ಗದಗ: ರಾಜ್ಯದ ವಿವಿಧ ಜಿಲ್ಲೆ-ಊರುಗಳಲ್ಲಿ ಈಗ ಉತ್ಸವಗಳದ್ದೇ ಸುದ್ದಿ. ಅದೇ ರೀತಿಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ "ಲಕ್ಕುಂಡಿ ಉತ್ಸವ" (Lakkundi Utsava- 2023) ನಡೆಸಲು ಸರ್ಕಾರ ನಿರ್ಧರಿಸಿದೆ. ಗದಗ ಜಿಲ್ಲಾಡಳಿತ (Gadag News) ಲಕ್ಕುಂಡಿ ಉತ್ಸವದ ಸಕಲ ಸಿದ್ದತೆ ನಡೆಸಿದೆ. ಈಗಾಗಲೇ ಲೋಗೊ ಹಾಗೂ ಪ್ರೋಮೊವನ್ನು ಸಹ ಬಿಡುಗಡೆ ಮಾಡಲಾಗಿದೆ. ಐತಿಹಾಸಿಕ ಲಕ್ಕುಂಡಿ ಉತ್ಸವ (Lakkundi Utsava Events Details) ಸಂಭ್ರಮ ಸವಿಯಲ್ಲಿ ಜನರು ಕಾತುರದಿಂದ ಕಾಯುತ್ತಿದ್ದಾರೆ. ಲಕ್ಕುಂಡಿ ಸಿದ್ದತೆಯ ಕುರಿತು ಒಂದು ಝಲಕ್ ಇಲ್ಲಿದೆ ನೋಡಿ.
ಫೆಬ್ರವರಿ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಜರುಗಲಿದೆ ಐತಿಹಾಸಿಕ ಲಕ್ಕುಂಡಿ ಉತ್ಸವ. ಹೌದು, ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಉತ್ಸವ ಮಾಡಲು ಸರ್ಕಾರ ತೀರ್ಮಾನಿಸಿದೆ. ಸಚಿವ ಸಿ.ಸಿ ಪಾಟೀಲ್ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಲೋಗೊ ಹಾಗೂ ಪ್ರೋಮೊ ಬಿಡುಗಡೆ ಮಾಡಲಾಗಿದೆ.
ಸ್ಥಳೀಯ ಕಲಾವಿದರಿಗೆ ಆದ್ಯತೆ
ಲಕ್ಕುಂಡಿ ಉತ್ಸವದ ಯಶಸ್ವಿಗೆ ರಚಿಸಲಾದ ವಿವಿಧ ಸಮಿತಿಗಳ ಸಭೆಗಳನ್ನು ನಡೆಸಿ ವ್ಯವಸ್ಥಿತ ಕಾರ್ಯಕ್ರಮ ಆಯೋಜನೆಗೆ ಅಗತ್ಯದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಸಮಯ ಹೊಂದಾಣಿಕೆ ಮಾಡಲಾಗಿದೆ.
ವಿವಿಧ ಕಲಾತಂಡಗಳ ಮೆರುಗು
ಖ್ಯಾತ ಕಲಾವಿದರು, ಸಾಹಿತಿಗಳಿಗೂ ಆದ್ಯತೆ ನೀಡಲಾಗಿದೆ. ಫೆಬ್ರವರಿ 10 ರಂದು ಮಧ್ಯಾಹ್ನ ಜರುಗಲಿರುವ ಮೆರವಣಿಗೆಗೆ ಹೆಚ್ಚಿನ ಮೆರುಗು ನೀಡುವ ಉದ್ದೇಶದಿಂದ ಸ್ಥಳೀಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾತಂಡಗಳನ್ನು ಕರೆ ತರಲಾಗುತ್ತಿದೆ. ಉತ್ಸವದ ಉದ್ಘಾಟನಾ ಕಾರ್ಯಕ್ರಮದ ನಂತರ ರಂಗಾಯಣ ಕಲಾವಿದರಿಂದ ವೀರ ರಾಣಿ ಕಿತ್ತೂರ ರಾಣಿ ಚನ್ನಮ್ಮ ನಾಟಕ ಪ್ರದರ್ಶನಗೊಳ್ಳಲಿದೆ.
ಅನನ್ಯ ಭಟ್, ಕುನಾಲ್ ಗಾಂಜಾವಾಲ ರಸಮಂಜರಿ
ಫೆಬ್ರವರಿ 11 ರಂದು ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಖ್ಯಾತ ಗಾಯಕಿ ಅನನ್ಯ ಭಟ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಫೆಬ್ರವರಿ 12 ರಂದು ಸಾಯಂಕಾಲ ಸಮಾರೋಪ ಸಮಾರಂಭ ನಂತರ ಸಿಡಿಮದ್ದು ಪ್ರದರ್ಶನ ಕೊನೆಯಲ್ಲಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಅವರಿಂದ ಸಂಗೀತ ರಸದೌತಣ ಏರ್ಪಡಿಸಲಾಗಿದೆ.
ಗಿಡ ನೆಡುವುದರ ಮೂಲಕ ಉತ್ಸವದ ಉದ್ಘಾಟನೆ
ಸಸಿ ನೆಡುವ ಮೂಲಕ ಲಕ್ಕುಂಡಿ ಉತ್ಸವ ಉದ್ಘಾಟನೆಗೆ ಯೋಜನೆ ರೂಪಿಸಲಾಗಿದೆ. ಉತ್ಸವಕ್ಕೆ ಆಗಮಿಸುವ ಎಲ್ಲರಿಗೂ ಮೂರು ದಿನಗಳ ಕಾಲ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಇದನ್ನೂ ಓದಿ: Gadag: ಹೊಲಕ್ಕಿಳಿದು ರೈತರಾಗುವ ಸ್ವಾಮೀಜಿ! ಸಮಗ್ರ ಕೃಷಿಯಲ್ಲೂ ಯಶಸ್ಸು
ಗ್ರಾಮದ ಸೌಂದರ್ಯ ಹೆಚ್ಚಿಸಲು ಆದ್ಯತೆ
ಉತ್ಸವದ ಸಾಂಸ್ಕೃತಿ ಕಾರ್ಯಕ್ರಮಗಳಿಗಾಗಿ ರಾಷ್ಟ್ರ ಮಟ್ಟದ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಉತ್ಸವದ ಹಿನ್ನಲೆಯಲ್ಲಿ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ರಂಗೋಲಿ ಹಾಗೂ ಬಾಳೆ ಕಂಬಗಳನ್ನು ಹಚ್ಚುವುದರ ಮೂಲಕ ಗ್ರಾಮದ ಸೌಂದರ್ಯವನ್ನು ಹೆಚ್ಚಿಸಲು ಮನವಿ ಮಾಡಲಾಗಿದೆ. ಲಕ್ಕುಂಡಿ ಉತ್ಸವವನ್ನು ಪಕ್ಷಾತೀತವಾಗಿ ಆಚರಿಸಲಾಗುತ್ತಿದ್ದು ಸರ್ವರೂ ಭಾಗಿಯಾಗುವಂತೆ ಸಚಿವ ಸಿ.ಸಿ.ಪಾಟೀಲ ಕೋರಿದ್ದಾರೆ.
ಇದನ್ನೂ ಓದಿ: Gadag: ಲಾರಿ ಚಾಲಕರಿಂದ ಕನ್ನಡ ಶಾಲೆ ಅಭಿವೃದ್ಧಿ! ಗದಗ 'ರಾಜರತ್ನ ವೇದಿಕೆ'ಯಿಂದ ಮಾದರಿ ಕಾರ್ಯ
ಐತಿಹಾಸಿಕ ಲಕ್ಕುಂಡಿ ಉತ್ಸವದಲ್ಲಿ ಸಾರ್ವಜನಿಕರು ಮೂರು ದಿನಗಳ ಕಾಲ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಕಲಾವಿದರ ಕಾರ್ಯಕ್ರಮಗಳನ್ನು ಸವಿಯಬಹುದಾಗಿದೆ.
ವರದಿ: ಸಂತೋಷ ಕೊಣ್ಣೂರ, ನ್ಯೂಸ್ 18 ಗದಗ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ