Deadly Militants- ವಿಶ್ವದ ನಾಲ್ಕು ಅತೀ ಭಯಂಕರ ಉಗ್ರ ಸಂಘಟನೆಗಳು, ಅವುಗಳ ಬಲಾಬಲ ಎಷ್ಟು?

2019ರಲ್ಲಿ ವಿಶ್ವಾದ್ಯಂತ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ ಸುಮಾರು 14 ಸಾವಿರದಷ್ಟು ಜನರು ಬಲಿಯಾಗಿದ್ದಾರೆ. ಇದರಲ್ಲಿ ಶೇ. 55ರಷ್ಟು ಹತ್ಯೆಗಳು ಈ ನಾಲ್ಕು ಉಗ್ರ ಸಂಘಟನೆಗಳಿಂದಲೇ ಆಗಿವೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • News18
  • Last Updated :
  • Share this:
ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದ ಉಗ್ರ ಸಂಘಟನೆಗಳ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಕೇವಲ ಒಂಬತ್ತು ದಿನದಲ್ಲಿ ತಾಲಿಬಾನ್ ಇಡೀ ಆಫ್ಘಾನಿಸ್ತಾವನ್ನು ಅನಾಮತ್ತಾಗಿ ವಶಕ್ಕೆ ತೆಗೆದುಕೊಂಡ ರೀತಿ ಬಗ್ಗೆ ಅನೇಕರು ಬೆಕ್ಕಸ ಬೆರಗಾಗಿದ್ದಾರೆ. ಅಲ್-ಖೈದಾ, ಐಸಿಸ್ ಸಂಘಟನೆಗಳನ್ನೂ ಮೀರಿಸಿದ ಅಪಾಯಕಾರಿ ಉಗ್ರ ಸಂಘಟನೆಯಾ ತಾಲಿಬಾನ್ ಎಂಬ ಕುತೂಹಲ ಮೂಡದೇ ಇರದು. ಕಳೆದ ವರ್ಷ ನಡೆದ ಭಯೋತ್ಪಾದನಾ ಕೃತ್ಯಗಳ ತೀವ್ರತೆ ಇತ್ಯಾದಿ ಅಂಶಗಳನ್ನ ಗಮನಿಸಿ ವಿಶ್ವದ ಅತೀ ಭಯಂಕರ ಉಗ್ರ ಸಂಘಟನೆಗಳ ಪಟ್ಟಿ ಮಾಡುವುದಾದರೆ ತಾಲಿಬಾನ್ ಅದರಲ್ಲಿ ಇದ್ದೇ ಇರುತ್ತದೆ.

ಆಫ್ಘಾನಿಸ್ತಾನದ ತಾಲಿಬಾನ್, ಇರಾಕ್​ನ ಇಸ್ಲಾಮಿಕ್ ಸ್ಟೇಟ್, ಆಫ್ರಿಕಾದ ಬೋಕೋ ಹರಾಮ್ ಮತ್ತು ಅಲ್ ಶಬಾಬ್ ಈ ನಾಲ್ಕು ಸಂಘಟನೆಗಳು ಕಳೆದ ವರ್ಷ ಬಹಳಷ್ಟು ಭಯೋತ್ಪಾದನಾ ಕೃತ್ಯಗಳನ್ನ ಎಸಗಿವೆ. ಜಗತ್ತಿನಲ್ಲಿ ಸಂಭವಿಸಿದ ಭಯೋತ್ಪಾದನಾ ಸಂಬಂಧಿತ ಸಾವುಗಳ ಪೈಕಿ ಶೇ. 55ರಷ್ಟು ಸಾವಿಗೆ ಈ ನಾಲ್ಕು ಸಂಘಟನೆಗಳೇ ಕಾರಣವಾಗಿವೆ. ಈ ಸಂಘಟನೆಗಳ ರಕ್ಕಸರು 7,578 ಜನರನ್ನ ಹತ್ಯೆಗೈದಿವೆ. ಹೀಗಾಗಿ, ಟಾಪ್ ನಾಲ್ಕು ಅಪಾಯಕಾರಿ ಉಗ್ರ ಸಂಘಟನೆಗಳಲ್ಲಿ ಇವುಗಳನ್ನ ಒಳಗೊಳ್ಳಲಾಗಿದೆ.

1) ತಾಲಿಬಾನ್: ಎರಡು ದಶಕಗಳ ಹಿಂದೆ ಆಫ್ಘಾನಿಸ್ತಾನದಲ್ಲಿ ಅತಿ ಭಯಂಕರ ರಕ್ತಪಾತ ನಡೆಸಿ ಕೆಲ ವರ್ಷಗಳ ಕಾಲ ಆಡಳಿತವನ್ನೂ ನಡೆಸಿದ ಉಗ್ರ ಸಂಘಟನೆ ಇದು. ಈಗ ಅಮೆರಿಕದ ಸೇನೆ ಕಾಲ್ತೆಗೆಯುತ್ತಿದ್ದಂತೆಯೇ ಸಕ್ರಿಯಗೊಂಡು ಕೇವಲ 9 ದಿನದಲ್ಲಿ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ. ಇದರಲ್ಲಿ ಅಂದಾಜು 85 ಸಾವಿರದಷ್ಟು ಪೂರ್ಣಾವಧಿ ಹೋರಾಟಗಾರರು ಇದ್ದಾರೆ. ಜೊತೆಗೆ ಅದಕ್ಕೆ ವಿವಿಧ ಸ್ತರಗಳಲ್ಲಿ ಸಹಾಯ ಮಾಡುವ ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ. ಸ್ಥಳೀಯ ಜನರ ಬೆಂಬಲ ಮತ್ತು ಭಯವೇ ತಾಲಿಬಾನ್​ಗೆ ಶ್ರೀರಕ್ಷೆ. ಇದರ ಒಂದು ಅಂಗ ಪಾಕಿಸ್ತಾನದಲ್ಲೂ ಇದೆ. ಆದರೆ, ಅಲ್ಲಿ ಅದು ಹೆಚ್ಚು ಸಕ್ರಿಯವಾಗಿಲ್ಲ.

ಬಾಂಬ್, ಗನ್ ದಾಳಿ ಮಾಡುವುದು ಇದರ ಮುಖ್ಯ ಆಕ್ರಮಣಕಾರಿ ತಂತ್ರ. ನಿರ್ದಿಷ್ಟ ವ್ಯಕ್ತಿಗಳನ್ನ ಗುರಿಮಾಡಿ ಹತ್ಯೆ ಮಾಡುತ್ತಾರೆ. ಸರ್ಕಾರಿ ಅಧಿಕಾರಿಗಳು, ಪೊಲೀಸರು, ಸೈನಿಕರು ಹೆಚ್ಚಾಗಿ ತಾಲಿಬಾನ್​ಗಳ ಟಾರ್ಗೆಟ್. ಹಾಗೆಯೇ, ಸಾಮಾನ್ಯ ನಾಗರಿಕರೂ ಸಾಕಷ್ಟು ಸಂಖ್ಯೆಯಲ್ಲಿ ಇವರಿಗೆ ಬಲಿಯಾಗಿದ್ದಾರೆ. 2019ರಲ್ಲಿ ತಾಲಿಬಾನ್ ಉಗ್ರರು 4,990 ಮಂದಿಯನ್ನ ಸಾಯಿಸಿದ್ಧಾರೆ. ಒಂದೊಂದು ದಾಳಿಯಲ್ಲಿ ಸರಾಸರಿಯಾಗಿ ಬಲಿಯಾದವರ ಸಂಖ್ಯೆ 4.9 ಮಂದಿ. ಈಗ ಮತ್ತೆ ತಾಲಿಬಾನ್ ಆಡಳಿತಕ್ಕೆ ಬರುವುದು ನಿಶ್ಚಿತವಾಗಿರುವುದರಿಂದ ಆ ದೇಶದಲ್ಲಿ ಹೆಚ್ಚೆಚ್ಚು ರಕ್ತಪಾತ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: 50 ವರ್ಷಗಳ ಹಿಂದೆ ಅಲ್ಲಿನ ಹೆಣ್ಣುಮಕ್ಕಳು ಮಿನಿಸ್ಕರ್ಟ್ ಹಾಕಿಕೊಂಡು ಓಡಾಡ್ತಿದ್ರು, ಹೇಗಿತ್ತು ಗೊತ್ತಾ ತಾಲಿಬಾನ್ ಮುಂಚಿನ ಅಫ್ಘಾನಿಸ್ತಾನ?

2) ಬೋಕೋ ಹರಾಮ್: ಇದು ಆಫ್ರಿಕಾ ಖಂಡದ ಮುಸ್ಲಿಮ್ ಪ್ರಾಬಲ್ಯ ದೇಶಗಳಾದ ನೈಜೀರಿಯಾ, ನೈಗರ್, ಛಾಡ್, ಮಾಲಿ, ಉತ್ತರ ಕ್ಯಾಮರೂನ್​ನಲ್ಲಿ ಸಕ್ರಿಯವಾಗಿದೆ. ಸುಮಾರು 20 ವರ್ಷಗಳ ಹಿಂದೆ ನೈಜೀರಿಯಾದಲ್ಲಿ ಪ್ರಾರಂಭಗೊಂಡ ಬೋಕೋ ಹರಾಮ್ ಸಂಘಟನೆಯ ಹೆಸರಿನ ಅರ್ಥ ಪಾಶ್ಚಿಮಾತ್ಯ ಶಿಕ್ಷಣದ ವಿರುದ್ಧ ಹೋರಾಡುವುದಾಗಿದೆ. ನೈಜೀರಿಯಾದಲ್ಲಿ ಇದು ಬಹಳ ಶಕ್ತಿಶಾಲಿ ಎನಿಸಿದೆ. ಕ್ಯಾಮರೂನ್ ದೇಶದಲ್ಲೂ ಇದರ ಅಟ್ಟಹಾಸ ಹೆಚ್ಚಿದೆ.

ಬೋಕೋ ಹರಾಮ್ ಸಂಘಟನೆಯಲ್ಲಿ 1,500 ಮಂದಿ ಸಕ್ರಿಯರಾಗಿದ್ಧಾರೆ. ಸಶಸ್ತ್ರ ದಾಳಿ ಜೊತೆಗೆ ಅಪಹರಣ, ಸೂಸೈಡ್ ಬಾಂಬ್ ದಾಳಿ ಇತ್ಯಾದಿ ಕೃತ್ಯ ಎಸಗುತ್ತಾರೆ. ಗುಪ್ತಚರ ಕಾರ್ಯಗಳಿಗೆ ಮಕ್ಕಳನ್ನೂ ಇವರು ಬಳಸಿಕೊಳ್ಳುತ್ತಾರೆ. 2019ರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರನ್ನ ಬೋಕೋ ಹರಾಮ್ ಹತ್ಯೆಗೈದಿದೆ.

3) ಐಎಸ್​ಐಎಲ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಲೆವಂಟ್): ವಿಶ್ವದ ಅತೀ ಶಕ್ತಿಶಾಲಿ ಉಗ್ರ ಸಂಘಟನೆಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಪ್ರಮುಖವಾದುದು. ಇದು ಇರಾಕ್, ಸಿರಿಯಾ ಸೇರಿದಂತೆ 30 ದೇಶಗಳಲ್ಲಿ ಸಕ್ರಿಯವಾಗಿದೆ. 10 ಸಾವಿರ ಪೂರ್ಣಾವಧಿ ಹೋರಾಟಗಾರರನ್ನ ಹೊಂದಿರುವ ಇಸ್ಲಾಮಿಕ್ ಸ್ಟೇಟ್ ತಾಲಿಬಾನಿಗಳಂತೆ ಗೆರಿಲಾ ದಾಳಿಗಳಿಗೆ ಹೆಸರುವಾಸಿಯಾಗಿದೆ. ಸಶಸ್ತ್ರ ದಾಳಿ, ಆತ್ಮಹತ್ಯಾ ದಾಳಿ, ಬಾಂಬ್ ದಾಳಿ ಇದರ ಪ್ರಮುಖ ಆಕ್ರಮಣಕಾರಿ ತಂತ್ರಗಾರಿಕೆಗಳಾಗಿವೆ. 2019ರಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯಿಂದ 942 ಜನರು ಸಾವನ್ನಪ್ಪಿದ್ದಾರೆ.

4) ಅಲ್-ಶಬಾಬ್: ಇದು ಆಫ್ರಿಕಾ ಖಂಡದ ಆಫ್ರಿಕಾ ಪೂರ್ವ ಭಾಗ, ಕೀನ್ಯಾ, ಇಥಿಯೋಪಿಯಾ, ಉಗಾಂಡ ಮತ್ತು ಸೊಮಾಲಿಯಾ ದೇಶಗಳಲ್ಲಿ ಸಕ್ರಿಯವಾಗಿದೆ. ಸೋಮಾಲಿಯಾದಲ್ಲಿ ಇದು ಹೆಚ್ಚು ಸಕ್ರಿಯ. ಅಲ್ ಶಬನಾಬ್ ಸಂಘಟನೆ ಅಂದಾಜು 7-9 ಸಾವಿರ ಹೋರಾಟಗಾರರ ಪಡೆ ಹೊಂದಿದೆ. 2019ರಲ್ಲಿ ಇದು 578 ಮಂದಿಯನ್ನ ಬಲಿ ಪಡೆದುಕೊಂಡಿದೆ.
Published by:Vijayasarthy SN
First published: