Explained: ಕರ್ನಾಟಕದಲ್ಲೂ ಶುರುವಾಗುವುದೇ ಕೋವಿಡ್ 4ನೇ ಅಲೆ? ಸೋಂಕು ನಿಯಂತ್ರಣಕ್ಕೆ ಸಜ್ಜಾಗಿದ್ಯಾ ರಾಜ್ಯ?

ಕರ್ನಾಟಕದಲ್ಲೂ ಶುರುವಾಯ್ತ ಕೋವಿಡ್ 4ನೇ ಅಲೆಯ ಭೀತಿ? ಮತ್ತೆ ರಾಜ್ಯದಲ್ಲಿ ಜಾರಿಯಾಗುತ್ತಾ ಟಫ್ ರೂಲ್ಸ್? ಈ ಬಗ್ಗೆ ತಜ್ಞರು, ಆರೋಗ್ಯ ಸಚಿವರು ಹೇಳಿದ್ದೇನು? ಏ. 27ರಂದು ಪ್ರಧಾನಮಂತ್ರಿಗಳ ಸಭೆ ಬಳಿಕ ಎಲ್ಲವೂ ನಿರ್ಧಾರವಾಗುತ್ತಾ? ಈ ಬಗ್ಗೆ ಇಲ್ಲಿದೆ ಮಾಹಿತಿ...

ಕೋವಿಡ್‌

ಕೋವಿಡ್‌

 • Share this:
  ಸುಮಾರು ಎರಡು ವರ್ಷದಿಂದ ಇಡೀ ವಿಶ್ವವನ್ನೇ ಬೆಂಬಿಡದೆ ಕಾಡುತ್ತಿರುವ ಈ ಕೋವಿಡ್-19 ಸಾಂಕ್ರಾಮಿಕ ರೋಗ ಕಳೆದ ಕೆಲವು ತಿಂಗಳುಗಳಿಂದ ಸ್ವಲ್ಪ ನಿಯಂತ್ರಣದಲ್ಲಿತ್ತು ಎಂದು ಜನರು ನಿಟ್ಟುಸಿರು ಬಿಟ್ಟಿದ್ದರು. ಅಷ್ಟರಲ್ಲಿಯೇ ಮತ್ತೆ ಈಗ 4ನೇ ಅಲೆಯು ಬಂದಪ್ಪಳಿಸಲಿದೆ ಎಂಬ ಭೀತಿ ಜನರ ಮನಸ್ಸಿನಲ್ಲಿ ಮನೆ ಮಾಡಿದೆ. ಈಗ ಭಾರತದಾದ್ಯಂತ ಕೋವಿಡ್ -19 ರ ಸಂಭಾವ್ಯ ನಾಲ್ಕನೇ ಅಲೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ರಾಜ್ಯದಲ್ಲೂ ನಿಧಾನಕ್ಕೆ ಟೆನ್ಷನ್ ಜಾಸ್ತಿಯಾಗುತ್ತಿದೆ. ಈ ಹಿಂದೆ ರಾಜ್ಯ ಆರೋಗ್ಯ ಸಚಿವ ಕೆ.ಸುಧಾಕರ್ ಅವರು ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆದರೆ ಸರ್ಕಾರವು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಮತ್ತು ಇತರ ರಾಜ್ಯಗಳು ಹಾಗೂ ದೇಶಗಳಲ್ಲಿ ಪ್ರಕರಣಗಳ ಹೆಚ್ಚಳವನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಹೇಳಿದ್ದರು.

  ಕರ್ನಾಟಕದಲ್ಲಿ 4ನೇ ಅಲೆ ಬಂದಿದೆಯೇ..?

  ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎಂ.ಕೆ.ಸುದರ್ಶನ್, ಕರ್ನಾಟಕದಲ್ಲಿ ನಾಲ್ಕನೇ ಅಲೆಯ ಯಾವುದೇ ಲಕ್ಷಣಗಳು ಇನ್ನೂ ಕಂಡುಬಂದಿಲ್ಲ ಎಂದು ಹೇಳಿದ್ದಾರೆ. "ನಾವು ಇನ್ನೂ ಕಾದು ನೋಡಬೇಕು ಮತ್ತು ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಮಾಸ್ಕ್ ಬಳಕೆ ಮತ್ತು ಇತರ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸಬೇಕಾಗಿದೆ" ಎಂದು ಸುದರ್ಶನ್ ಹೇಳಿದರು.

  ಲಸಿಕೆ ಪಡೆಯುವಂತೆ ಜನರಲ್ಲಿ ಮನವಿ

  ಇದೇ ರೀತಿಯ ಹೇಳಿಕೆಗಳನ್ನು ನೀಡಿದ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಆಯುಕ್ತ ಡಿ.ರಣದೀಪ್, ಇತರ ರಾಜ್ಯಗಳಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆಗಳನ್ನು ಸಹ ತುಂಬಾನೇ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಹೇಳಿದರು. "ಪ್ರಸ್ತುತ, ಜೀನೋಮ್ ಸೀಕ್ವೆನ್ಸಿಂಗ್ ಯಾವುದೇ ಹೊಸ ರೂಪಾಂತರವನ್ನು ಪತ್ತೆ ಹಚ್ಚಿಲ್ಲ. ಆದರೆ ಜನರು ಇನ್ನೂ ಲಸಿಕೆ ತೆಗೆದುಕೊಳ್ಳದಿದ್ದರೆ, ಬೇಗನೆ ಹೋಗಿ ಲಸಿಕೆ ತೆಗೆದುಕೊಳ್ಳಿರಿ ಎಂದು ನಾವು ಬಲವಾಗಿ ಮನವಿ ಮಾಡುತ್ತೇವೆ" ಎಂದು ಹೇಳಿದರು.

  ಇದನ್ನೂ ಓದಿ: Corona 4th Wave: "ಕೊರೋನಾದಿಂದ ಕಾಪಾಡಮ್ಮ" ಅಂತ ಸೋಂಕಿನ ಮಾರಿಯಮ್ಮನಿಗೆ ಪ್ರಾಣಿ ಬಲಿ ಕೊಟ್ಟ ಜನರು!

  ಹೆಚ್ಚುತ್ತಿರುವ ಪ್ರಕರಣಗಳ ಮೇಲೆ ನಿಗಾ ಇಟ್ಟ ಇಲಾಖೆ

  ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್ ಅವರು ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಇತರ ಕೆಲವು ರಾಜ್ಯಗಳು ಕೋವಿಡ್ ಪ್ರಕರಣಗಳಲ್ಲಿ ಕ್ರಮೇಣ ಹೆಚ್ಚಳವನ್ನು ವರದಿ ಮಾಡುತ್ತಿರುವುದರಿಂದ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದರು. "ದೆಹಲಿಯಲ್ಲಿ ಸೋಂಕಿತರಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಮತ್ತು ರೋಗದ ತೀವ್ರತೆಯನ್ನು ಪರಿಶೀಲಿಸಲು ನಾನು ಆರೋಗ್ಯ ಇಲಾಖೆಗೆ ಕೇಳಿದ್ದೇನೆ. ಇಂದು ಇಲಾಖೆ ಪರಿಶೀಲನಾ ಸಭೆ ನಡೆಯಲಿದ್ದು, ಅಲ್ಲಿ ಇದನ್ನು ಪರಿಶೀಲಿಸಲಾಗುವುದು'' ಎಂದು ಶುಕ್ರವಾರ ಹೇಳಿದ್ದರು.

  ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು ಉತ್ತಮ

  ಮಾಸ್ಕ್ ಕಡ್ಡಾಯ ನಿಯಮವನ್ನು ಮರಳಿ ತರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಕರ್ ಅವರು “ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಅವಲಂಬಿಸಿ, ಅಗತ್ಯವಿದ್ದರೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. "ಸದ್ಯಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ, ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಅವುಗಳನ್ನು ಧರಿಸಲು ನಾವು ಸಲಹೆ ನೀಡಿದ್ದೇವೆ" ಎಂದು ಅವರು ಹೇಳಿದರು.

  ಕೋವಿಡ್-19 ನಿರ್ಬಂಧಗಳು ಮತ್ತೆ ಬರಲಿವೆಯೇ?

  ಮತ್ತೊಮ್ಮೆ ಹಂತ ಹಂತವಾಗಿ ಕೋವಿಡ್ ನಿರ್ಬಂಧಗಳನ್ನು ಮರಳಿ ತರಲಾಗುತ್ತದೆಯೇ ಎಂದು ಕೇಳಿದಾಗ, ಸುಧಾಕರ್ ಅವರು “ಈ ಹಂತದಲ್ಲಿ ಅದರ ಬಗ್ಗೆ ಪ್ರತಿಕ್ರಿಯಿಸುವುದು ಕಷ್ಟ. ಮಾಸ್ಕ್ ಬಳಕೆಯು ಸಾರ್ವಜನಿಕರು ಪಾಲಿಸಬಹುದಾದ ಕನಿಷ್ಠ ಮುಂಜಾಗ್ರತೆ ಕ್ರಮವಾಗಿದೆ. ಇದನ್ನು ಅನುಸರಿಸುವುದರಿಂದ ಜನರಿಗೆ ಯಾವುದೇ ಅನಾನುಕೂಲತೆ ಉಂಟಾಗುವುದಿಲ್ಲ" ಎಂದು ಹೇಳಿದರು.

  ಎಚ್ಚರಿಕೆ ನೀಡಿದ ಡಾ. ಮಂಜುನಾಥ್

  ಕೊರೊನಾ ನಾಲ್ಕನೇ ಅಲೆ ಆರಂಭವಾಗಿದೆ, ಮುಂದಿನ ನಾಲ್ಕೈದು ವಾರಗಳಲ್ಲಿ ಇದು ಇನ್ನೂ ಹೆಚ್ಚಾಗಲಿದೆ, ಸಾರ್ವಜನಿಕರು ಎಚ್ಚರ ತಪ್ಪಬಾರದು ಎಂದು ಕೋವಿಡ್ ಟಾಸ್ಕ್ ಫೋರ್ಸ್ ಕಮಿಟಿ ಸದಸ್ಯ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಎಚ್ಚರಿಕೆಯನ್ನು ನೀಡಿದ್ದಾರೆ.

  ದೇಶದ ಮೂರ್ನಾಲ್ಕು ರಾಜ್ಯಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದಲ್ಲೂ ಇದು ಆರಂಭವಾಗಿದೆ, ವೈರಸ್ ರೂಪಾಂತರಗೊಳ್ಳುವುದು ಸಾಮಾನ್ಯ, ಆದರೆ, ಜನರು ಎಚ್ಚರಿಕೆಯಿಂದ ಇರಬೇಕು"ಎಂದು ಹೇಳಿದ್ದಾರೆ.

  ಈ ಬಾರಿಯೂ ಹಳೆಯ ಲಕ್ಷಣಗಳೇ ಇರುತ್ತಾ?

  "ಕೋವಿಡ್ ಎರಡನೇ ಮತ್ತು ಮೂರನೇ ಅಲೆಯಲ್ಲಿ ಯಾವ ರೀತಿ ಕೊರೊನಾ ರೋಗಲಕ್ಷಣಗಳಿದ್ದವೋ, ಅದೇ ರೀತಿ ನಾಲ್ಕನೇ ಅಲೆಯಲ್ಲೂ ಇರಲಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಕಡಿಮೆಯಿರಲಿದೆ. ಆದರೆ ಜನರು ಎಚ್ಚರ ತಪ್ಪಬಾರದು" ಎಂದು ಡಾ.ಮಂಜುನಾಥ್ ಸಲಹೆಯನ್ನು ನೀಡಿದ್ದಾರೆ.

  ಗಂಭೀರ ಕಾಯಿಲೆ ಇದ್ದವರು ಕಾಳಜಿ ವಹಿಸಿ

  "ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಇರುವವರು, ಕ್ಯಾನ್ಸರ್ ರೋಗಿಗಳು, ಡಯಾಲಿಸಿಸ್ ಚಿಕಿತ್ಸೆಗೆ ಒಳಪಡುವವರು, ಅಸ್ತಮಾ ಕಾಯಿಲೆ ಇರುವವರು ಎಚ್ಚರವಾಗಿರಬೇಕು. ಈಗ ಎದುರಾಗಿರುವುದು ಹೊಸ ತಳಿಯೇನೂ ಅಲ್ಲ, ವೈರಸ್ ರೂಪಾಂತರಗೊಳ್ಳುತ್ತಲೇ ಇರುತ್ತದೆ" ಎಂದು ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.

  ಇದನ್ನೂ ಓದಿ: COVID 19: ಮತ್ತೆ ಮತ್ತೆ ಕೋವಿಡ್ ಸೋಂಕಿಗೆ ತುತ್ತಾಗ್ತಾ ಇದ್ದೀರಾ? ಇದೇ ಕಾರಣ ಅಂತೆ ನೋಡಿ, ಹುಷಾರಾಗಿರಿ!

  ಕರ್ನಾಟಕದಲ್ಲಿ ಮತ್ತೆ ಜಾರಿಯಾಗುತ್ತಾ ಟಫ್ ರೂಲ್ಸ್?

  ಕೋವಿಡ್ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ  ಸೂಚನೆ ನೀಡಿದೆ‌‌. ಸ್ವತಃ ಪ್ರಧಾನಮಂತ್ರಿಗಳೇ ವಿಡಿಯೋ ಕಾನ್ಫರನ್ಸ್‌ ಸಭೆ ಕರೆದಿದ್ದಾರೆ. ಏ. 27 ರಂದು ಪ್ರಧಾನಮಂತ್ರಿಗಳ ವಿಸಿ ಬಳಿಕ‌ ನಡೆಯಲಿದೆ. ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಪಿಎಂ ಸಭೆ ಬಳಿಕ ರಾಜ್ಯದಲ್ಲಿ ಸ್ಪಷ್ಟ ಸೂಚನೆ ಹೊರಡಿಸುತ್ತೇವೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
  Published by:Annappa Achari
  First published: