ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಭೂಲೋಕದಲ್ಲಿ ಪ್ರಾಣ ಉಳಿಸುವ ಡಾಕ್ಟರ್ಗಳೇ ಜೀವಂತ ದೇವರುಗಳು ಎಂಬ ಈ ಮಾತು ಹಾಸನದ ಆಲೂರು (Hassan Aluru) ತಾಲ್ಲೂಕಿನ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ನಿಸಾರ್ ಪಾತಿಮಾ ಅವರಿಗೆ ಅಕ್ಷರಶಃ ಅನ್ವಯವಾಗುತ್ತದೆ. ಹಗಲು ಇರುಳು ಎನ್ನದೇ ಗರ್ಭಿಣಿಯರ ಸೇವೆಗೆ ಇವರು ಸದಾಸಿದ್ದ. ಸರ್ಕಾರಿ ರಜೆಗಳಲ್ಲೂ (Government Holiday) ಕೆಲಸಕ್ಕೆ ಹಾಜರು! ಒಂದು ರೀತಿಯಲ್ಲಿ ಇವರದ್ದು 24/7 ಕೆಲಸ. ಸರ್ಕಾರಿ ಆಸ್ಪತ್ರೆಯೆಂದರೆ ಬಡವರಿಗೆ ಮಾತ್ರ ಮೀಸಲು ಎಂದು ತಿಳಿದ ಕೆಲವರು ತಿರಸ್ಕಾರವಾಗಿ ನೋಡುತ್ತಾರೆ. ಆದರೆ ಪಾಳ್ಯ ಹೋಬಳಿ ಕೇಂದ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ (Primary Health Centre) ಹಾಸನದಲ್ಲೇ ಅತ್ಯುತ್ತಮ ಹಾಗೂ ಅತಿ ಹೆಚ್ಚು ಹೆರಿಗೆಗಳು ಆಗುವ ಅರೋಗ್ಯ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿರುವ ಪಾಳ್ಯ ಆರೋಗ್ಯ ಕೇಂದ್ರವು ತಾಲ್ಲೂಕು ಕೇಂದ್ರದಿಂದ 6 ಕಿಲೋಮೀಟರ್ ದೂರದಲ್ಲಿದೆ. ತಾಲ್ಲೂಕು ಆಸ್ಪತ್ರೆಗೆ ಮೀರಿ ಅಧಿಕ ಸಂಖ್ಯೆಯಲ್ಲಿ ಗರ್ಭಿಣಿಯರು ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಸುಸೂತ್ರವಾಗಿ ಹೆರಿಗೆ ಮಾಡಿಸಿಕೊಳ್ಳುತ್ತಾರೆ.
ಹೊರ ಜಿಲ್ಲೆಗಳಿಂದಲೂ ಪಾಳ್ಯಕ್ಕೆ ಬರ್ತಾರೆ!
ಆಲೂರು, ಹಾಸನ ಮಾತ್ರವಲ್ಲ, ಹೊರಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಿಣಿಯರು ಬಂದು ವೈದ್ಯರ ಸಲಹೆ ಮತ್ತು ಉಪಚಾರ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಇಲ್ಲಿ 13 ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಿಸಾರ್ ಪಾತಿಮಾರವರ ಪ್ರಾಮಾಣಿಕ ಹಾಗೂ ಉತ್ತಮ ಸೇವೆಯೇ ಆಗಿದೆ ಎನ್ನುತ್ತಾರೆ ಗರ್ಭಿಣಿಯರು.
10 ಸಾವಿರ ಸಹಜ ಹೆರಿಗೆ
ಗರ್ಭಿಣಿಯರಿಗೆ ಸಂಜೀವಿನಿಯಾಗಿರುವ ಪಾಳ್ಯ ಆಸ್ಪತ್ರೆಯ ಡಾ. ನಿಸಾರ್ ಪಾತಿಮಾ.
ಡಾ. ನಿಸಾರ್ ಪಾತಿಮಾರವರು ಹೆರಿಗೆ ಮಾಡಿಸುವುದರಲ್ಲಿ ಪರಿಣಿತಿ ಹೊಂದಿದ್ದಾರೆ. ಹೌದು, ನಿಸಾರ್ ಪಾತಿಮಾರವರು ವೈದ್ಯಕೀಯ ಸೇವೆಯಲ್ಲಿ ಇದುವರೆಗೂ ಒಂದಲ್ಲ ಎರಡಲ್ಲ, ಬರೋಬ್ಬರಿ ಹತ್ತು ಸಾವಿರ ಸಹಜ ಹೆರಿಗೆಗಳನ್ನು ಯಾವುದೇ ಆಪರೇಷನ್ ಮಾಡದೇ ಮಾಡಿಸಿ ದಾಖಲೆ ಸೃಷ್ಟಿಮಾಡಿದ್ದಾರೆ. ಹಗಲು ಇರುಳು ಎನ್ನದೇ ಗರ್ಭಿಣಿಯರ ಸೇವೆಗೆ ನಿದ್ದೆಗೆಟ್ಟು 24/7 ಕಾರ್ಯ ನಿರ್ವಹಿಸುತ್ತಿದ್ದಾರೆ.
ಡಾ. ನಿಸಾರ್ ಫಾತಿಮಾ ಅವರ ಸಂಪರ್ಕ ಸಂಖ್ಯೆ: 9845452021
ಇದನ್ನೂ ಓದಿ: Karnataka Police: ಪೊಲೀಸರು ಹೀಗೂ ಇರ್ತಾರಾ!? ವಿದ್ಯಾರ್ಥಿಗಳಿಗಾಗಿ 24x7 ಉಚಿತ ಲೈಬ್ರರಿ ತೆರೆದ ಪೊಲೀಸ್ ಸಿಬ್ಬಂದಿ!
ಬಂಜೆತನವನ್ನು ನಿವಾರಿಸುವ ಕೈಗುಣ ಇವರದು!
ಬಂಜೆತನದಿಂದ ಎಷ್ಟೋ ವರ್ಷಗಳ ಕಾಲ ದಂಪತಿಗಳು ಹತ್ತಾರು ಆಸ್ಪತ್ರೆಯಲ್ಲಿ ತೋರಿಸಿ ತಿರುಗಿ ಸುಸ್ತಾಗಿ ಚಿಂತಾಜನಕರಾಗಿದ್ದಾಗ ದೇವರಂತೆ ಬಂಜೆತನವನ್ನು ನಿವಾರಣೆ ಮಾಡಿದ್ದಾರಂತೆ ಡಾ. ನಿಸಾರ್ ಪಾತಿಮಾ. ಅನೇಕ ದಂಪತಿಗಳು ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿ ತೋರಿಸಿದರೂ ಬಂಜೆತನಕ್ಕೆ ಪರಿಹಾರ ಕಂಡುಕೊಳ್ಳಲಾಗದೆ ಹೋದಾಗ ಇವರ ಮೊರೆಹೋಗಿದ್ದಾರೆ. ಇವರ ಬಳಿ ಬಂದು ಚಿಕಿತ್ಸೆ ಪಡೆದ 95% ಮಕ್ಕಳಿಲ್ಲದ ದಂಪತಿಗಳಿಗೆ ಇವರೇ ಔಷಧಿ ನೀಡಿ ಮಕ್ಕಳ ಭಾಗ್ಯ ಕರುಣಿದ್ದಾರೆ.
ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ದಾರಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಈ ಸೇವೆಯ ಹಿಂದಿನ ಶಕ್ತಿಯೇನು?
"ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಸೇವೆ ನೀಡಬೇಕು ಎಂಬ ಆಸೆ ಇತ್ತು. ಅದರಲ್ಲೂ ಮಹಿಳೆಯರ ಸೇವೆ ಮಾಡಬೇಕೆಂಬ ಇಚ್ಛೆ ಹೆಚ್ಚಿತ್ತು. ಅದೇ ಇಚ್ಛೆಯೇ ನನ್ನನ್ನು ಇಲ್ಲಿಯವರೆಗೆ ಮುನ್ನಡೆಸಿದೆ" ಎನ್ನುತ್ತಾರೆ ಡಾ. ನಿಸಾರ್ ಫಾತಿಮಾ ಅವರು.
ಇದನ್ನೂ ಓದಿ: Kenchamba Temple: ಸಪ್ತಮಾತೃಕೆಯರು ಒಗ್ಗೂಡುವಾಗ ಊರಲ್ಲಿ ಅಡುಗೆಗೆ ಒಗ್ಗರಣೆ ಹಾಕುವಂತಿಲ್ಲ! ಹಾಸನದ ದಿವ್ಯ ದೇಗುಲವಿದು
ಒಟ್ಟಿನಲ್ಲಿ ಡಾ.ನಿಸಾರ್ ಫಾತಿಮಾ ಅವರಂತಹ ವೈದ್ಯರಿಂದ ಎಷ್ಟೋ ಬಡ ಕುಟುಂಬಗಳ ಮಹಿಳೆಯರು ಆರೋಗ್ಯಪೂರ್ಣ ತಾಯ್ತನ ಪಡೆದುಕೊಳ್ಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಮಾತ್ರ ಉತ್ತಮ ಸೇವೆ ನೀಡುತ್ತವೆ ಎಂಬ ಅಂಧ ಅಭಿಮಾನವನ್ನು ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ತೊಡೆದುಹಾಕಿದೆ. ಉತ್ತಮ ಸೇವಾ ಮನೋಭಾವದ ವೈದ್ಯರೊಬ್ಬರು ಇದ್ದರೆ, ಊರೂರುಗಳಿಂದಲೂ ಎಂತಹ ಗ್ರಾಮಕ್ಕೂ ಜನರು ಹುಡುಕಿಕೊಂಡು ಬರುತ್ತಾರೆ ಎಂಬುದಕ್ಕೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರವೇ ತಾಜಾ ತಾಜಾ ಉದಾಹರಣೆಯಾಗಿದೆ ನಿಂತಿದೆ.
ವರದಿ: ಪ್ರದೀಪ್ ಗೇಕರವಳ್ಳಿ, ಹಾಸನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ