Explained: Cold Pressed Oil, ಗಾಣದ ಎಣ್ಣೆ ಏಕೆ ಸೇವಿಸಬೇಕು, ರಿಫೈಂಡ್ ಆಯಿಲ್ ಏಕೆ ಬಳಸಬಾರದು?

ರಿಫೈಂಡ್​ ಆಯಿಲ್ ಎಣ್ಣೆಯೇ ಅಲ್ಲ. ಅದನ್ನು ಬಳಸುವುದಕ್ಕಿಂತ ಜನರು ಹಾಗೆ ಇದ್ದುಬಿಡುವುದು ಒಳ್ಳೆಯದು. ಗಾಣದ ಎಣ್ಣೆ ಬಳಸುವುದರಿಂದ ನಾನು ನನ್ನದೇ ಆರೋಗ್ಯದ ಅನುಭವ ಹೇಳಿದ್ದೇನೆ. ಜನರು ಒಮ್ಮೆ ಗಾಣದ ಎಣ್ಣೆ ಬಳಸಲಿ. ಅವರ ಆರೋಗ್ಯದಲ್ಲಿ ಕಂಡುಬರುವ ಬದಲಾವಣೆಯನ್ನು ಅವರೇ ಗಮನಿಸಲಿ ಎಂದು ಹೇಳುತ್ತಾರೆ.

ಮನೆಯ ಮುಂಭಾಗದಲ್ಲಿ ಗಾಣದ ಯಂತ್ರ ಅಳವಡಿಸಿರುವುದು.

ಮನೆಯ ಮುಂಭಾಗದಲ್ಲಿ ಗಾಣದ ಯಂತ್ರ ಅಳವಡಿಸಿರುವುದು.

  • Share this:
ಅದು ಮನೆ ಮುಂಭಾಗದ ವಿಶಾಲ ಜಾಗ. ಅಲ್ಲಿ ಅದಾಗಲಿ ಅಲ್ಲಿನ  ಏರಿಯಾದ ಸಬ್​ಇನ್ಸ್​ಪೆಕ್ಟರ್ ಸೇರಿದಂತೆ ಹಲವು ಜನರಿದ್ದರು. ಬಂದವರೆಲ್ಲ ತಮ್ಮೊಂದಿಗೆ ಚೀಲದಲ್ಲಿ ತುಂಬಿಕೊಂಡು ತಂದಿದ್ದ ಕೊಬ್ಬರಿ, ಶೇಂಗಾವನ್ನು ಖುದ್ದಾಗಿ ಅವರೇ ನಿಂತು ಎಣ್ಣೆ ಬಿಡಿಸಿಕೊಂಡು ಹೋಗುತ್ತಿದ್ದರು. ಇನ್ನು ಕೆಲವು ಜನರು ತಮ್ಮೊಂದಿಗೆ ಸ್ಟೀಲ್ ಡಬ್ಬಿಗಳನ್ನು ತಂದು ತಮಗೆ ಬೇಕಾದ ಎಣ್ಣೆಯನ್ನು ತುಂಬಿಸಿಕೊಂಡು ಹೋಗುತ್ತಿದ್ದರು. ಇದಿಷ್ಟು ಕಂಡು ಬಂದಿದ್ದು ತುಮಕೂರಿನ (Tumakuru) ಸಿದ್ದರಾಮೇಶ್ವರ ಬಡಾವಣೆಯ 4ನೇ ಮುಖ್ಯ ರಸ್ತೆಯಲ್ಲಿ ಇರುವ ಅತೋಸ್ಯ ಆಯಿಲ್​ ಮಿಲ್​ನಲ್ಲಿ. (Athosya Oil Mill)

ಇಲ್ಲಿ ಪ್ರಮುಖವಾಗಿ ಕಡಲೆಕಾಯಿ, ಶೇಂಖಾ, ಎಳ್ಳು, ಹುಚ್ಚೆಳ್ಳು, ಹರಳೆಣ್ಣೆಗಳನ್ನು ಗಾಣದಲ್ಲಿ ಮಾಡಿಕೊಡಲಾಗುತ್ತದೆ. ಜನರು ಖುದ್ದಾಗಿ ತಾವೇ ಕಚ್ಚಾ ಪದಾರ್ಥಗಳನ್ನು ತಂದು ಎಣ್ಣೆ ಮಾಡಿಸಿಕೊಂಡು ಹೋಗುತ್ತಾರೆ. ಇನ್ನು ಕೆಲವರು ಅವರ ಬಳಿಯಿಂದ ನೇರವಾಗಿ ಎಣ್ಣೆ ಖರೀದಿಸಿ ಹೋಗುತ್ತಾರೆ. ಇಲ್ಲಿಗೆ ತುಮಕೂರಿನಿಂದ ಮಾತ್ರವಲ್ಲದೇ ಬೆಂಗಳೂರಿನಿಂದ ಜನರು ಬಂದು ಎಣ್ಣೆ ಖರೀದಿ ಮಾಡುತ್ತಾರೆ. ಅದಕ್ಕೆ ಮುಖ್ಯ ಕಾರಣ ಇಲ್ಲಿ ಕಾಪಾಡಿಕೊಂಡಿರುವ ಗುಣಮಟ್ಟ, ಶುಚಿತ್ವ ಹಾಗೂ ಎಲ್ಲವನ್ನು ನೇರವಾಗಿ ಗ್ರಾಹಕರ ಮುಂದೆಯೇ ಮಾಡಿಕೊಡುವುದು. ಪ್ರಮುಖವಾಗಿ ಮತ್ತೊಂದು ಬೆಲೆಯ ವಿಷಯ. ಸಾಮಾನ್ಯವಾಗಿ ಗಾಣದಿಂದ ತೆಗೆದ ಎಣ್ಣೆಯ ದರ ಸ್ವಲ್ಪ ದುಬಾರಿಯೇ. ಆದರೆ, ಅದನ್ನೇ ಕೆಲವರು ಕಾರಣವಾಗಿಸಿಕೊಂಡು ಜನರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ ಅತೋಸ್ಯ ಆಯಿಲ್ ಮಿಲ್ ನಡೆಸುತ್ತಿರುವ ವಾಗೀಶ್ ಅವರು. ಅವರು ಹೇಳುವಂತೆ ಯಾವುದೇ ಎಣ್ಣೆಯ ಬೆಲೆ ಬಗ್ಗೆ ಜನರು ತಿಳಿದುಕೊಳ್ಳಬೇಕು. ನಿಮಗೆ ಒಂದು ಲೀಟರ್ ಕಡಲೇಕಾಯಿ ಎಣ್ಣೆ 320ಕ್ಕಿಂತ ಹೆಚ್ಚಿನ ದರಕ್ಕೆ ಸಿಗುತ್ತಿದೆ ಎಂದರೆ, ಹಾಗೂ ಅದೇ ಎಣ್ಣೆ 290 ರೂಪಾಯಿಕ್ಕಿಂತ ಕಡಿಮೆಗೆ ಸಿಗುತ್ತಿದೆ ಎಂದರೆ ಅವರು ಮೋಸ ಮಾಡುತ್ತಿದ್ದಾರೆ ಎಂದೇ ಅರ್ಥ. ಏಕೆಂದರೆ ಒಂದು ಲೀಟರ್ ಎಣ್ಣೆ ತಯಾರಿಸಲು ಎರಡು ಮುಕ್ಕಾಲು ಕೆ.ಜಿಯಿಂದ ಮೂರು ಕೆ.ಜಿ. ಕಡಲೆ ಕಾಯಿ ಬೀಜಗಳು ಬೇಕಾಗುತ್ತದೆ. ಒಳ್ಳೆಯ ಗುಣಮಟ್ಟದ ಬೀಜ ಕೆಜಿಗೆ 90ರಿಂದ 95 ರೂಪಾಯಿಗೆ ದೊರೆಯುತ್ತದೆ. ಇನ್ನು ಉತ್ಪಾದನಾ ವೆಚ್ಚ ಎಲ್ಲ ಸೇರಿ ಒಂದು ಲೀಟರ್ ಎಣ್ಣೆ ತೆಗೆಯಲು 230 ರೂಪಾಯಿಯಿಂದ 270 ರೂಪಾಯಿ ಖರ್ಚು ತಗುಲುತ್ತದೆ. ಅದರ ಮೇಲೆ 20ರಿಂದ 30 ರೂಪಾಯಿ ಲಾಭ ಇಟ್ಟುಕೊಂಡು ಮಾರಿದರೂ 300 ರೂಪಾಯಿಗೆ ಒಂದು ಲೀಟರ್ ಪರಿಶುದ್ಧವಾದ ಕಡಲೆ ಕಾಯಿ ಎಣ್ಣೆ ಕೊಡಬಹುದು ಎಂಬುದು ವಾಗೀಶ್ ಅವರ ವಾದ. ಜನರಿಗೆ ಶುದ್ಧವಾದ ಗಾಣದ ಎಣ್ಣೆ ಸಿಗಬೇಕು. ಆದರೆ, ಅದು ತುಂಬಾ ದುಬಾರಿಯಾಗಿರಬಾರದು. ಪ್ರತಿಯೊಬ್ಬರು ಅದನ್ನು ಕೊಳ್ಳುವ ಹಾಗೆ ಇರಬೇಕು. ಇದಷ್ಟೇ ಅಲ್ಲದೇ ಎಣ್ಣೆ ತೆಗೆದಾದ ಮೇಲೆ ಉಳಿಯುವ ಹಿಂಡಿಯಿಂದಲೂ ಲಾಭ ಬರುತ್ತದೆ ಎನ್ನುತ್ತಾರೆ ವಾಗೀಶ್ ಅವರು.

ಗಾಣ ಆಡಿಸುತ್ತಿರುವ ವಾಗೀಶ್.


ವಾಗೀಶ್ ವೃತ್ತಿಯಲ್ಲಿ ಪತ್ರಕರ್ತರಾದರೂ ಪ್ರವೃತ್ತಿಯಾಗಿ ಗಾಣದ ಎಣ್ಣೆ ತಯಾರಿಕೆ ಉದ್ಯಮ ನಡೆಸುತ್ತಿದ್ದಾರೆ. ಅವರ ಪತ್ನಿ ಲತಾ ಸಹಕಾರದಿಂದ ಯಾವುದೇ ಕೆಲಸಗಾರರನ್ನು ನೇಮಿಸಿಕೊಳ್ಳದೆ ತಮ್ಮ ಮನೆಯ ಮುಂದಿನ ತೆರೆದ ಜಾಗದಲ್ಲಿ ಗಾಣದ ಯಂತ್ರ ಅಳವಡಿಸಿಕೊಂಡು ಎಣ್ಣೆ ತೆಗೆಯುತ್ತಾರೆ. ಬರುವ ಜನರು ಕೂತು ಅವರ ಎದುರಿನಲ್ಲಿ ಎಣ್ಣೆ ತೆಗೆದುಕೊಡಲಾಗುತ್ತದೆ. ಅಲ್ಲದೇ ಗಾಣ ಆಡಿಸಿಕೊಡಲು ತುಂಬಾ ಕಡಿಮೆ ಬೆಲೆಯನ್ನು ನಿಗದಿ ಮಾಡಿದ್ದಾರೆ. ಒಂದು ವೇಳೆ ಹಿಂಡಿಯನ್ನು ಇವರಿಗೆ ನೀಡಿದರೆ ಯಾವುದೇ ಹಣವಿಲ್ಲದೆ ಎಣ್ಣೆ ಆಡಿಸಿಕೊಡುತ್ತಾರೆ. ಹೀಗಾಗಿ ತುಮಕೂರಿನಲ್ಲಿ 47 ಗಾಣದ ಯಂತ್ರಗಳು ಇದ್ದರೂ ಇವರ ಬಳಿಗೆ ಜನರು ಹುಡುಕಿಕೊಂಡು ಬರುತ್ತಾರೆ.

ವಾಗೀಶ್ ಧರ್ಮಪತ್ನಿ ಲತಾ.


ಗಾಣದ ಉದ್ಯಮ ಆರಂಭಿಸಬೇಕು ಎಂಬ ಪರಿಕಲ್ಪನೆ ಬಂದಿದ್ದು ಹೇಗೆ ಎಂದು ಕೇಳಿದಾಗ, ನನ್ನ ಹೆಂಡತಿ ಊರು ಗುಬ್ಬಿ, ಅಲ್ಲಿ  ಒಬ್ಬರು ಗಾಣದ ಮಿಲ್ ಹಾಕಿದ್ದರು. ಅಲ್ಲಿ ಕೇವಲ ಕೊಬ್ಬರಿ ಎಣ್ಣೆಯನ್ನು ಮಾತ್ರ ಮಾಡುತ್ತಿದ್ದರು. ಒಮ್ಮೆ ನಾನು ನನ್ನ ಹೆಂಡತಿ 10 ಕೆಜಿ ಕೊಬ್ಬರಿ ತೆಗೆದುಕೊಂಡು ಹೋಗಿ ಎಣ್ಣೆ ಮಾಡಿಸಿಕೊಂಡು ಬಂದೆವು. ಅದನ್ನೇ ಅಡುಗೆಯಲ್ಲಿ ಬಳಸಲು ಆರಂಭಿಸಿದೆವು. ತಿನ್ನುವುದಕ್ಕೂ ಹೊಸ ರುಚಿ ಸಿಕ್ಕಿತ್ತು. ಅದೇ ಎಣ್ಣೆಯಲ್ಲಿ ಒಬ್ಬಟ್ಟು, ಮೈಸೂರು ಪಾಕ್, ಇತರೆ ಸಿಹಿ ಪದಾರ್ಥಗಳನ್ನು ಮಾಡಿದೆವು. ಎಲ್ಲವೂ ಹೊಸ ಫ್ಲೇವರ್ ಟೆಸ್ಟ್ ಸಿಕ್ಕಿತು. ಇದರೊಂದಿಗೆ ಕಡಲೆ ಕಾಯಿ ಬೀಜದ ಎಣ್ಣೆ, ಎಳ್ಳೆಣ್ಣೆಯನ್ನು ಅಡುಗೆಯಲ್ಲಿ ಬಳಸಿದೆವು. ಅದಕ್ಕೂ ಮೊದಲು ನನಗೆ ತುಂಬಾ ಗ್ಯಾಸ್ಟ್ರೀಕ್ ಇತ್ತು. ವಿಪರೀತ ಉಳಿತೇಗು, ಎದೆ ನೋವು ಎಲ್ಲವೂ ಬರುತ್ತಿತ್ತು. ಆದರೆ, ಈ ಎಣ್ಣೆಯನ್ನು ಸತತವಾಗಿ ಬಳಸಿದ ಆರೇಳು ತಿಂಗಳಲ್ಲಿ ನನಗೆ ಸಂಪೂರ್ಣ ಗ್ಯಾಸ್ಟ್ರೀಕ್ ಸಮಸ್ಯೆ ನಿವಾರಣೆ ಆಗಿತ್ತು. ಈ ಎಣ್ಣೆಯ ನೇರ ಪರಿಣಾಮ ಕಂಡುಕೊಂಡ ಬಳಿಕ ಈ ಗಾಣದ ಬಗ್ಗೆ ವಿಚಾರಿಸಲು ಆರಂಭಿಸಿದೆ. ಎಲ್ಲ ಮಾಹಿತಿ ಕಲೆ ಹಾಕಿದ ಬಳಿಕ ನಾನು ಇದನ್ನು ಆರಂಭಿಸಬೇಕು ಎಂದು ಯೋಚಿಸಿ, ಕಳೆದ ವರ್ಷ ಫೆಬ್ರವರಿಯಲ್ಲಿ ತಮಿಳುನಾಡಿನಿಂದ ಗಾಣದ ಯಂತ್ರ ತರಿಸಿಕೊಂಡು ನಮ್ಮ ಮನೆಯ ಮುಂಭಾಗದ ಜಾಗದಲ್ಲಿ ಹೂಡಿಸಿದೆ. ಆದರೆ, ಆ ವೇಳೆ ಜನರಿಗೆ ಯಾರಿಗೂ ಇದರ ಬಗ್ಗೆ ಅಷ್ಟು ಪರಿಚಯ ಇರಲಿಲ್ಲ. ನಂತರ ಲಾಕ್​ಡೌನ್ ಬೇರೆ ಘೋಷಣೆ ಆಯಿತು. ಹೀಗಾಗಿ ಐದಾರು ತಿಂಗಳು ಯಾವುದೇ ವ್ಯವಹಾರ ಆಗಲಿಲ್ಲ. ಬರಬರುತ್ತಾ ನಿಧಾನವಾಗಿ ಜನರಿಂದ ಜನರಿಗೆ ಇಲ್ಲಿ ಗಾಣ ಇರುವುದು ತಿಳಿದು ಬರಲು ಆರಂಭಿಸಿದರು. ಈಗ ವ್ಯವಹಾರ ತುಂಬಾ ಚೆನ್ನಾಗಿ ನಡೆಯುತ್ತಿದೆ. ಮೊದಲು ಕೆಜಿಗೆ 20 ರೂಪಾಯಿ ಚಾರ್ಜ್ ಮಾಡುತ್ತಿದ್ದೆ. ಇದು ಸ್ವಲ್ಪ ಜಾಸ್ತಿಯಾಗುತ್ತಿದೆ ಎಂದು ಜನರು ಹೇಳಿದಾಗ 15 ರೂಪಾಯಿ ಮಾಡಿದೆ. ಅದಲ್ಲದೇ ಜನರು ಹಿಂಡಿಯನ್ನು ಬಿಟ್ಟರೆ  ಯಾವುದೇ ಚಾರ್ಜ್ ಕೂಡ ಮಾಡುವುದಿಲ್ಲ. ಒಂದು ಲೀಟರ್ ಕಡಲೆಕಾಯಿ ಎಣ್ಣೆಯನ್ನು 290 ರೂಪಾಯಿಗೆ, ಕೊಬ್ಬರಿ ಎಣ್ಣೆ ಹಾಗೂ ಹರಳ್ಳೆಣ್ಣೆಯನ್ನು 310 ರೂಪಾಯಿಗೆ, ಎಳ್ಳೆಣ್ಣೆ 370 ರೂ. ಹಾಗೂ ಹುಚ್ಚೆಳ್ಳೆಣ್ಣೆಯನ್ನು ಲೀಟರ್​ಗೆ 490 ರೂಪಾಯಿ ಕೊಡುತ್ತಿದ್ದೆವೆ. ಇಲ್ಲಿ ಪ್ರತಿಯೊಂದನ್ನು ಹೈಜೆನಿಕ್ ಆಗಿ, ಪಾರದರ್ಶಕವಾಗಿ ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದಂತೆ ನಿರ್ವಹಣೆ ಮಾಡಲಾಗಿದೆ. ಹೀಗಾಗಿ ಜನರು ನಮ್ಮಲ್ಲಿಗೆ ಹುಡುಕಿಕೊಂಡು ಬರುತ್ತಾರೆ ಎಂದು ಹೇಳುತ್ತಾರೆ.

ಅತೋಸ್ಯ ಆಯಿಲ್ ಮಿಲ್.


ರಿಫೈಂಡ್ ಆಯಿಲ್ ಗೂ ಗಾಣದ ಎಣ್ಣೆಗೂ ಇರುವ ವ್ಯತ್ಯಾಸದ ಬಗ್ಗೆ ಕೇಳಿದಾಗ, ಆ ಎಣ್ಣೆಗೂ ಗಾಣದ ಎಣ್ಣೆಗೂ ಹೋಲಿಕೆ ಮಾಡುವಂತೆಯೇ ಇಲ್ಲ. ರಿಫೈಂಡ್​ ಆಯಿಲ್ ಎಣ್ಣೆಯೇ ಅಲ್ಲ. ಅದನ್ನು ಬಳಸುವುದಕ್ಕಿಂತ ಜನರು ಹಾಗೆ ಇದ್ದುಬಿಡುವುದು ಒಳ್ಳೆಯದು. ಗಾಣದ ಎಣ್ಣೆ ಬಳಸುವುದರಿಂದ ನಾನು ನನ್ನದೇ ಆರೋಗ್ಯದ ಅನುಭವ ಹೇಳಿದ್ದೇನೆ. ಜನರು ಒಮ್ಮೆ ಗಾಣದ ಎಣ್ಣೆ ಬಳಸಲಿ. ಅವರ ಆರೋಗ್ಯದಲ್ಲಿ ಕಂಡುಬರುವ ಬದಲಾವಣೆಯನ್ನು ಅವರೇ ಗಮನಿಸಲಿ ಎಂದು ಹೇಳುತ್ತಾರೆ.

ಇನ್ನು ಇದೇ ಗಾಣದಲ್ಲಿ ಎಣ್ಣೆ ಆಡಿಸಿಕೊಂಡು ಹೋಗಲು ಬಂದಿದ್ದ ತುಮಕೂರಿನ ಬೆಸ್ಕಾಂನ ನಿವೃತ್ತ ಎಇಇ ನಟರಾಜ್ ಎಂಬುವವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು, ಕಳೆದ ಮೂರು ವರ್ಷಗಳಿಂದ ಗಾಣದ ಎಣ್ಣೆಯನ್ನೇ ನಾವು ಬಳಸುತ್ತಿದ್ದೇವೆ. ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಕಂಡುಕೊಂಡಿದ್ದೇನೆ ಎಂದು ಹೇಳಿದರು.

ಅತೋಸ್ಯ ಆಯಿಲ್ ಮಿಲ್ ಸಂಪರ್ಕ ಸಂಖ್ಯೆ; 7829646893

ಸಂದರ್ಶನ: ರಮೇಶ್ ಹಂಡ್ರಂಗಿ
Published by:HR Ramesh
First published: