ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ (Karnataka assembly election result) ಬಂದಾಗಿದೆ. ಅತೀ ದೊಡ್ಡ ಪಕ್ಷವಾಗಿ ವಿಜಯ ದಾಖಲಿಸಿರುವ ಕಾಂಗ್ರೆಸ್ (Congress), ಬರೋಬ್ಬರಿ 135 ಸ್ಥಾನಗಳನ್ನು ಪಡೆದಿದೆ. ಇತ್ತ ಆಡಳಿತಾರೂಢ ಬಿಜೆಪಿ (BJP) ಕೇವಲ 66 ಸ್ಥಾನಗಳನ್ನು ಪಡೆಯಲಷ್ಟೇ ಶಕ್ಯವಾಗಿದೆ. ಕಾಂಗ್ರೆಸ್ ಸರ್ಕಾರ (Government) ರಚಿಸುವ ಉತ್ಸಾಹದಲ್ಲಿದ್ದರೆ, ಬಿಜೆಪಿ ವಿಪಕ್ಷ ಸ್ಥಾನದಲ್ಲಿ (Opposition Party) ಕೂರಬೇಕಾಗಿದೆ. ಈ ಹೊತ್ತಲ್ಲಿ ಕೇಸರಿ ಪಾಳೆಯದಲ್ಲಿ ಹಿರಿಯರ ಅನುಪಸ್ಥಿತಿ ಕಾಡುತ್ತಿದೆ. ಹಾಗಾದರೆ ಈ ಬಾರಿ ವಿಪಕ್ಷ ನಾಯಕ ಯಾರು? ಬಿಎಸ್‌ವೈ (BS Yediyurappa), ಈಶ್ವರಪ್ಪ (KS Eshwarappa) ಅನುಪಸ್ಥಿತಿಯಲ್ಲಿ ಸರ್ಕಾರಕ್ಕೆ ಮೂಗುದಾರ ಹಾಕುವವರು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…
ಬಿಎಸ್‌ವೈ ಅನುಪಸ್ಥಿತಿ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಂದ್ರೆ ಮಾತುಗಾರಿಕೆಯಿಂದಲೇ ಹೆಸರುವಾಸಿಯಾದವರು. ರಾಜಾಹುಲಿ ಅಂತ ಅವರನ್ನು ಕರೆಯುತ್ತಾರೆ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುವ ಮಾತಿತ್ತು. ಅಂದರೆ ಯಡಿಯೂರಪ್ಪ ಸರ್ಕಾರದಲ್ಲಿರಲಿ, ವಿಪಕ್ಷದಲ್ಲೇ ಕುಳಿತಿರಲಿ ಅವರ ಮಾತಿಗೆ ಅಷ್ಟು ತೂಕವಿರುತ್ತಿತ್ತು. ವಿಪಕ್ಷದಲ್ಲಿದ್ದಾಗ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದ ಬಿಎಸ್‌ವೈ, ಸರ್ಕಾರದಲ್ಲಿದ್ದಾಗ ವಿಪಕ್ಷಗಳ ಬಾಯಿ ಮುಚ್ಚಿಸುತ್ತಿದ್ದರು. ಇಂತಹ ಬಿಎಸ್‌ವೈ ಈ ಬಾರಿ ವಿಧಾನಸಭೆಯಲ್ಲಿ ಇರುವುದಿಲ್ಲ.
ಬಿಎಸ್ ಯಡಿಯೂರಪ್ಪನಂತೆ ಮಾತಿನಲ್ಲೇ ಎದುರಾಳಿಯನ್ನು ಕಟ್ಟಿ ಹಾಕುತ್ತಿದ್ದವರು ಕೆಎಸ್ ಈಶ್ವರಪ್ಪ. ಸಿದ್ದರಾಮಯ್ಯ, ಡಿಕೆಶಿ, ಮತ್ತಿತರ ನಾಯಕರ ಸವಾಲಿಗೆ ಸವಾಲು ಹಾಕುತ್ತಿದ್ದರು. ಆದರೆ ಈ ಬಾರಿ ಕೆಎಸ್ ಈಶ್ವರಪ್ಪ ವಿಧಾನಸಭೆಯಲ್ಲಿ ಇರುವುದಿಲ್ಲ. ಈಗಾಗಲೇ ಚುನಾವಣಾ ನಿವೃತ್ತಿ ಘೋಷಿಸಿರುವ ಈಶ್ವರಪ್ಪ, ಚುನಾವಣೆಗೂ ಸ್ಪರ್ಧಿಸಿಲ್ಲ. ಹೀಗಾಗಿ ಅವರ ಅನುಪಸ್ಥಿತಿಯೂ ಈ ಬಾರಿ ಕಲಾಪದಲ್ಲಿ ಕಾಡಲಿದೆ.
ಇದನ್ನೂ ಓದಿ: Congress ಗೆಲುವಿಗೆ ಕಾರಣ ಸಿದ್ದು-ಡಿಕೆಶಿಯೂ ಅಲ್ಲ, ರಾಹುಲ್-ಖರ್ಗೆಯೂ ಅಲ್ಲ! ರಣತಂತ್ರದ ಹಿಂದಿರೋದು ಇವರೇ!
ಬಿಜೆಪಿ ತೊರೆದಿರುವ ಜಗದೀಶ್ ಶೆಟ್ಟರ್
ಇನ್ನು ಬಿಜೆಪಿಯ ಮತ್ತೋರ್ವ ಸಮರ್ಥ ನಾಯಕರಾಗಿದ್ದವರು ಜಗದೀಶ್ ಶೆಟ್ಟರ್. ಸಿಎಂ ಆಗಿ, ಸ್ಪೀಕರ್ ಆಗಿ, ಸಚಿವರಾಗಿ, ಶಾಸಕರಾಗಿ ಅಪಾರ ಅನುಭವಿ. ಇವರೂ ಕೂಡ ಸರ್ಕಾರ ಅಥವಾ ವಿಪಕ್ಷವನ್ನು ಮಾತಿನಿಂದಲೇ ಕಟ್ಟಿಹಾಕಿ, ಬೆವರಿಳಿಸುತ್ತಿದ್ದರು. ಆದರೆ ಈ ಬಾರಿ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧವಾಗಿ ನಿಂತಿದ್ದಾರೆ. ಟಿಕೆಟ್ ತಪ್ಪಿಸಿದ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆದರೆ ಸೋತು, ಶಾಸಕ ಸ್ಥಾನವನ್ನೂ ಕಳೆದುಕೊಂಡಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಸೋಲು
ಬಿಜೆಪಿಯಲ್ಲಿ ವಿಪಕ್ಷನಾಯಕನಾಗಬಹುದಾಗಿದ್ದ ಮತ್ತೋರ್ವ ನಾಯಕ ಎಂದರೆ ವಿಶ್ವೇಶ್ವರ ಹೆಗಡೆ ಕಾಗೇರಿ. ಶಾಸಕರಾಗಿ, ಸಚಿವರಾಗಿ, ಸ್ಪೀಕರ್ ಆಗಿ ರಾಜಕಾರಣದಲ್ಲಿ ಅಪಾರ ಅನುಭವಿ. ವಿಪಕ್ಷದಲ್ಲಿದ್ದು ಸರ್ಕಾರವನ್ನು ನಿಯಂತ್ರಿಸುವ ಅರ್ಹತೆ ಇದ್ದವರು. ಆದರೆ ಈ ಬಾರಿ ಅವರೇ ಸೋತು ಸುಣ್ಣವಾಗಿದ್ದಾರೆ. ಹೀಗಾಗಿ ಅವರೂ ಈ ಬಾರಿ ಕಲಾಪದಲ್ಲಿ ಇರುವುದಿಲ್ಲ.
ಬಸವರಾಜ ಬೊಮ್ಮಾಯಿ ಆಗ್ತಾರಾ ವಿಪಕ್ಷ ನಾಯಕ?
ಇನ್ನು ಈ ಬಾರಿ ವಿಪಕ್ಷ ನಾಯಕ ಬಸವರಾಜ ಬೊಮ್ಮಾಯಿ ಆಗಬಹುದು ಎನ್ನಲಾಗುತ್ತಿದೆ. ಸದನದಲ್ಲಿ ಸರ್ಕಾರವನ್ನು ಎದುರಿಸಬೇಕಾದರೆ ಸಂಸದೀಯ ಪಟ್ಟುಗಳು ಕರಗತವಾಗಿರುವ ವ್ಯಕ್ತಿ ಬೇಕು. ಆಗ ಬಸವರಾಜ ಬೊಮ್ಮಾಯಿ ಆಯ್ಕೆ ಅನಿವಾರ್ಯವಾಗಬಹುದು. ಆದರೆ ಸಿಎಂ ಆಗಿದ್ದಾಗಲೇ ಬಿಜೆಪಿ ಹೀನಾಯವಾಗಿ ಸೋತಿದೆ. ಅವರೇ ಈ ಹೊಣೆಯನ್ನೂ ಹೊತ್ತುಕೊಂಡು, ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರಿಗೂ ವಿಪಕ್ಷ ನಾಯಕನ ಸ್ಥಾನ ಕಷ್ಟವಾಗಬಹುದು.
ಇದನ್ನೂ ಓದಿ: BJP Defeat: ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು? ಅತಿ ವಿಶ್ವಾಸವೋ, 40 ಪರ್ಸೆಂಟ್ ಆರೋಪವೋ?
ಸುರೇಶ್ ಕುಮಾರ್, ಸುನೀಲ್ ಕುಮಾರ್, ಯತ್ನಾಳ್‌ಗಿದೆಯಾ ಚಾನ್ಸ್?
ಇನ್ನು ಸಜ್ಜನ ರಾಜಕಾರಣಿ ಅಂತಲೇ ಗುರುತಿಸಿಕೊಂಡ ಸುರೇಶ್ ಕುಮಾರ್ ಈ ಬಾರಿ ಗೆದ್ದಿದ್ದಾರೆ. ಸಚಿವರಾಗಿ ಅನುಭವ ಇರುವ, ಸರಳ ವ್ಯಕ್ತಿತ್ವದ ಸುರೇಶ್ ಕುಮಾರ್ ವಿಪಕ್ಷ ನಾಯಕನಾಗಬಹುದು. ಅವರನ್ನು ಬಿಟ್ಟರೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೆಸರು ಕೂಡ ಕೇಳಿ ಬರುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ