Explained: ವಿವೇಕದ ಹಲ್ಲು ಕಿತ್ತರೆ ಬುದ್ಧಿ ಕಡಿಮೆಯಾಗುತ್ತಾ? ಈ ನೋವನ್ನು ನುಂಗಬೇಡಿ, ಉಗುಳಿ!

ವಿವೇಕದ ಹಲ್ಲು ಅಡ್ಡಡ್ಡ ಹುಟ್ಟಿದರಂತೂ ಕೇಳುವುದೇ ಬೇಡ, ತಕ್ಷಣ ನಿಮ್ಮ ಪರಿಚಯದ ಹಲ್ಲು ಡಾಕ್ಟರ್ ಹತ್ರ ಓಡಿ! ಖಂಡಿತ ಆ ನೋವನ್ನು ನುಂಗಬೇಡಿ, ಉಗುಳಿ.

ವಿವೇಕದ ಹಲ್ಲು

ವಿವೇಕದ ಹಲ್ಲು

  • Share this:
ಒಂದೇ ಸಮನೆ ಹಲ್ಲುನೋವು, ಇದುವರೆಗೆ ಒಂದೇ ಒಂದು ದಿನ ಹಲ್ಲುನೋವನ್ನು ಅನುಭವಿಸದವರಿಗೂ ಅರೇ! ಇದೇನಿದು? ಜೀವನದಲ್ಲೇ ಹಲ್ಲು ನೋವು ಅನುಭವಿಸಿರದ ನನಗೆ ಇದೆಂಥಾ ಜೀವ ಹಿಂಡುವಂತಾ ಹಲ್ಲುನೋವು ಬಂತಪ್ಪಾ..ಎಂದು ತಲೆಮೇಲೆ ಕೈಹೊತ್ತುಕೊಳ್ಳುವುದುಂಟು. ರಾತ್ರೋರಾತ್ರಿ ಹಲ್ಲು ಡಾಕ್ಟರ್ (Dentist) ಬಳಿ ಓಡುವುದುಂಟು, ನೀವು 20 ರಿಂದ 35 ವರ್ಷದವರಾಗಿದ್ದರಂತೂ ಈ ಹಲ್ಲುನೋವು ನಿಮ್ಮನ್ನು ಕಂಗಾಲು ಮಾಡುತ್ತದೆ. ಇಷ್ಟು ಗಟ್ಟಿಮುಟ್ಟಾಗಿದ್ದೀನಿ, ಒಂದೇ ಸಲ ಈ ಹಲ್ಲುನೋವು ಎಲ್ಲಿಂದ ಬಂತು ಎಂಬ ಪ್ರಶ್ನೆ ಹುಟ್ಟುವುದಂತೂ ಪಕ್ಕಾ. ಅಂದರೆ ನಿಮಗೆ ವಿವೇಕದ ಹಲ್ಲು ಅಥವಾ ವಿಸ್ಟಮ್ ಟೂಥ್ (Wisdom Teeth) ಮೂಡುತ್ತಿರಬಹುದು.

ಆದರೆ ಹೆದರುವ ಅವಶ್ಯಕತೆಯಿಲ್ಲ. ನಿಮಗೂ ಹೀಗಾದಲ್ಲಿ ಈಗಷ್ಟೆ ಬುದ್ಧಿ ಬಲಿಯುತ್ತಿದೆ ಎಂಬ ಮಾತೂ ವಾಡಿಕೆಯಲ್ಲಿದೆ.  ವಿವೇಕದ ಹಲ್ಲು ಹುಟ್ಟುವಾಗ ವಿಪರೀತ ಯಾತನೆಯ ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಾಗಿದ್ದರೆ ಏನಿದು ವಿವೇಕದ ಹಲ್ಲು? ಇಷ್ಟು ದೊಡ್ಡವರಾದ ಮೇಲೂ ಹಲ್ಲು ಬರೋದುಂಟಾ? ನೋವು ಮಾಡದೇ ಈ ಹಲ್ಲಿಗೆ ಹುಟ್ಟೋಕೇ ಬರೋದಿಲ್ವಾ? ಚಿತ್ರ ವಿಚಿತ್ರ ಅನಿಸಿದರೂ ಹೀಗೆಲ್ಲ ಪ್ರಶ್ನೆಗಳು ಮೂಡೇ ಮೂಡುತ್ತವೆ.

ಮನುಷ್ಯರಿಗೆ ಎಷ್ಟು ಹಲ್ಲಿರುತ್ತೆ?
ಈ ಪ್ರಶ್ನೆಗೆ ನಾವು ಚಿಕ್ಕವರಿದ್ದಾಗಿಂದಲೂ 32 ಎಂಬ ಉತ್ತರವನ್ನೇ ಕೇಳಿದ್ದೇವೆ. ಆದರೆ ಈ ಉತ್ತರ ನಮ್ಮ ಅಥವಾ ಈಗಿನ ಜನರೇಶನ್​ಗೆ ಅಪ್ಲೈ ಆಗಲ್ಲ ಎಂದೂ ಹೇಳಲಾಗುತ್ತದೆ. ಈಗಿನ ತಲೆಮಾರಿನ ಜನರಿಗೆ ಹಲ್ಲುಗಳ ಸಂಖ್ಯೆ 32 ಅಲ್ಲವಂತೆಏಕೆಂದರೆ ನಮ್ಮ ಹಿಂದಿನವರಿಗೆ ಹುಟ್ಟುತ್ತಿದ್ದ 3 ಮತ್ತು 4ನೇ ದವಡೆ ಹಲ್ಲುಗಳು ನಮಗೆ ಹುಟ್ಟೋದೇ ಇಲ್ಲವಂತೆ! ಇದಕ್ಕೆ ಕಾರಣವೂ 20ನೇ ವಯಸ್ಸಿನ ನಂತರ ಏನಕ್ಕೂ ಸಂಬಂಧವೇ ಇಲ್ಲದಂತೆ ಏಕಾಏಕಿ ಭಯಂಕರ ಹಲ್ಲುನೋವು ಶುರುವಾಗೋಕೆ ಲಿಂಕ್ ಉಂಟು!

ಯಾವ ಜನ್ಮದಲ್ಲಿ ಯಾರ ಹಲ್ಲು ಕೆಡವಿದ್ದೆನೋ
ನಾವು ಬಾಲ್ಯ ಮುಗಿಸಿ ಯೌವನದ ಒಂದು ನಿರ್ದಿಷ್ಟ ಹಂತಕ್ಕೆ ಬಂದಾಗ ಇಷ್ಟು ದಿನ ಅಡಗಿ ಕುಳಿತಿದ್ದ ವಿವೇಕದ ಹಲ್ಲು ಚಿಗುರಲು ಶುರುವಾಗಿಬಿಡುತ್ತೆ. ಆಗಲೇ ನಿಮಗೆ ಯಾತನೆಯ ಪರಮಾವಧಿ ಎನಿಸುವಂತಹ ಅನುಭವ ಆಗೋದು. ಯಾವ ಜನ್ಮದಲ್ಲಿ ಯಾರ ಹಲ್ಲು ಕೆಡವಿದ್ದೆನೋ ಏನೋ, ಈ ಜನ್ಮದಲ್ಲಿ ದೇವರು ನನಗಿಂಥಾ ಶಿಕ್ಷೆ ಕೊಟ್ಟುಬಿಟ್ಟ ಎಂದು ಅನಿಸಬಹುದು. ಆದರೆ ವಿವೇಕದ ಹಲ್ಲು ಹುಟ್ಟುವುದು ಇದು ನೀವು ದೈಹಿಕವಾಗಿ ಒಂದು ಹಂತಕ್ಕೆ ತಲುಪಿದ ಲಕ್ಷಣ.

ವಿವೇಕದ ಹಲ್ಲು ಹೆಸರು ಬಂದಿದ್ದು ಹೇಗೆ?
ಈ ಹಲ್ಲಿಗೆ ಬುದ್ಧಿವಂತಿಕೆಯ ಹಲ್ಲು ಎಂದೇ ಹೆಸರು ಏಕೆ? ಅದೇ ಹೇಳಿದೆವಲ್ಲ, ಬಾಲ್ಯ ಕಳೆದು ಯೌವನದ ಒಂದು ಹಂತದಲ್ಲಿ ಮೂಡುವ ಹಲ್ಲುಗಳಿವು. ನಮ್ಮ ಅಸಂಬದ್ಧ ಹಠಮಾರಿತನ, ಬಾಲ್ಯದ ಇಲ್ಲಸಲ್ಲದ ರಗಳೆಗಳನ್ನು ಕಳೆದುಕೊಳ್ಳುವ ಹಂತ. ಜಗತ್ತಿಗೆ ಎದುರಾಗಿ ಆಡುತ್ತಿದ್ದ ಮಾತುಗಳೆಲ್ಲ ಕಡಿಮೆಯಾಗಿ, ಓಹೋ! ನನಗೆ ಗೊತ್ತಿಲ್ಲದ ಇಷ್ಟೆಲ್ಲ ಸಂಗತಿಗಳಿವೆಯೇ? ನಾನು ಕಲಿಯೋದು ಇನ್ನೂ ಬೇಕಾದಷ್ಟಿದೆ ಎಂದು ಅರ್ಥ ಮಾಡಿಕೊಳ್ಳುವ ಕಾಲ. ವಿವೇಕ ಮೂಡುವ ವಯಸ್ಸಲ್ಲೇ ಹುಟ್ಟುವ ಕಾರಣಕ್ಕೆ ಈ ಹಲ್ಲಿಗೆ ವಿವೇಕದ ಹಲ್ಲು ಎಂದು ಬಿರುದು!

ಭುಜಬಲ ಪರಾಕ್ರಮಿ
ಈ ಹಿಂದೆ ಮನುಷ್ಯರು ಈಗ ಇರುವ ರೂಢಿಯಂತೆ ಚೆನ್ನಾಗಿ ಬೇಯಿಸಿದ ಆಹಾರ ಸೇವಿಸುತ್ತಿರಲಿಲ್ಲ. ಹಸಿ ಮಾಂಸವನ್ನೋ, ಗಡ್ಡೆ ಗೆಣಸನ್ನೋ ಸೇವಿಸುತ್ತಿದ್ದರು. ಆಗ ಸಹಜವಾಗಿ ಅತ್ಯಂತ ಗಟ್ಟಿ ದವಡೆ ಹಲ್ಲುಗಳ ಅಗತ್ಯವಿತ್ತು. ಅಗೆದು ಅಗೆದು, ಜವಿದು ಜವಿದು ಉಣ್ಣಬೇಕಿತ್ತು. ಅದಕ್ಕೆ ಅಂತಲೇ ವಿಕಸನವಾಗಿದ್ದು ವಿವೇಕದ ಹಲ್ಲು. ಈ ಹಲ್ಲು ಇತರ ಹಲ್ಲುಗಳಂತಲ್ಲ, ಅತ್ಯಂತ ಗಟ್ಟಿ, ಸದೃಢ, ಮೂಳೆಗಳನ್ನೂ ಪುಡಿಪುಡಿ ಮಾಡುವ ಶಕ್ತಿ ಸಾಮರ್ಥ್ಯಗಳ ಭುಜಬಲ ಇಟ್ಟುಕೊಂಡೇ ವಿವೇಕದ ಹಲ್ಲು ಹುಟ್ಟುತ್ತದಂತೆ. ಅದೇ ಕಾರಣಕ್ಕೆ ವಿವೇಕದ ಹಲ್ಲು ಹುಟ್ಟುವಾಗಲೇ ಅಸಾಧ್ಯ ನೋವಾಗುವುದು.

ಇದನ್ನೂ ಓದಿ: Explained: ಏನಿದು ಅಗ್ನಿಪಥ್ ಯೋಜನೆ? ಭಾರತದ ರಕ್ಷಣೆಯಲ್ಲಿ ಇದರ ಮಹತ್ವವೇನು?

ಆದರೆ ಕೊಂಚ ಸಮಾಧಾನಕರ ವಿಷಯ ಅಂದರೆ ಎಲ್ಲರಿಗೂ ವಿವೇಕದ ಹಲ್ಲು ಹುಟ್ಟಲ್ಲ, ಒಂದಾನುವೇಳೆ ಹುಟ್ಟಿದರೂ ಎಲ್ಲರಿಗೂ ಅಷ್ಟೆಲ್ಲ ನೋವಾಗಲ್ಲ, ಪೂರ್ವಜನ್ಮದ ಸುಕೃತವನ್ನು ಹೊತ್ತು ತಂದವರಿಗೆ ಗೊತ್ತೇ ಆಗದಂತೆ ವಿವೇಕದ ಹಲ್ಲು ಹುಟ್ಟುತ್ತದೆ ಎಂದೂ ಭಾವಿಸಬಹುದು!

ಸಂಕಟ ವರ್ಣಿಸಲು ಸಾಧ್ಯವಿಲ್ಲ
ಆದರೆ ಕೆಲವರಿಗೆ ಮಾತ್ರ ವಿವೇಕದ ಹಲ್ಲು ಹುಟ್ಟುವಾಗ ಜೀವ ಹೋದಷ್ಟೇ ಸಂಕಟವಾಗುತ್ತದೆ. ಬಾಯಿ ತೆಗೆಯಲು ಆಗುವುದಿಲ್ಲ. ಒಸಡಿನಲ್ಲಿ ಸೆಳೆತ, ನೋವಾಗುತ್ತದೆ. ಅಕ್ಕಪಕ್ಕದ ಹಲ್ಲುಗಳು ಅಯ್ಯೋ, ಈ ವಿವೇಕದ ಹಲ್ಲಿನ ಆಕ್ರಮಣ ತಡೆಯಲು ಆಗಲ್ಲ ಎಂದು ಕಿರುಚುತ್ತವೆ. ಹಲ್ಲುಜ್ಜಲು ಆಗದು. ವಸಡಿನಲ್ಲಿ ರಕ್ತಸ್ರಾವವೂ ಆಗಬಹುದು. ಬಾಯಿಂದ ಘಂ ಎಂದು ವಾಸನೆ ಬರಬಹುದು.

ಇದನ್ನೂ ಓದಿ: Explained: ವಿದೇಶದಿಂದ ಭಾರತಕ್ಕೆ ಮರಳಿದ ಪುರಾತನ ವಿಗ್ರಹಗಳು! ಎಲ್ಲಿ, ಯಾವಾಗ ಕಾಣೆಯಾಗಿದ್ದವು ಈ ಶಿಲ್ಪಕಲೆಗಳು?

ಅದರಲ್ಲೂ ವಿವೇಕದ ಹಲ್ಲು ಅಡ್ಡಡ್ಡ ಹುಟ್ಟಿದರಂತೂ ಕೇಳುವುದೇ ಬೇಡ, ತಕ್ಷಣ ನಿಮ್ಮ ಪರಿಚಯದ ಹಲ್ಲು ಡಾಕ್ಟರ್ ಹತ್ರ ಓಡಿ! ಖಂಡಿತ ಆ ನೋವನ್ನು ನುಂಗಬೇಡಿ, ಉಗುಳಿ ಅನ್ನುತ್ತಾರೆ ಗಿರಿನಗರದಲ್ಲಿ ಆಸ್ಪತ್ರೆ ಹೊಂದಿರುವ ದಂತವೈದ್ಯೆ ಡಾ. ಕಾವ್ಯಾ

ಈ ನೋವನ್ನು ನುಂಗಬೇಡಿ, ಉಗುಳಿ!
ವಿವೇಕದ ಹಲ್ಲು ಹುಟ್ಟುವ ಲಕ್ಷಣ ಕಂಡರೆ ನೀವು ಹಲ್ಲು ಡಾಕ್ಟರ್​ ಸಲಹೆ ಪಡೆಯಲೇಬೇಕು. ಹಲ್ಲು ಸರಿಯಾಗಿ ಹುಟ್ಟುತ್ತಿದೆಯೇ? ಅಥವಾ ವಕ್ರವಾಗಿ ಮೂಡುತ್ತಿದೆಯೇ? ಎಂದು ಕೇಳಿ. ಹಲ್ಲನ್ನು ಕಿತ್ತುಹಾಕುವ ಅವಶ್ಯಕತೆ ಇದ್ದರೆ ಡಾಕ್ಟರ್ ನೀಡುವ ಸಲಹೆ ಅನುಸರಿಸಿ. ನೋವನ್ನು ನುಂಗಿ ಅನುಭವಿಸುವ ಬದಲು ಹೊರಹಾಕಿಬಿಡಿ. ಯಾವುದೇ ಕಾರಣಕ್ಕೂ ನಿಮಗೆ ನೀವೇ ಔಷಧ ಮಾಡಿಕೊಳ್ಳಲು ಹೋಗಬೇಡಿ. ನಿಮ್ಮ ವಿವೇಕದ ಹಲ್ಲಿಗೂ ನಿಮ್ಮ ಬುದ್ಧಿವಂತಿಕೆಗೂ ಕಿಂಚಿತ್ತೂ ಸಂಬಂಧವಿಲ್ಲ ಹೆದರಬೇಡಿ!
Published by:guruganesh bhat
First published: