• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಜನರಲ್‌ಗಳ ಕದನಕ್ಕೆ ಹೊತ್ತಿ ಉರಿಯುತ್ತಿದೆ ಸುಡಾನ್: ಇತರ ದೇಶಗಳ ಆತಂಕ ಹೆಚ್ಚಿಸುತ್ತಿರುವುದೇಕೆ ಈ ಸಂಘರ್ಷ?

Explained: ಜನರಲ್‌ಗಳ ಕದನಕ್ಕೆ ಹೊತ್ತಿ ಉರಿಯುತ್ತಿದೆ ಸುಡಾನ್: ಇತರ ದೇಶಗಳ ಆತಂಕ ಹೆಚ್ಚಿಸುತ್ತಿರುವುದೇಕೆ ಈ ಸಂಘರ್ಷ?

ಸುಡಾನ್ ಕದನ

ಸುಡಾನ್ ಕದನ

ಮೊದಲು ಖಾರ್ಟೂಮ್‌ನಿಂದ ಪ್ರಾರಂಭವಾದ ಸಂಘರ್ಷ ಈಗ ಇಡೀ ದೇಶವನ್ನೇ ವ್ಯಾಪಿಸಿದೆ. ಮಿನಿ ಸಮರದಂತೆ ಕಾಣುತ್ತಿರುವ ಸುಡಾನ್‌ ಪರಿಸ್ಥಿತಿಯಿಂದಾಗಿ ಜನ ಆಹಾರ ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುತ್ತಿದ್ದಾರೆ.

 • Trending Desk
 • 2-MIN READ
 • Last Updated :
 • Bangalore [Bangalore], India
 • Share this:

ಸೇನೆ ಹಾಗೂ ಅರೆಸೇನಾಪಡೆಗಳ ಸಂಘರ್ಷಕ್ಕೆ ಗುರಿಯಾಗಿರುವ ಸುಡಾನ್‌ ಹೊತ್ತಿ ಹೊರಿಯುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಸುಡಾನ್ ರಾಜಧಾನಿ ಖಾಟೂಮ್ ಸೇರಿದಂತೆ ಹಲವು ನಗರಗಳಲ್ಲಿ ಗುಂಡಿನ ದಾಳಿ ಸೇರಿದಂತೆ ಭೀಕರ ಯುದ್ಧವೇ ನಡೆಯುತ್ತಿದೆ. ಮೊದಲು ಖಾರ್ಟೂಮ್‌ನಿಂದ ಪ್ರಾರಂಭವಾದ ಸಂಘರ್ಷ ಈಗ ಇಡೀ ದೇಶವನ್ನೇ ವ್ಯಾಪಿಸಿದೆ. ಮಿನಿ ಸಮರದಂತೆ ಕಾಣುತ್ತಿರುವ ಸುಡಾನ್‌ ಪರಿಸ್ಥಿತಿಯಿಂದಾಗಿ ಜನ ಆಹಾರ ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುತ್ತಿದ್ದಾರೆ.


ಹಲವಾರು ಸಾವು-ನೋವು


ಮಿಲಿಟರಿ ಮತ್ತು ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ನಡುವೆ ಉಂಟಾದ ಸಂಘರ್ಷ ಎಲ್ಲೇ ಮೀರುತ್ತಿದ್ದು, ಭೀಕರ ಗುಂಡಿನ ದಾಳಿ ಕೂಡ ನಡೆಯುತ್ತಿದೆ. ಅನಿರೀಕ್ಷಿತ ಗುಂಡಿನ ದಾಳಿಯಿಂದಾಗಿ ನೂರಾರು ಜನರು ದಾರುಣವಾಗಿ ಸಾವನ್ನಪ್ಪುತ್ತಿದ್ದಾರೆ.


ಇಲ್ಲಿಯವರೆಗೆ ಸುಡಾನ್‌ನಲ್ಲಿ ನಡೆದ ತೀವ್ರ ಹಿಂಸಾಚಾರವು ಕನಿಷ್ಠ 420 ಜನರ ಸಾವಿಗೆ ಕಾರಣವಾಗಿದೆ ಮತ್ತು 3700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಲೆಫ್ಟಿನೆಂಟ್ ಜನರಲ್ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ನೇತೃತ್ವದ ಮೊಹಮ್ಮದ್ ಹಮ್ದಾನ್ ದಗಾಲೊ ಮತ್ತು ಹೆಮೆಟಿ ಎಂದು ಕರೆಯಲ್ಪಡುವ ಅರೆಸೈನಿಕ ಗುಂಪಿನ ರಾಪಿಡ್ ಸಪೋರ್ಟ್ ಫೋರ್ಸಸ್ (ಆರ್‌ಎಸ್‌ಎಫ್) ನಡುವೆ ನಡೆಯುತ್ತಿರುವ ಸಂಗರ್ಷ ದೇಶಿಗರನ್ನು ಸೇರಿ ವಿದೇಶಿಗರನ್ನು ಸಹ ಹೈರಾಣು ಮಾಡಿದೆ.


ಇದನ್ನೂ ಓದಿ: ಮತ್ತೊಮ್ಮೆ ಗೆದ್ದು ಬೀಗುತ್ತಾರಾ ರೂಪಾಲಿ ನಾಯ್ಕ್? ಕಾರವಾರ ಶಾಸಕಿಯ ಪರಿಚಯ ಇಲ್ಲಿದೆ


ವಿದೇಶಿಗರ ರಕ್ಷಣೆ ಮತ್ತು ಸ್ಥಳಾಂತರ


ಸುಡಾನ್‌ನ ಮಿಲಿಟರಿ ಮತ್ತು ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ನಡುವೆ ಉಂಟಾದ ಸಂಘರ್ಷದಲ್ಲಿ ಸಿಲುಕಿಕೊಂಡಿರುವ ವಿದೇಶಿಗರ ರಕ್ಷಣೆ ಕೂಡ ಮಾಡಲಾಗುತ್ತಿದೆ.


ಭಾರತ ಸೇರಿದಂತೆ ಇತರ ದೇಶಗಳು ತಮ್ಮ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಹರಸಾಹಸ ಪಡುತ್ತಿವೆ. ಯುಎಸ್, ಬ್ರಿಟನ್, ಫ್ರಾನ್ಸ್, ಇಟಲಿ, ರಷ್ಯಾ, ದಕ್ಷಿಣ ಕೊರಿಯಾ ಮತ್ತು ಹಲವಾರು ಅರಬ್ ರಾಷ್ಟ್ರಗಳು ಭಾನುವಾರ (ಏಪ್ರಿಲ್ 23) ದೇಶದಿಂದ ಪ್ರಜೆಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರುವ ಪ್ರಯತ್ನದಲ್ಲಿವೆ. ಇನ್ನೂ ಭಾರತ ಸುಡಾನ್‌ನಲ್ಲಿ ಸಿಲುಕಿರುವ 3,000 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸಿದ್ಧವಾಗಿದೆ.


ಭಾರತೀಯರ ರಕ್ಷಣೆಗೆ ‘ಆಪರೇಷನ್ ಕಾವೇರಿʼ


ಸಂಘರ್ಷಪೀಡಿತ ಸುಡಾನ್​ನಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಸಲುವಾಗಿ ಕೇಂದ್ರ ಸರ್ಕಾರವು ಸೋಮವಾರ ‘ಆಪರೇಷನ್ ಕಾವೇರಿʼಗೆ ಚಾಲನೆ ನೀಡಿದೆ.
ಸೇನೆ ಮತ್ತು ಅರೆಸೇನಾ ಪಡೆಗಳ ಮಧ್ಯೆ ಸಂಘರ್ಷ ನಡೆಯುತ್ತಿರುವ ಸುಡಾನ್​ನಲ್ಲಿ ಕನ್ನಡಿಗರೂ ಸೇರಿದಂತೆ ನೂರಾರು ಮಂದಿ ಭಾರತೀಯರು ಸಿಲುಕಿದ್ದಾರೆ. ಸುಡಾನ್‌ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರಲು ‘ಆಪರೇಷನ್ ಕಾವೇರಿ’ ಕಾರ್ಯಾಚರಣೆ ನಡೆಸಲಾಗುತ್ತಿದೆ.


ಸುಮಾರು 500 ಭಾರತೀಯರು ಸುಡಾನ್ ಬಂದರನ್ನು ತಲುಪಿದ್ದಾರೆ. ಅವರನ್ನು ಕರೆತರಲು ನಮ್ಮ ಹಡಗುಗಳು ಮತ್ತು ವಿಮಾನಗಳು ಸಜ್ಜಾಗಿವೆ. ಸುಡಾನ್‌ನಲ್ಲಿರುವ ಎಲ್ಲರಿಗೂ ಸಹಾಯ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.


ಏನಿದು ಸುಡಾನ್‌ ಸಂಘರ್ಷ? ಸುಡಾನ್ ಅಂತರ್ಯುದ್ಧಕ್ಕೆ ಕಾರಣವೇನು?


2019 ರಲ್ಲಿ ಆರಂಭವಾದ ಸಂಘರ್ಷದ ಕಿಡಿ ಇಂದು ಸುಡಾನ್‌ನನ್ನು ಧಗಧಗ ಉರಿಯುವಂತೆ ಮಾಡಿದೆ. 10,000-ಬಲವಾದ RSF ಅನ್ನು ಸೈನ್ಯದಲ್ಲಿ ಹೇಗೆ ಸಂಯೋಜಿಸಬೇಕು ಮತ್ತು ಯಾವ ಪ್ರಾಧಿಕಾರವು ಆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಬೇಕು ಎಂಬುದರ ಕುರಿತು ಬುರ್ಹಾನ್ ಮತ್ತು ದಗಾಲೊ ಈ ಇಬ್ಬರು ಪ್ರತಿಸ್ಫರ್ಧಿ ಜನರಲ್‌ಗಳ ನಡುವೆ ವರ್ಷಗಳಿಂದ ತಿಕ್ಕಾಟ ನಡೆಯುತ್ತಲೇ ಇದೆ.


ಸೇನೆಯು ರಾಷ್ಟ್ರದಾದ್ಯಂತ ಆರ್‌ಎಸ್‌ಎಫ್‌ನ ಇತ್ತೀಚಿನ ಮರುನಿಯೋಜನೆಯನ್ನು ಪ್ರಚೋದನಕಾರಿ ಕೃತ್ಯ ಮತ್ತು ಅಪಾಯವೆಂದು ಪರಿಗಣಿಸಿದ್ದು, ಈ ವಿಚಾರವಾಗಿ ಸುಡಾನ್‌ನ ಮಿಲಿಟರಿ ಮತ್ತು ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ನಡುವೆ ಏಪ್ರಿಲ್ 15 ರಿಂದ ಎರಡು ಗುಂಪುಗಳ ನಡುವೆ ತೀವ್ರ ಮಾರಾಮಾರಿ ನಡೆಯಿತು. ಅಷ್ಟಕ್ಕೆ ನಿಲ್ಲದ ಕದನ ಇನ್ನೂ ಸಹ ಮುಂದುವರೆಯುತ್ತಿದೆ.


ಸುಡಾನ್‌ನಲ್ಲಿ ಯಾವ ದೇಶಗಳು ಪಾಲನ್ನು ಹೊಂದಿವೆ? ಈ ಸಂಘರ್ಷ ಇತರೆ ದೇಶಗಳ ಆತಂಕ ಹೆಚ್ಚಿಸುತ್ತಿರುವುದೇಕೆ?


ಆಫ್ರಿಕಾ ನೆರೆಯ ರಾಜ್ಯಗಳು 


ಈಜಿಪ್ಟ್, ಇಥಿಯೋಪಿಯಾ, ಲಿಬಿಯಾ, ಚಾಡ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಎರಿಟ್ರಿಯಾ ಮತ್ತು ದಕ್ಷಿಣ ಸುಡಾನ್ ಈ ಏಳು ದೇಶಗಳ ಗಡಿಯನ್ನು ಹಂಚಿಕೊಂಡಿದೆ. ಆದ್ದರಿಂದ, ಮಿಲಿಟರಿ ಮತ್ತು ಆರ್‌ಎಸ್‌ಎಫ್ ನಡುವಿನ ನಡೆಯುತ್ತಿರುವ ಯುದ್ಧವು ನೆರೆಯ ದೇಶಗಳಿಗೆ ಹರಡುತ್ತದೆ ಎಂದು ಅನೇಕ ವಿಶ್ಲೇಷಕರು ಆತಂಕ ಪಡುತ್ತಿದ್ದಾರೆ.


ಅಸೋಸಿಯೇಟೆಡ್ ಪ್ರೆಸ್‌ನೊಂದಿಗೆ ಮಾತನಾಡುತ್ತಾ, ಇಂಟರ್ನ್ಯಾಷನಲ್ ಕ್ರೈಸಿಸ್ ಗ್ರೂಪ್‌ನ ಅಲನ್ ಬೋಸ್ವೆಲ್ "ಸುಡಾನ್‌ನಲ್ಲಿ ಏನಾಗುತ್ತದೆಯೋ ಅದು ಸುಡಾನ್‌ಗೆ ಮಾತ್ರ ಸೀಮಿತವಾಗಿರುವುದಿಲ್ಲ, ಇದು ನೆರೆಯ ದೇಶಕ್ಕೂ ಹಬ್ಬುತ್ತದೆ" ಎಂದು ಹೇಳಿದ್ದಾರೆ. ಈ ಎಲ್ಲಾ ತಜ್ಞರ ಊಹೆಗಳು ಈಗ ಇತರೆ ದೇಶಗಳನ್ನು ಮತ್ತಷ್ಟು ಬೆಚ್ಚಿಬೀಳಿಸಿದೆ.


ಈಜಿಪ್ಟ್ ದೇಶ ಕೂಡ ಸುಡಾನ್‌ನ ಮಿಲಿಟರಿಯೊಂದಿಗೆ ಬಲವಾದ ಬಾಂಧವ್ಯವನ್ನು ಹಂಚಿಕೊಂಡಿದ್ದು, ಸುಡಾನ್‌ ಸಂಘರ್ಷ ಈ ದೇಶದ ಮೇಲೂ ಎಫೆಕ್ಟ್‌ ಆಗಬಹುದು ಎನ್ನಲಾಗಿದೆ.


ಈಜಿಪ್ಟ್‌ನ ನೈಲ್‌ ನದಿಯ ಮಹತ್ವಾಕಾಂಕ್ಷೆಯ ಜಲವಿದ್ಯುತ್ ಅಣೆಕಟ್ಟಿನ ಯೋಜನೆಯಲ್ಲಿ ಇಥಿಯೋಪಿಯಾ ಮತ್ತು ಸುಡಾನ್ ಎರಡೂ ದೇಶದ ಪಾತ್ರವಿರುವುದರಿಂದ ಈಜಿಫ್ಟ್‌ಗೆ ಈ ಸಂಘರ್ಷದ ಆತಂಕ ಹೆಚ್ಚಿದೆ.


ಸಂಯುಕ್ತ ಅರಬ್ ಸಂಸ್ಥಾಪನೆಗಳು


ದಕ್ಷಿಣ ಸುಡಾನ್, ಸುಡಾನ್‌ನಿಂದ ಬೇರ್ಪಟ್ಟ ನಂತರ ಸಂಯುಕ್ತ ಅರಬ್ ಸಂಸ್ಥಾಪನೆಗಳು ಖಾರ್ಟೂಮ್‌ನ ತೈಲ ಸಂಪನ್ಮೂಲಗಳ 75 ಪ್ರತಿಶತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.


ಕುಗ್ಗುತ್ತಿರುವ ಆರ್ಥಿಕತೆಯನ್ನು ನಿಭಾಯಿಸುವ ಪ್ರಯತ್ನದಲ್ಲಿ, ಸುಡಾನ್ ಯುಎಇ ಸೇರಿ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಿತು. ಇದರಲ್ಲಿ ಸಂಯುಕ್ತ ಅರಬ್ ಸಂಸ್ಥಾಪನೆ ಸುಡಾನ್‌ ಜೊತೆ ಮುಖ್ಯವಾಗಿ ಉಳಿದುಕೊಂಡಿತು.


ಇದನ್ನೂ ಓದಿ: Sudan Crisis: ಸುಡಾನ್‌ ಸಂಘರ್ಷಕ್ಕೆ 200 ಮಂದಿ ಬಲಿ, 1800 ಜನಕ್ಕೆ ಗಾಯ! ಅಂತರ್ಯುದ್ಧದಲ್ಲಿ ಸಿಲುಕಿ 31 ಕನ್ನಡಿಗರ ಪರದಾಟ!


ತೈಲ-ಸಮೃದ್ಧ ಪಶ್ಚಿಮ ಏಷ್ಯಾದ ರಾಷ್ಟ್ರ ಸುಡಾನ್‌ ಆಫ್ರಿಕಾದ ಹಾರ್ನ್‌ನಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಯುಎಇನಲ್ಲಿ ಉಂಟಾದ ಒಂದು ಸಂದರ್ಭವನ್ನು ಬಳಸಿಕೊಂಡಿತು.


ಅದೇನಪ್ಪಾ ಎಂದರೆ ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರ ವಿರುದ್ಧದ ಯುದ್ಧದಲ್ಲಿ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾಕ್ಕೆ ಸಹಾಯ ಮಾಡಲು ಸುಡಾನ್ ತನ್ನ ಸಾವಿರಾರು ಸೈನಿಕರನ್ನು ಆರ್‌ಎಸ್‌ಎಫ್ ಮುಖ್ಯಸ್ಥ ಡಾಗಾಲೊ ಅವರ ನೇತೃತ್ವದಲ್ಲಿ ಕಳುಹಿಸಿಕೊಟ್ಟಿತು.


ಈ ಘಟನೆ ಸುಡಾನ್‌ ಮತ್ತು ಯುಎಇನ ಸಂಬಂಧವನ್ನು ನಿಕಟಗೊಳಿಸಿತು. ಇದಕ್ಕೆ ಪ್ರತಿಯಾಗಿ, ದಗಾಲೊ ದೊಡ್ಡ ಮೊತ್ತದ ಹಣವನ್ನು ಪಡೆದರೂ ಸಹ ಇಲ್ಲಿಂದ ಸುಡಾನ್‌ನ ಮಿಲಿಟರಿ ಮತ್ತು ಆರ್‌ಎಸ್‌ಎಫ್ ನಡುವೆ ಬೆಂಕಿ ಹತ್ತಿಕೊಳ್ಳಲು ಪ್ರಾರಂಭವಾಗಿತ್ತು.


ರಷ್ಯಾ


300 ಪಡೆಗಳು ಮತ್ತು ನಾಲ್ಕು ಹಡಗುಗಳನ್ನು ಪೋರ್ಟ್ ಸುಡಾನ್‌ನಲ್ಲಿ ಆಯೋಜಿಸುವ ಸಾಮರ್ಥ್ಯವನ್ನು ಹೊಂದಿರುವ ನೌಕಾ ನೆಲೆಯನ್ನು ನಿರ್ಮಿಸಲು ರಷ್ಯಾದ ಕ್ರೆಮ್ಲಿನ್ ಹಲವು ವರ್ಷಗಳಿಂದ ಬಯಸುತ್ತಿದೆ.


ಇದು ವಿಶ್ವದ ಅತ್ಯಂತ ಜನನಿಬಿಡ ಮತ್ತು ಅತ್ಯಂತ ಸ್ಪರ್ಧೆಯ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ಹೀಗಾಗಿ ರಷ್ಯಾ ಆ ಸ್ಥಳದಲ್ಲಿ ತನ್ನ ನೆಲೆ ಕಂಡುಕೊಳ್ಳಲು ಬಯಸುತ್ತಿರುವುದರಿಂದ ಸುಡಾನ್‌ ಜೊತೆ ಉತ್ತಮ ಸಂಬಂಧ ಹೊಂದಿದೆ. ಸುಡಾನ್‌ ಜೊತೆ ಈ ವೇಳೆ ತಾನು ದೂರ ಸರಿದರೆ ಸಮುದ್ರ ಮಾರ್ಗ ಕೈಬಿಡುವ ಸಂದರ್ಭ ಕೂಡ ಬರಬಹುದು ಎಂದು ರಷ್ಯಾ ಆತಂಕಪಡುತ್ತಿದೆ.


ಇದಲ್ಲದೆ, ರಷ್ಯಾದ ವ್ಯಾಗ್ನರ್ ಗುಂಪು ಕೂಡ ಸುಡಾನ್‌ನಲ್ಲಿ ತೊಡಗಿಸಿಕೊಂಡಿದೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ, ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಆಳವಾದ ಸಂಬಂಧವನ್ನು ಹೊಂದಿರುವ ಸಂಸ್ಥೆಯು ದೇಶದ ಚಿನ್ನ ಮತ್ತು ಯುರೇನಿಯಂ ನಿಕ್ಷೇಪಗಳಲ್ಲಿ ಪಾಲನ್ನು ಹೊಂದಿದೆ ಮತ್ತು ಡಾರ್ಫೂರ್ನ ಪ್ರಕ್ಷುಬ್ಧ ಪ್ರದೇಶಕ್ಕೆ ಕೂಲಿ ಸೈನಿಕರನ್ನು ಪೂರೈಸುತ್ತದೆ ಎನ್ನಲಾಗಿದೆ.


ಇಸ್ರೇಲ್


ಇಸ್ರೇಲ್ ತನ್ನ ಸರ್ವಕಾಲಿಕ ಶತ್ರು ಇರಾನ್ ವಿರುದ್ಧ ರಾಜಕೀಯ ಮತ್ತು ಮಿಲಿಟರಿ ರಣತಂತ್ರ ಹೆಣೆಯಲು ಇತರ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳ ನೆರವು ಪಡೆಯಲು ಬಯಸಿದಂತೆ ಸುಡಾನ್‌ನ ಬೆಂಬಲವನ್ನು ಸಹ ಬಯಸಿತ್ತು.


ಇದರ ಪರಿಣಾಮವಾಗಿ, 2020ರಲ್ಲಿ, ಎರಡೂ ದೇಶಗಳು ಸಂಬಂಧಗಳನ್ನು ಸಾಮಾನ್ಯಗೊಳಿಸಲು ಒಪ್ಪಿಕೊಂಡವು ಮತ್ತು ಮೂರು ವರ್ಷಗಳ ನಂತರ ಅಧಿಕೃತವಾಗಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು.
ಇದು ಮಾತ್ರವಲ್ಲದೆ, ಕಳೆದ ವರ್ಷ, ಇಸ್ರೇಲ್‌ನ ವಿದೇಶಿ ಗುಪ್ತಚರ ಸಂಸ್ಥೆ ಮೊಸ್ಸಾದ್‌ನ ಅಧಿಕಾರಿಗಳು ಆಫ್ರಿಕನ್ ದೇಶಕ್ಕೆ ಭೇಟಿ ನೀಡಿ ದಗಾಲೊ ಸೇರಿದಂತೆ ಭದ್ರತಾ ನಾಯಕರನ್ನು ಭೇಟಿ ಮಾಡಿದರು, ಅವರು ಭಯೋತ್ಪಾದನೆ ಮತ್ತು ಗುಪ್ತಚರ ಸಹಕಾರವನ್ನು ನೀಡಿದರು ಎಂದು ಎನ್‌ವೈಟಿ ವರದಿ ಮಾಡಿದೆ.


ಒಟ್ಟಾರೆ ಒಂದಲ್ಲ ಒಂದು ಕಾರಣಕ್ಕೆ ಸುಡಾನ್‌ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ದೇಶಗಳಿಗೆ ಸುಡಾನ್‌ನಲ್ಲಿ ನಡೆಯುತ್ತಿರುವ ಆತಂರಿಕ ಗಲಾಟೆ ನಡುಕ ತರಿಸಿದೆ.


ಪ್ರಬಲ ಜನರಲ್‌ಗಳ ನಡುವಿನ ಪೈಪೋಟಿ ಯುದ್ಧಕ್ಕಿಂತ ಕಮ್ಮಿ ಇಲ್ಲ ಎಂದು ಹಲವು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಈ ಜಗಳವು ದೇಶದ ಕುಸಿತಕ್ಕೆ ಕಾರಣವಾಗುವ ವ್ಯಾಪಕ ಸಂಘರ್ಷವಾಗಿ ಬದಲಾಗಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

First published: