Kenchamba Temple: ಸಪ್ತಮಾತೃಕೆಯರು ಒಗ್ಗೂಡುವಾಗ ಊರಲ್ಲಿ ಅಡುಗೆಗೆ ಒಗ್ಗರಣೆ ಹಾಕುವಂತಿಲ್ಲ! ಹಾಸನದ ದಿವ್ಯ ದೇಗುಲವಿದು

ಪ್ರತಿ ದೇಗುಲಕ್ಕೂ ಅದರದ್ದೇ ಆದ ವಿಶೇಷತೆ ಇರುತ್ತದೆ. ಐತಿಹ್ಯ, ಸ್ಥಳ ಪುರಾಣ, ನಂಬಿಕೆ..ಹೀಗೆ ಒಂದಿಲ್ಲೊಂದು ವಿಶೇಷತೆಗಳಿಂದ ಧಾರ್ಮಿಕ ಕ್ಷೇತ್ರಗಳು ಭಕ್ತರನ್ನು ಸೆಳೆಯುತ್ತವೆ. ಹಾಸನದ ಹಾಸನಾಂಬಾ ದೇಗುಲದ ಕುರಿತು ನೀವು ಕೇಳಿರುತ್ತೀರಿ. ಆದರೆ ನಿಮಗೆ ಹಾಸನದ ಕೆಂಚಾಂಬಾ ದೇಗುಲದ ಮಹಿಮೆ ಗೊತ್ತೇ?

ಕೆಂಚಾಂಬಾ ದೇಗುಲದ ಒಂದು ನೋಟ

ಕೆಂಚಾಂಬಾ ದೇಗುಲದ ಒಂದು ನೋಟ

 • Share this:
  ಹಾಸನ: ದೀಪಾವಳಿಯ ನಂತರದ ಮಂಗಳವಾರ ಸಪ್ತಮಾತೃಕೆಯರು ಒಟ್ಟಾಗುವ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಬೇಕೇ? ಹಾಗಿದ್ದರೆ ಹರಿಹಳ್ಳಿಯ ಕೆಂಚಾಂಬಿಕೆ ಮೂಲ ದೇವಾಲಯಕ್ಕೆ (Kenchamba Temple) ಬನ್ನಿ. ಇಲ್ಲಿ ಬ್ರಾಹ್ಮೀ (ಕೆಂಚಮ್ಮ ಹಿರಿಯ ಸಹೋದರಿ), ಮಾಹೇಶ್ವರೀ, ವೈಷ್ಣವೀ, ಕೌಮಾರಿ (ಹಾಸನಾಂಬಾ ದೇವಸ್ಥಾನ), ವಾರಾಹಿ, ಇಂದ್ರಾಣಿ, ಚಾಮುಂಡಿ (ದೇವೀಗೆರೆ, ಹಾಸನ) ಇವರೆಲ್ಲರ ಸಮಾಗಮ ನೋಡುವುದೇ ಬಲು ಚೆನ್ನ. ಹಾಸನಾಂಬಾ ದರ್ಶನಕ್ಕೆ (Hasanamba Darshan) ತೆರೆಬಿದ್ದ ಮೇಲೆ ಆಲೂರು ತಾಲೂಕಿನ (Alur Taluk) ಹರಿಹಳ್ಳಿಯಲ್ಲಿ ಚಿಕ್ಕ ಜಾತ್ರೆ, ಉತ್ಸವಗಳು (Festivals) ನಡೆಯುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಪ್ರವಾಸಿ‌ ತಾಣಗಳಿಗೆ ಭೇಟಿ ನೀಡುವಂತೆ ದೇವಾಲಯಗಳಿಗೂ (Temple Visit) ಭಕ್ತರೊಟ್ಟಿಗೆ ಪ್ರವಾಸಿಗರು ಆಗಮಿಸುತ್ತಾರೆ. 

  ಆಲೂರಿನಿಂದ ಸುಮಾರು 27 ಕಿ.ಮೀ. ದೂರದ ಬಾಳ್ಳುಪೇಟೆಯ, ಕೊಡ್ಲಿಪೇಟೆ ರಸ್ತೆಯಂಚಿನಲ್ಲಿರುವ ಕೆ. ಹೊಸಕೋಟೆ ಹೋಬಳಿ ಕೇಂದ್ರ ಸ್ಥಾನವಾಗಿದ್ದು ಊರಿನ ಸುತ್ತಮುತ್ತಲಿನ ಪರಿಸರ ಕಾಫಿ, ಏಲಕ್ಕಿ ತೋಟಗಳಿಂದ ಘಮ ಘಮಿಸುತ್ತಾ ನೋಡುಗರಿಗೆ ರಮಣೀಯತೆಯನ್ನು ಉಣಬಡಿಸುತ್ತದೆ.

  48 ಹಳ್ಳಿಯ ಜನರು ಒಟ್ಟಿಗೆ ಸೇರ್ತಾರೆ!
  ಕೆಂಚಮ್ಮನ ಹೊಸಕೋಟೆ ಪ್ರವಾಸಿಗರು ಮತ್ತು ಭಕ್ತಾದಿಗಳನ್ನು ಸೆಳೆಯುವಂತಿದೆ. ಹೊಸಕೋಟೆ ಜಿಲ್ಲಾ ಕೇಂದ್ರದಿಂದ 27 ಕಿ.ಮೀಯಲ್ಲಿರುವ ತಾಲ್ಲೂಕಾ ಕೇಂದ್ರವಾಗಿದೆ. ಇಲ್ಲಿಂದ 2 ಕಿ.ಮೀ. ದೂರದಲ್ಲಿ 'ಕೆಂಚಾಂಬಿಕಾ ದೇವಿ'ಯ ದೇವಾಲಯವಿದ್ದು ವರ್ಷದಲ್ಲಿ ಎರಡು ಬಾರಿ ಸುತ್ತಮುತ್ತಲಿನ 48 ಹಳ್ಳಿಯ ಜನರು ಒಟ್ಟಿಗೆ ಸೇರಿ ವಿಜೃಂಭಣೆಯಿಂದ ದೇವಿಯ ಜಾತ್ರೆ ನಡೆಸುತ್ತಾರೆ.

  ಕೆಂಚಾಂಬಿಕಾ ದೇವಿಯ ಐತಿಹ್ಯವೇನು?
  ಸ್ಥಳೀಯ ದಂತಕತೆಯ ಪ್ರಕಾರ ಕೆಂಚಾಂಬಿಕಾ ದೇವಿ ಸಪ್ತ ಮಾತೃಕೆಯಲ್ಲಿ ಒಬ್ಬಳೆಂದು ಹಾಗೂ ಹಾಸನದಲ್ಲಿ ಇರುವ ಹಾಸನಾಂಬೆಯ ಸಹೋದರಿ ಎಂಬ ನಂಬಿಕೆಯಿದೆ. ರಕ್ತ ಬೀಜಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡುವಾಗ ದುರ್ಗಾ ದೇವತೆಗೆ ಸಹಾಯಕಳಾಗಿದ್ದಳೆಂದು ಪುರಾಣ ಹೇಳುತ್ತದೆ‌.

  ಅಡುಗೆಗೆ ಒಗ್ಗರಣೆ ಹಾಕುವಂತಿಲ್ಲ!
  ಈ ಮಹೋತ್ಸವದ ವಿಶೇಷತೆ ಏನೆಂದರೆ ಜಾತ್ರಮಹೋತ್ಸವಕ್ಕೆ ನಿಗದಿಪಡಿಸಿದ ದಿನದಿಂದ ಜಾತ್ರಾ ಮಹೋತ್ಸವ ಮುಗಿಯುವರೆಗೂ ಸುಮಾರು 20ರಿಂದ 30ದಿನಗಳ ಕಾಲ ಮನೆಯಲ್ಲಿ ಮಾಡುವ ಅಡುಗೆ ಪದಾರ್ಥಗಳಿಗೆ ಒಗ್ಗರಣೆ ಹಾಕಬಾರದು. 

  ಯಾರೂ ಮರದ ರೆಂಬೆ ಕಡಿಯಬಾರದು!
  ಅಲ್ಲದೇ ಯಾವ ಮರದ ಹಸಿರು ರೆಂಬೆಯನ್ನೂ ಕಡಿಯಬಾರದು.  ಗ್ರಾಮದಲ್ಲಿನ ಸಂಬಂಧಿಕರ ಮನೆಗೆ ಯಾರು ಹೋಗುವಂತಿಲ್ಲ. ಯಾರೂ ಹೊರಗಿನಿಂದ ಬಂದು ಉಳಿದುಕೊಳ್ಳುವಂತಿಲ್ಲ. ಹಾಗೆಯೇ ಊರು ಬಿಟ್ಟು ಬೇರೆ ಯಾವ ಊರಿಗೂ ಹೋಗುವಂತಿಲ್ಲ. ಮಹಿಳೆಯರು- ಋತುಮತಿಯರು  ಬೇರೆಯವರಿಗೆ ಮುಖವನ್ನು ತೋರಿಸುವಂತಿಲ್ಲ. ಈ ಪದ್ಧತಿಗಳು ಜಾತ್ರಾ ಮಹೋತ್ಸವದಲ್ಲಿ ನಡೆಯುತ್ತವೆ.

  ಈ ಪದ್ಧತಿ ಅನಾದಿಕಾಲದಿಂದ ನಡೆದುಬಂದಿದ್ದು ಈಗಲೂ ಸಹ ಗ್ರಾಮಸ್ಥರು ಹಾಗೂ ಭಕ್ತರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಅಲ್ಲದೇ ಬೇಡಿ ಬಂದ ಭಕ್ತರ ಕಷ್ಟಗಳನ್ನು ಈಡೇರಿಸುವ ಮಹಾತಾಯಿ ಎಂದೇ ಭಕ್ತರು ನಂಬಿಕೆ ಹೊಂದಿದ್ದಾರೆ.

  ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕರುಣಿಸುವ ಶಕ್ತಿದೇವತೆ
  ಈ ದೇವಿಯ ಮತ್ತೊಂದು ವಿಶೇಷತೆ ಎಂದರೆ ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕರುಣಿಸುವ ಶಕ್ತಿದೇವತೆ. ಹೌದು, ಮದುವೆಯಾಗಿ ಎಷ್ಟು ವರ್ಷಗಳು ಕಳೆದರೂ ಮಕ್ಕಳಿಲ್ಲದೆ ಕಷ್ಟ ಅನುಭವಿಸುತ್ತಿರುವ ಎಷ್ಟು ಭಕ್ತಾದಿಗಳು ಇಲ್ಲಿ ಬಂದು ಹರಕೆ ಮಾಡಿಕೊಂಡು ಹೋದ ಮೇಲೆ  ಸಾವಿರಾರು ಮಹಿಳೆಯರಿಗೆ ಮಕ್ಕಳ ಭಾಗ್ಯ ದೊರಕಿದೆ.

  ದೇಗುಲವೇ ಅದ್ಭುತ
  ಕೆಂಚಾಂಬಿಕಾ ದೇವಿಯ ದೇವಸ್ಥಾನದ ಮೂರು ದಿಕ್ಕುಗಳಲ್ಲಿ ತ್ರಿಮೂರ್ತಿಗಳ ದೇವಸ್ಥಾನಗಳಿರುವುದೊಂದು ವಿಶೇಷ. ಪೂರ್ವಕ್ಕೆ ಅರ್ಧ ಕಿ.ಮೀ. ದೂರದಲ್ಲಿ ಈಶ್ವರನ ದೇವಸ್ಥಾನ, ಪಶ್ಚಿಮಕ್ಕೆ ಸಿಂಧು ಬ್ರಹ್ಮನ ದೇವಾಲಯ, ದಕ್ಷಿಣಕ್ಕೆ ಶ್ರೀ ಕೃಷ್ಣ ದೇವಾಲಯಗಳಿವೆ.

  ಇದನ್ನೂ ಓದಿ: Karnataka Police: ಪೊಲೀಸರು ಹೀಗೂ ಇರ್ತಾರಾ!? ವಿದ್ಯಾರ್ಥಿಗಳಿಗಾಗಿ 24x7 ಉಚಿತ ಲೈಬ್ರರಿ ತೆರೆದ ಪೊಲೀಸ್ ಸಿಬ್ಬಂದಿ!

  ಇಲ್ಲಿ ವಿಶಿಷ್ಟ ಕೋಟೆಯೊಂದಿದ್ದು ಇದರೊಳಗೆ ನೀರಿನ ಕೊಳ, ವಿಭಿನ್ನ ರೀತಿಯ ಕೆತ್ತನೆ ವಿನ್ಯಾಸಗಳುಳ್ಳ ಆಂಜನೇಯ ದೇವಸ್ಥಾನ, ಗರುಡಗಂಬ, ಈಶ್ವರಲಿಂಗ, ನವಗ್ರಹ ವಿಗ್ರಹ, ಬಸವೇಶ್ವರ ದೇವಾಲಯಗಳಿವೆ.

  ಆಚರಣೆಗಳೇ ವಿಶೇಷ!
  ರಾತ್ರಿ ಉಧ್ವಾರ್ಚನೆ, ಅಂದರೆ ಸಮಾಗಮದ ನಂತರ ಪೂಜೆ, ಉತ್ಸವ, ಸುಗ್ಗಿ ಕುಣಿತ ಎಲ್ಲವೂ ಮುಗಿದ ಮೇಲೆ ಎಲ್ಲರನ್ನೂ ಯಥಾಸ್ಥಾನಗಳಿಗೆ ಕಳುಹಿಸಿ ಪರ ಊರಿನವರಿಗೆ ದರ್ಶನ ನೀಡಲು ಹೊರಡುವ ಕ್ರಿಯೆ ನಡೆಯುತ್ತದೆ.

  Kenchamba Temple RVR4+FF6, SH110, Harihalli, Karnataka 573129 ಕೆಂಚಾಂಬಾ ದೇವಸ್ಥಾನಕ್ಕೆ ಹೋಗುವ ದಾರಿ ಇಲ್ಲಿದೆ[/caption]

  ಸ್ವಗ್ರಾಮದ ಜನರ ಬಾಜಾ ಭಜಂತ್ರಿಯೊಂದಿಗೆ, ಪಟ, ಪೆಟ್ಟಿಗೆ, ಛತ್ರಿ, ಚಾಮರ, ಉತ್ಸವ, ಕೊಂಬು, ಕಹಳೆ, ನೃತ್ಯ, ಮೇಳಗಳು, ಆರತಿ, ಈಡುಗಾಯಿಗಳ ಸೇವೆಯೊಂದಿಗೆ ಮೆರವಣಿಗೆಯಲ್ಲಿ ಬರುವ ದೇವಿ ಸುಮಾರು ಎರಡು ಕಿ.ಮೀ. ದೂರದ ದೇವಸ್ಥಾನ ತಲುಪಲು ಎರಡು ಗಂಟೆ ಆಗುತ್ತದೆ. ನಂತರ ಅಲಂಕಾರ, ಪೂಜೆ, ಪುನಸ್ಕಾರ, ಸೇವೆಗಳ ಬಳಿಕ ಮಧ್ಯಾಹ್ನ ಒಂದು ಗಂಟೆಗೆ ವಿಶೇಷ ಬಲಿ ಪ್ರದಾನ (ಅನ್ನ) ಮಹಾ ಮಂಗಳಾರತಿ ನಡೆದು ಸಾರ್ವಜನಿಕ ದರ್ಶನಕ್ಕೆ ಎಡೆಮಾಡಿಕೊಡಲಾಗುತ್ತದೆ.

  ಕೆಂಚಾಂಬಾ ದೇಗುಲ ದರ್ಶನ ಮಾಡಬಯಸುವವರು ದೇಗುಲಕ್ಕೆ ಸಂಬಂಧಿಸಿದ ಸತ್ಯ ಹರಿಹಳ್ಳಿ (919141315194) ಅವರನ್ನು ಸಂಪರ್ಕಿಸಬಹುದು

  ಇದನ್ನೂ ಓದಿ: Wonder Mango: ವರ್ಷಕ್ಕೆ ಎರಡು ಸಲ ಫಸಲು ನೀಡುವ ಮಾವಿನ ಮರ! ಬೆಳಗಾವಿಯಲ್ಲಿದೆ ಅಚ್ಚರಿಯ ಮಾವು

  ನಂತರ ದೇವಿಯ ಸಹಿತ ಹರಕೆ ಹೊತ್ತ ಭಕ್ತಾದಿಗಳಿಗೆ ಕೆಂಡ ಹಾಯಲು ಅವಕಾಶ ನೀಡಲಾಗುತ್ತೆ. ಕೆಂಡ ಹಾಯುವ ಹರಕೆ ಹೊತ್ತ ಭಕ್ತರು ಪಾದ ನಮಸ್ಕಾರ ಮಾಡಿದ ನಂತರ ಸಾರ್ವಜನಿಕರಿಗೆಲ್ಲಾ ಪಾದ ನಮಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇದು ಸುಮಾರು ರಾತ್ರಿ ಹತ್ತರವರೆಗೂ ಮುಂದುವರೆಯುತ್ತದೆ.

  ವರದಿ: ಪ್ರದೀಪ್ ಗೇಕರವಳ್ಳಿ, ಹಾಸನ
  Published by:guruganesh bhat
  First published: