ರಾಣೆಬೆನ್ನೂರು: ರಾಜ್ಯಾದ್ಯಂತ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದ ರಾಣೆಬೇನ್ನೂರಿನ (Ranebennur) "ಮೈಸೂರು ಹುಲಿ" ಹೋರಿ (Mysuru Huli Ox) ವಯೋಸಹಜವಾಗಿ ಮೃತಪಟ್ಟಿದೆ. ರಾಣೆಬೆನ್ನೂರ ನಗರದ ಪ್ರಸಿದ್ದ ಪೈಲ್ವಾನರ ಕುಟುಂಬ ಎನಿಸಿಕೊಂಡಿರುವ ಗೂಳಣ್ಣನವರ ಕುಟುಂಬದ ಹೋರಿ ಇದಾಗಿತ್ತು.
ರಾಣೆಬೆನ್ನೂರಿನ ಮೈಸೂರು ಹುಲಿ ಎಂದೇ ಫೇಮಸ್ ಆಗಿದ್ದ ಈ ಹೋರಿಯನ್ನು ಪೈಲ್ವಾನ್ ನಂಜಪ್ಪ ಗೂಳಣ್ಣನವರ ಕುಟುಂಬ ಸಾಕಿತ್ತು. ಪೈಲ್ವಾನ್ ನಂಜಪ್ಪ ಗೂಳಣ್ಣನವರ ಅವರು ಹೆಸರಾಂತ ಕುಸ್ತಿ ಪಟುವಾಗಿದ್ದರು. ನಾಡಹಬ್ಬ ದಸರಾ ಸಮಯದಲ್ಲಿ ನಡೆದ ಕುಸ್ತಿಯಲ್ಲಿ ಗೆದ್ದು ಮೈಸೂರು ಹುಲಿ ಎಂದು ಹೆಸರು ಪಡೆದಿದ್ದರು.
ಮೈಸೂರು ಹುಲಿ ಅಖಾಡಕ್ಕಿಳಿದರೆ ಮೈಯಲ್ಲಿ ರೋಮಾಂಚನ!
ಪೈಲ್ವಾನ್ ನಂಜಪ್ಪ ಅವರ ಹೆಸರಿನ ಮೂಲಕ ಈ ಹೋರಿಗೆ "ಮೈಸೂರು ಹುಲಿ" ಎಂದು ನಾಮಕರಣ ಮಾಡುವ ಮೂಲಕ ಹೋರಿ ಅಖಾಡಕ್ಕೆ ಎಂಟ್ರಿ ನೀಡಿತ್ತು. ಅಲ್ಲದೇ, ರಾಜ್ಯದ ಬೇರೆ ಬೇರೆ ಕಡೆ ನಡೆಯುತ್ತಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಈ ಹೋರಿ ಅಖಾಡಕ್ಕೆ ಇಳಿದರೆ ಸಾಕು, ನೆರೆದವರ ಮೈ ರೋಮಾಂಚನ ಆಗ್ತಿತ್ತು. ಕುಸ್ತಿ ಅಖಾಡದಲ್ಲಿ ರಾಣೆಬೆನ್ನೂರಿನ ಮೈಸೂರು ಹುಲಿ ಎಂಬ ಘೋಷಣೆ ಗಗನ ಮುಟ್ಟುತ್ತಿತ್ತು.
ಹಲವು ಪ್ರಶಸ್ತಿಗಳಿಗೆ ಮುತ್ತಿಟ್ಟಿದ್ದ ಮೈಸೂರು ಹುಲಿ
ಸುಮಾರು ಹದಿನೈದು ವರ್ಷಗಳ ಕಾಲ ರಾಣೆಬೆನ್ನೂರಿನ ಮೈಸೂರು ಹುಲಿ ಎಂದೇ ಫೇಮಸ್ ಆಗಿದ್ದ ಈ ಹೋರಿ ಹಲವು ಹಬ್ಬಗಳಲ್ಲಿ ಭಾಗಿಯಾಗಿ ಪ್ರಶಸ್ತಿಗಳಿಗೆ ಮುತ್ತಿಟ್ಟಿತ್ತು. ಮೂರು ಬೈಕ್, ಹತ್ತು ಗೋದ್ರೇಜ್, ಐದು ತೊಲೆ ಬಂಗಾರ ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳನ್ನು ಈ ಹೋರಿಯು ತನ್ನದಾಗಿಸಿಕೊಂಡಿತ್ತು.
ಇದನ್ನೂ ಓದಿ: Haveri Viral Video: ವಿಮಾನದಲ್ಲಿ ಅಮ್ಮನ ಹುಟ್ಟುಹಬ್ಬ ಆಚರಿಸಿದ ಹಾವೇರಿ ಹೈದ!
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಮೈಸೂರು ಹುಲಿ
ಸದ್ಯ ರಾಣೆಬೆನ್ನೂರಿನ ಮೈಸೂರು ಹುಲಿಯ ನಿಧನದಿಂದ ಸಾವಿರಾರು ಅಭಿಮಾನಿಗಳು ದುಃಖಿತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಾಣೆಬೆನ್ನೂರಿನ ಮೈಸೂರು ಹುಲಿಯ ವಿಡಿಯೋಗಳನ್ನು ಹಾಕಿ ಸಂತಾಪ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ: Haveri: ಅದ್ಭುತ ಪರಿಮಳದ ಏಲಕ್ಕಿ ಹಾರ, ಪ್ರಧಾನಿ ಮೋದಿ ಕೊರಳಿಗೂ ಹಾವೇರಿ ಮಾಲೆ!
ಮೈಸೂರು ಹುಲಿ ಹೋರಿಯ ಅಂತ್ಯಸಂಸ್ಕಾರ ಮೆರವಣಿಗೆ
ಹಿಂದೂ ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳಿಂದ ರಾಣೆಬೆನ್ನೂರು ಮೈಸೂರು ಹುಲಿ ಹೋರಿಯ ಅಂತ್ಯಸಂಸ್ಕಾರ ಮೆರವಣಿಗೆ ನಡೆಯಲಿದೆ. ನಂತರ ಖಾಸಗಿ ಜಮೀನಿನಲ್ಲಿ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ರಾಣೆಬೆನ್ನೂರು ಮೈಸೂರು ಹುಲಿಯ ಹೋರಿ ಪ್ಯಾನ್ಸ್ ಭಾಗಿಯಾಗಲಿದ್ದಾರೆ.
ಮಾಹಿತಿ: ರಮೇಶ್, ನ್ಯೂಸ್ 18 ಕನ್ನಡ ಹಾವೇರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ