ಧಾರವಾಡ: ಕಪ್ಪೆಂದರೆ ಕಾಡಿಗೆ ಕಪ್ಪಿನ ಬೃಹದಾಕಾರದ ದೇಹ, ಬಾಹುಬಲಿಯ ಕೋಣವನ್ನು ನೆನಪಿಸುವ ಅಂಗಾಂಗ ರಚನೆಯ ಸಖತ್ ಮೈಕಟ್ಟು, ಸುರುಳಿಯಂತೆ ಸುತ್ತಿಕೊಂಡ ಚಿಕ್ಕ ಕೊಂಬುಗಳು, ಸಕ್ಕತ್ ಅಗ್ರೆಸ್ಸಿವ್ ಆಗಿ ಹೂಂಕಾರ ಮಾಡುತ್ತಾ ಹಾಯಲು ಬರುವ ಆ ಘನ ಗಾಂಭೀರ್ಯ! ಇದ್ಯಾವುದಿದು ಕರಾವಳಿಯ ಕಂಬಳ ಕೋಣ ಅಂತಾ ಕೇಳ್ಬೇಡಿ. ಇದು ನಮ್ಮೂರ ಬ್ರ್ಯಾಂಡ್ (Dharwad Buffalo) ಗಿಟ್ಟಿಸಿಕೊಂಡ ಧಾರವಾಡಿ ಎಮ್ಮೆಗಳು.
ಯೆಸ್, ಧಾರವಾಡ ಎಮ್ಮೆಗಳು ಅಂದ್ರೇ ಭಾರೀ ಫೇಮಸ್ಸು. "ಇಂಡಿಯಾ ಬಫೆಲೋ 0800 ಧಾರವಾಡಿ 01018" ಈ ಹೆಸರಲ್ಲಿ ಮಾನ್ಯತೆ ಗಿಟ್ಟಿಸಿಕೊಂಡ ರಾಜ್ಯದ ಏಕೈಕ ಎಮ್ಮೆ ತಳಿ ಅನ್ನೋ ಹೆಗ್ಗಳಿಕೆ ಇದರದ್ದು. ಕರ್ನಾಟಕದ ಉತ್ತರ ಭಾಗದಲ್ಲಿ ಕಂಡುಬರುವ ಈ ಎಮ್ಮೆಗಳು ಸುಮಾರು 1 ಲಕ್ಷ 40 ಸಾವಿರ ಸಂಖ್ಯೆಯಲ್ಲಿವೆ.
ಧಾರವಾಡ ಪೇಡದ ಮೂಲ
ಇನ್ನೊಂದು ವಿಶೇಷ ಅಂದ್ರೆ, ಧಾರವಾಡ ಪೇಡ ಫೇಮಸ್ ಆಗೋದ್ರ ಹಿಂದೆನೂ ಇದೇ ಎಮ್ಮೆ ಇದೆ. ಅದ್ಹೇಗೆ ಅಂತೀರ? ಈ ಧಾರವಾಡ ಎಮ್ಮೆಗಳು ಇದ್ದಾವಲ್ಲ, ಇದು ಜವಾರಿ ಎಮ್ಮೆಗಳಿಗಿಂತ ಹೆಚ್ಚಿನ ಕೊಬ್ಬಿನಾಂಶ ಹೊಂದಿವೆ.
ಇದನ್ನೂ ಓದಿ: Vibhuti In River: ಈ ನದಿಯಲ್ಲಿ ಸಿಗುತ್ತಂತೆ ನೈಸರ್ಗಿಕ ವಿಭೂತಿ!
ಈ ಎಮ್ಮೆ ಹಾಲನ್ನೇ ಧಾರವಾಡ ಪೇಡಾ, ಬೆಳಗಾವಿ ಕರದಂಟು ಸೇರಿದಂತೆ ಉತ್ತರ ಕರ್ನಾಟಕದ ಎಲ್ಲಾ ಸಿಹಿತಿಂಡಿಗಳಲ್ಲಿ ಬಳಸಲಾಗುತ್ತೆ. ಸಾಮಾನ್ಯವಾಗಿ ಶೇಕಡಾ 7ರಷ್ಟು ಕೊಬ್ಬಿನಾಂಶ ಹೊಂದಿರುವ ಈ ಎಮ್ಮೆಗಳು ತಮ್ಮ ಜೀವಿತಾವಧಿಯಲ್ಲಿ ಸುಮಾರು 5 ಬಾರಿ ಕರು ಹಾಕುತ್ತವೆ. ಮರಿ ಹಾಕಿದಾಗ ಬಿಟ್ರೆ, ಉಳಿದಂತೆ ಎಲ್ಲಾ ದಿನ ಹಾಲು ಕೊಡುವ ರೈತ ಸ್ನೇಹಿ ಎಮ್ಮೆ ಇದಾಗಿದೆ.
ಉತ್ತಮ ಬೆಲೆ
ಇನ್ನು ಈ ಎಮ್ಮೆಗಳನ್ನು ಎಲ್ಲೇ ಬಿಟ್ರೂ ಅವುಗಳು ಮೇಯುತ್ತಾ ತನ್ನ ಮನೆಗೆ ಬರುತ್ತೆ. ಹೀಗಾಗಿ ಇದರ ನಿರ್ವಹಣೆಗೆ ತಿಂಗಳಿಗೆ 20 ಸಾವಿರ ತಗುಲಬಹುದಷ್ಟೆ. ಇದಕ್ಕೆ ಡಬಲ್ ಲಾಭ ಈ ಎಮ್ಮೆಯಿಂದ ಅದರ ಮಾಲೀಕನಿಗಿದೆ. ಉತ್ತರ ಕರ್ನಾಟಕದ ಡೈರಿಗಳಿಗೂ ಈ ಹಾಲನ್ನ ರೈತರು ನೀಡೋದ್ರಿಂದ ಗ್ರಾಹಕರು ಅಲ್ಲಿಂದ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: Children Swimming: ಈ ಹಳ್ಳಿ ಮಕ್ಕಳು ಹೇಗೆ ಈಜ್ತಾರೆ ನೋಡಿ, ಮಜಾ ಅಂದ್ರೆ ಇದು ಕಣ್ರೀ!
ಧಾರವಾಡದಲ್ಲೇ 12,000 ದಷ್ಟು ಧಾರವಾಡಿ ಎಮ್ಮೆಗಳಿದ್ದು, ಪ್ರತಿ ಬಾರಿ ಜಾನುವಾರು ಸಂತೆಯಲ್ಲಿ ಒಳ್ಳೇ ಬೆಲೆಗೆ ಇವು ಮಾರಾಟವಾಗುತ್ತವೆ. ಒಟ್ಟಿನಲ್ಲಿ ವಿಶಿಷ್ಟ ಗಾತ್ರ, ವಿಭಿನ್ನ ಕೊಂಬುಗಳನ್ನು ಹೊಂದಿರುವ ಈ ಧಾರವಾಡ ಎಮ್ಮೆಗಳು ರೈತನ ಪಾಲಿಗೆ ಲಾಭದಾಯಕವೆನಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ