• Home
 • »
 • News
 • »
 • explained
 • »
 • Zika Virus: ಏನಿದು ಜಿಕಾ ವೈರಸ್? ಹೇಗೆ ಹರಡುತ್ತೆ? ಇದಕ್ಕೆ ಚಿಕಿತ್ಸೆ ಇದೆಯಾ? ಮಾಹಿತಿ ಇಲ್ಲಿದೆ..!

Zika Virus: ಏನಿದು ಜಿಕಾ ವೈರಸ್? ಹೇಗೆ ಹರಡುತ್ತೆ? ಇದಕ್ಕೆ ಚಿಕಿತ್ಸೆ ಇದೆಯಾ? ಮಾಹಿತಿ ಇಲ್ಲಿದೆ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇದುವರೆಗೆ ಈ ವೈರಸ್‌ನಿಂದ ಸಂರಕ್ಷಣೆ ಪಡೆಯಲು ಯಾವುದೇ ಲಸಿಕೆ ಬಂದಿಲ್ಲ. ಸೊಳ್ಳೆಗಳಿಂದ ಈ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸುವುದೇ ಇದನ್ನು ತಡೆಯುವ ವಿಧಾನವಾಗಿದೆ.

 • Share this:

ಪ್ರಸ್ತುತ ದೇಶದಲ್ಲಿ ಕೊರೋನಾ ನಂತರ ಜಿಕಾ ವೈರಸ್ ಹಾವಳಿ ದಿನೇ ದಿನೇ ಏರಿಕೆಯಾಗುತ್ತಿದ್ದು ಕಳವಳಕ್ಕೆ ಕಾರಣವಾಗಿದೆ. ಜನವರಿ 27, 2020 ರಂದು ಭಾರತದ ಮೊದಲ ಕೊರೋನಾ ವೈರಸ್ ಪಾಸಿಟಿವ್ ಕೇರಳದಲ್ಲಿ ದೊರಕಿತ್ತು. ಈಗ ದಕ್ಷಿಣದ ಈ ರಾಜ್ಯ ಜಿಕಾ ವೈರಸ್‌ ಕಾರಣಕ್ಕೆ ಸುದ್ದಿಯಲ್ಲಿದೆ.


ತಿರುವನಂತಪುರದಲ್ಲಿ ಜಿಕಾ ವೈರಸ್‌ನ 19 ಪ್ರಕರಣಗಳು ದೊರಕಿದ್ದು 24 ವರ್ಷದ ಗರ್ಭಿಣಿ ಕೂಡ ಈ ವೈರಸ್‌ಗೆ ತುತ್ತಾಗಿದ್ದಾರೆ. ಈ ವೈರಸ್‌ನ ಕಾರಣದಿಂದ ಹಲವಾರು ದೇಶಗಳಲ್ಲಿ ಸಣ್ಣ ತಲೆ ಮತ್ತು ವಿಕಸನಗೊಳ್ಳದಿರುವ ಮೆದುಳಿರುವ ಮಕ್ಕಳು ಜನ್ಮತಾಳುತ್ತಿದ್ದಾರೆ. ಕೇರಳದಲ್ಲಿ ಜಿಕಾ ವೈರಸ್‌ನ ಹರಡುವಿಕೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ನೆರೆಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.


ಕೇರಳದಲ್ಲಿ ಸೊಳ್ಳೆಗಳ ಕಡಿತದಿಂದ ಸಂರಕ್ಷಣೆ ಪಡೆಯಲು ಆಸ್ಪತ್ರೆಗಳಲ್ಲಿ ಹಾಗೂ ಮನೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇರಳ ಸರಕಾರ ಕೂಡ ಜನರ ಸಂರಕ್ಷಣೆಗಾಗಿ ಹಲವಾರು ಸುರಕ್ಷತಾ ಕ್ರಮಗಳನ್ನು ಜಾರಿ ಮಾಡಿದೆ. ಕೊರೋನಾದ ನಡುವೆ ಜಿಕಾ ವೈರಸ್‌ನ ಹಾವಳಿ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇರಳದಲ್ಲಿ ಹಾವಳಿ ಎಬ್ಬಿಸುತ್ತಿರುವ ಈ ಜಿಕಾ ವೈರಸ್ ಕುರಿತು ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳೋಣ.


ಇದನ್ನೂ ಓದಿ:ಸನ್ನಿ ಸಾವಿಗೆ ಕಣ್ಣೀರಾಕಿದ ಗೃಹ ಸಚಿವ ಬೊಮ್ಮಾಯಿ; ಜೀವದ ಗೆಳೆಯನಿಗೆ ಅಂತಿಮ ವಿದಾಯ !

ಜಿಕಾ ವೈರಸ್ ಎಂದರೇನು?


ಜಿಕಾ ಫ್ಲವಿವಿರಿಡೆ ಕುಟುಂಬಕ್ಕೆ ಸೇರಿದ ವೈರಸ್ ಆಗಿದೆ. ಡೆಂಗ್ಯೂ, ಹಳದಿ ಜ್ವರ, ಮೆದುಳು ಜ್ವರ (ಜಪಾನೀಸ್ ಎನ್ಸೆಫಾಲಿಟಿಸ್) ಹಾಗೂ ವೆಸ್ಟ್ ನೈಲ್ ವೈರಸ್ ಹರಡುವ ಈಡಿಸ್ ಜಾತಿಯ ಸೊಳ್ಳೆಗಳ ಕಡಿತದಿಂದ ಈ ವೈರಸ್ ಹರಡುತ್ತದೆ. ಜಿಕಾ ಹೆಸರು ಬಂದಿರುವುದು ಯುಗಾಂಡದ ಜಿಕಾ ಅರಣ್ಯದಿಂದ. 1947 ರಲ್ಲಿ ಇದೇ ಅರಣ್ಯದಲ್ಲಿ ಕೋತಿಗಳನ್ನು ಐಸೊಲೇಟ್ ಮಾಡಲಾಗಿತ್ತು. ನಂತರ 1952 ರಲ್ಲಿ ಯುಗಾಂಡ ಹಾಗೂ ತಾಂಜಿನಿಯಾದಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಕಂಡುಬಂದಿತು. 2007 ರಲ್ಲಿ, ಜಿಕಾ ವೈರಸ್ ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾದ ಯುಪ್ ದ್ವೀಪದಲ್ಲಿ ಹರಡಿತು. ನಂತರ, 2013 ರಲ್ಲಿ, ಫ್ರೆಂಚ್ ಪಾಲಿನೇಷ್ಯಾ ಮತ್ತು ಸುತ್ತಮುತ್ತಲಿನ ಸಣ್ಣ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿತು.


ಜಿಕಾ ವೈರಸ್ ಸೊಳ್ಳೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಿಧಾನದಿಂದ ಹರಡುತ್ತದೆಯೇ?


ಹೌದು ಸೊಳ್ಳೆಗಳ ಹೊರತಾಗಿ ಕೂಡ ಜಿಕಾ ವೈರಸ್ ಶಾರೀರಿಕ ಕ್ರಿಯೆಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದೇ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯಿಂದ ಆಕೆಯ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಹರಡಬಹುದು. ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (CDC) ಹೇಳಿರುವಂತೆ ಜಿಕಾ ವೈರಸ್ ರಕ್ತ ವರ್ಗಾವಣೆಯ ಮೂಲಕ ಕೂಡ ಹರಡಬಹುದು ಎಂದಾಗಿದೆ. ಆದರೆ ಇದು 100% ಖಾತ್ರಿಯಾಗಿಲ್ಲ.


ಜಿಕಾ ವೈರಸ್‌ನಿಂದ ಯಾವ ರೋಗ ಉಂಟಾಗುತ್ತದೆ? ಇದನ್ನು ಅಪಾಯಕಾರಿ ಎಂದು ಏಕೆ ಕರೆಯಲಾಗುತ್ತದೆ?


ಜಿಕಾ ವೈರಸ್‌ನಿಂದ ಮೈಕ್ರೋಸೆಫಾಲಿ ಕಾಯಿಲೆ ಉಂಟಾಗುವುದರಿಂದ ಇದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಗರ್ಭವತಿ ಮಹಿಳೆಯರು ಈ ವೈರಸ್‌ನ ದಾಳಿಗೆ ತುತ್ತಾಗುವುದರಿಂದ ಇದು ಅವರ ಮೂಲಕ ಹುಟ್ಟುವ ಮಗುವಿಗೆ ಹರಡುತ್ತದೆ. ಇದರಿಂದ ಗರ್ಭದಲ್ಲಿರುವ ಶಿಶು ಮೈಕ್ರೋಸೆಫಾಲಿ ಕಾಯಿಲೆ ತುತ್ತಾಗುತ್ತದೆ. ಹುಟ್ಟುವಾಗಲೇ ಮಗುವಿನ ತಲೆ ಇತರ ಮಕ್ಕಳ ತಲೆಗಿಂತ ಚಿಕ್ಕದಾಗಿರುತ್ತದೆ. ಮೈಕ್ರೋಸೆಫಾಲಿ ಕಾಯಿಲೆಗೆ ತುತ್ತಾದ ಮಕ್ಕಳ ಮೆದುಳು ಸರಿಯಾಗಿ ಬೆಳವಣಿಗೆಯಾಗಿರುವುದಿಲ್ಲ.


ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಬ್ರೆಜಿಲ್ ಸೇರಿದಂತೆ ಜಿಕಾ ಹರಡುವ ದೇಶಗಳಲ್ಲಿ Guillain-Barré syndrome ಕೂಡ ವೇಗವಾಗಿ ಹೆಚ್ಚಾಗಿದೆ. ಇದು ನರವೈಜ್ಞಾನಿಕ ಕಾಯಿಲೆಯಾಗಿದ್ದು ಇದರಿಂದ ಪಾರ್ಶ್ವವಾಯು ಮತ್ತು ಸಾವು ಉಂಟಾಗುತ್ತದೆ. ಯು.ಎಸ್. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಧ್ಯಯನದ ಪ್ರಕಾರ, Guillain-Barré syndrome ಹೊಂದಿರುವ ಜನರಲ್ಲಿ ಮರಣ ಪ್ರಮಾಣ 8.3% ಆಗಿದೆ.


ಇದನ್ನೂ ಓದಿ:Tungabhadra: ಜುಲೈ 18 ರಿಂದ ತುಂಗಾಭದ್ರಾ ನಾಲೆಗೆ ನೀರು ಬಿಡಲು ನಿರ್ಧಾರ; ರೈತರ ಮೊಗದಲ್ಲಿ ಸಂತಸ

ಜಿಕಾ ವೈರಸ್‌ನ ಲಕ್ಷಣವೇನು?


ಹೆಚ್ಚಿನ ಜನರಲ್ಲಿ ಈ ವೈರಸ್ ಯಾವುದೇ ಲಕ್ಷಣವನ್ನುಂಟು ಮಾಡುವುದಿಲ್ಲ. ಕೆಲವರಲ್ಲಿ ಇದು ಸೌಮ್ಯ ಲಕ್ಷಣವನ್ನು ಪ್ರದರ್ಶಿಸಿದೆ. ಅಂದರೆ ತಲೆನೋವು, ಕಣ್ಣು ಕೆಂಪಗಾಗುವುದು, ಜ್ವರ, ಚರ್ಮದ ಮೇಲೆ ಅಲ್ಲಲ್ಲಿ ದದ್ದುಗಳು, ಮೈಕೈ ನೋವು, ಮಾಂಸಖಂಡಗಳ ಸೆಳೆತ, ಕೀಲು ನೋವು ಇತ್ಯಾದಿ.


ಜಿಕಾ ವೈರಸ್‌ ಲಕ್ಷಣಗಳು ಎಷ್ಟು ದಿನಗಳವರೆಗೆ ಇರುತ್ತದೆ?


ಜಿಕಾ ವೈರಸ್‌ ಲಕ್ಷಣಗಳು ಏಳು ದಿನಗಳವರೆಗೆ ಇರುತ್ತದೆ. ಅದರಿಂದ ಆಸ್ಪತ್ರೆಗೆ ಸೇರಬೇಕಾದ ಅನಿವಾರ್ಯತೆ ಉಂಟಾಗುವುದಿಲ್ಲ ಮತ್ತು ಸಾವಿನ ಪ್ರಮಾಣ ತುಂಬಾ ಕಡಿಮೆ ಇದೆ. ಕೆಲವು ಜನರಿಗೆ ಈ ವೈರಸ್ ಅವರ ದೇಹದಲ್ಲಿರುವುದು ಕೂಡ ಅರಿವಿಗೆ ಬರುವುದಿಲ್ಲ.


ವೈದ್ಯರಲ್ಲಿ ತಪಾಸಣೆಯನ್ನು ಯಾವಾಗ ನಡೆಸಬೇಕು?


ನಿಮ್ಮಲ್ಲಿ ಜಿಕಾ ವೈರಸ್ ಲಕ್ಷಣಗಳಿದ್ದರೆ ಹಾಗೂ ಜಿಕಾ ವೈರಸ್ ಇರುವ ಸ್ಥಳಗಳಿಗೆ ಭೇಟಿ ನೀಡಿದ್ದರೆ ನೀವು ವೈದ್ಯರನ್ನು ಕಾಣಬೇಕು. ಅಂತೆಯೇ ನೀವು ಗರ್ಭಿಣಿಯಾಗಿದ್ದರೆ ಕೂಡ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ. ನಿಮ್ಮ ಪ್ರಯಾಣದ ವಿವರಗಳನ್ನು ವೈದ್ಯರಿಗೆ ತಿಳಿಸುವುದು ಅಗತ್ಯವಾಗಿದೆ.


ಜಿಕಾ ವೈರಸ್‌ಗಾಗಿ ಯಾವುದಾದರೂ ಲಸಿಕೆ ಇದೆಯೇ?


ಇದುವರೆಗೆ ಈ ವೈರಸ್‌ನಿಂದ ಸಂರಕ್ಷಣೆ ಪಡೆಯಲು ಯಾವುದೇ ಲಸಿಕೆ ಬಂದಿಲ್ಲ. ಸೊಳ್ಳೆಗಳಿಂದ ಈ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸುವುದೇ ಇದನ್ನು ತಡೆಯುವ ವಿಧಾನವಾಗಿದೆ.


ಮಕ್ಕಳನ್ನು ಈ ವೈರಸ್‌ನಿಂದ ಕಾಪಾಡುವುದು ಹೇಗೆ?
 • ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಫುಲ್ ಸ್ಲೀವ್ ಶರ್ಟ್ ಹಾಗೂ ಪ್ಯಾಂಟ್ ಧರಿಸಿ

 • ಎಸಿ ಇರುವ ಸ್ಥಳದಲ್ಲಿರಿ ಹಾಗೆಯೇ ಕಿಟಕಿ, ಬಾಗಿಲುಗಳಿಗೆ ಸೊಳ್ಳೆ ಪರದೆಯನ್ನು ಹಾಕಿ

 • ಮನೆಯೊಳಗೆ ಸೊಳ್ಳೆಯಿಂದ ರಕ್ಷಣೆ ಪಡೆಯುವ ವಿಧಾನಗಳನ್ನು ಅನುಸರಿಸಿ. ನೀರು ಎಲ್ಲಿಯೂ ಸಂಗ್ರಹವಾಗದಂತೆ ನೋಡಿಕೊಳ್ಳಿ

 • ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಸುರಕ್ಷಿತವಾದ ಸೊಳ್ಳೆ ನಿವಾರಕಗಳನ್ನು ಬಳಸಿ

 • ಎರಡು ತಿಂಗಳಿಗಿಂತ ಕಡಿಮೆ ವಯಸ್ಸಿನ ನವಜಾತ ಶಿಶುಗಳಿಗೆ ಸೊಳ್ಳೆ ನಿವಾರಕಗಳನ್ನು ಬಳಸಬೇಡಿ. ಸಣ್ಣ ಮಕ್ಕಳಿಗೆ ಸೊಳ್ಳೆ ಪರದೆಗಳನ್ನು ಬಳಸಿ.

 • ಕೊಠಡಿಯಲ್ಲಿ ಎಸಿ, ಕಿಟಕಿ ಬಾಗಿಲುಗಳಿಗೆ ಸೊಳ್ಳೆ ಜಾಲರಿ ಇಲ್ಲದಿದ್ದರೆ ಸೊಳ್ಳೆ ಪರದೆ ಉಪಯೋಗಿಸಿ.

 • ಜಿಕಾ ವೈರಸ್ ಪ್ರಕರಣಗಳಿರುವ ಪ್ರದೇಶಗಳಿಗೆ ಪ್ರಯಾಣಿಸಬೇಡಿ


ಜಿಕಾ ವೈರಸ್ ದಾಳಿಗೆ ತುತ್ತಾದರೆ ಏನು ಮಾಡಬೇಕು?
 • ಈ ವೈರಸ್‌ಗೆ ಸೂಕ್ತ ಔಷಧಿಯಿಲ್ಲ. ಆದರೆ ಇದರ ಲಕ್ಷಣಗಳನ್ನು ಗುಣಪಡಿಸಬಹುದು

 • ಪೂರ್ಣ ವಿಶ್ರಾಂತಿಯನ್ನು ತೆಗೆದುಕೊಳ್ಳಿ

 • ಡಿಹೈಡ್ರೇಶನ್‌ನಿಂದ ರಕ್ಷಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಿರಿ

 • ಜ್ವರ, ಮೈಕೈ ನೋವಿನಿಂದ ರಕ್ಷಣೆ ಪಡೆಯಲು ಪ್ಯಾರಸಿಟಮಲ್ ಮಾತ್ರೆ ತೆಗೆದುಕೊಳ್ಳಬಹುದು.

 • ಆಸ್ಪಿರಿನ್‌ ಅಥವಾ NSAID ಔಷಧಿಗಳನ್ನು ತೆಗೆದುಕೊಳ್ಳಬೇಡಿ

 • ಸೊಳ್ಳೆಗಳ ಕಡಿತದಿಂದ ರಕ್ಷಣೆ ಪಡೆದುಕೊಳ್ಳಿ


ಜಿಕಾ ವೈರಸ್ ರೋಗಿಯ ಶುಶ್ರೂಷೆ ಮಾಡುವವರು (ಕುಟುಂಬ ಸದಸ್ಯರು) ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
 • ದೇಹದ ಯಾವುದೇ ದ್ರವಗಳಿಂದ ಅಂದರೆ ರಕ್ತ, ಲಾಲಾರಸ, ವೀರ್ಯದ ಸಂಪರ್ಕಕ್ಕೆ ಇತರರು ಬರದಂತೆ ನೋಡಿಕೊಳ್ಳಿ

 • ಸುರಕ್ಷಿತವಲ್ಲದ ಶಾರೀರಿಕ ಸಂಪರ್ಕವನ್ನು ಹೊಂದದಿರಿ

 • ನಿಮ್ಮನ್ನು ಮತ್ತು ನಿಮ್ಮವರನ್ನು ಸೊಳ್ಳೆಗಳಿಂದ ರಕ್ಷಿಸಿ. ಸೊಳ್ಳೆಪರದೆಗಳನ್ನು ಬಳಸಿ ಕಿಟಕಿ, ಬಾಗಿಲುಗಳಲ್ಲಿ ಸೊಳ್ಳೆಜಾಲರಿಗಳನ್ನು ಅಳವಡಿಸಿ

 • ಮನೆಯಲ್ಲಿ ಗರ್ಭಿಣಿಯರಿದ್ದರೆ ಅವರನ್ನು ಸೊಳ್ಳೆಗಳಿಂದ ಸಂರಕ್ಷಿಸಿ ಹಾಗೂ ಜಿಕಾ ವೈರಸ್‌ ಇರುವ ವ್ಯಕ್ತಿಯಿಂದ ಪ್ರತ್ಯೇಕವಾಗಿರಿಸಿ.


ಜಿಕಾ ವೈರಸ್ ಸೋಂಕಿತರನ್ನು ಆರೈಕೆ ಮಾಡುವವರು ತಮ್ಮನ್ನು ಸೋಂಕಿನಿಂದ ಹೇಗೆ ರಕ್ಷಿಸಿಕೊಳ್ಳಬೇಕು?
 • ಸೋಂಕಿತರ ರಕ್ತ ಮತ್ತು ದೇಹದ ಇತರ ದ್ರವಗಳನ್ನು ಬರಿಕೈಗಳಿಂದ ಸ್ಪರ್ಶಿಸದಿರಿ

 • ಕೈಗವಸುಗಳ ಬಳಕೆಯನ್ನು ಕಡ್ಡಾಯವಾಗಿ ಮಾಡಿ

 • ರೋಗಿಯ ಆರೈಕೆ ನಂತರ ಕೈಗಳನ್ನು ಸೋಪು ಹಾಗೂ ನೀರಿನಿಂದ ಚೆನ್ನಾಗಿ ತೊಳೆಯಿರಿ

 • ನಿಮ್ಮ ಬಟ್ಟೆಯು ರಕ್ತ ಅಥವಾ ಇತರ ದ್ರವಗಳ ಸಂಪರ್ಕಕ್ಕೆ ಬಂದಲ್ಲಿ ಬಟ್ಟೆಯನ್ನು ಡಿಟರ್ಜೆಂಟ್ ಬಳಸಿ ಒಗೆದು ಬಿಸಿಲಿನಲ್ಲಿ ಒಣಗಿಸಿ.

 • ಸೋಂಕಿತರ ರಕ್ತ ಅಥವಾ ದೇಹದ ಇತರ ದ್ರವ ಬಿದ್ದ ಸ್ಥಳವನ್ನು ಸೋಂಕು ನಿವಾರಕದಿಂದ ತಕ್ಷಣ ಸ್ವಚ್ಛಗೊಳಿಸಿ.ಭಾರತದಲ್ಲಿ ಈ ಹಿಂದೆ ಕೂಡ ಜಿಕಾ ವೈರಸ್ ಹರಡಿತ್ತೇ?


ಭಾರತದಲ್ಲಿ ಜಿಕಾ ವೈರಸ್‌ನ ಮೊದಲ ಪ್ರಕರಣ 1952-53 ರಲ್ಲಿ ಪತ್ತೆಯಾಗಿತ್ತು. ಕಳೆದ ಬಾರಿ 2018 ರಲ್ಲಿ ರಾಜಸ್ಥಾನದಲ್ಲಿ ಜಿಕಾ ವೈರಸ್‌ನ 80 ಕೇಸ್‌ಗಳು ಪತ್ತೆಯಾಗಿತ್ತು. ಇನ್ನು ಮೇ 2017 ರಲ್ಲಿ ಗುಜರಾತ್‌ನ ಅಹ್ಮದಾಬಾದ್ ಜಿಲ್ಲೆಯ ಬಾಪೂನಗರದಲ್ಲಿ 3 ಕೇಸ್‌ಗಳು ದೊರಕಿತ್ತು. ಇದೇ ರೀತಿ 2017 ರಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಒಂದು ಕೇಸ್ ದೊರಕಿತ್ತು.

Published by:Latha CG
First published: