Explained: ಕಲಬುರಗಿ ಪಾಲಿಕೆಯಲ್ಲಿ ಜೆಡಿಎಸ್ ಯಾರ ಜತೆ ಮೈತ್ರಿ ಮಾಡಿಕೊಳ್ಳಲಿದೆ; ಕಾಂಗ್ರೆಸ್ ಲೆಕ್ಕಾಚಾರವೇನು?

ಬಿಜೆಪಿ ಬಿ ಟೀಮ್​ ನಂತರ ವರ್ತಿಸಿ ಈಗಾಗಲೇ ಅಲ್ಪಸಂಖ್ಯಾತರ ವಿಶ್ವಾಸ ಕಳೆದುಕೊಂಡಿದೆ. ಈಗಲೂ ಮತ್ತೊಮ್ಮೆ ಬಿಜೆಪಿ ಜೊತೆಗೆ ಹೋಗಿ, ಅಧಿಕಾರ ನಡೆಸಲಿ. ಆಗ ಸಹಜವಾಗಿಯೇ ಮುಸ್ಲಿಂ ಮತಗಳು ಜೆಡಿಎಸ್​ನಿಂದ ದೂರವಾಗುತ್ತವೆ. ಆ ಮತಗಳು ಕಾಂಗ್ರೆಸ್​ ಪರವಾಗಲಿದೆ ಎಂದು ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರವಾಗಿದೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ, ಎಚ್.ಡಿ. ದೇವೇಗೌಡ (ಸಂಗ್ರಹ ಚಿತ್ರ)

ಸಿದ್ದರಾಮಯ್ಯ, ಎಚ್.ಡಿ. ದೇವೇಗೌಡ (ಸಂಗ್ರಹ ಚಿತ್ರ)

  • Share this:
ಬೆಂಗಳೂರು: ಇತ್ತೀಚೆಗಷ್ಟೇ ಪ್ರಕಟಗೊಂಡ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ (Kalaburagi Municipal Corporation Election) ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಗದೆ ಅತಂತ್ರವಾಗಿದೆ. ಕಾಂಗ್ರೆಸ್, ಬಿಜೆಪಿ ಯಾರೇ ಅಧಿಕಾರಕ್ಕೆ ಬರಬೇಕಾದರೂ ಅವರಿಗೆ ಜೆಡಿಎಸ್ ಬೆಂಬಲ ಅತ್ಯಗತ್ಯವಾಗಿದೆ. ಆದರೆ, ಜೆಡಿಎಸ್ ಮೇಯರ್ ಸ್ಥಾನವನ್ನು ಯಾರು ಬಿಟ್ಟುಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ ಎಂದು ಖಡಾಖಂಡಿತವಾಗಿ ಹೇಳಿದೆ. ಇನ್ನು ಜೆಡಿಎಸ್​ನೊಂದಿಗೆ ಯಾವುದೇ ಕಾರಣಕ್ಕೂ ಮೈತ್ರಿ ಬೇಡ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆ ಹಿಂದೆಯೂ ಕೆಲವು ಲೆಕ್ಕಾಚಾರ ಇರುವುದನ್ನು ಅಲ್ಲಗಳೆಯುವಂತಿಲ್ಲ.

ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ ಒಟ್ಟು ಇರುವ ವಾರ್ಡ್ 55. ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ 4 ಕ್ಷೇತ್ರಗಳಲ್ಲಿ ಗೆದ್ದಿವೆ. ಒಬ್ಬ ಪಕ್ಷೇತರ ಅಭ್ಯರ್ಥಿಯೂ ಆಯ್ಕೆಯಾಗಿದ್ದಾರೆ. ಪಾಲಿಕೆ ಅಧ್ಯಕ್ಷರ ಚುನಾವಣೆಯಲ್ಲಿ ಕಲಬುರ್ಗಿ ಲೋಕಸಭಾ ಕ್ಷೇತ್ರದ ಸಂಸದ, ಶಾಸಕ ಹಾಗೂ ವಿಧಾನಸಭಾ ಸದಸ್ಯರಿಗೆ ಮತ ಹಾಕುವ ಹಕ್ಕು ಇದೆ. ಇವರೆಲ್ಲರನ್ನೂ ಸೇರಿ ಪಾಲಿಕೆಯಲ್ಲಿ ಬಹುಮತಕ್ಕೆ 32 ನಂಬರ್ ಅಗತ್ಯ ಇದೆ. ಬಿಜೆಪಿಯಲ್ಲಿ ಪಾಲಿಕೆ ಸದಸ್ಯರ ಸಂಖ್ಯೆ 23, ಒಬ್ಬ ಸಂಸದ, ಇಬ್ಬರು ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರೊಂದಿಗೆ ಬಿಜೆಪಿಯ ಬಲ 30 ಆಗುತ್ತದೆ. ಮ್ಯಾಜಿಕ್ ನಂಬರ್ ಆದ 32ಕ್ಕೆ ಇನ್ನೂ ಇಬ್ಬರು ಸದಸ್ಯರ ಬೆಂಬಲ ಅಗತ್ಯ ಇದೆ. ಜೆಡಿಎಸ್​ನ ನಾಲ್ವರು ಸದಸ್ಯರಲ್ಲಿ ಇಬ್ಬರ ಬೆಂಬಲ ಸಿಕ್ಕರೂ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಬಲ್ಲದು. ಹಾಗೆಯೇ, ಪಾಲಿಕೆಯಲ್ಲಿ ಗೆಲುವು ಸಾಧಿಸಿರುವ ಏಕೈಕ ಪಕ್ಷೇತರ ಅಭ್ಯರ್ಥಿ ವಾಸ್ತವವಾಗಿ ಬಿಜೆಪಿಯ ಬಂಡಾಯ ಅಭ್ಯರ್ಥಿ. ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಅವರು ಸ್ಪರ್ಧಿಸಿದ್ದರು. ಇವರನ್ನ ಮನವೊಲಿಸಿ ಬಿಜೆಪಿ ಬೆಂಬಲ ಗಿಟ್ಟಿಸುವ ನಿರೀಕ್ಷೆ ಇದೆ. ಅತ್ತ, ಕಾಂಗ್ರೆಸ್ ಪಕ್ಷ ಕಲಬುರ್ಗಿ ಪಾಲಿಕೆಯಲ್ಲಿ 27 ಸದಸ್ಯರನ್ನ ಹೊಂದಿದೆ. ಒಬ್ಬ ಶಾಸಕ ಹಾಗೂ ಒಬ್ಬ ರಾಜ್ಯಸಭಾ ಸದಸ್ಯರನ್ನ ಸೇರಿಸಿದರೆ ಅದರ ಸಂಖ್ಯಾಬಲ 29ಕ್ಕೆ ಏರುತ್ತದೆ. ಮ್ಯಾಜಿಕ್ ನಂಬರ್​ಗೆ ಇನ್ನೂ 3 ಸದಸ್ಯರ ಬೆಂಬಲ ಅಗತ್ಯ ಇದೆ. ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಸದಸ್ಯರ ಬೆಂಬಲ ಅತಿ ಮುಖ್ಯ.

ಸಿದ್ದರಾಮಯ್ಯ ಲೆಕ್ಕಾಚಾರವೇನು?

ಕಲಬುರಗಿ ಪಾಲಿಕೆ ಮೈತ್ರಿ ವಿಷಯದಲ್ಲಿ ಕಾಂಗ್ರೆಸ್, ಜೆಡಿಎಸ್​ ಜೊತೆಗೆ ಕೈ ಜೋಡಿಸದೆ ಮೌನವಾಗಿ ಇರುವುದು ಒಳಿತು. ಆಗ ಜೆಡಿಎಸ್ ಸಹಜವಾಗಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯಲು ಮುಂದಾಗುತ್ತದೆ. ಮೊದಲೇ ಜೆಡಿಎಸ್ ಬಗ್ಗೆ ರಾಜ್ಯದ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸಾಕಷ್ಟು ಅನುಮಾನಗಳಿವೆ. ಅದರಲ್ಲೂ ಬಿಜೆಪಿ ಬಿ ಟೀಮ್​ ನಂತರ ವರ್ತಿಸಿ ಈಗಾಗಲೇ ಅಲ್ಪಸಂಖ್ಯಾತರ ವಿಶ್ವಾಸ ಕಳೆದುಕೊಂಡಿದೆ. ಈಗಲೂ ಮತ್ತೊಮ್ಮೆ ಬಿಜೆಪಿ ಜೊತೆಗೆ ಹೋಗಿ, ಅಧಿಕಾರ ನಡೆಸಲಿ. ಆಗ ಸಹಜವಾಗಿಯೇ ಮುಸ್ಲಿಂ ಮತಗಳು ಜೆಡಿಎಸ್​ನಿಂದ ದೂರವಾಗುತ್ತವೆ. ಆ ಮತಗಳು ಕಾಂಗ್ರೆಸ್​ ಪರವಾಗಲಿದೆ ಎಂದು ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರವಾಗಿದೆ ಎಂದು ಹೇಳಲಾಗುತ್ತಿದೆ.

ಮೈತ್ರಿಗೆ ಖರ್ಗೆ ಒಲವು?

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಜೆಡಿಎಸ್ ಜೊತೆ ಮೈತ್ರಿಗೆ ಒಲವು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ನ್ಯೂಸ್18 ಕನ್ನಡ ಜೊತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಜೆಡಿಎಸ್ ಪಕ್ಷ ಜಾತ್ಯತೀತ ನಿಲುವು ಇರುವುದರಿಂದ ಅದರೊಂದಿಗೆ ಅಧಿಕಾರ ಹಂಚಿಕೊಳ್ಳಲು ಸಮಸ್ಯೆ ಇಲ್ಲ ಎಂದಿದ್ದರು. ಇನ್ನು ದೇವೇಗೌಡರು ಸಹ ಮೈತ್ರಿ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ಸಂಪರ್ಕ ತಮ್ಮೊಂದಿಗೆ ಮಾತನಾಡಿರುವುದಾಗಿ ಹೇಳಿದ್ದಾರೆ. ಹೀಗಾಗಿ ಇಲ್ಲಿ ಯಾರ ನಿಲುವು ಅಂತಿಮವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ದೇವೇಗೌಡರು ಹೇಳಿದ್ದೇನು?

ಮಹಾನಗರ ಪಾಲಿಕೆ ಚುನಾವಣೆಗಳನ್ನು (Corporation Election) ನಮ್ಮ ರಾಜ್ಯಾಧ್ಯಕ್ಷರು, ನಗರ ಅಧ್ಯಕ್ಷರು ಮತ್ತು ಕುಮಾರಸ್ವಾಮಿ ಗಂಭೀರವಾಗಿ ಗಭೀರವಾಗಿ ಪರಿಗಣಿಸಿ ಕೆಲಸ ನಿರ್ವಹಿಸಿದರು. ಕಲಬುರಗಿಯಲ್ಲಿ ನಾವು 15 ಸೀಟನ್ನು ಗೆಲ್ಲುತ್ತೇವೆ ಎಂದು ನಿರೀಕ್ಷೆ ಮಾಡಿದ್ದೇವು. ಆದರೆ, ನಾಲ್ಕು ಸೀಟು ಬಂದಿದೆ. ಒಳ್ಳೆಯ ಫೈಟ್​ ನೀಡಿದ್ದೇವೆ. ಕಲಬುರಗಿದಲ್ಲಿ (Gulbarga corporation) ಅಂತಂತ್ರ ಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆ ಪಾಲಿಕೆ ಅಧಿಕಾರ ಹಿಡಿಯಲು ಮಲ್ಲಿಕಾರ್ಜುನ ಖರ್ಗೆ (mallikarjuna Kharge) ಕೂಡ ನಮ್ಮ ಜೊತೆ ಮಾತನಾಡಿದ್ದಾರೆ. ಬಿಜೆಪಿಯವರು ಕೂಡ ಟ್ರೈ ಮಾಡುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಹೇಳಿದ್ದಾರೆ.

ಇದನ್ನು ಓದಿ: Explained: ಯುಪಿ ಚುನಾವಣೆಯಲ್ಲಿ ಓವೈಸಿ ದೊಡ್ಡ ನಷ್ಟ ಅನುಭವಿಸಬಹುದು, ಆದರೆ ಈಗಲೂ ಅವರು ಗೇಮ್ ಚೇಂಜರ್!

ಮೇಯರ್​ಗಿರಿಗಾಗಿ ಮಹಿಳಾ​ ಸದಸ್ಯರ ಲಾಬಿ

ಈ ಬಾರಿ ಕಲಬುರ್ಗಿ ಮೇಯರ್ ಸ್ಥಾನವನ್ನು ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲು ಮಾಡಲಾಗಿದೆ. ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಬಿ ಗೆ ಕೊಡಲಾಗುತ್ತದೆ ಎಂದು ಕಲಬುರ್ಗಿ ಮಹಾನಗರ ಪಾಲಿಕೆ ಅಧಿಕಾರಿ ಸ್ನೇಹಲ್ ಲೋಖಂಡೆ ಹೇಳಿದ್ದಾರೆ. ಈಗ ಬಿಜೆಪಿ ನಾಲ್ವರು ಸಾಮಾನ್ಯ ವರ್ಗದ ಮಹಿಳಾ ಸದಸ್ಯರು ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ಧಾರೆ. ವಾರ್ಡ್ ನಂಬರ್ 5ರ ಗಂಗಮ್ಮ ಮುನಳ್ಳಿ, ವಾರ್ಡ್ ನಂ 6ರ ಅರುಣಾ ದೇವಿ, ವಾರ್ಡ್ ನಂ. 51ರ ಪಾರ್ವತಿ ರಾಜೀವ್ ದೇವದುರ್ಗ, ವಾರ್ಡ್ ನಂ 52ರ ಶೋಭಾ ದೇಸಾಯಿ ಅವರು ಮೇಯತ್ ಹುದ್ದೆಗಾಗಿ ಈಗಲೇ ಪೈಪೋಟಿ ಶುರು ಮಾಡಿದ್ದಾರೆ. ತಮ್ಮ ನಾಯಕರ ಮೂಲಕ ಲಾಬಿ ನಡೆಸುತ್ತಿದ್ದಾರೆ.

  • ವರದಿ: ರಮೇಶ್ ಹಂಡ್ರಂಗಿ

Published by:HR Ramesh
First published: