Explainer: ದಶಕಗಳಲ್ಲೇ ಶ್ರೀಲಂಕಾ ಅನುಭವಿಸುತ್ತಿರುವ ಅತ್ಯಂತ ಭೀಕರ ಅರ್ಥಿಕ ಬಿಕ್ಕಟ್ಟಿಗೆ ಕಾರಣ ಏನು?

ಶ್ರೀಲಂಕಾ ತನ್ನ ಇತಿಹಾಸದ ಅತಿ ಕೆಟ್ಟದಾಗಿರುವ ಆರ್ಥಿಕ ಸಂಕಷ್ಟದಿಂದ (Financial Crisis) ನಲಗುತ್ತಿದೆ. ಅಲ್ಲಿನ ಸರ್ಕಾರದ ಹಣಕಾಸಿನ ವಿಷಯದಲ್ಲಾದ ಅಸಮರ್ಪಕ ಆಡಳಿತ, ಅಕಾಲಿಕವಾಗಿ ವಿಧಿಸಲಾದ ತೆರಿಗೆ (Tax)-ಕಡಿತಗಳು ಹಾಗೂ ಈ ಸಂದರ್ಭದಲ್ಲಿ ಉಂಟಾದ ಕೋವಿಡ್ (Covid) ಬಿಕ್ಕಟ್ಟು ಇವೆಲ್ಲದರ ಪರಿಣಾಮಗಳಿಂದಾಗಿ ಪ್ರಸ್ತುತ ಶ್ರೀಲಂಕಾದ ಆರ್ಥಿಕ ಸ್ಥಿತಿ ಹೀನಾಯವಾದ ಸ್ಥಾನವನ್ನು ತಲುಪಿದೆ ಎಂದರೆ ತಪ್ಪಾಗಲಾರದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೇಶಕ್ಕೆ ಸಂಬಂಧಿಸಿದಂತೆ ಆರ್ಥಿಕ ಬಿಕ್ಕಟ್ಟು ಎನ್ನುವುದು ಹೊಸದಾಗಿ ಪ್ರಚಲಿತದಲ್ಲಿರುವ ಶಬ್ದವಂತೂ ಅಲ್ಲವೆ ಅಲ್ಲ. ಈಗಾಗಲೇ ಐತಿಹಾಸಿಕವಾಗಿ ಹಲವು ದೇಶಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಿದ ಉದಾಹರಣೆಗಳಿವೆ. ಸದ್ಯ, ಏಷಿಯಾ ಖಂಡದಲ್ಲಿ ತೀವ್ರತರವಾದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ದೇಶವೆಂದರೆ ಶ್ರೀಲಂಕಾ (Sri Lanka). ಹೌದು, ಶ್ರೀಲಂಕಾ ತನ್ನ ಇತಿಹಾಸದ ಅತಿ ಕೆಟ್ಟದಾಗಿರುವ ಆರ್ಥಿಕ ಸಂಕಷ್ಟದಿಂದ (Financial Crisis) ನಲಗುತ್ತಿದೆ. ಅಲ್ಲಿನ ಸರ್ಕಾರದ ಹಣಕಾಸಿನ ವಿಷಯದಲ್ಲಾದ ಅಸಮರ್ಪಕ ಆಡಳಿತ, ಅಕಾಲಿಕವಾಗಿ ವಿಧಿಸಲಾದ ತೆರಿಗೆ (Tax)-ಕಡಿತಗಳು ಹಾಗೂ ಈ ಸಂದರ್ಭದಲ್ಲಿ ಉಂಟಾದ ಕೋವಿಡ್ (Covid) ಬಿಕ್ಕಟ್ಟು ಇವೆಲ್ಲದರ ಪರಿಣಾಮಗಳಿಂದಾಗಿ ಪ್ರಸ್ತುತ ಶ್ರೀಲಂಕಾದ ಆರ್ಥಿಕ ಸ್ಥಿತಿ ಹೀನಾಯವಾದ ಸ್ಥಾನವನ್ನು ತಲುಪಿದೆ ಎಂದರೆ ತಪ್ಪಾಗಲಾರದು.

ಹಾಗೇ ನೋಡಿದರೆ ಶ್ರೀಲಂಕಾಗೆ ಈ ಸ್ಥಿತಿಯು ನಿನ್ನೆ ಮೊನ್ನೆ ಬಂದ ಸ್ಥಿತಿಯಲ್ಲ. ಈಗಾಗಲೇ ಆ ದೇಶವು ಹಲವು ಸಮಸ್ಯೆಗಳನ್ನು ಕೆಲ ಕಾಲದಿಂದ ಅನುಭವಿಸುತ್ತಲೇ ಇತ್ತು. ರಾಶಿ ರಾಶಿ ಮೊತ್ತದಲ್ಲಿ ಪಡೆದ ವಿದೇಶಿ ಸಾಲ, ಒಂದೇ ಗಗನಮುಖಿಯಾಗಿಯೇ ಚಲಿಸಿದ ಹಣದುಬ್ಬರ, ಬೇಗನೆ ವ್ಯಯವಾದ ಫಾರೀನ್ ರಿಸರ್ವ್, ವೇಗವಾಗಿ ಕುಸಿದ ದೇಶೀಯ ಕರೆನ್ಸಿ ಇವೆಲ್ಲದರ ಮಧ್ಯೆ ಇಂಧನ ಕೊರತೆ, ಲಾಕ್ಡೌನ್ ಇವೆಲ್ಲವೂ ಸೇರಿ ಆ ದೇಶವನ್ನು ಹಿಂಡಿ ಹಿಪ್ಪೆಯಾಗಿಸಿದೆ.

ಶ್ರೀಲಂಕಾದ ಸರ್ಕಾರಿ ಇಲಾಖೆಯ ದತ್ತಾಂಶಗಳನ್ನು ಪರಿಗಣಿಸುವುದಾದರೆ ದೇಶವು 2021 ರಲ್ಲಿ ದೇಶದ ಆರ್ಥಿಕ ಪ್ರಗತಿಯು ನಿರೀಕ್ಷೆ ಮಾಡಿದ್ದಕ್ಕಿಂತ ಕಡಿಮೆ ಗತಿಯಲ್ಲಿ ಏರಿದೆ. ಒಟ್ಟಾರೆ ವರ್ಷದ ದರ ಕೇವಲ 3.7% ಇತ್ತೆಂದು ತಿಳಿದು ಬಂದಿದೆ. ನಾಲ್ಕನೇ ತ್ರೈಮಾಸಿಕದಲ್ಲಂತೂ ಈ ಬೆಳವಣಿಗೆಯು 1.8% ಇತ್ತೆಂದು ದಾಖಲೆಗಳಿಂದ ತಿಳಿದುಬಂದಿದೆ. ಈ ಪ್ರಗತಿಯ ದರವು ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್ ಅಂದಾಜು ಮಾಡಿದ್ದ ವಾರ್ಷಿಕ 5% ದರಕ್ಕಿಂತಲೂ ಕಡಿಮೆಯಾಗಿರುವುದು ಆರ್ಥಿಕವಾಗಿ ದೇಶಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಇದನ್ನೂ ಓದಿ: ಪ್ರಿಂಟ್ ಮಾಡಲು ಪೇಪರ್ ಇಲ್ಲ ಎಂದು ಪರೀಕ್ಷೆಗಳನ್ನೇ ರದ್ದು ಮಾಡಿದ Sri Lanka.. ಇಷ್ಟೊಂದು ಬಡತನವೇಕೆ?

ಈಗಾಗಲೇ ಶ್ರೀಲಂಕಾದ ನೆರೆಹೊರೆಯ ರಾಷ್ಟ್ರಗಳಾದ ಭಾರತ, ಚೀನಾ, ಬಾಂಗ್ಲಾದೇಶಗಳು ನೆರವು ನೀಡಲು ಮುಂದೆ ಬಂದಿವೆ. ಅಲ್ಲದೆ, ಶ್ರೀಲಂಕಾ ತನ್ನನ್ನು ತಾನು ಈ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಹಾಯ ಮಾಡುವಂತೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (IMF) ಸಂಸ್ಥೆಯ ಮೊರೆಯೂ ಹೋಗಿದೆ.

ಆರ್ಥಿಕ ಬಿಕ್ಕಟ್ಟಿಗೆ ಕಾರಣ:

ಸಾಮಾನ್ಯವಾಗಿ ಕೋವಿಡ್ ಬಿಕ್ಕಟ್ಟಿನಿಂದಾಗಿ ವಿಶ್ವದ ಬಹುತೇಕ ರಾಷ್ಟ್ರಗಳ ಆರ್ಥಿಕ ಪ್ರಗತಿಗೆ ಹೆಚ್ಚಿನ ಹೊಡೆತ ಬಿದ್ದಿರುವುದು ಗೊತ್ತೆ ಇದೆ. ಅದರಂತೆ ಶ್ರೀಲಂಕಾ ದೇಶಕ್ಕೂ ಇದರ ಹೊಡೆತ "ಚೆರಿ ಆನ್ ಟಾಪ್" ಆಗಿತ್ತಷ್ಟೆ. ಅಂದರೆ ಕೋವಿಡ್ ಸಂಕಟ ಉಂಟಾಗುವುದಕ್ಕಿಂತ ಮುಂಚೆಯೇ ಶ್ರೀಲಂಕಾ ಆರ್ಥಿಕ ಸಂಕಷ್ಟಗಳಿಂದ ಪರದಾಡುತ್ತಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ಹಾಕಲಾದ ಲಾಕ್ಡೌನ್ ಕ್ರಮ ಅಲಿನ ದೊಡ್ಡದಾದ ಮಾನವ ಸಂಪನ್ಮೂಲ ಶಕ್ತಿಯ ಕ್ಷೇತ್ರವನ್ನೇ ತಲ್ಲಣಗೊಳಿಸಿ ಅತಿಯಾದ ಆರ್ಥಿಕ ಹಿನ್ನಡೆ ಉಂಟಾಗುವಂತೆ ಮಾಡಿತು.

ಇದರಿಂದಾಗಿ, ಎರಡು ವರ್ಷಗಳಲ್ಲಿ ದೇಶದ ವಿದೇಶಿ ವಿನಿಮಯ ರಿಸರ್ವ್ ಎಂಬುದರಲ್ಲಿ ಶೇ. 70 ರಷ್ಟು ಅಗಾಧ ಕುಸಿತ ಉಂಟಾಗಿ ಅದು ಸದ್ಯ ಕೇವಲ 2.31 ಬಿಲಿಯನ್ ಡಾಲರ್ ಮೊತ್ತಕ್ಕೆ ಬಂದು ತಲುಪಿದ್ದು ದೇಶವು ಅವಶ್ಯಕವಾದ ಆಹಾರ ಮತ್ತು ಇಂಧನದಂತಹ ವಸ್ತುಗಳನ್ನೂ ಸಹ ಆಮದು ಮಾಡಿಕೊಳ್ಳಲು ಪರದಾಡುತ್ತಿದೆ.

ವಿದೇಶಿ ವಿನಿಮಯದ ವಿಚಾರಕ್ಕೆ ಬಂದರೆ ಶ್ರೀಲಂಕಾ ದೇಶಕ್ಕೆ ಮುಖ್ಯ ಮೂಲವಿರುವುದು ಪ್ರವಾಸೋದ್ಯಮ ಕ್ಷೇತ್ರದಲ್ಲಿ. ದೇಶವು ತನ್ನ ಎಲ್ಲ ದಿಕ್ಕುಗಳಿಂದಲೂ ಸಮುದ್ರದಿಂದ ಸುತ್ತುವರೆದಿದ್ದು ಒಂದು ದ್ವೀಪ ದೇಶವಾಗಿ ಕಣ್ಸೆಳೆಯುವುದರಿಂದ ಸಾಕಷ್ಟು ವಿದೇಶಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರು. ಹಾಗಾಗಿ ಶ್ರೀಲಂಕಾ ವಿದೇಶಿ ವಿನಿಮಯದ ಮೂಲಕ ಹೆಚ್ಚು ಫಾರೀನ್ ರಿಸರ್ವ್ ಅನ್ನು ಹೊಂದುತ್ತಿತ್ತು. ಆದರೆ, ಕೋವಿಡ್ ಒಡ್ಡಿದ ಘಾತಕ ಪರಿಣಾಮದಿಂದಾಗಿ ಇಲ್ಲಿನ ಪ್ರವಾಸೋದ್ಯಮ ಕ್ಷೇತ್ರ ಅಧೋಗತಿಗೆ ತಳ್ಳಲ್ಪಟ್ಟ ಕಾರಣ ವಿದೇಶಿ ವಿನಿಮಯದಲ್ಲಿ ಸಾಕಷ್ಟು ಕುಸಿತವಾಗಿದೆ. ಅಲ್ಲದೆ ವಿದೇಶಗಳಲ್ಲಿ ದುಡಿಯುತ್ತಿರುವ ಶ್ರೀಲಂಕನ್ನರು ಕಳುಹಿಸುವ ರೆಮಿಟನ್ಸ್ ಗಳಲೂ ಗಮನಾರ್ಹವಾದ ಕುಸಿತ ಉಂಟಾಗಿರುವುದು ಆರ್ಥಿಕ ಹಿನ್ನಡೆಗೆ ಹಲವು ಕಾರಣಗಳ ಪೈಕಿ ಒಂದಾಗಿದೆ.

ಶ್ರೀಲಂಕಾದ ಸದ್ಯದ ಪರಿಸ್ಥಿತಿ ಹೇಗಿದೆ ಅಂದರೆ ಅದರ ಬಳಿ ವಿದೇಶಿ ವಿನಿಮಯ ರಿಸರ್ವ್ ಮೊತ್ತ ಕೇವಲ 2.31 ಬಿಲಿಯನ್ ಡಾಲರ್ ನಷ್ಟು ಮಾತ್ರವೆ ಇದ್ದು ಈ ವರ್ಷಾದ್ಯಂತ ಅದು ಪಾವತಿಸಬೇಕಾಗಿರುವ ಸಾಲದ ಪ್ರಮಾಣವೇ ನಾಲ್ಕು ಬಿಲಿಯನ್ ಡಾಲರ್ ಗಿಂತಲೂ ಅಧಿಕವಾಗಿದೆ. ಕೊಲಂಬೊದಲ್ಲಿರುವ ಅಡ್ವೊಕೇಟ್ ಇನ್ಸ್ಟಿಟ್ಯೂಟಿನ ಧನನಾಥ್ ಫರ್ನಾಂಡೊ ಅವರು ಹೇಳುವಂತೆ ದೇಶದಲ್ಲಿ ಸರಕುಗಳ ಕೊರತೆ ಅಷ್ಟೊಂದು ಇಲ್ಲವಾದರೂ ಸದ್ಯಕ್ಕೆ ದೇಶ ಎದುರಿಸುತ್ತಿರುವುದು ಡಾಲರ್ ಗಳ ಅತಿ ತೀವ್ರವಾದ ಕೊರತೆ ಎಂದು ವಿವರಿಸುತ್ತಾರೆ.

ಇದನ್ನೂ ಓದಿ: Inflation hit: 1KG ಆಲೂಗಡ್ಡೆಯ ಬೆಲೆ 200 ರೂ, ಮೆಣಸಿನಕಾಯಿ ಬೆಲೆ 710 ರೂ..ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ನೆರೆಯ ದೇಶ!

ನಿರುದ್ಯೋಗ, ಬಡತನ:

ಆರ್ಥಿಕ ಸ್ಥಿತಿ ಕುಸಿಯ ಹತ್ತಿದರೆ ಅದು ಪರೋಕ್ಷವಾಗಿ ಜನಸಾಮಾನ್ಯರ ಜೀವನಗಳ ಮೇಲೆ ಪ್ರಭಾವ ಬೀರುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗ ಶ್ರೀಲಂಕಾದಲ್ಲೂ ಸಹ ಅದೇ ಸ್ಥಿತಿ ನಿರ್ಮಾಣವಾಗಿದೆ. ಮನೆ ಮನೆಗಳಲ್ಲಿ ನಿರುದ್ಯೋಗ ಸಮಸ್ಯೆ ಗಣನೀಯವಾಗಿ ಏರುತ್ತಿದೆ. ಜನರಿಗೆ ಯಾವುದೇ ಆದಾಯಗಳಿಲ್ಲದಂತಾಗಿ ಬಡತನದ ದರ ಏರುತ್ತಿದೆ. ಕೋವಿಡ್ ಸಂದರ್ಭದಲ್ಲಿ ಶ್ರೀಲಂಕಾದ ಸರ್ಕಾರವು ತನ್ನಲ್ಲಿದ್ದ ಅತಿ ಸೂಕ್ಷ್ಮವಾದ ಐದು ಮಿಲಿಯನ್ ಕುಟುಂಬಗಳನ್ನು ಗುರುತಿಸಿ 5000 ರೂಪಾಯಿಗಳ ಧನಸಹಾಯ ನೀಡಿತ್ತು. ಇದು ಅಲ್ಪ ಮಟ್ಟಿಗೆ ಸಮಾಧಾನ ನೀಡಿತಾದರೂ ನಂತರ ಈಗ ತಲೆದೋರಿರುವ ರಷ್ಯಾ-ಉಕ್ರೇನ್ ಯುದ್ಧದ ಕಾರಣ ವಿಪರೀತ ಹೆಚ್ಚಳವಾಗಿರುವ ಕಚ್ಚಾ ತೈಲ ದರಗಳಿಂದಾಗಿ ದೇಶದ ಪರಿಸ್ಥಿತಿ ಮತ್ತೆ ಬಿಗಡಾಯಿಸಿದೆ. ಇದರ ಪರಿಣಾಮ ದೇಶದಲ್ಲಿ ಎಷ್ಟಾಗಿದೆ ಎಂದರೆ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬೇಕಾಗಿರುವ ಇಂಕು ಮತ್ತು ಪೇಪರ್ ಗಳ ಅಲಭ್ಯತೆಯಿಂದಾಗಿ ಪರೀಕ್ಷೆಗಳನ್ನೇ ಮುಂದೂಡುವಂತಾಗಿದೆ.

ದೀರ್ಘವಾದ ವಿದ್ಯುತ್ ಕಡಿತಗಳು:

ಈಗಾಗಲೇ ದೇಶಾದ್ಯಂತ ತೈಲದ ಕೊರತೆಯಿಂದಾಗಿ ವಿದ್ಯುತ್ ಕಡಿತವಾಗುತ್ತಲೇ ಇದೆ. ಈಗ ಪರಿಸ್ಥಿತಿ ಮತ್ತಷ್ಟು ಕೈ ಮೀರಿ ಹೋಗುತ್ತಿದ್ದು ಸದ್ಯ ದಿನದಲ್ಲಿ ಹತ್ತು ಗಂಟೆಗಳಷ್ಟು ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಇಂಧನದ ಅಲಭ್ಯತೆಯಿಂದಾಗಿ ಜಲವಿದ್ಯುತ್ ಉತ್ಪಾದಿಸಲಾಗದೆ 750 ಮೇಗಾ ವಾಟ್ ಸಾಮರ್ಥ್ಯದ ಥರ್ಮಲ್ ಘಟಕ ಸುಮ್ಮನೆ ಕೂತಂತಾಗಿದೆ. ದೇಶದಲ್ಲಿ 40% ರಷ್ಟು ವಿದ್ಯುತ್ ಅನ್ನು ಜಲಪಾತ ಮೂಲಗಳಿಂದಲೇ ಉತ್ಪಾದಿಸಲಾಗುತ್ತದೆ, ಆದರೆ ಕಳೆದ ಕೆಲ ಸಮಯದಿಂದ ಮಳೆಯಾಗದೆ ಜಲಪಾತದ ನೀರಿನಲ್ಲೂ ಸಾಕಷ್ಟು ಇಳಿಮುಖವಾಗಿರುವುದು ಸಮಸ್ಯೆಯನ್ನು ಉಲ್ಬಣಿಸಿದೆ. ಮಿಕ್ಕಂತೆ 60% ರಷ್ಟು ವಿದ್ಯುತ್ ಗಾಗಿ ದೇಶವು ಕಲ್ಲಿದ್ದಲು ಹಾಗೂ ಇಂಧನದ ಮೇಲೆ ಅವಲಂಬಿತವಾಗಿದ್ದು ಸದ್ಯ ಅದನ್ನು ಆಮದು ಮಾಡಿಕೊಳ್ಳಲೂ ಸಹ ಕಷ್ಟವಾಗಿರುವುದರಿಂದ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ.

ತೈಲಕ್ಕಾಗಿ ಜಗಳ:

ಇಂಧನ ಕೊರತೆಯು ಶ್ರೀಲಂಕಾದ ಸ್ಥಿತಿಯನ್ನು ಸಾಕಷ್ಟು ಹೀನಾಯವನ್ನಾಗಿಸಿದೆ. ದೇಶದಲ್ಲಿ ಇರುವ ಡೀಸೆಲ್-ಪೆಟ್ರೋಲ್ ಸ್ವಲ್ಪ ಸಮಯದಲ್ಲೇ ಖರ್ಚಾಗಲಿದ್ದು ಜನರಿಗೆ ಅದು ಮತ್ತೆ ಬರುವವರೆಗೆ ಕಾಯುವುದನ್ನು ಬಿಟ್ಟರೆ ಬೇರೆ ಗತಿಯೇ ಇಲ್ಲ. ಅಷ್ಟಕ್ಕೂ ಪೆಟ್ರೋಲ್ ಬಂಕುಗಳಲ್ಲಿ ಈಗ ಜನರು ಇಂಧನಕ್ಕಾಗಿ ಕಚ್ಚಾಡುತ್ತಿರುವ ಪ್ರಕರಣಗಳು ಏರಿದ್ದು ಸದ್ಯ ಶ್ರೀಲಂಕಾ ಸರ್ಕಾರವು ಪೆಟ್ರೋಲ್ ಬಂಕುಗಳಲ್ಲಿ ಪೊಲೀಸರನ್ನು ನಿಯೋಜಿಸಿ ಶಾಂತಿ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ವರದಿಗಳು ಬಂದಿವೆ.

ಹಣದುಬ್ಬರ:

ಹಣದುಬ್ಬರವಂತೂ ದೇಶದಲ್ಲಿ ತೀವ್ರವಾಗಿ ಏರಿದೆ. ಒಂದು ಕಪ್ ಚಹಾದ ಬೆಲೆ ಈಗ ನೂರು ರೂಪಾಯಿಗೆ ಏರಿದೆ. ಅಲ್ಲದೆ ಇತರೆ ದವಸ ಧಾನ್ಯಗಳ ಬೆಲೆಗಳಲ್ಲೂ ಅಪಾರ ಪ್ರಮಾಣದ ಏರಿಕೆ ಉಂಟಾಗಿದ್ದು ಸಾಮಾನ್ಯ ಜನರು ಜೀವನ ನಡೆಸುವುದೇ ದುಸ್ತರವಾದ ಪರಿಸ್ಥಿತಿ ಎದುರಾಗಿದೆ. ಹಲವು ಸರಕುಗಳ ಸಾಕಷ್ಟು ಕೊರತೆಯಿದ್ದು ಜನರು ಅವಶ್ಯಕ ವಸ್ತುಗಳಿಗಾಗಿ ಮೈಲಿಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾಗಿದ್ದು ಅವರ ಅವಸ್ಥೆ ಹೇಳದಂತಾಗಿದೆ.

ಭಾರತದ ಸಹಾಯ:

ಈಗಾಗಲೇ ಭಾರತವು ಶ್ರೀಲಂಕಾದ ನೆರವಿಗೆ ಧಾವಿಸಿದ್ದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 400 ಮಿಲಿಯನ್ ಡಾಲರ್ ಮೊತ್ತದ ಪ್ಯಾಕೇಜನ್ನು ಶ್ರೀಲಂಕಾಗೆ ಘೋಷಿಸಿದೆ. ತದನಂತರ ಶ್ರೀಲಂಕಾ ಭಾರತದಿಂದಲೇ ತೈಲ ಖರೀದಿಸುವ ಒಪ್ಪಂದದನ್ವಯ 500 ಮಿಲಿಯನ್ ಡಾಲರ್ ಮೌಲ್ಯದ ಲೈನ್ ಕ್ರಿಡಿಟ್ ಮೇಲೆ ಎರಡೂ ದೇಶಗಳಿಂದ ಸಹಿ ಹಾಕಲಾಗಿದೆ.

ಪ್ರಸ್ತುತ ಶ್ರೀಲಂಕಾ ಅವಶ್ಯಕ ಸಾಮಗ್ರಿಗಳ ಆಮದಿಗಾಗಿ ಕನಿಷ್ಠ 1 ಬಿಲಿಯನ್ ಡಾಲರ್ ಮೊತ್ತದ ಕ್ರೆಡಿಟ್ ಲೈನ್ ಸಹಾಯವನ್ನು ಭಾರತಕ್ಕೆ ಕೇಳಿದ್ದು ಶೀಘ್ರದಲ್ಲೇ ಈ ಬಗ್ಗೆ ಭಾರತ ನಿರ್ಣಯ ಕೈಗೊಳ್ಳಲಿರುವುದಾಗಿ ತಿಳಿದುಬಂದಿದೆ.
Published by:shrikrishna bhat
First published: