ಹಾವೇರಿ: ಸಾಮಾನ್ಯವಾಗಿ ಜೈಲಿನಲ್ಲಿ (Jail) ಇರುವ ಖೈದಿಗಳಿಗೆ ಬಹಳ ಬೇಸರ ಹಾಗೂ ಕೋಪ ಇರುತ್ತದೆ. ಯಾವಾಗ ಹೊರಗೆ ಬರುತ್ತೇವೆಯೋ ಎನ್ನುವ ಯೋಚನೆಯಲ್ಲಿ ದಿನ ಕಳೆಯುತ್ತಾರೆ. ಆದರೆ ಈ ಒಂದು ಜೈಲಿನಲ್ಲಿ ಮಾತ್ರ ಎಲ್ಲವೂ ವಿಭಿನ್ನ. ಹೌದು, ಇಲ್ಲಿನ ಖೈದಿಗಳು (Prisoner) ಮನೆಯಲ್ಲಿ ಇರುವ ಥರ ದಿನವಿಡೀ ಸಂತಸದಿಂದಿರುತ್ತಾರೆ. ಈ ಖೈದಿಗಳು ಜೈಲಿನಲ್ಲಿ ಓದುತ್ತಾರೆ, ಕಷ್ಟಪಟ್ಟು ದುಡಿದು ಸಂಪಾದನೆ ಮಾಡ್ತಾರೆ. ಸುಸಜ್ಜಿತ ವ್ಯವಸ್ಥೆ (Good Fecility) ಹೊಂದಿರುವ ಈ ಜೈಲು ಖೈದಿಗಳ ಮನಃಪರಿವರ್ತನಾ ಕೇಂದ್ರವಾಗಿದೆ ಎಂದರೆ ತಪ್ಪಲ್ಲ.
ಇದು ಜೈಲಲ್ಲ ಮನೆ
ರಾಜ್ಯ ಪ್ರಶಸ್ತಿ ಆರಂಭವಾದ ಮೊದಲನೆ ವರ್ಷವೇ ಅತ್ಯುತ್ತಮ ಕಾರಾಗೃಹ ಅವಾರ್ಡ್ ಪಡೆಯುವ ಮೂಲಕ ಮಾದರಿ ಜೈಲು ಎಂಬ ಪ್ರಖ್ಯಾತ ಹೊಂದಿರುವ ಜೈಲು ಇದಾಗಿದೆ. ಇದು ಹಾವೇರಿಯ ಜಿಲ್ಲಾ ಕಾರಾಗೃಹ. ತಾಲೂಕಿನ ಸಮೀಪದ ಕೆರಿಮತ್ತಿಹಳ್ಳಿ ಗ್ರಾಮದಲ್ಲಿ ಇರುವ ಜಿಲ್ಲಾ ಕಾರಾಗೃಹ ಕಳೆದ ಕೆಲವು ವರ್ಷಗಳಿಂದ ತನ್ನದೇ ಆದ ವಿಶೇಷ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದೆ.
ಕಾರಾಗೃಹದಲ್ಲಿ ಶುದ್ದಕುಡಿಯವ ನೀರಿನ ಘಟಕ, ಸ್ವತಂತ್ರ ಗ್ರಂಥಾಲಯ ಸೇರಿದಂತೆ ಹಲವು ವೈಶಿಷ್ಟ್ಯಗಳಿಂದ ಹಾವೇರಿ ಜಿಲ್ಲಾ ಕಾರಾಗೃಹ ಗಮನ ಸೆಳೆಯುತ್ತಿದೆ. ಇಲ್ಲಿ ಒಟ್ಟು 140 ಕ್ಕೂ ಹೆಚ್ಚು ಜನ ಖೈದಿಗಳಿದ್ದು, ಈ ಜೈಲು ಹಕ್ಕಿಗಳಿಗೆ ಇದೀಗ ಕೃಷಿ ಚಟುವಟಿಕೆಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಜೈಲಿಗೆ ಸೇರಿದ 16 ಎಕರೆ ಜಮೀನಿನಲ್ಲಿ ಖೈದಿಗಳು ಊಟಕ್ಕೆ ಬೇಕಾಗುವ ಹಸಿ ತರಕಾರಿ ಮತ್ತು ಸೊಪ್ಪು ಸೇರಿದಂತೆ ವಿವಿಧ ತರಕಾರಿ ಬೆಳೆಯಲಾಗುತ್ತದೆ.
ಸರ್ಕಾರಕ್ಕೂ ಲಾಭ, ಖೈದಿಗಳಿಗೂ ಉದ್ಯೋಗ
ಇದರಿಂದ ಸರ್ಕಾರಕ್ಕೆ ವರ್ಷಕ್ಕೆ ಮೂರು ಲಕ್ಷ ರೂಪಾಯಿಯಷ್ಟು ಉಳಿತಾಯವಾಗುತ್ತಿದೆ.ಈ ಜೈಲಿನಲ್ಲಿ ನಡೆಯುತ್ತಿರುವ ಕೃಷಿ ಚಟುವಟಿಕೆಗಳಿಂದ ಜೈಲಿನ ಖರ್ಚು ವೆಚ್ಚಗಳು ಕಡಿಮೆಯಾಗುವುದಲ್ಲದೇ, ಜೈಲು ಹಕ್ಕಿಗಳಿಗೆ ಆದಾಯದ ಮೂಲವೂ ಆಗಿದೆ.
ಇದಲ್ಲದೇ ಕಾರಾಗೃಹಕ್ಕೆ ಸೇರಿದ ಜಮೀನಿನಲ್ಲಿ ಮೆಕ್ಕೆಜೋಳ, ಪೇರಳೆ, ತೆಂಗು ಹಾಗೂ ನಿಂಬೆ ಸಹ ಬೆಳೆಯಲಾಗುತ್ತಿದೆ. ಜಿಲ್ಲಾ ಕಾರಗೃಹದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಎರಡು ಎತ್ತುಗಳನ್ನ ಸಾಕಲಾಗಿದೆ. ಈಗಾಗಲೇ ಹಲವು ಪ್ರಶಸ್ತಿಗಳನ್ನ ಬಾಚಿಕೊಂಡಿರುವ ಹಾವೇರಿ ಜಿಲ್ಲಾ ಕಾರಾಗೃಹ ಇದೀಗ ರಾಜ್ಯದಲ್ಲಿ ಮಂತ್ ಆಫ್ ದಿ ಜೈಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಖೈದಿಗಳ ಪರಿವರ್ತನಾ ಕೇಂದ್ರ ಈ ಜೈಲು
ಈ ಕಾರಾಗೃಹದಲ್ಲಿ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಖೈದಿಗಳಿಗೆ ರಕ್ತದಾನದ ಮಹತ್ವ ಸಹ ತಿಳಿಸಲಾಗಿದೆ. ಕಾರಾಗೃಹಗಳು ಖೈದಿಗಳನ್ನ ತಿದ್ದುವ ಮನಪರಿವರ್ತನಾ ಕೇಂದ್ರಗಳಾಗಬೇಕು. ಆಗ ಮಾತ್ರ ಸಮಾಜದಲ್ಲಿ ಅಪರಾಧ ಮಾಡುವ ಮನಸ್ಸುಗಳು,ಜೊತೆಗೆ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತವೆ ಎನ್ನುವ ಮಾತಿದೆ. ಈ ಮಾತಿಗೆ ತಕ್ಕಂತೆ ಇದೆ ಈ ಕಾರಾಗೃಹ.
ಇದನ್ನೂ ಓದಿ: ರಾಣೆಬೆನ್ನೂರಿನ 'ಮೈಸೂರು ಹುಲಿ' ಹೋರಿ ನಿಧನ, ದುಃಖಿತರಾದ ಅಭಿಮಾನಿಗಳು
ಇಲ್ಲಿ ಅಕ್ಷರಭ್ಯಾಸ, ಅಕ್ಷರಜ್ಞಾನ ಕಲಿತ ಖೈದಿಗಳು ಬಿಡುಗಡೆಯಾದ ಬಳಿಕ ಅಪರಾಧ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳದೆ ಎಲ್ಲರಂತೆ ಸಾಮಾನ್ಯ ಜೀವನ ನಡೆಸುವ ಮೂಲಕ ಅಧಿಕಾರಿಗಳ ಶ್ರಮ ಸಾರ್ಥಕ ಮಾಡುತ್ತಿದ್ದಾರೆ.
ರಮೇಶ್ ಬಿ ಎಚ್,ನ್ಯೂಸ್ 18 ಕನ್ನಡ,ಹಾವೇರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ