ಭ್ರಷ್ಟಾಚಾರದ ಆರೋಪದಡಿಯಲ್ಲಿ ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Pakistan Former Prime Minister Imran Khan) ಅವರನ್ನು ಬಂಧಿಸುವ ಪೊಲೀಸರ ಪ್ರಯತ್ನವನ್ನು ವಿಫಲಗೊಳಿಸಿರುವ ಅವರ ಬೆಂಬಲಿಗರು, ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಪೊಲೀಸರು ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (PTI) ಕಾರ್ಯಕರ್ತರ ನಡುವಿನ ಸಂಘರ್ಷದಲ್ಲಿ ಹಲವಾರು ಜನರು ಗಾಯಗೊಂಡಿದ್ದು ಪಾಕ್‌ನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ ಹಾಗೂ ಹಲವಾರು ನಗರಗಳು ಹೊತ್ತಿ ಉರಿಯುತ್ತಿವೆ ಅಂತೆಯೇ ಪ್ರತಿಭಟನೆಯ (Protest) ಕಿಡಿ ಪಾಕ್‌ನಾದ್ಯಂತ ವ್ಯಾಪಿಸಿದೆ.
ಬಂಧನದ ನೆಪದಲ್ಲಿ ಹತ್ಯೆ ಮಾಡುವುದು ಉದ್ದೇಶ
ತನ್ನನ್ನು ಬಂಧಿಸುವುದು ನಾಟಕವಾಗಿದ್ದು, ಅಪಹರಿಸಿ ಹತ್ಯೆ ಮಾಡುವುದೇ ಉದ್ದೇಶವಾಗಿದೆ ಎಂದು ಸ್ವತಃ ಇಮ್ರಾನ್ ಖಾನ್ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಇಮ್ರಾನ್ ಖಾನ್‌ರನ್ನು ಬಂಧಿಸುವ ಸರಕಾರದ ಪ್ರಯತ್ನವನ್ನು ಧಿಕ್ಕರಿಸಿ ಅವರ ಲಾಹೋರ್ ನಿವಾಸದ ಹೊರಗೆ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಪದೇ ಪದೇ ಘರ್ಷಣೆ ಸಂಭವಿಸಿದೆ.
ಕಳೆದ ವರ್ಷ ಅವಿಶ್ವಾಸ ಮತದಿಂದ ಖಾನ್‌ರನ್ನು ಪದಚ್ಯುತಿಗೊಳಿಸಲಾಯಿತು ಹಾಗೂ ಅವಧಿಪೂರ್ವ ಚುನಾವಣೆಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಹಾಗೂ ಕಚೇರಿಗೆ ಮರಳಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಕಾನೂನು ಪ್ರಕರಣಗಳ ಸುಳಿಯಲ್ಲಿ ಸಿಲುಕಿಹಾಕಿಕೊಂಡಿದ್ದಾರೆ. ಹಾಗೂ ಇದೆಲ್ಲಾ ತನ್ನನ್ನು ಹತ್ಯೆಮಾಡುವುದು ಸರಕಾರದ ಹುನ್ನಾರ ಎಂದು ಸ್ವತಃ ಖಾನ್ ಹೇಳಿಕೆ ನೀಡಿದ್ದಾರೆ.
ಸಂಘರ್ಷದ ನಡುವೆಯೇ ವಿಡಿಯೋ ಬಿಡುಗಡೆ ಮಾಡಿದ ಖಾನ್
ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಬೆಂಬಲಿಗರೊಂದಿಗೆ ಪೊಲೀಸರು ರಾತ್ರಿಯಿಡೀ ಅವರ ಜಮಾನ್ ಪಾರ್ಕ್ ನಿವಾಸದ ಬಳಿ ಯುದ್ಧಗಳನ್ನು ನಡೆಸಿದರು, ಅಶ್ರುವಾಯು ಸಿಡಿಸಿದರು ಮತ್ತು ಕೋಪಗೊಂಡ ಜನಸಮೂಹದಿಂದ ಎಸೆದ ಕಲ್ಲುಗಳಿಂದ ತಮ್ಮನ್ನು ರಕ್ಷಿಸಿಕೊಂಡರು. ಇದೇ ಸಂಘರ್ಷದ ನಡುವೆ ಖಾನ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
ತನ್ನ ಬೆಂಬಲಿಗರಿಗಾಗಿ ಖಾನ್ ಹೇಳಿಕೆಯೊಂದನ್ನು ನೀಡಿದ್ದು, ಅವರು (ಪೊಲೀಸರು) ಮತ್ತೊಮ್ಮೆ ಸಿದ್ಧರಾಗಿದ್ದಾರೆ ಹಾಗೂ ಮತ್ತೊಮ್ಮೆ ಬರಲಿದ್ದಾರೆ. ನಮ್ಮವರ ಮೇಲೆ ಆಶ್ರುವಾಯು ಸಿಡಿಸಲಿದ್ದಾರೆ ಹಾಗೂ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಾರೆ ಆದರೆ ಹಾಗೆ ಮಾಡಲು ಅವರಿಗೆ ಯಾವುದೇ ಸಮರ್ಥನೆ ಇಲ್ಲ ಎಂಬುದನ್ನು ನೀವು ತಿಳಿದಿರಬೇಕು ಎಂದು ಖಾನ್ ವಿಡಿಯೋದಲ್ಲಿ ತಿಳಿಸಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಬಂಧಿಸಲು ಕಾರಣವೇನು?
ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯ ವಿಧಿಸಿರುವ ದಿನಾಂಕಗಳನ್ನು ತಪ್ಪಿಸಿರುವ ಖಾನ್ ಅವರ ಲಾಹೋರ್‌ನ ಪೂರ್ವ ನಗರದಲ್ಲಿರುವ ಮನೆಗೆ ಪೊಲೀಸರನ್ನು ಕಳುಹಿಸಿರುವುದು ಇತ್ತೀಚಿನ ವಾರಗಳಲ್ಲಿ ಇದು ಎರಡನೇ ಬಾರಿಯಾಗಿದೆ. ಬಂಧನ ವಾರಂಟ್ ಸಲ್ಲಿಸಲು ಖಾನ್ ನಿವಾಸಕ್ಕೆ ಆಗಾಗ್ಗೆ ಪೊಲೀಸರನ್ನು ಕಳುಹಿಸಲಾಗುತ್ತಿದೆ.
ಖಾನ್ ನಿವಾಸದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಇಸ್ಲಾಮಾಬಾದ್ ಪೊಲೀಸ್‌ನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಸೈಯದ್ ಶಹಜಾದ್ ನದೀಮ್ ಬುಖಾರಿ ಖಾನ್, ವಾರಂಟ್ ಕಾರ್ಯಗತಗೊಳಿಸಲು ಹಾಗೂ ಇಮ್ರಾನ್ ಖಾನ್‌ರನ್ನು ಬಂಧಿಸಲು ನಾವು ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Pakistan: ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡುವುದರಲ್ಲೂ ಕಳ್ಳಾಟ, ಟರ್ಕಿ ನೀಡಿದ್ದ ಸಾಮಗ್ರಿಯನ್ನೇ ರೀಪ್ಯಾಕ್ ಮಾಡಿ ಕಳಿಸಿದ ಪಾಕ್!
ಖಾನ್ ಬಂಧಿಸಲು ಪೊಲೀಸರು ಬಂದಿದ್ದಾರೆ ಎಂಬುವುದನ್ನು ತಿಳಿದೊಡನೆ ಖಾನ್‌ರ ಹಲವಾರು ಬೆಂಬಲಿಗರು ಅಧಿಕಾರಿಗಳನ್ನು ಭೇಟಿಯಾದರು. ಕೆಲವರು ಕೆಂಪು ಹಾಗೂ ಹಸಿರು ಬಣ್ಣದ ಪಿಟಿಐ ಫ್ಲ್ಯಾಗ್‌ಗಳಿಂದ ಸುತ್ತಿದ ಕಲ್ಲು ಹಾಗೂ ಕೋಲುಗಳನ್ನು ಪೊಲೀಸರತ್ತ ಎಸೆಯುತ್ತಿದ್ದರು. 70 ವರ್ಷ ವಯಸ್ಸಿನ ವಿರೋಧ ಪಕ್ಷದ ನಾಯಕನ ಬಂಧನ ವಾರಂಟ್‌ನೊಂದಿಗೆ ಪೊಲೀಸರು ನಿವಾಸಕ್ಕೆ ತೆರಳಿದಾಗ ಖಾನ್ ಬೆಂಬಲಿಗರು ಪೊಲೀಸರನ್ನು ಸುತ್ತುವರಿದರು ಹಾಗೂ ಅವರ ದಾರಿಗೆ ಅಡ್ಡಲಾಗಿ ನಿಂತರು. ಬೆಂಬಲಿಗರನ್ನು ಚದುರಿಸಲು ಪೊಲೀಸರು ನೀರಿನ ಫಿರಂಗಿ ಹಾಗೂ ಆಶ್ರುವಾಯುವನ್ನು ಹಾರಿಸಿದರು.
ಪಿಟಿಐ ಉಪ ನಾಯಕ ಶಾ ಮಹಮೂದ್ ಖುರೇಷಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಾವು ಶಾಂತಿಯಿಂದ ವ್ಯವಹರಿಸಲು ಬಯಸುತ್ತೇವೆ ಎಂದು ತಿಳಿಸಿದ್ದಾರೆ. ಪೊಲೀಸರು ಬಂಧನದ ವಾರಂಟ್ ಅನ್ನು ತಮಗೆ ಹಸ್ತಾಂತರಿಸಬೇಕು ಎಂದು ಖುರೇಷಿ ಆಗ್ರಹಿಸಿದ್ದು, ರಕ್ತಪಾತವನ್ನು ತಪ್ಪಿಸಲು ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ.
ಇಮ್ರಾನ್ ಖಾನ್ ವಿರುದ್ಧ ಆರೋಪಿಸಿರುವ ಭ್ರಷ್ಟಾಚಾರದ ಪ್ರಕರಣವೇನು?
ಖಾನ್ ಅವರು ಪ್ರಧಾನಿಯಾಗಿದ್ದಾಗ ಸ್ವೀಕರಿಸಿದ ಉಡುಗೊರೆಗಳನ್ನು ಅಥವಾ ಅವುಗಳ ಮಾರಾಟದಿಂದ ಗಳಿಸಿದ ಲಾಭವನ್ನು ಘೋಷಿಸದ ಆರೋಪಗಳಿಗೆ ಉತ್ತರಿಸಲು ನ್ಯಾಯಾಲಯಕ್ಕೆ ಖಾನ್‌ರನ್ನು ಕರೆಸಲಾಯಿತು.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥರು ತೋಶಖಾನಾ ಎಂಬ ರಾಜ್ಯದ ಡಿಪಾಸಿಟರಿಯಿಂದ ರಿಯಾಯಿತಿ ದರದಲ್ಲಿ ಪ್ರಧಾನ ಮಂತ್ರಿಯಾಗಿ ಪಡೆದ ದುಬಾರಿ ಗ್ರಾಫ್ ಕೈಗಡಿಯಾರ ಸೇರಿದಂತೆ ಉಡುಗೊರೆಗಳನ್ನು ಖರೀದಿಸಲು ಅಡ್ಡಗಾಲು ಹಾಕಿದ್ದಾರೆ ಮತ್ತು ಅವುಗಳನ್ನು ಲಾಭಕ್ಕಾಗಿ ಮಾರಾಟ ಮಾಡಿದ್ದಾರೆ ಎಂಬುದು ಖಾನ್ ಅವರ ಮೇಲಿನ ಆರೋಪವಾಗಿದೆ.
ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಆಗಸ್ಟ್ 2022 ರಲ್ಲಿ ತೋಶಖಾನಾ ವಿವಾದವು ಪುನರಾವರ್ತನೆಯಾಯಿತು, ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನೇತೃತ್ವದ ಸಮ್ಮಿಶ್ರ ಸರ್ಕಾರವು ಉಡುಗೊರೆಗಳ ಮಾಹಿತಿಯನ್ನು ಬಹಿರಂಗಪಡಿಸಲು ವಿಫಲವಾಗಿದೆ ಎಂದು ಆರೋಪಿಸಿ ಇಮ್ರಾನ್ ಖಾನ್ ವಿರುದ್ಧ ಮೊಕದ್ದಮೆ ಹೂಡಿತು. ತೋಶಖಾನಾಗೆ ಮತ್ತು ಕೆಲವು ಉಡುಗೊರೆಗಳ "ಕಾನೂನುಬಾಹಿರ" ಮಾರಾಟದಿಂದ ಬಂದ ಆದಾಯ ವರದಿಯನ್ನು ನೀಡಲಾಗಿದೆ ಎಂಬುದು ಆರೋಪವಾಗಿತ್ತು.
ತೋಶಖಾನಾ ಕ್ಯಾಬಿನೆಟ್ ವಿಭಾಗದ ಆಡಳಿತ ವ್ಯಾಪ್ತಿಯಲ್ಲಿರುವ ಇಲಾಖೆಯಾಗಿದ್ದು, ಸಾರ್ವಜನಿಕ ಅಧಿಕಾರಿಗಳು ಸ್ವೀಕರಿಸಿದ ಉಡುಗೊರೆಗಳು ಮತ್ತು ಇತರ ದುಬಾರಿ ವಸ್ತುಗಳನ್ನು ಸಂರಕ್ಷಿಸುತ್ತದೆ ಎಂದು ವರದಿ ತಿಳಿಸಿದೆ. ಇದನ್ನು 1974 ರಲ್ಲಿ ಸ್ಥಾಪಿಸಲಾಯಿತು ಮತ್ತು ಅದರ ನಿಯಮಗಳ ಪ್ರಕಾರ ಕ್ಯಾಬಿನೆಟ್ ವಿಭಾಗಕ್ಕೆ ಸ್ವೀಕರಿಸಿದ ಉಡುಗೊರೆಗಳು ಮತ್ತು ಇತರ ವಸ್ತುಗಳನ್ನು ಘೋಷಿಸಲು ಅಧಿಕಾರಿಗಳು ಬಾಧ್ಯಸ್ಥರಾಗಿದ್ದಾರೆ, ಎಂದು ವರದಿ ತಿಳಿಸಿದೆ.
ಆದಾಗ್ಯೂ, 2018 ರಲ್ಲಿ ಇಮ್ರಾನ್ ಅಧಿಕಾರಕ್ಕೆ ಬಂದಾಗ, ಅವರು ತಮ್ಮ ಅಧಿಕಾರಾವಧಿಯಲ್ಲಿ ಪಡೆದ ಹಲವಾರು ಉಡುಗೊರೆಗಳ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು, ವಿವರಗಳನ್ನು ಬಹಿರಂಗಪಡಿಸುವುದು ಇತರ ದೇಶಗಳೊಂದಿಗಿನ ಸಂಬಂಧಕ್ಕೆ ಧಕ್ಕೆಯಾಗುತ್ತದೆ ಎಂದು ಖಾನ್ ತಿಳಿಸಿದ್ದರು ಎಂದು ವರದಿ ಹೇಳುತ್ತದೆ.
ಇದನ್ನೂ ಓದಿ: Turkey Earthquake: ಇದೇ ಕಾರಣಕ್ಕೆ ಟರ್ಕಿಯಲ್ಲಿ ಆಗಾಗ್ಗೆ ವಿನಾಶಕಾರಿ ಭೂಕಂಪ ಸಂಭವಿಸೋದು!
ತದನಂತರ ಮಾಜಿ ಪ್ರಧಾನಿ ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ (ECP) ಪತ್ರವೊಂದನ್ನು ಹೊರಡಿಸಿ, ಕನಿಷ್ಠ ನಾಲ್ಕು ಅಂತಹ ಉಡುಗೊರೆಗಳನ್ನು ಮಾರಾಟ ಮಾಡುವುದಾಗಿ ಒಪ್ಪಿಕೊಂಡರು ಆದರೆ ಸರ್ಕಾರದಿಂದ ಅವುಗಳ ಮೌಲ್ಯದ ಶೇಕಡಾವಾರು ಮೊತ್ತಕ್ಕೆ ಖರೀದಿಸಿರುವುದಾಗಿ ಹೇಳಿಕೊಂಡರು.
ಹತ್ಯೆಯ ಭಯ
ಪೂರ್ವ ಪಂಜಾಬ್ ಪ್ರಾಂತ್ಯದ ಪ್ರತಿಭಟನಾ ರ‍್ಯಾಲಿಯಲ್ಲಿ ಬಂದೂಕಿನ ದಾಳಿಯಲ್ಲಿ ಗಾಯಗೊಂಡಾಗ, ದೋಷಾರೋಪಣೆಯನ್ನು ಎದುರಿಸಲು ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ಪ್ರಯಾಣಿಸಲು ವೈದ್ಯಕೀಯವಾಗಿ ಅರ್ಹರಲ್ಲ ಎಂಬ ಹೇಳಿಕೆ ನೀಡಿ ಇಮ್ರಾನ್ ಖಾನ್ ನವೆಂಬರ್‌ನ ನಂತರ ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಪ್ಪಿಸಿಕೊಂಡಿದ್ದಾರೆ.
ಕಳೆದ ವಾರ ಮೂರು ನ್ಯಾಯಾಲಯಗಳ ಮುಂದೆ ಹಾಜರಾಗಲು ಇಸ್ಲಾಮಾಬಾದ್‌ಗೆ ತೆರಳಿದ್ದರು ಆದರೆ ನಾಲ್ಕನೇ ನ್ಯಾಯಾಲಯದ ಮುಂದೆ ಹಾಜರಾಗಿಲ್ಲ. ತನ್ನ ಮೇಲೆ ಭಯೋತ್ಪಾದನೆ ಆರೋಪಗಳನ್ನು ಸುಖಾಸುಮ್ಮನೆ ಮಾಡಲಾಗಿದೆ ಎಂದು ಖಾನ್ ತಿಳಿಸಿದ್ದು, ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಸರಕಾರ ನಡೆಸಿರುವ ಸಂಚು ಎಂಬುದಾಗಿ ಮಾಜಿ ಕ್ರಿಕೆಟ್ ತಾರೆ ದೂರಿದ್ದು ತನ್ನನ್ನು ಅಪಖ್ಯಾತಿಗೊಳಿಸಲು ಈ ಕೃತ್ಯಗಳನ್ನು ಎಸಗಲಾಗುತ್ತಿದೆ ಎಂದು ದೂರಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗುವ ದಾರಿಯಲ್ಲೇ ಖಾನ್ ಅವರನ್ನು ಕೊಲ್ಲಲು ಪ್ರಯತ್ನಿಸಲಾಗಿದೆ ಹಲವಾರು ಬಾರಿ ಈ ಸಂಚು ನಡೆದಿದೆ ಎಂದು ಖಾನ್ ತಿಳಿಸಿದ್ದಾರೆ.
ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶರು, ಅವರ ಪತ್ನಿ ಮತ್ತು ಇಬ್ಬರು ಮಕ್ಕಳ ಹತ್ಯೆಯ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಇಸ್ಲಾಮಾಬಾದ್‌ನ ಸ್ವಾಬಿ ಜಿಲ್ಲೆಯಲ್ಲಿ ಅಪರಿಚಿತ ಬಂದೂಕುಧಾರಿಗಳು ನ್ಯಾಯಾಧೀಶರ ವಾಹನದ ಮೇಲೆ ಗುಂಡು ಹಾರಿಸಿ ಕುಟುಂಬವನ್ನೇ ಸರ್ವನಾಶಗೊಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಐಎಸ್‌ಐ ಉನ್ನತ ಅಧಿಕಾರಿಯಿಂದ ಪ್ರಾಣಭಯವಿದೆ
ಖಾನ್ ತನ್ನ ಪಕ್ಷದ ನಾಯಕರು ಮತ್ತು ಸಾಮಾಜಿಕ ಮಾಧ್ಯಮದ ಕಾರ್ಯಕರ್ತರನ್ನು ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದಕ್ಕಾಗಿ ಉನ್ನತ ISI ಅಧಿಕಾರಿಯನ್ನು ಉಲ್ಲೇಖಿಸಿ "ಡರ್ಟಿ ಹ್ಯಾರಿ" ಎಂದು ಉಲ್ಲೇಖಿಸಿದ್ದಾರೆ. ಆತನೊಬ್ಬ ಮಾನಸಿಕ ರೋಗಿ. ಈತನಂತಹ ಹಲವಾರ ವ್ಯಕ್ತಿಗಳಿಂದ ತನಗೆ ಜೀವಬೆದರಿಕೆ ಇದೆ ಎಂದು ಖಾನ್ ತಿಳಿಸಿದ್ದಾರೆ. ವರದಿಗಳ ಪ್ರಕಾರ, ಖಾನ್ ಅವರ 'ಡರ್ಟಿ ಹ್ಯಾರಿ' ಉಲ್ಲೇಖವು ಐಎಸ್‌ಐ ಮಹಾನಿರ್ದೇಶಕ ನದೀಮ್ ಅಂಜುಮ್‌ಗೆ ಸಂಬಂಧಿಸಿದೆ.
ಇದನ್ನೂ ಓದಿ: Pakistan: ಪಾಕಿಸ್ತಾನದ ಮೊದಲ ಟ್ರಾನ್ಸ್‌ಜೆಂಡರ್ ಟಿವಿ ನಿರೂಪಕಿ ಮಾರ್ವಿಯಾ ಮಲಿಕ್ ಮೇಲೆ ಗುಂಡಿನ ದಾಳಿ!
ಡರ್ಟಿ ಹ್ಯಾರಿ ಪದವು 1970 ರ ದಶಕದ ಕ್ಲಾಸಿಕ್ ಕ್ರಿಮಿನಲ್ ಥ್ರಿಲ್ಲರ್ ಚಲನಚಿತ್ರದಿಂದ ಸ್ಯಾನ್ ಫ್ರಾನ್ಸಿಸ್ಕೊ ಪೊಲೀಸ್ ತನಿಖಾಧಿಕಾರಿ "ಡರ್ಟಿ ಹ್ಯಾರಿ ಕ್ಯಾಲಹನ್" ಬಂದಿದ್ದು ತನಿಖಾಧಿಕಾರಿ ಕಾನೂನು ಜವಬ್ದಾರಿಗಳನ್ನು ಅರ್ಥಮಾಡುವ ಸಮಯದಲ್ಲಿ ಸೇಡು ತೀರಿಸಿಕೊಳ್ಳುವ ಕಥಾಹಂದರವನ್ನು ಹೊಂದಿದೆ.
ಕ್ಯಾಲಹನ್ ಆಗಾಗ್ಗೆ ತನ್ನ ಮೇಲಾಧಿಕಾರಿಗಳೊಂದಿಗೆ ಸಂಘರ್ಷ ನಡೆಸುತ್ತಿರುತ್ತಾನೆ ಹಾಗೂ ಪೊಲೀಸ್ ಪಡೆಯಲ್ಲಿ ಆತನನ್ನು ದಂಗೆಕೋರನಂತೆ ಕಾಣಲಾಗುತ್ತದೆ. ಆತನ ಸ್ವಭಾವಕ್ಕೆ ತಕ್ಕಂತೆ ಆತನಿಗೆ ಕೆಲಸಗಳನ್ನು ನೀಡಲಾಗುತ್ತದೆ ಹೀಗಾಗಿ ಡರ್ಟಿ ಹ್ಯಾರಿ ಎಂಬ ಹೆಸರು ಕ್ಯಾಲಹನ್‌ಗಿರುತ್ತದೆ.
ಪಾಕ್‌ನ ರಾಜಕೀಯ ಹಿಂಸಾಚಾರ
ಪಾಕ್‌ನ ರಾಜಕೀಯ ಹಿಂಸಾಚಾರಕ್ಕೆ ಸುದೀರ್ಘ ಇತಿಹಾಸವಿದೆ. ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರನ್ನು ಡಿಸೆಂಬರ್ 2007 ರಲ್ಲಿ ಇಸ್ಲಾಮಾಬಾದ್ ಬಳಿಯ ರಾವಲ್ಪಿಂಡಿ ನಗರದಲ್ಲಿ ಚುನಾವಣಾ ರ‍್ಯಾಲಿ ನಡೆಸಿದ ನಂತರ ಬಂದೂಕು ಮತ್ತು ಬಾಂಬ್ ದಾಳಿಯಲ್ಲಿ ಹತ್ಯೆ ಮಾಡಲಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಖಾನ್ ಅವರ ಸಾರ್ವಜನಿಕ ಹುದ್ದೆಗೆ ನಿಷೇಧ ಹೇರಿದಾಗ ಖಾನ್ ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಖಾನ್ ಹೇಳಿಕೊಂಡಿದ್ದರು ಅಂತೆಯೇ ತಮ್ಮ ವಿರುದ್ಧ ಪಿತೂರಿ ನಡೆಸಿದ ಒಬ್ಬೊಬ್ಬ ವ್ಯಕ್ತಿಯ ಕುರಿತು ಅವರು ವಿಡಿಯೋ ಬಿಡುಗಡೆ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ