World Oceans Day 2022: ಇಂದು ವಿಶ್ವ ಸಾಗರ ದಿನ, ಬೀಚ್​ ಪ್ರಿಯರೇ ಸಮುದ್ರದ ಬಗ್ಗೆ ಇದನ್ನು ತಿಳಿಯಲೇಬೇಕು

ನಮಗೆ ಬಲು ಅಮೂಲ್ಯವಾಗಿರುವ ಈ ಸಾಗರಗಳನ್ನು ಸಂರಕ್ಷಿಸುವುದು ಬಲು ಮುಖ್ಯ ಕರ್ತವ್ಯವಾಗಿದ್ದು ಆ ಒಂದು ನಿಟ್ಟಿನಲ್ಲಿಯೇ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಸದುದ್ದೇಶದಿಂದ ಜೂನ್ 8 ಅನ್ನು ವಿಶ್ವ ಸಾಗರ ದಿನ ಎಂದು ಆಚರಿಸುತ್ತ ಬರಲಾಗಿದೆ.

ವಿಶ್ವ ಸಾಗರ ದಿನ 2022

ವಿಶ್ವ ಸಾಗರ ದಿನ 2022

  • Share this:
ಅಂತರಿಕ್ಷದಿಂದ ನಮ್ಮ ಪೃಥ್ವಿಯನ್ನು (Earth) ನೋಡಿದಾಗ ಅದು ನೀಳ ವರ್ಣದಿಂದ ಕಂಗೊಳಿಸುವುದನ್ನು ಕಾಣಬಹುದು. ಹಾಗಾಗಿಯೇ ಒಮ್ಮೊಮ್ಮೆ ನಮ್ಮ ಭೂಮಿಯನ್ನು ಬ್ಲ್ಯೂ ಪ್ಲಾನೆಟ್ (Blue Planet) ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಅಷ್ಟಕ್ಕೂ ಭೂಮಿಯ ಈ ನೀಳ ವರ್ಣದ ಹಿಂದಿರುವ ಒಂದು ಕಾರಣವೆಂದರೆ ಅದು ಸಾಗರಗಳು. ಹೌದು, ವಿಶಾಲವಾಗಿ ಭೂಮಿಯ ಬಹುತೇಕ ಭಾಗ ಆವರಿಸಿರುವ ನೀಲ ವರ್ಣದ ಸಾಗರಗಳಿಂದಲೇ (Ocean) ನಮ್ಮ ಸ್ವಗ್ರಹವನ್ನು ಬ್ಲ್ಯೂ ಪ್ಲಾನೆಟ್ ಎನ್ನುತ್ತೇವೆ. ಹಾಗೇ ನೋಡಿದರೆ ಭೂಮಿಯ ಮೇಲ್ಮೈ ಮೇಲಿನ ಸುಮಾರು 71% ರಷ್ಟು ಭಾಗವನ್ನು ಈ ಸಗರಗಳು ಆವರಿಸಿದ್ದು ಇವು ಒಟ್ಟಾರೆಯಾಗಿ ನಮ್ಮ ಗ್ರಹದಲ್ಲಿ ಲಭ್ಯವಿರುವ ನೀರಿನ ಪೈಕಿ 97% ರಷ್ಟು ಪ್ರಮಾಣವನ್ನು ಒಳಗೊಂಡಿದೆ.

ಜಲಜೀವನಗಳಿಗೆ ಆಶ್ರಯ ತಾಣವಾಗಿರುವ ಸಾಗರಗಳು
ಬೃಹತ್ ಆಗಿ ವ್ಯಾಪಿಸಿರುವ ಈ ಸಾಗರಗಳು ಭೂಮಿಯ ವಾತಾವರಣದಲ್ಲಿರುವ ತಾಪಮಾನ ಹಾಗೂ ಹವಾಮಾನದ ಪರಿಸ್ಥಿತಿಗಳ ಮೇಲೆ ಪ್ರಮುಖವಾಗಿ ಪ್ರಭಾವ ಬೀರುವುದು ಸ್ವಾಭಾವಿಕವೇ ಆಗಿದೆ. ಮಾನವ ಹಾಗೂ ಪ್ರಾಣಿಗಳ ಆಹಾರ ಸರಪಣಿಯಲ್ಲಿ ಸಾಗರಗಳು ವಿಶೇಷವಾದ ಪಾತ್ರ ನಿರ್ವಹಿಸುತ್ತವೆ ಎಂದರೂ ತಪ್ಪಾಗಲಾರದು. ಅತಿ ಶ್ರೀಮಂತ ಹಾಗೂ ವೈವಿಧ್ಯಮಯ ಜಲಜೀವನಗಳಿಗೆ ಆಶ್ರಯ ತಾಣವಾಗಿರುವ ಸಾಗರಗಳು ನಮ್ಮ ಅಸ್ತಿತ್ವದ ಒಂದು ಪ್ರಮುಖ ಅಂಗ.

ಹಾಗಾಗಿ ನಮಗೆ ಬಲು ಅಮೂಲ್ಯವಾಗಿರುವ ಈ ಸಾಗರಗಳನ್ನು ಸಂರಕ್ಷಿಸುವುದು ಬಲು ಮುಖ್ಯ ಕರ್ತವ್ಯವಾಗಿದ್ದು ಆ ಒಂದು ನಿಟ್ಟಿನಲ್ಲಿಯೇ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಸದುದ್ದೇಶದಿಂದ ಜೂನ್ 8 ಅನ್ನು ವಿಶ್ವ ಸಾಗರ ದಿನ ಎಂದು ಆಚರಿಸುತ್ತ ಬರಲಾಗಿದೆ. ನಾವು ಇಂದು ಜೀವಿಸುತಿರುವ ಭೂಮಿ ನಮಗೆ ಬದುಕಲು ಇರುವ ಏಕೈಕ ಆಶ್ರಯ ಮನೆ. ಈ ಮನೆಯು ಸುರಕ್ಷಿತ ಹಾಗೂ ಸುಸ್ಥಿರವಾಗಿರಬೇಕೆಂದರೆ ಸಾಗರಗಳು ಸಹ ಸುರಕ್ಷಿತವಾಗಿಯೂ, ಸುಸ್ಥಿರವಾಗಿಯೂ ಇರುವುದು ಅನಿವಾರ್ಯ. ಹಾಗಾಗಿ ಪ್ರತಿಯೊಬ್ಬ ಮನುಷ್ಯ ಸಾಗರಗಳು ಕಲುಶಿತಗೊಳ್ಳದಂತೆ ತನ್ನ ಜವಾಬ್ದಾರಿಯನ್ನು ಅರಿತು ಅದರ ಸಂರಕ್ಷಣೆಗೆ ಬದ್ಧನಾಗಿರಬೇಕೆಂಬುದೇ ಈ ಆಚರಣೆಯ ಹಿಂದಿರುವ ಪ್ರಮುಖ ಉದ್ದೇಶವಾಗಿದೆ.

ವಿಶ್ವ ಸಾಗರ ದಿನ: ಇತಿಹಾಸ
ವಿಶ್ವ ಸಾಗರ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಮೊದಲು 1992 ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ (UNCED) ಪ್ರಸ್ತಾಪಿಸಲಾಯಿತು. ಇದು ಪ್ರಪಂಚದಲ್ಲಿ ವಿಶಾಲವಾಗಿ ಹಂಚಲ್ಪಟ್ಟ ಸಾಗರವನ್ನು ಸಂಭ್ರಮಿಸುವ ಮತ್ತು ನಮ್ಮ ಜೀವನದಲ್ಲಿ ಅದು ವಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುವ ಗುರಿಯನ್ನು ಹೊಂದಿತ್ತು.

ಇದನ್ನೂ ಓದಿ: Ancient City: ಇರಾಕ್​​ನ ಅತಿ ದೊಡ್ಡ ಜಲಾಶಯ ಬತ್ತಿದಾಗ 3,400 ವರ್ಷಗಳ ಹಳೆಯ ನಗರ ಪತ್ತೆ; ಫೋಟೋಗಳು ಇಲ್ಲಿವೆ

ನಂತರ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ (UNGA), ಡಿಸೆಂಬರ್ 5, 2008 ರಂದು ನಿರ್ಣಯವನ್ನು ಅಂಗೀಕರಿಸಿತು ಮತ್ತು ಜೂನ್ 8 ಅನ್ನು ವಿಶ್ವ ಸಾಗರ ದಿನ ಎಂದು ಗೊತ್ತುಪಡಿಸಿತು.

ವಿಶ್ವ ಸಾಗರ ದಿನ 2022: ಥೀಮ್
2022 ರ ವಿಶ್ವ ಸಾಗರ ದಿನಾಚರಣೆಯ ಥೀಮ್ 'ಪುನರುಜ್ಜೀವನ: ಸಾಗರಕ್ಕಾಗಿ ಸಾಮೂಹಿಕ ಕ್ರಿಯೆ' ಎಂದಾಗಿದೆ. ಸಾಗರವು ನಮ್ಮೆಲ್ಲರನ್ನು ಸಂಪರ್ಕಿಸುವ ಅತ್ಯಗತ್ಯ ಕೊಂಡಿಯಾಗಿರುವುದರಿಂದ, ಅದನ್ನು ಸಾಕಷ್ಟು ಕ್ರಮಗಳ ಮೂಲಕ ಸಂರಕ್ಷಿಸಬೇಕು. ಸಾಗರವು ಇನ್ನು ಮುಂದೆ ಹಾನಿಯಾಗದಂತೆ ನೋಡಿಕೊಳ್ಳಬೇಕು, ಅದನ್ನು ಪುನರುಜ್ಜೀವನಗೊಳಿಸಬೇಕೆಂಬುದೇ ಈ ಸಲದ ಥೀಮ್ ವಿಶೇಷತೆ.

ವಿಶ್ವ ಸಾಗರ ದಿನ: ಮಹತ್ವ
ಸಾಗರಗಳು ಶತಕೋಟಿ ಜನರಿಗೆ ಆಹಾರದ ಮೂಲವಾಗಿದೆ ಮತ್ತು ಹವಾಮಾನವನ್ನು ನಿಯಂತ್ರಿಸುತ್ತದೆ. ಸಾಗರವು ತನ್ನಲ್ಲಿರುವ ಅಭಿವೃದ್ಧಿ ಹೊಂದುತ್ತಿರುವ ಜೀವಿಗಳ ಮೂಲಕ ಗ್ರಹದ ಅರ್ಧಕ್ಕಿಂತ ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಆದಾಗ್ಯೂ, ಮಿತಿಮೀರಿದ ಮೀನುಗಾರಿಕೆ, ತೈಲ ಸೋರಿಕೆಗಳು ಮತ್ತು ಪ್ಲಾಸ್ಟಿಕ್ ಮಾಲಿನ್ಯದಂತಹ ಮಾನವ ಚಟುವಟಿಕೆಗಳು ಸಮುದ್ರ ಹಾಗೂ ಅದರಲ್ಲಿರುವ ಸಮುದ್ರ ಜೀವಿಗಳ ಮೇಲೆ ಅಪಾರವಾದ ಕೆಟ್ಟ ಪರಿಣಾಮಗಳನ್ನು ಬೀರಿದೆ.

ಹಾಗಾಗಿ ಸಾಗರ ಕಲ್ಮಶವಾಗುವುದನ್ನು ತಡೆಯುವ ಹಾಗೂ ಸಾಗರಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಗತ ವೈಭವ ಮರಳಿಸುವ ದೃಷ್ಟಿಯಿಂದ ವಿಶ್ವ ಸಾಗರ ದಿನವು ಸಕಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಯತ್ನಿಸಲು ಕರೆ ನೀಡುತ್ತದೆ.

ಸಮುದ್ರ ತಳದಿಂದ 25 ಟನ್ ಗಳಷ್ಟು ತ್ಯಾಜ್ಯ ಸಂಗ್ರಹ
ಇಂದು ನಾವು ಸಾಗರ ಹಾಗೂ ಸಮುದ್ರಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಸಾಗರ ದಿನವನ್ನು ಆಚರಿಸುತ್ತಿದ್ದರೆ ಅತ್ತ ಗ್ರೀಕ್ ದೇಶದ ಸಮುದ್ರ ತಳದಿಂದ 25 ಟನ್ ಗಳಷ್ಟು ತ್ಯಾಜ್ಯವನ್ನು ಮೇಲಕ್ಕೆತ್ತಲಾಗಿದೆ. ಇದೆ ಅಲ್ಲವೇ ವಿಪರ್ಯಾಸ ಎಂದರೆ.

ಅಂತಾರಾಷ್ಟ್ರೀಯ ಸಾಗರ ಸುರಕ್ಷತಾ ಸಂಘಗಳು ಸ್ಥಳೀಯ ಮೀನುಗಾರರೊಂದಿಗೆ ಕೈಜೋಡಿಸಿ ಇಥಾಕಾದ ಗ್ರೀಕ್ ಅಯೋನಿಯನ್ ದ್ವೀಪದ ಸುತ್ತಲು ಆವರಿಸಿರುವ ಸಮುದ್ರ ತಳದಿಂದ 25 ಟನ್ ಗಳಷ್ಟು ತ್ಯಾಜ್ಯವನ್ನು ಮೇಲಕ್ಕೆತ್ತಿದ್ದಾರೆಂದು ವರದಿಯಾಗಿದೆ. ಈ ಅಭಿಯಾನದಲ್ಲಿ ಭಾಗವಹಿಸಿದ್ದ ನಿಪುಣ ಡೈವರ್ ಗಳು ಏನಿಲ್ಲವೆಂದರೂ ಹಾಗೇ ಸಮುದ್ರದಾಳದಲ್ಲಿ ಬಿಡಲಾಗಿದ್ದ ಉಪಯುಕ್ತವಲ್ಲದ ಆದರೆ ಸಮುದ್ರ ತ್ಯಾಜ್ಯಕ್ಕೆ ಮೂಲವಾಗಿದ್ದ 25 ಘೋಸ್ಟ್ ಬಲೆಗಳನ್ನು ಹೊರತೆಗೆದಿದ್ದಾರೆನ್ನಲಾಗಿದೆ.

ಇದನ್ನೂ ಓದಿ:  Explained: ಶಿಶಿಲದಲ್ಲಿ ಕಡಿಮೆಯಾಗ್ತಿದೆ ದೇವರ ಮೀನಿನ ಸಂಖ್ಯೆ! ಹತ್ತಿರದಲ್ಲಿದ್ದೇ ಹೊಂಚು ಹಾಕುವ ಕಳ್ಳ ಯಾರು ಗೊತ್ತಾ?

ಈ ಬಗ್ಗೆ ವಿಡಿಯೋ ಕ್ಲಿಪ್ ಒಂದನ್ನು ನೌ ದಿಸ್ ನ್ಯೂಸ್ ಎಂಬ ಮಾಧ್ಯಮವು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು ಅದರಲ್ಲಿ ದೊಡ್ಡ ಕ್ರೇನ್ ಬಳಸಿ ಸಮುದ್ರದಿಂದ ತ್ಯಾಜ್ಯ ಎತ್ತಿ ದೊಡ್ಡ ದೊಡ್ಡ ಬಿನ್ ಗಳಲ್ಲಿ ಸಂಗ್ರಹಿಸಲಾಗುತ್ತಿರುವುದನ್ನು ಕಾಣಬಹುದಾಗಿದೆ. ಸಾಗರದ ಈ ಸ್ವಚ್ಛತಾ ಕಾರ್ಯವನ್ನು ವಿಶ್ವ ಸಾಗರದಿನದ ಪ್ರಯುಕ್ತವಾಗಿಯೇ ಹಮ್ಮಿಕೊಳ್ಳಲಾಗಿತ್ತು ಹಾಗೂ ಇದರಲ್ಲಿ ಹೆಲ್ದಿ ಸೀಸ್ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸರ್ಕಾರೇತರ ಸಂಸ್ಥೆಯಾದ ಘೋಸ್ಟ್ ಡೈವರ್ಸ್ ಸದಸ್ಯರು ಭಾಗವಹಿಸಿದ್ದರು ಎನ್ನಲಾಗಿದೆ.
Published by:Ashwini Prabhu
First published: