) ಹೊತ್ತು ಸಾಗುತ್ತಿರುವ ಭಕ್ತಸಾಗರ. ಹೂಮಳೆ ಸುರಿಸಿ, ಭಂಡಾರ ಎರಚುತ್ತಿರುವ ಜನಸ್ತೋಮ. ಈ ಎಲ್ಲ ವೈಭವಕ್ಕೆ ಸಾಕ್ಷಿಯಾಗಿದ್ದು, ಧಾರವಾಡ ಜಿಲ್ಲೆಯ (Dharwad News) ಕಲಘಟಗಿ.


    ವಿಶಿಷ್ಟ ಸಂಪ್ರದಾಯದಿಂದ ಗಮನ ಸೆಳೆಯುವ ಹಾಗೂ ಮೂರು ವರ್ಷಕ್ಕೊಮ್ಮೆ ನಡೆಯುವ ಕಲಘಟಗಿ ಗ್ರಾಮ ದೇವಿಯರ ಜಾತ್ರೆಗೆ ಚಾಲನೆ ಸಿಕ್ಕಿದೆ. ಗ್ರಾಮ ದೇವಿಯರಾದ ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಮೂರ್ತಿಯನ್ನು ಕಲಘಟಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.


    ಮೆರವಣಿಗೆಯ ಕಳೆ ಹೆಚ್ಚಿಸಿದ ಗ್ರಾಮ ದೇವಿಯರು
    ಚಂಡೆ, ಮದ್ದಳೆ, ಡೊಳ್ಳು, ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ರಂಗು ತಂದಿದ್ದವು. ಪೂರ್ಣಕುಂಭ ಹೊತ್ತ ಸಾವಿರಾರು ಮಹಿಳೆಯರು ಮತ್ತು ಪಡ್ಡಲಗಿ ಹಿಡಿದ ಜೋಗಮ್ಮಗಳು ಗ್ರಾಮ ದೇವಿಯರ ಮೆರವಣಿಗೆಯ ಕಳೆ ಹೆಚ್ಚಿಸಿದ್ದರು.


    ಭಂಡಾರ ಎರಚಿ ಜಯಘೋಷ
    ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಕೊಂಡವಾಡ ಓಣಿ, ವೇಣುಗೋಪಾಲ ನಗರ, ಜೋಳದ ಓಣಿ, ಚೌಡಿಕೂಟ್, ಎಲಿಪೇಟೆ, ಮಾರ್ಕೇಟ್ ರೋಡ್ ಮಾರ್ಗವಾಗಿ ಅಕ್ಕಿ ಓಣಿ ಪ್ರವೇಶಿಸಿತು. ಭಕ್ತರು ಹೂಮಳೆ ಸುರಿಸಿ, ಭಂಡಾರ ಎರಚಿ ಜಯಘೋಷ ಕೂಗಿದರು. ದೇವಿಯರನ್ನು ಹೆಗಲ ಮೇಲೆ ಹೊತ್ತು ತಂದ ಭಕ್ತರು ಅಕ್ಕಿ ಓಣಿಯ ಚೌತಮನೆ ಕಟ್ಟಿಯಲ್ಲಿ ಪ್ರತಿಷ್ಠಾಪಣೆ ಮಾಡಿದ್ದಾರೆ. ಹೋಮ, ಹವನಗಳೊಂದಿಗೆ ಪೂಜಾ ಕಾರ್ಯ ಪ್ರಾರಂಭವಾಗಿದೆ. ದೇವಸ್ಥಾನ ಕಮಿಟಿಯಿಂದ ದೇವತೆಯರಿಗೆ ಉಡಿ ತುಂಬುವ ಮೂಲಕ ಸಾರ್ವಜನಿಕರ ದರ್ಶನ ಮತ್ತು ಪೂಜೆಗೆ ಚಾಲನೆ ದೊರೆತಿದೆ.


    ಉತ್ತರ ಕರ್ನಾಟಕದಲ್ಲಿಯೇ ಪ್ರಖ್ಯಾತಿ
    ಕಲಘಟಗಿಯ ದ್ಯಾಮವ್ವ, ದುರ್ಗವ್ವ ದೇವಿಯರ ಜಾತ್ರೆ ಉತ್ತರ ಕರ್ನಾಟಕದಲ್ಲಿಯೇ ಪ್ರಖ್ಯಾತಿ ಗಳಿಸಿದೆ. ನಿರಂತರವಾಗಿ ಒಂಭತ್ತು ದಿನಗಳವರೆಗೆ ಜಾತ್ರೆ ನಡೆಯಲಿದೆ. ದೇವಿಯರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸುವ ಲಕ್ಷಾಂತರ ಭಕ್ತರು ಹರಕೆ ತೀರಿಸುತ್ತಾರೆ. ದೇವಿಯರಿಗೆ ಉಡಿ ತುಂಬಿ ಪ್ರಾರ್ಥಿಸುತ್ತಾರೆ. ಬಗೆ ಬಗೆಯ ಖಾದ್ಯಗಳ ನೈವೇದ್ಯ ಅರ್ಪಿಸುತ್ತಾರೆ.


    ಇದನ್ನೂ ಓದಿ: Dharwad: ಮದುವೆ, ಮಕ್ಕಳು ಆಗದಿದ್ರೆ ತಪ್ಪದೇ ಕಾಮಣ್ಣನ ಆಶೀರ್ವಾದ ಪಡೆಯಿರಿ! ಈ ಊರಲ್ಲಿದೆ ದೇಗುಲ




    ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಎದುರಿನಲ್ಲಿ ಅಕ್ಕಿಯನ್ನು ರಾಶಿ ಹಾಕಿ ಅದರ ಮೇಲೆ ಐದು ದೀಪಗಳನ್ನು ಹಚ್ಚಿ ಹಗಲು - ರಾತ್ರಿ ನಂದದಂತೆ ಬೆಳಗಿಸಲಾಗುತ್ತೆ. ಗಾಣಿಗ ಸಮಾಜದವರು ಒಂಬತ್ತು ದಿನಗಳ ಕಾಲ ದೀಪ ಆರದಂತೆ ಕಾಯುತ್ತಾರೆ. ಒಂಭತ್ತನೆಯ ದಿನ ಹುಲ್ಲಿನ ಗುಡಿಸಲು ಹಾಗೂ ಹಿಟ್ಟಿನಿಂದ ಮಾಡಿದ ಕೋಣವನ್ನು ದೇವಿಯ ಎದುರು ಸುಡಲಾಗುತ್ತೆ. ದೇವಿಯರಿಗೆ ಬಿಟ್ಟಿರುವ ಕೋಣದ ರಕ್ತವನ್ನು ಸಿರಿಂಜ್​ನಲ್ಲಿ ತೆಗೆದು ದೇವಿಯರ ಮೇಲೆ ಸಿಂಪಡಿಸಲಾಗುತ್ತದೆ. ಪ್ರಾಣಿ ಬಲಿ ಕೊಡದೆ ಪ್ರಾಕೃತಿಕವಾಗಿ ಬಲಿ ನೀಡುವ ಪದ್ಧತಿ ಇಲ್ಲಿನದು.


    ಇದನ್ನೂ ಓದಿ:Holi 2023: ಇವರೇ ಚಿಗುರು ಮೀಸೆಯ ಮನ್ಮಥ, ಸುಂದರ ಕಾಂತಿಯ ರತಿಯ ಸೃಷ್ಟಿಕರ್ತರು!


    ದುಷ್ಟರ ನಿಗ್ರಹ ಮಾಡಿ ಶಿಷ್ಟರ ರಕ್ಷಣೆ ಮಾಡುವಂತೆ ಭಕ್ತರು ದೇವಿಯನ್ನು ಪ್ರಾರ್ಥಿಸುತ್ತಾರೆ. ಭವ್ಯವಾದ ಪೆಂಡಾಲ್​ನಲ್ಲಿ ಭಕ್ತೀಗೀತೆ, ಭಜನೆ, ಕೀರ್ತನೆ ಏರ್ಪಡಿಸಲಾಗುತ್ತದೆ.


    ವರದಿ: ಶಿವರಾಮ ಅಸುಂಡಿ, ನ್ಯೂಸ್ 18, ಹುಬ್ಬಳ್ಳಿ

    Published by:ಗುರುಗಣೇಶ ಡಬ್ಗುಳಿ
    First published: