Explained: 1G ಯಿಂದ 5G ವರೆಗಿನ ಜಗತ್ತು ಹೇಗಿದೆ ಗೊತ್ತಾ? ಭಾರತದಲ್ಲಿ 6G ಲಾಂಚ್‌ ಯಾವಾಗ?

ಇದೇ ಮೇ 17ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ಮೊದಲ 5G ಪರೀಕ್ಷೆಗೆ ಚಾಲನೆ ನೀಡಿದ್ದಾರೆ. ಅದಲ್ಲದೇ ಈ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ 6G ಸೇವೆ ಜಾರಿ ತರುವ ಬಗ್ಗೆಯೂ ಮಾತುಗಳನ್ನಾಡಿದ್ದಾರೆ. ಈ ಹಿಂದಿನ 1G, 2G, 3G, 4G ತರಂಗಾಂತರ ತಂತ್ರಜ್ಞಾನ ಹಾಗೂ ಟೆಲಿಕಾಂ ಕ್ಷೇತ್ರದ ಮುಂದಿನ ಭವಿಷ್ಯದ ಸಂಪೂರ್ಣ ವಿವರಣೆ ಇಲ್ಲಿದೆ.

6G ತಂತ್ರಜ್ಞಾನ

6G ತಂತ್ರಜ್ಞಾನ

  • Share this:
ಇದೇ ಮೇ 17ಕ್ಕೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ದೇಶದ ಮೊದಲ 5G ಪರೀಕ್ಷೆಗೆ ಚಾಲನೆ ನೀಡಿದ್ದಾರೆ. ಅದಲ್ಲದೇ ಈ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ 6G ಸೇವೆ ಜಾರಿ ತರುವ ಬಗ್ಗೆಯೂ ಮಾತುಗಳನ್ನಾಡಿದ್ದಾರೆ. ಅದರ ಜೊತೆ ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್‌ (Electronics) ಮತ್ತು ಮಾಹಿತಿ ತಂತ್ರಜ್ಞಾನ (Information Technology) ಸಚಿವ ಅಶ್ವಿನಿ ವೈಷ್ಣವ್‌ ಮೇ 19ರಂದು ಐಐಟಿ ಮದ್ರಾಸ್‌ನಲ್ಲಿ 5G ಕರೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಆತ್ಮನಿರ್ಭರ 5G ಎಂದು ಕರೆದಿದ್ದಾರೆ. ದೇಶ ಈಗ 4G ಯಿಂದ 5Gಗೆ ಪಥ ಬದಲಿಸುತ್ತಿದೆ.

ಟೆಲಿಕಾಂ ಕ್ಷೇತ್ರ ಕಾಲ ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದುತ್ತಾ ಬಂದಿದ್ದು, 1G ಯಿಂದ 5G ವರೆಗೂ ಟೆಲಿಕಾ ತಂತ್ರಜ್ಞಾನವು ಮನುಷ್ಯರು ಪರಸ್ಪರ ಹಾಗೂ ಅವರ ಸುತ್ತಲಿರುವ ಪ್ರಪಂಚದೊಂದಿಗೆ ಸಂವಹನ ನಡೆಸುವ ವಿಧಾನವನ್ನು ಬದಲಾಯಿಸುತ್ತಾ ಬಂದಿದೆ. ಈಗ ಭಾರತದಲ್ಲಿ 5Gಗೆ ಚಾಲನೆ ಸಿಗುತ್ತಿದ್ದು, ಈ ಹಿಂದಿನ 1G, 2G, 3G, 4G ತರಂಗಾಂತರ ತಂತ್ರಜ್ಞಾನ ಹಾಗೂ ಟೆಲಿಕಾಂ ಕ್ಷೇತ್ರದ ಮುಂದಿನ ಭವಿಷ್ಯದ ಸಂಪೂರ್ಣ ವಿವರಣೆ ಇಲ್ಲಿದೆ.

1G ತಂತ್ರಜ್ಞಾನ
1970ರ ದಶಕದ ಅಂತ್ಯದಲ್ಲಿ ಜಪಾನ್‌ನಲ್ಲಿ ಮೊಬೈಲ್‌ ದೂರಸಂಪರ್ಕ ತಂತ್ರಜ್ಞಾನದ ಮೊದಲ ಆವೃತ್ತಿ 1G ಸೇವೆಗೆ ಚಾಲನೆ ನೀಡಲಾಗಿತ್ತು. 1G ತಂತ್ರಜ್ಞಾನದಲ್ಲಿ ಕೇವಲ ವಾಯ್ಸ್‌ ಕರೆಗಳಿಗೆ ಮಾತ್ರ ಅವಕಾಶ ಇತ್ತು. ಅದು ಕೂಡ ಕಡಿಮೆ ಧ್ವನಿ ಗುಣಮಟ್ಟ, ಕಡಿಮೆ ಕವರೇಜ್‌ ಹಾಗೂ ಯಾವುದೇ ರೋಮಿಂಗ್ ಬೆಂಬಲವನ್ನು ಹೊಂದಿದ್ದಿಲ್ಲ.

2G ತಂತ್ರಜ್ಞಾನ
ಟೆಲಿಕಾಂ ಕ್ಷೇತ್ರದಲ್ಲಿ 90ರ ದಶಕದ ಆರಂಭದಲ್ಲಿ ಮಹತ್ವದ ಬದಲಾವಣೆ ಆಯಿತು. 1991ರಲ್ಲಿ ಟೆಲಿಕಾಂ ತಂತ್ರಜ್ಞಾನ 1G ಯಿಂದ 2Gಗೆ ಜಿಗಿಯಿತು. ಇದರಿಂದ 1Gಯ ಅನಲಾಗ್‌ ಸಂಕೇತಗಳು ಸಂಪೂರ್ಣವಾಗಿ ಡಿಜಿಟಲ್‌ ಆಗಿ ಬದಲಾದವು. CDMA ಮತ್ತು GSM ಪರಿಕಲ್ಪನೆಗಳನ್ನು ಪರಿಚಯಿಸುವುದರ ಹೊರತಾಗಿಯೂ 2G ನೆಟ್‌ವರ್ಕ್‌ ಬಳಕೆದಾರರಿಗೆ ರೋಮಿಂಗ್‌ಗೆ ಅವಕಾಶ ನೀಡಿತು. ಅದಲ್ಲದೇ SMS ಮತ್ತು MMSನಂತಹ ಸಣ್ಣ ಡೇಟಾ ಸೇವೆಗಳನ್ನು ಗರಿಷ್ಠ 50 kbps ವೇಗದಲ್ಲಿ ನೀಡಿತು. ವಾಯ್ಸ್‌ ಕಾಲ್‌ ಮೇಲೆ ಗಮನಹರಿಸುತ್ತಿರುವಾಗಲೇ ಡೇಟಾ ಸೇವೆಯನ್ನು ಕೂಡ 2Gಯಲ್ಲಿ ಪರಿಚಯಿಸಲಾಯಿತು.

ಇದನ್ನೂ ಓದಿ:   Call Recording: ಯಾರಾದರೂ ನಿಮ್ಮ ಕರೆ ಕದ್ದು ರೆಕಾರ್ಡ್​ ಮಾಡುತ್ತಿದ್ದಾರಾ? ಹೀಗೆ ತಿಳಿಯಿರಿ

ಈಗಾಗಲೇ ಪ್ರಪಂಚದ ಅನೇಕ ಭಾಗಗಳಲ್ಲಿ 2G ನೆಟ್‌ವರ್ಕ್‌ ಸೇವೆಯನ್ನು ಅಂತ್ಯಗೊಳಿಸಲಾಗುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ಈಗಲೂ 2G ಸೇವೆ ತನ್ನ ಜನಪ್ರಿಯತೆಯನ್ನು ಮುಂದುವರಿಸಿದೆ. ದೇಶದ ಪ್ರಮುಖ ನೆಟ್‌ವರ್ಕ್‌ ಸೇವಾ ಪೂರೈಕೆದಾರ ರಿಲಾಯನ್ಸ್‌ ಜಿಯೋ ಕಳೆದ ವರ್ಷ '2G ಮುಕ್ತ ಭಾರತ'ದ ಗುರಿಯನ್ನು ಘೋಷಿಸಿತ್ತು. ಏಕೆಂದರೆ, 300 ಮಿಲಿಯನ್‌ಗೂ ಹೆಚ್ಚು ಚಂದಾದಾರರು ಇನ್ನೂ 2G ನೆಟ್‌ವರ್ಕ್‌ ಅನ್ನೇ ಬಳಸುತ್ತಿರುವುದು ಜಿಯೋದ ಅಭಿಯಾನಕ್ಕೆ ಸಾಕ್ಷಿಯಾಗಿದೆ.

ಜಗತ್ತಲ್ಲಿ 3G ಕ್ರಾಂತಿ
21ನೇ ಶತಮಾನದ ಆರಂಭದಲ್ಲಿಯೇ ಮೊಬೈಲ್‌ ತಂತ್ರಜ್ಞಾನ ಮತ್ತೊಂದು ಪಥಕ್ಕೆ ಬದಲಾಯಿತು. 2001ರಲ್ಲಿ 3G ಸೇವೆಗಳನ್ನು ಪರಿಚಯಿಸುವುದರೊಂದಿಗೆ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಶಕೆ ಶುರುವಾಯಿತು. 3G ನೆಟ್‌ವರ್ಕ್‌ ಮೊಬೈಲ್ ಇಂಟರ್‌ನೆಟ್‌ಗೆ ಪ್ರವೇಶ ನೀಡುವುದಲ್ಲದೇ ನಾಲ್ಕು ಪಟ್ಟು ವೇಗದ ಡೇಟಾ ಪ್ರಸರಣದ ಭರವಸೆಯನ್ನು ಕೂಡ ನೀಡಿತು. ಮೊಬೈಲ್ ಫೋನ್‌ಗಳಿಗೆ ಇಮೇಲ್‌, ನ್ಯಾವಿಗೇಷನಲ್ ಮ್ಯಾಪ್‌ಗಳು, ವಿಡಿಯೋ ಕಾಲ್‌, ವೆಬ್ ಬ್ರೌಸಿಂಗ್ ಮತ್ತು ಸಂಗೀತವನ್ನು 3G ತಂತ್ರಜ್ಞಾನ ಅಳವಡಿಸಿತು.

ಈ ತಲೆಮಾರಿನ ವೇಳೆ ಬ್ಲ್ಯಾಕ್‌ಬೆರ್ರಿ ಫೋನ್‌ಗಳು ಟ್ರೆಂಡ್‌ ಆದವು. ಬಳಿಕ 2008ರಲ್ಲಿ ಆಪಲ್‌ ಸಂಸ್ಥಾಪಕ ಸ್ಟೀವ್‌ ಜಾಬ್ಸ್‌ iPhone 3G ಯನ್ನು ಪ್ರಾರಂಭಿಸುವುದರೊಂದಿಗೆ ಜಗತ್ತಿಗೆ ‘ಆಪ್‌ ಸ್ಟೋರ್‌’ ಅನ್ನು ಪರಿಚಯಿಸಿದರು. 3G ಪರಿಚಯವಾಗಿ ಈಗಾಗಲೇ 2 ದಶಕ ಕಳೆದಿದ್ದು, ಕೆಲವೇ ವರ್ಷಗಳಲ್ಲಿ 3G ಸೇವೆಯನ್ನು ಆಪಲ್‌ ತನ್ನ ಸಾಧನಗಳಿಂದ ಕೈಬಿಡುವ ಬಗ್ಗೆ ಚಿಂತನೆ ನಡೆಸುತ್ತಿದೆ.

4G ಪ್ರಪಂಚ
2010ರಲ್ಲಿ ಜಗತ್ತು 3G ಯಿಂದ 4Gಗೆ ದಾಪುಗಾಲು ಇಟ್ಟಿತು. ಹೆಚ್ಚಿನ ವೇಗ, ಉತ್ತಮ ಗುಣಮಟ್ಟ, ಹೆಚ್ಚಿನ ಸಾಮರ್ಥ್ಯದ ವಾಯ್ಸ್‌ ಮತ್ತು ಡೇಟಾ ಸೇವೆಗಳನ್ನು ಪ್ರಪಂಚಕ್ಕೆ 4G ತಂತ್ರಜ್ಞಾನ ನೀಡಿತು. 3G ನೆಟ್‌ವರ್ಕ್‌ಗಿಂತ 4G ನೆಟ್‌ವರ್ಕ್‌ ಐದರಿಂದ ಏಳು ಪಟ್ಟು ಹೆಚ್ಚಿನ ವೇಗ ಹೊಂದಿದೆ. ಈಗ ನಾವೆಲ್ಲಾ 4G ನೆಟ್‌ವರ್ಕ್‌ ಅನ್ನು ಬಳಸುತ್ತಿದ್ದೇವೆ. 3G ಸೇವೆಗೆ ಹೋಲಿಸಿದರೆ, 4G ನೆಟ್‌ವರ್ಕ್‌ ವೇಗವಾಗಿದ್ದು, ವಿನಂತಿಗಳಿಗೆ ತ್ವರಿತ ಪ್ರತಿಕ್ರಿಯೆಯನ್ನು ನೀಡುತ್ತಿದೆ. ಇದು ನಮ್ಮ ಫೋನ್‌ಗಳನ್ನು ಕೈಯಲ್ಲಿ ಹಿಡಿಯುವ ಕಂಪ್ಯೂಟರ್‌ಗಳಂತೆ ಮಾಡಿದೆ.

5G ಭರವಸೆ
4G ಬಳಿಕ 5G ನೆಟ್‌ವರ್ಕ್‌ ಕಡೆ ಜಗತ್ತು ಪಯಣಿಸುತ್ತಿದ್ದು, ಇನ್ನೇನು ಕೆಲವೇ ವರ್ಷಗಳಲ್ಲಿ ಭಾರತ ಕೂಡ 5G ತಂತ್ರಜ್ಞಾನವನ್ನು ಹೊಂದಿರಲಿದೆ. ಇದು ಅತಿ ವೇಗದ ತಂತ್ರಜ್ಞಾನವಾಗಿದ್ದು, 4G ನೆಟ್‌ವರ್ಕ್‌ನ 50 ಮಿಲಿ ಸೆಕೆಂಡ್‌ಗಳಿಗೆ ಹೋಲಿಸಿದರೆ 5G ಕೇವಲ ಒಂದು ಮಿಲಿ ಸೆಕೆಂಡ್‌ ತಂತ್ರಜ್ಞಾನದ ವಿಳಂಬತೆಯನ್ನು ಹೊಂದಿದೆ ಎಂಬ ಭರವಸೆಯನ್ನು ನೀಡುತ್ತದೆ. MIT ಟೆಕ್ನಾಲಜಿ ರಿವ್ಯೂ ಪ್ರಕಾರ 5G ಸಾಧನಗಳು ಕಡಿಮೆ ಶಕ್ತಿಯನ್ನು ಬಳಸುತ್ತವೆ. ಇದು ಸಾಧನಗಳ ಬ್ಯಾಟರಿ ಅವಧಿಯನ್ನು ಕೂಡ ಹಲವು ಬಾರಿ ಹೆಚ್ಚಿಸುತ್ತದೆ ಎನ್ನಲಾಗಿದೆ.

5G ಅತಿ ಹೆಚ್ಚಿನ ಡೌನ್‌ಲೋಡ್ ವೇಗ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದ್ದು, ಅದರ ಜೊತೆ, ಸೆಲ್ಯುಲಾರ್ ಬ್ಯಾಂಡ್‌ವಿಡ್ತ್ ಹೆಚ್ಚಳ, ಮಿಂಚಿನ ವೇಗ ಮತ್ತು ಕಡಿಮೆ ವಿಳಂಭತೆಯನ್ನು ಹೊಂದಿರಲಿದೆ. ಜೊತೆಗೆ ಹಲವಾರು ಸಾಧನಗಳನ್ನು ಪರಸ್ಪರ ಸಂಪರ್ಕಿಸಲು ಮತ್ತು ದೂರದಿಂದಲೇ ನಿಯಂತ್ರಿಸಲು ಸುಲಭವಾಗಿಸುವ ಮೂಲಕ 'ಇಂಟರ್ನೆಟ್ ಆಫ್ ಥಿಂಗ್ಸ್' ಅನ್ನು ಹೆಚ್ಚಿಸಲು 5G ನೆಟ್‌ವರ್ಕ್‌ ಭರವಸೆ ನೀಡುತ್ತದೆ.

ಇದನ್ನೂ ಓದಿ:   Jio Phone Nextನ ಸೀಮಿತ ಅವಧಿಯ 'ಎಕ್ಸ್‌ಚೇಂಜ್ ಟು ಅಪ್‌ಗ್ರೇಡ್' ಕೊಡುಗೆ

ಭವಿಷ್ಯದ 5G ಪ್ರಪಂಚವು ಸ್ಮಾರ್ಟ್ ಸಿಟಿ ಮೂಲ ಸೌಕರ್ಯ, ಸ್ವಯಂ-ಚಾಲನಾ ಕಾರುಗಳು ಮತ್ತು ರೊಬೊಟಿಕ್ ಶಸ್ತ್ರಚಿಕಿತ್ಸೆಗಳನ್ನು ಬಳಸುತ್ತದೆ. ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಕೆನಡಾ ಸೇರಿ ಹಲವು ರಾಷ್ಟ್ರಗಳಲ್ಲಿ 5G ಸೇವೆಯನ್ನು ಹೊರತರಲಾಗುತ್ತಿದೆ. ಹಾಗೂ ಶೀಘ್ರದಲ್ಲೇ ಭಾರತದಲ್ಲಿ ಕೂಡ 5G ನೆಟ್‌ವರ್ಕ್‌ ಅನ್ನು ನಿರೀಕ್ಷಿಸಲಾಗಿದೆ. ಅಲ್ಲದೇ, ಈ ಮುಂದಿನ ಪೀಳಿಗೆಯ ತಾಂತ್ರಿಕ ಶಕ್ತಿಯಾದ 5Gಯನ್ನು ಪಡೆಯಲು ವಿಶ್ವದ ಪ್ರಮುಖ ಶಕ್ತಿಗಳು ಸ್ಪರ್ಧೆ ಮಾಡುತ್ತಿರುವುದು ಕುತೂಹಲ.

ಭವಿಷ್ಯದ 'G' ತಂತ್ರಜ್ಞಾನ!
ಮುಂದೆ ಬರುವ G ತಂತ್ರಜ್ಞಾನಗಳು ಈಗಿನಂತೆ ನಾವು ನೀವು ಕಾರ್ಯನಿರ್ವಹಿಸುವ ತಂತ್ರಜ್ಞಾನವಲ್ಲ. 6G ಮಾತ್ರ 5G ಮಾಡಬೇಕಾದುದನ್ನು ಉತ್ತಮವಾಗಿ ಮಾಡಲು ಭರವಸೆ ನೀಡುತ್ತದೆ. ಆದರೆ, 6G ಬಳಿಕ ಬರುವ 'ಭವಿಷ್ಯದ Gಗಳು' ಕೇವಲ ನಿಮ್ಮ ಫೋನ್‌ಗೆ ಸಂಬಂಧಿಸಿರುವುದಿಲ್ಲ. ಮುಂದಿನ ʼG’ಗಳಲ್ಲಿ ತಜ್ಞರು ಯಾವುದೇ ವಿಳಂಬವಿಲ್ಲದೇ ಸಂವಹನ ವೆಬ್‌ ಮೂಲಕ ರಿಮೋಟ್ ಶಸ್ತ್ರಚಿಕಿತ್ಸೆಯನ್ನು ಮಾಡಲು ಸಾಧ್ಯವಾಗುತ್ತದೆ. ಹೊಲೊಗ್ರಾಮ್ ತಂತ್ರಜ್ಞಾನ ಬಳಸಿಕೊಂಡು ಬೀಮ್ ಕ್ರೀಡಾ ಕಾರ್ಯಕ್ರಮಗಳನ್ನು ಸಹ ಲೈವ್ ಮಾಡಲಾಗುತ್ತದೆ.

6G ಕುರಿತು 2020ರಲ್ಲಿ ಪ್ರಕಟವಾದ ಶ್ವೇತ ಪತ್ರಿಕೆಯಲ್ಲಿ (ಪ್ರತಿಯೊಬ್ಬರಿಗೂ ಮುಂದಿನ ಅತಿ ವೇಗದ ಸಂಪರ್ಕ ಅನುಭವ) ಸ್ಯಾಮ್‌ಸಂಗ್ ಹೇಳಿರುವಂತೆ, “6G ಸೇವೆಯ ಮಾನದಂಡವನ್ನು ಪೂರ್ಣಗೊಳಿಸುವುದು ಮತ್ತು ಅದರ ವಾಣಿಜ್ಯೀಕರಣದ 2028ರಷ್ಟು ಮುಂಚೆಯೇ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ, ಸಾಮೂಹಿಕವಾಗಿ ಅದನ್ನು ಜಗತ್ತಿಗೆ ಪರಿಚಯಿಸಲು 2030ರವರೆಗೂ ಕಾಯಬೇಕಾಗುತ್ತದೆ” ಎಂದು ತಿಳಿಸಿದೆ.

"ಮನುಷ್ಯರು ಮತ್ತು ಯಂತ್ರಗಳು ಇಬ್ಬರು ಕೂಡ 6Gಯ ಪ್ರಮುಖ ಬಳಕೆದಾರರಾಗಿರುತ್ತಾರೆ. ವಿಸ್ತೃತ ರಿಯಾಲಿಟಿ (XR), ಹೈ-ಫಿಡೆಲಿಟಿ ಮೊಬೈಲ್ ಹೊಲೊಗ್ರಾಮ್ ಮತ್ತು ಡಿಜಿಟಲ್ ಪ್ರತಿಕೃತಿಯಂತಹ ಸುಧಾರಿತ ಸೇವೆಗಳನ್ನು ಒದಗಿಸುವ ಮೂಲಕ 6G ಸೇವೆಯನ್ನು ನಿರೂಪಿಸಲಾಗಿದೆ" ಎಂದು ಸ್ಯಾಮ್‌ಸಂಗ್‌ ಹೇಳಿದೆ.

ಭಾರತದ 5G ಟೆಸ್ಟ್‌ಬೆಡ್ ಮತ್ತು 6G ಗುರಿ!
ಮೇ 17ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 220 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಭಾರತದ ಮೊದಲ 5G ಟೆಸ್ಟ್‌ಬೆಡ್‌ಗೆ ಚಾಲನೆ ನೀಡಿದ್ದಾರೆ. ಇದು ಸ್ಟಾರ್ಟ್‌ಅಪ್‌ಗಳು ಮತ್ತು ವಿವಿಧ ಕೈಗಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಪರೀಕ್ಷಿಸಲು ಮತ್ತು ಅವುಗಳನ್ನು 5Gಗೆ ಸಿದ್ಧಗೊಳಿಸಲು ಅವಕಾಶ ನೀಡುತ್ತದೆ. ಇಲ್ಲಿಯವರೆಗೂ ಈ ಪರೀಕ್ಷೆಯನ್ನು ವಿದೇಶದಲ್ಲಿ ಮಾತ್ರ ಮಾಡಲಾಗುತ್ತಿತ್ತು.

ಇದನ್ನೂ ಓದಿ:   Smartphone Cover: 4G ಸ್ಮಾರ್ಟ್​ಫೋನ್​ ಬಳಕೆದಾರರೇ, ಈ ಕವರ್​ ಅಳವಡಿಸಿದರೆ 5G ನೆಟ್​​ವರ್ಕ್​ ಸಿಗುತ್ತದೆ!

5G ಟೆಸ್ಟ್‌ಬೆಡ್ ಐಐಟಿ-ಮದ್ರಾಸ್ ನೇತೃತ್ವದ ಎಂಟು ಸಂಸ್ಥೆಗಳನ್ನು ಒಳಗೊಂಡಿರುವ ಸಹಕಾರಿ ಯೋಜನೆಯಾಗಿದೆ. ಭಾರತವು 2030ರ ವೇಳೆಗೆ 6G ಅನ್ನು ಹೊರತರಲು ಯೋಜಿಸಿದ್ದು, ಆ ದಿಕ್ಕಿನಲ್ಲಿ ಕಾರ್ಯಪಡೆಯು ಕಾರ್ಯನಿರ್ವಹಿಸುತ್ತಿದೆ. ಸಂಪರ್ಕವು 21 ನೇ ಶತಮಾನದ ಭಾರತದಲ್ಲಿ ಪ್ರಗತಿಯ ವೇಗವನ್ನು ನಿರ್ಧರಿಸುತ್ತದೆ ಎಂದು ಎಂದು ಪ್ರಧಾನಿ ಮೋದಿ ಈ ವೇಳೆ ಹೇಳಿದ್ದರು.
Published by:Ashwini Prabhu
First published: