• ಹೋಂ
  • »
  • ನ್ಯೂಸ್
  • »
  • ಗದಗ
  • »
  • Lakkundi: ನೂರಕ್ಕೂ ಹೆಚ್ಚು ದೇಗುಲ, ಬಾವಿ! ತಿಳಿದಷ್ಟೂ ಕುತೂಹಲ ಹೆಚ್ಚಿಸುತ್ತೆ ಲಕ್ಕುಂಡಿಯ ಇತಿಹಾಸ

Lakkundi: ನೂರಕ್ಕೂ ಹೆಚ್ಚು ದೇಗುಲ, ಬಾವಿ! ತಿಳಿದಷ್ಟೂ ಕುತೂಹಲ ಹೆಚ್ಚಿಸುತ್ತೆ ಲಕ್ಕುಂಡಿಯ ಇತಿಹಾಸ

ಲಕ್ಕುಂಡಿ

ಲಕ್ಕುಂಡಿ

ಲಕ್ಕುಂಡಿಯಲ್ಲಿ ಉತ್ಸವ ನಡೆಸುತ್ತಿರೋದೇಕೆ? ಲಕ್ಕುಂಡಿಯ ಇತಿಹಾಸವೇನು? ಅಷ್ಟಕ್ಕೂ ಲಕ್ಕುಂಡಿಯಲ್ಲಿ ನೋಡಲೇಬೇಕಾದ ಏನೆಲ್ಲ ಅದ್ಭುತ ಸ್ಥಳಗಳಿವೆ? ಎಲ್ಲ ವಿವರ ಇಲ್ಲೇ ಇದೆ ನೋಡಿ.

  • News18 Kannada
  • 2-MIN READ
  • Last Updated :
  • Gadag, India
  • Share this:

    ಗದಗ: ಕರ್ನಾಟಕದ ಐತಿಹಾಸಿಕ , ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಗದಗ ಜಿಲ್ಲೆಯ ಕೊಡುಗೆ-ವಿಶೇಷತೆಗಳು ಹಲವಾರಿವೆ. ಈ ಭೂಮಿಯಲ್ಲಿ ಶಾಂತಿ ಮತ್ತು ಸಹಬಾಳ್ವೆಯ ಶಾಶ್ವತ ಮೌಲ್ಯಗಳು ನೆಲೆಗೊಂಡಿವೆ. ಕವಿ ಕುಮಾರವ್ಯಾಸನ ಕರ್ಮಭೂಮಿಯಾದ ಈ ಜಿಲ್ಲೆಯಲ್ಲಿ (Gadag News) ಚಾಲುಕ್ಯ , ಹೊಯ್ಸಳ, ವಿಜಯ ನಗರ ಶೈಲಿಯ ಪ್ರಾಚೀನ ದೇವಾಲಯಗಳು ಶಿಲ್ಪಕಲಾ ನೈಪುಣ್ಯವನ್ನು ಸಾರಿ ಹೇಳುತ್ತವೆ. ಲಕ್ಕುಂಡಿಯಲ್ಲಿರುವ (Temples In Lakkundi) ವಿವಿಧ ದೇವಾಲಯಗಳು ಭವ್ಯ ಶಿಲ್ಪಕಲೆಗಳಿಂದ ನೋಡುಗರ ಕಣ್ಮನ ಸೆಳೆಯುತ್ತವೆ.  ಲಕ್ಕುಂಡಿಯ ದೇವಾಲಯಗಳ ಶಿಲ್ಪಕಲೆಯು ಅಭೂತಪೂರ್ವ ಇತಿಹಾಸ ಹೊಂದಿದ್ದು ಕಲಾಸಕ್ತರಿಗೆ ಕಣ್ಮನ ಸೆಳೆಯುತ್ತದೆ.


    ಗದಗ ಜಿಲ್ಲಾ ಕೇಂದ್ರದಿಂದ 12 ಕಿ.ಮೀ ದೂರದಲ್ಲಿರುವ ಲಕ್ಕುಂಡಿಗೆ ಪೌರಾಣಿಕವಾಗಿ, ಐತಿಹಾಸಿಕವಾಗಿ ವಿಶೇಷ ಸ್ಥಾನವಿದೆ. ವಿವಿಧ ಅರಸು ಮನೆತನಗಳ ಆಳ್ವಿಕೆಗೊಳಪಟ್ಟಿದ್ದ ಲಕ್ಕುಂಡಿ ಬೆಳ್ವಲ ಆಡಳಿತಕ್ಕೆ ಸೇರಿತ್ತು. ಕನ್ನಡ ನಾಡಿನ ಹೃದ್ಭಾಗ , ತಿರುಳ್ ಗನ್ನಡ ನಾಡಿನ ಮಧ್ಯದಲ್ಲಿರುವ ಬೆಳವಲದ ಈ ಸಿರಿಯಲ್ಲಿ ಶಿಲಾಯುಗದ ಐತಿಹಾಸಿಕ ನೆಲೆಗಳು ಲಭ್ಯವಾಗಿವೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅನೇಕ ದೇವಾಲಯಗಳು ನಿರ್ಮಾಣಗೊಂಡಿದ್ದು ಲಕ್ಕುಂಡಿಯು ಶಿಲ್ಪಕಲೆಯ ತವರೂರಾಗಿದೆ.




    ದಾನವೀರ ಶಿಬಿ ಚಕ್ರವರ್ತಿಯ ನಾಡು
    ನಯನ ಮನೋಹರ ಶಿಲ್ಪಕಲೆ ಹೊಂದಿದ ಲಕ್ಕುಂಡಿಯು ನೂರೊಂದು ಗುಡಿ ಹಾಗೂ ನೂರೊಂದು ಬಾವಿಯನ್ನು ಹೊಂದಿರುವ ಐತಿಹ್ಯವಿದೆ. ದಕ್ಷಿಣ ಭಾರತದ ವಾಸ್ತುಶಿಲ್ಪ ಮುಕುಟ ಮಣಿಯೆಂದು ಹೆಸರು ವಾಸಿಯಾಗಿರುವ ಲಕ್ಕುಂಡಿಯು ಇತಿಹಾಸದ ಪುಟಗಳಲ್ಲಿ ಲೋಹಖಂಡಪುರ, ಲೊಕ್ಕಿಗುಂಡಿ ಎಂದು ದಾಖಲಾಗಿದೆ. ದಾನವೀರ ಶಿಬಿ ಚಕ್ರವರ್ತಿಯ ನಾಡಾಗಿ, ಪರಮ ಜಿನಭಕ್ತ ದಾನಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿಯಾಗಿ, ಅಜಗಣ್ಣ ಮುಕ್ತಾಯಕ್ಕರಂತಹ ಶಿವ ಶರಣರ ಧಾರ್ಮಿಕರ ಬೀಡಾಗಿ, ಟಂಕಶಾಲೆಯ ನೆಲೆಯಾಗಿ, ಹೊಯ್ಸಳ ಚಾಲುಕ್ಯರ ಆಡಳಿತದ ಸ್ಥಳವಾಗಿ , ಸಾಂಸ್ಕೃತಿಕ , ಶಿಲ್ಪಕಲಾ ಪ್ರಪಂಚದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.


    ನೂರಕ್ಕೂ ಹೆಚ್ಚು ದೇಗುಲ, ಬಾವಿ!
    ಲಕ್ಕುಂಡಿಯಲ್ಲಿ ನೂರಕ್ಕೂ ಹೆಚ್ಚು ದೇವಸ್ಥಾನ ಹಾಗೂ ಬಾವಿಗಳು ಇದ್ದವು ಎಂಬ ಪ್ರತೀತಿಯಿದೆ. ಆದರೆ ಈಗ ಕೆಲವೇ ದೇವಸ್ಥಾನಗಳು ಮಾತ್ರ ಕಾಣಸಿಗುತ್ತವೆ. ಕಾಶಿ ವಿಶ್ವೇಶ್ವರ, ಮಲ್ಲಿಕಾರ್ಜುನ, ವಿರೂಪಾಕ್ಷ, ಲಕ್ಷ್ಮೀನಾರಾಯಣ, ಮಾಣಿಕೇಶ್ವರ, ವೀರಭದ್ರ , ನನ್ನೇಶ್ವರ , ಸೋಮೇಶ್ವರ, ನೀಲಕಂಠೇಶ್ವರ, ಕುಂಬಾರ ಸಿದ್ಧೇಶ್ವರ, ನಗರದೇವ ವಿಶ್ವನಾಥ ಇನ್ನೂ ಮುಂತಾದ ದೇವಾಲಯಗಳನ್ನು ನಾವು ಕಾಣಬಹುದಾಗಿದೆ. ಕಲ್ಯಾಣ ಚಾಲುಕ್ಯರ ಶಿಲ್ಪದ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂದು ಗುರುತಿಸಲಾಗಿದೆ.




    ಶಿಲ್ಪಕಲೆಯ ಮೇರು ಕೃತಿಯಾದ ಕಾಶಿ ವಿಶ್ವೇಶ್ವರ ದೇವಾಲಯ, ನನ್ನೇಶ್ವರ ದೇವಸ್ಥಾನ, ಅತ್ತಿಮಬ್ಬೆ ನಿರ್ಮಿಸಿದ ಬ್ರಹ್ಮ ಜಿನಾಲಯ ಹಾಗೂ ಪ್ರಾಚೀನ ಕಾಲದ ಮೆಟ್ಟಿಲುಗಳ ಬಾವಿ ಹಾಗೂ ಇನ್ನಿತರ ದೇವಾಲಯಗಳು ಅಪೂರ್ವ ಶಿಲ್ಪಕಲೆಯ ಸಂಗಮವಾಗಿವೆ. ಕಾಶಿ ವಿಶ್ವೇಶ್ವರ ದೇವಸ್ಥಾನದಲ್ಲಿ ಎರಡು ಗರ್ಭಗುಡಿಗಳನ್ನು ಹೊಂದಿರುವ ಈ ದೇವಾಲಯದ ಮುಖ್ಯ ಗುಡಿಯಲ್ಲಿ ಕಾಶಿವಿಶ್ವೇಶ್ವರ ಲಿಂಗವಿದ್ದು ಎದುರಿಗೆ ಸೂರ್ಯದೇವಾಲಯವಿದೆ.


    ಇಲ್ಲೇ ನಾಣ್ಯಗಳು ತಯಾರಾಗ್ತಿದ್ವು!
    ದಾನ ಚಿಂತಾಮಣಿ ಅತ್ತಿಮಬ್ಬೆ ನಿರ್ಮಿಸಿದ ಬ್ರಹ್ಮ ಜಿನಾಲಯ ನವರಂಗ ಮುಖ್ಯ ಮಂಟಪ ಹೊಂದಿದೆ. ಸುಂದರ ಶಿಲೆಯ ಕುಸುರಿ ಗಮನ ಎಲ್ಲರ ಸೆಳೆಯುತ್ತದೆ. ಲಕ್ಕುಂಡಿ ನೆಲದಲ್ಲಿ ಟಂಕಶಾಲೆಯಿದೆ. ಇಲ್ಲಿ ತಯಾರಾದ ನಾಣ್ಯಗಳಿಗೆ ಲೊಕ್ಕಿಗದ್ಯಾಣ ಹಾಗೂ ಲೊಕ್ಕಿನಿಷ್ಟ ಎಂದು ಕರೆಯಲಾಗುತ್ತಿತ್ತು. ಇಲ್ಲಿರುವ ಬಾವಿಗಳು ಹಾಗೂ ಶಾಸನಗಳು ವಾಸ್ತು ಶಿಲ್ಪದ ಜಾಣ್ಮೆಯನ್ನು ಬಿಂಬಿಸುತ್ತವೆ.




    ದಾನ ಚಿಂತಾಮಣಿ ಅತ್ತಿಮಬ್ಬೆ ನಡೆದಾಡಿದ ನೆಲ
    ದಾನ ಚಿಂತಾಮಣಿ ಅತ್ತಿಮಬ್ಬೆಯ ಹೆಸರು ಲಕ್ಕುಂಡಿಯೊಂದಿಗೆ ಹಾಸುಹೊಕ್ಕಾಗಿದೆ. ಈ ಮಹಾಸಾಧ್ವಿ ಹೆಸರು ಲಕ್ಕುಂಡಿಯ ಧಾರ್ಮಿಕ ಜೀವನ ಹಾಗೂ ಕನ್ನಡ ಸಾರಸ್ವತ ಲೋಕದಲ್ಲಿ ಹಚ್ಚ ಹಸುರಾಗಿ ನಿಂತಿದೆ. ಅತ್ತಿಮಬ್ಬೆಯ 11 ನೇ ಶತಮಾನದ ಕಲ್ಯಾಣ ಚಾಲುಕ್ಯ ಅರಸ ಅಹಮಲ್ಲ ದೇವನ ಕಾಲದಲ್ಲಿದ್ದಳು. ದೇವಾಲಯಗಳನ್ನು ಕಟ್ಟಿಸಿ, ಕವಿಗಳಿಗೆ ಆಶ್ರಯ ನೀಡಿ ಕವಿಜನ ಕಾಮಧೇನು ಎನಿಸಿಕೊಂಡು ಸಾಕಷ್ಟು ದಾನ ಮಾಡಿದ್ದಕ್ಕೆ ದಾನ ಚಿಂತಾಮಣಿ ಎಂಬ ಬಿರುದು ಪಡೆದಿದ್ದಳು.


    ಇದನ್ನೂ ಓದಿ: Gadag: ಹೊಲಕ್ಕಿಳಿದು ರೈತರಾಗುವ ಸ್ವಾಮೀಜಿ! ಸಮಗ್ರ ಕೃಷಿಯಲ್ಲೂ ಯಶಸ್ಸು


    ಹೂಗಳಿಗೂ ಫೇಮಸ್
    ಲಕ್ಕುಂಡಿಯ ಸುತ್ತಮುತ್ತಲೂ ಸೇವಂತಿಗೆ, ಮಲ್ಲಿಗೆ , ಕನಕಾಂಬರಿ ಹೂವುಗಳನ್ನು ಬೆಳೆಯುತ್ತಿದ್ದು ನೆರೆ ರಾಜ್ಯದ ವಿವಿಧ ಜಿಲ್ಲೆಗಳಿಗೂ ಸಹ ಬೇಡಿಕೆಯಿದೆ. ಹೂವಿನ ಬೆಳೆ ಬೆಳೆಯುವುದರಲ್ಲಿ ಲಕ್ಕುಂಡಿ ಪ್ರಸಿದ್ಧಿ ಪಡೆದಿದ್ದು ಪುಷ್ಪಕಾಶಿಯ ಪರಿಮಳವನ್ನು ನಾಡಿನಾದ್ಯಂತ ಬೀರಿದೆ.


    ಇದನ್ನೂ ಓದಿ: Lakkundi Utsava: ಲಕ್ಕುಂಡಿ ಉತ್ಸವಕ್ಕೆ ಸಕಲ ಸಿದ್ಧತೆ, ಕಾರ್ಯಕ್ರಮಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ


    ಲಕ್ಕುಂಡಿ ಉತ್ಸವದಲ್ಲಿ ಹತ್ತಾರು ವಿಶೇಷತೆ
    ಫೆಬ್ರುವರಿ 10, 11, 12 ಈ ಮೂರು ದಿನಗಳ ಕಾಲ ಲಕ್ಕುಂಡಿ ಉತ್ಸವ ಜರುಗಲಿದೆ.  ಹಿಂದಿನ ಪೀಳಿಗೆಯ ಸಾಂಸ್ಕೃತಿಕ ಮೌಲ್ಯಗಳನ್ನು ಸಂರಕ್ಷಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವುದು ಹಾಗೂ ಕಲಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಲಕ್ಕುಂಡಿ ಉತ್ಸವದ ಉದ್ದೇಶವಾಗಿದೆ. ಹೊರರಾಜ್ಯಗಳಿಂದ ಹಾಗೂ ಸ್ಥಳೀಯ ಕಲಾವಿದರುಗಳು , ಅತಿಥಿ ಗಣ್ಯರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದು ಕಲಾರಸಿಕರಿಗೆ ಇದು ಸಂತಸ ತರುವ ಉತ್ಸವವಾಗಲಿದೆ. ಫಲಪುಷ್ಪ ಪ್ರದರ್ಶನ, ಕೃಷಿ ಹಾಗೂ ಕವಿಗೋಷ್ಟಿಗಳು ಜರುಗಲಿದ್ದು ಶ್ರೋತೃಗಳ ಮನರಂಜಿಸಲಿವೆ.


    ವರದಿ: ಸಂತೋಷ ಕೊಣ್ಣೂರ, ನ್ಯೂಸ್ 18 ಕನ್ನಡ ಗದಗ

    Published by:ಗುರುಗಣೇಶ ಡಬ್ಗುಳಿ
    First published: