Inspiration: ಶಾಲೆಗೆ ಹೊರಟ ಚಿಂದಿ ಆಯುವ ಚಂದದ ಮಕ್ಕಳು! ಹಾಸನದ ಅಲೆಮಾರಿ ಮಕ್ಕಳ ಬದುಕು ಬದಲಾದ ಕಥೆಯಿದು!

ಚಿಂದಿ ಆಯಲಾರದ  ತೀರಾ ಚಿಕ್ಕಮಕ್ಕಳು ಸಮೀಪದ ಹಳ್ಳಿಗಳಲ್ಲಿ ಅನ್ನ, ರೊಟ್ಟಿ ಬೇಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಗಂಡಸರು ಹೆಚ್ಚಾಗಿ ಮೀನು ಮಾಂಸದ ಶಿಕಾರಿಗೆ ಹೋಗುತ್ತಿದ್ದರು. ಇಷ್ಟರಲ್ಲೇ ಈ ಸಮುದಾಯದ ಜನರ ಜೀವನ ಕಳೆದುಹೋಗುತ್ತಿತ್ತು. ಆದರೆ ಈ ಮಕ್ಕಳ ಬದುಕು ಬದಲಾದದ್ದು ಹೇಗೆ?

ಹುಣಸವಳ್ಳಿ ಶಾಲೆ

ಹುಣಸವಳ್ಳಿ ಶಾಲೆ

 • Share this:
  ಹಾಸನ: ಅಲೆಮಾರಿ ಸಮುದಾಯಗಳು ಇಂದೂ ಸಹ ದೇಶದ ವಿವಿಧ ಭಾಗಗಳಲ್ಲಿ ವಾಸವಿದೆ. ಸ್ವತಂತ್ರ ಭಾರತವು ಇವರನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮೇಲೆತ್ತುವ ಅನೇಕ ಯೋಜನೆಗಳನ್ನು (Government Schemes) ಹಾಕಿಕೊಂಡರೂ ಸಹ ಸಂಪೂರ್ಣ ಪ್ರಮಾಣದಲ್ಲಿ ಈ ಅಲೆಮಾರಿಗಳ‌ ಜೀವನ ಒಂದೆಡೆ ನೆಲೆನಿಂತಿಲ್ಲ. ಆದರೆ ಇವರ ಅಲೆಮಾರಿತನವೇ ಇವರಿಗೆ ಮುಳ್ಳಾಗಿದೆ. ಅನಕ್ಷರತೆ ಹೆಚ್ಚುತ್ತಿದೆ.  ಕಲಿಕಾ ಜ್ಞಾನ ಹೆಚ್ಚಿಸಿ ಇವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಕಷ್ಟಸಾಧ್ಯವಾಗಿದೆ. ಇದನ್ನು ಸರಿಪಡಿಸುವುದು ಶಿಕ್ಷಣ ಇಲಾಖೆ (Education Department) ಸೇರಿದಂತೆ ಸಮಾಜದ ಜವಾಬ್ದಾರಿಯಾಗಿದೆ.  ಇಂತಹ ಒಂದು ಯಶಸ್ವಿ ಪ್ರಯತ್ನ ಹಾಸನ ಜಿಲ್ಲೆಯ (Hassan District) ಆಲೂರಿನ ಸಮೀಪವಿರುವ ಹುಣಸವಳ್ಳಿಯಲ್ಲಿ 1996-97ನೇ ಇಸವಿಯಲ್ಲೇ ನಡೆದ ಈ ಪರಿವರ್ತನೆಯ ಕಥೆ ನಿಜಕ್ಕೂ ವಿಸ್ಮಯ ಹುಟ್ಟಿಸುವಂತಿದೆ!

  ಇಲ್ಲಿ ನೆಲೆಸಿರುವ ಅಲೆಮಾರಿ ಸಮುದಾಯ ತಮ್ಮನ್ನು ಮರಾಠಿ ಗೋಸಾಯಿಗಳೆಂದು ಹೇಳಿಕೊಳ್ಳುತ್ತಾರೆ. ಈ ಅಲೆಮಾರಿಗಳಿಗೆ ಆರ್ಥಿಕ ಭದ್ರತೆಯಿಲ್ಲ. ಸ್ವಚ್ಛಂದ ಪ್ರಿಯರಾದ ಇವರಿಗೆ ದಿನವೂ ಹಣ ಬೇಕು. ಇದಕ್ಕಾಗಿ ವಾರಕೊಮ್ಮೆ ಕೂಲಿ ದೊರೆಯುವ ಕೃಷಿ ಕಾರ್ಮಿಕರ ಕೆಲಸ ಇವರಿಗೆ ಒಗ್ಗದು. ಆ ದಿನದ ಸಂಪಾದನೆಯಲ್ಲಿ ಅವರು  ಆ ದಿನವೇ ಖರ್ಚು ಮಾಡುತ್ತಾರೆ.

  ಉದ್ಯೋಗವಾದರೂ ಏನು?
  ಇದಕ್ಕಾಗಿ ಈ ಗೋಸಾಯಿ ಹೆಂಗಸರು ಹಗಲಲ್ಲಿ ಒಂದು ಜೋಳಿಗೆ ತೂಗು ಹಾಕಿಕೊಂಡು ಮಕ್ಕಳ ಹೆಗಲಿಗೊಂದು ಜೋಳಿಗೆ  ಹಾಕಿ ಚಿಂದಿ ಆರಿಸಲು ದಿನವೂ ಬಸ್ಸಿನಲ್ಲಿ ಹಾಸನಕ್ಕೆ ಹೋಗಿ ಚಿಂದಿ ಆಯ್ದು ಬದುಕುವುದೇ ಇವರ ಮುಖ್ಯ ಕಾಯಕವಾಗಿತ್ತು. ಚಿಂದಿ ಆಯಲಾರದ  ತೀರಾ ಚಿಕ್ಕಮಕ್ಕಳು ಸಮೀಪದ ಹಳ್ಳಿಗಳಲ್ಲಿ ಅನ್ನ, ರೊಟ್ಟಿ ಬೇಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಗಂಡಸರು ಹೆಚ್ಚಾಗಿ ಮೀನು ಮಾಂಸದ ಶಿಕಾರಿಗೆ ಹೋಗುತ್ತಿದ್ದರು. ಇಷ್ಟರಲ್ಲೇ ಈ ಸಮುದಾಯದ ಜನರ ಜೀವನ ಕಳೆದುಹೋಗುತ್ತಿತ್ತು.

  ಈ ಮುದ್ದು ಮಕ್ಕಳು ಸಾಕ್ಷರರಾಗುವುದು ಯಾವಾಗ?
  ಮಕ್ಕಳು ಶಾಲೆಯಲ್ಲಿ ಓದು ಕಲಿಯಬೇಕಾದ ವಯಸ್ಸಿನಲ್ಲಿ ತಮ್ಮ ತಾಯಂದಿರೊಡನೆ ಜೋಳಿಗೆ ಸಿಕ್ಕಿಸಿಕೊಂಡು ಹೋಗುವುದನ್ನು  ದಿನವೂ ನೋಡುತ್ತಿದ್ದ ಹುಣಸವಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಕೆ. ಬಿ. ಗುರುಮೂರ್ತಿಯವರಿಗೆ ಈ ಮುದ್ದು ಮಕ್ಕಳು ಸಾಕ್ಷರರಾಗುವುದು ಯಾವಾಗ?  ಇಂತಹ ಜೀವನದಿಂದ ಸಂಪೂರ್ಣ ಸಾಕ್ಷರತೆ ಹೊಂದಲು ಹೇಗೆ ಸಾಧ್ಯ ಎಂಬ ಚಿಂತೆಯಾಗಿತ್ತು. ಅವರು ಒಂದೆರಡು ಬಾರಿ ಮಕ್ಕಳ ಮತ್ತು ಪೋಷಕರ ಮನ ಒಲಿಸಿ ಶಾಲೆಗೆ ಕರೆದೊಯ್ಯುಲು ಪ್ರಯತ್ನಿಸಿ ವಿಫಲರಾದದ್ದೂ ಉಂಟು.

  ಯಾವ್ದಕ್ಕೂ ಮನಸ್ಸು ಬೇಕು
  ಮನಸ್ಸಿದಲ್ಲಿ ಮಾರ್ಗವಿರುತ್ತದೆ ಎಂಬ ಮಾತು ಕೇವಲ ಸರ್ಕಾರಿ ಕಡತದಲ್ಲಿದ್ದರೆ ಸಾಲದು, ಅದು ಕಾರ್ಯಗತವಾಗಬೇಕು. ಅದಕ್ಕೆ ಸಾಮಾಜಿಕ ಕಳಕಳಿಯುಳ್ಳ ಮನಸ್ಸು ಬೇಕು ಎಂಬುದನ್ನು ಆಗ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಪುಟ್ಟಯ್ಯ ಎಂಬುವವರು ಮನಗಂಡಿದ್ದರು.

  ಗೋಸಾಯಿ ತಂಡದ ಮನ ಒಲಿಸುವುದೇ ದೊಡ್ಡ ಸವಾಲು
  ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯಿಂದ ವಿಶೇಷ ದಾಖಲಾತಿ ಆಂದೋಲನ ಮತ್ತು ವಯಸ್ಕರನ್ನು ನವ ಸಾಕ್ಷರಸ್ಥರನ್ನಾಗಿಸಲು ಅಕ್ಷರ ಅಭಿಯಾನದ ಕಾರ್ಯಕ್ರಮ ನಡೆಸಲಾಗಿತ್ತು. ಪುಟ್ಟಯ್ಯನವರಿಗೆ ಹಗಲಿರುಳು ಬಿಡುವಿಲ್ಲದ ಕೆಲಸ. ಇತ್ತ ಶಾಲಾ ಮುಖ್ಯೋಪಾಧ್ಯಾಯರಿಗೆ ತನ್ನ ಕ್ಷೇತ್ರದ ಎಲ್ಲರಿಗೂ ಶಿಕ್ಷಣ ಕೊಡಿಸುವ ಹುಮ್ಮಸ್ಸು, ಅಲೆಮಾರಿ ಚಿಂದಿ ಆಯುವ ಮಕ್ಕಳ ಭವಿಷ್ಯವನ್ನು ರೂಪಿಸುವ ಛಲ ಇಬ್ಬರಲ್ಲೂ ಮೂಡಿತು. ಅಂದಿನಿಂದ ಈ ಇಬ್ಬರೂ ದಿನಕ್ಕೆರಡು ಬಾರಿ ಗೋಸಾಯಿ ತಂಡಕ್ಕೆ ತೆರಳಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಎಂದು ಮನವೊಲಿಸಿದರು.

  ಮೊದಲು ರಾತ್ರಿ ಶಾಲೆ ಆರಂಭ!
  ಮಕ್ಕಳನ್ನು ಶಾಲೆಗೆ ಕಲುಹಿಸಿದರೆ ತಮ್ಮ ಹೊಟ್ಟೆ ತುಂಬದಂದು ಗೋಸಾಯಿಗಳದ್ದು ಒಂದೇ ಹಠ, ಆದರೆ ಪುಟ್ಟಯ್ಯನವರು ಛಲ ಬಿಡದ ತ್ರಿವಿಕ್ರಮ, ತಾಲೂಕಿನ ಉನ್ನತಾಧಿಕಾರಿಗಳನ್ನು ಕರೆಸಿ ಸಭೆ ನಡೆಸಿದರು. ಸ್ಥಳೀಯ ಜನರ ಸಹಕಾರ ಸಲಹೆಯನ್ನು ಪಡೆಯಲು ರಾತ್ರಿ ಶಾಲೆ ಆರಂಭ ಮಾಡಿದರು. ಬರುಬರುತ್ತಾ ಗೋಸಾಯಿಗಳಲ್ಲಿ ಹೊಸ ವಾತಾವರಣದ  ಅನುಭವವಾಗತೊಡಗಿತು, ಸಮಾಜದಲ್ಲಿ ತಾವೂ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಲು ಅವಕಾಶ ವಿರುವ ಕಲ್ಪನೆ ಅವರಲ್ಲಿ ಮೂಡತೊಡಗಿತು. ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಒಪ್ಪಿದರು.

  ಕೊನೆಗೂ ದಾಖಲಾದ 20 ಮಕ್ಕಳು!
  ಕೊನೆಗೂ ವಿಶೇಷ ದಾಖಲಾತಿ ಆಂದೋಲನದಲ್ಲಿ ಚಿಂದಿ ಆಯುವ 20 ಮಕ್ಕಳು ನೋಂದಣಿಯಾಗಿ ಶಾಲಾ ದಾಖಲಾತಿ ಪಟ್ಟಿ ಸೇರಿದರು. ಶಾಲೆಗೆ ದಾಖಲಾದ ಈ ಮಕ್ಕಳಿಗೆ ಸ್ವಚ್ಛತೆಯ ಪಾಠದೊಂದಿಗೆ ಮೊದಲ ಪಾಠ ಪ್ರಾರಂಭವಾಯಿತು.

  ಸ್ವಚ್ಛತೆಯ ಪಾಠ
  ಗುರುಮೂರ್ತಿ ಅವರ ದೂರದರ್ಶಿತ್ವದಲ್ಲಿ ಯೋಜನೆ ಮೊದಲೇ ಸಿದ್ದವಾಗಿತ್ತು. ಈ ಮಕ್ಕಳ ದೇಹ ಮತ್ತು ಮನಸ್ಸು ಎರಡನ್ನು ಶುದ್ಧ ಮಾಡಬೇಕು. ದೇಹದ ಶುದ್ಧತೆಗೆ ಇಲ್ಲಿ ಮೊದಲು ಆದ್ಯತೆ ಕೊಡಬೇಕು. ಇಲ್ಲವಾದಲ್ಲಿ  ತಮ್ಮ ಮಕ್ಕಳೊಂದಿಗೆ ಬೆರೆಯುವದರಿಂದ ಗ್ರಾಮಸ್ಥರ ಅಸಹನೆ ಮತ್ತು ಕೋಪಕ್ಕೆ ಶಾಲೆ ಗುರಿಯಾಗಬೇಕಾಗುತ್ತೆ ಎಂಬುದನ್ನು ಅವರು ಅರಿತಿದ್ದರು. ಶಾಲಾ ಪ್ರಾರಂಭಕ್ಕೆ ಮೊದಲು ಸಮೀಪವೆ ಇರುವ ಯಗಚಿ ನದಿ ಮತ್ತು ಕೆರೆಯಲ್ಲಿ ಸ್ನಾನ ಮಾಡಿಸಿ ಶಾಲೆಗೆ ಕಳಿಸಲಾಗುತ್ತಿತ್ತು. 

  ನೆಲೆ ನಿಂತ ಕುಟುಂಬಗಳು
  ಸುಮಾರು 8-10 ವರ್ಷಗಳ ಹಿಂದೆ ಅಲೆಮಾರಿಗಳ 20 ಕುಟುಂಬಗಳನ್ನು ಕರೆತಂದು ಜಿಲ್ಲಾ ಆಡಳಿತವು ಹುಣಸವಳ್ಳಿಯ ಸರ್ಕಾರಿ ಗೋಮಾಳದಲ್ಲಿ ನೆಲೆ ನಿಲ್ಲಿಸಿತ್ತು. ಈಗ ಇವರಲ್ಲಿ ಅರ್ಧದಷ್ಟು ಕುಟುಂಬಗಳು ತಮ್ಮ ಗುಡಿಸಲಿನ ಬದಲಾಗಿ ಅಶ್ರಯ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ.

  ಸ್ಪೂರ್ತಿ ನೀಡುವ ಕೆಲಸ ಮಾಡಿದ ಶಿಕ್ಷಕ ಗುರುಮೂರ್ತಿ ಅವರು ಹೇಳುವುದೇನು?
  1996-97ರಲ್ಲಿ ಒಟ್ಟು 20 ಮಕ್ಕಳನ್ನು ಈ ಸಮುದಾಯದ ಮಕ್ಕಳನ್ನು ಶಾಲೆಗೆ ಸೇರಿಸಿದ್ದೆ. ಈವರೆಗೆ ಅಂದಾಜು ಒಟ್ಟು 40 ಮಕ್ಕಳು ಶಾಲೆಗೆ ಸೇರ್ಪಡೆಗೊಂಡಿದ್ದಾರೆ.ಈಗ 1 ರಿಂದ ಮಾಸ್ಟರ್ ಡಿಗ್ರಿವರೆಗೆ 60 ಓದ್ತಿದ್ದಾರೆ. ಇವರಲ್ಲಿ 2-3 ಮಕ್ಕಳು ಡಿಗ್ರಿ, ಮಾಸ್ಟರ್ ಡಿಗ್ರಿಯನ್ನೂ ಓದಿದ್ದಾರೆ. ಆದರೆ ಬಹುತೇಕ ವಿದ್ಯಾರ್ಥಿಗಳು ಜೀವನೋಪಾಯಕ್ಕೆ ಗಾರೆ ಕೆಲಸ, ವ್ಯಾಪಾರ ಇಂತಹವುಗಳನ್ನೇ ಮಾಡುತ್ತಿದ್ದಾರೆಯೇ ವಿನಃ, ಯಾರಿಗೂ ಖಾಯಂ ಉದ್ಯೋಗ ದೊರೆತಿಲ್ಲ. ಸದ್ಯ ಈ ಅಲೆಮಾರಿ ಸಮುದಾಯದ ಹಿರಿಯಲ್ಲಿ ಶೈಕ್ಷಣಿಕ ಜಾಗೃತಿ ಮೂಡಿದ್ದು ಸ್ವಯಂ ಪ್ರೇರಣೆಯಿಂದ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ ಎನ್ನುತ್ತಾರೆ.

  ಗುರುಮೂರ್ತಿ ಅವರ ಸಂಪರ್ಕ ಸಂಖ್ಯೆ: 9845697532

  ಇದನ್ನೂ ಓದಿ: Kenchamba Temple: ಸಪ್ತಮಾತೃಕೆಯರು ಒಗ್ಗೂಡುವಾಗ ಊರಲ್ಲಿ ಅಡುಗೆಗೆ ಒಗ್ಗರಣೆ ಹಾಕುವಂತಿಲ್ಲ! ಹಾಸನದ ದಿವ್ಯ ದೇಗುಲವಿದು

  ಸದ್ಯ ಈ ಅಲೆಮಾರಿ ಸಮುದಾಯದ 3-4 ಮನೆಗಳಿಗೆ ಭಾಗ್ಯಜ್ಯೋತಿಯ ಬೆಳಕು ದೊರೆತಿದೆ. ಕುಡಿಯುವ ನೀರಿನ ಸೌಲಭ್ಯ ದೊರೆತಿದೆಯಂತೆ.

  hassan hunasavalli school
  ಹುಣಸವಳ್ಳಿ ಶಾಲೆಗೆ ಇಲ್ಲಿದೆ ದಾರಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಹುಣಸವಳ್ಳಿ ಶಾಲೆಗೆ ಇಲ್ಲಿದೆ ದಾರಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)

  ಆಗದು ಎಂದು ಕೈಕಟ್ಟಿ ಕೂರಬಾರದು!
  ಈಗ ಹುಣಸವಳ್ಳಿ ಶಾಲೆಯಲ್ಲಿ ಈ ಅಲೆಮಾರಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಏನೇ ಆಗಲಿ, ಈ ರೀತಿ ಸಾರ್ವಜನಿಕರಿಂದ- ಸಾರ್ವಜನಿಕ ಸೇವೆಯಿಂದ ಆಗದ ಕೆಲಸ ಯಾವುದೂ ಇಲ್ಲ. ಆದರೆ ಸಮಾಜದ ಈ ಹಿಂದುಳಿದ ಸಮುದಾಯವನ್ನು ಇತರ ವರ್ಗದೊಡನೆ ಮುಂದೆ ತರಬೇಕೆಂಬ ಮನಸ್ಸು ಬೇಕು. ಮಕ್ಕಳೇ ಮುಂದಿನ ಪ್ರಜೆಗಳು. ಆದ್ದರಿಂದ ಈ ಅಲೆಮಾರಿ ಮಕ್ಕಳಿಗೆ ಶಾಲೆಯಂತಹ ಉತ್ತಮ ವಾತಾವರಣದಲ್ಲಿ ಬೆಳಿಸುತ್ತಿರುವುದು ನಿಜಕ್ಕೂ ಶ್ಲಾಘನಿಯ .

  ಇದನ್ನೂ ಓದಿ: Karnataka Police: ಪೊಲೀಸರು ಹೀಗೂ ಇರ್ತಾರಾ!? ವಿದ್ಯಾರ್ಥಿಗಳಿಗಾಗಿ 24x7 ಉಚಿತ ಲೈಬ್ರರಿ ತೆರೆದ ಪೊಲೀಸ್ ಸಿಬ್ಬಂದಿ!

  ಒಟ್ಟಾರೆ ಚಿಂದಿ ಆಯುವ ಮಕ್ಕಳ ಭವಿಷ್ಯವನ್ನು ರೂಪಿಸಿಕೊಳುವಂತೆ ಮಾಡಿರುವ ಸಾಹಿತಿ ಹಾಗೂ ಶಿಕ್ಷಕ ಕೆ ಬಿ ಗುರುಮೂರ್ತಿಅವರಿಗೆ ಗ್ರಾಮಸ್ಥರು ಮತ್ತು ತಾಲ್ಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮೂರಿನಲ್ಲೂ ಅಲೆಮಾರಿಗಳು ಕಂಡು ಬಂದರೆ ನೀವು ಈ ಪ್ರಯತ್ನ ಮಾಡಬಹುದು.

  ವರದಿ: ಪ್ರದೀಪ್ ಗೇಕರವಳ್ಳಿ, ಹಾಸನ
  Published by:guruganesh bhat
  First published: