Explained: ನವಿ ಮುಂಬೈ ವಿಮಾನ ನಿಲ್ದಾಣದ ಹೆಸರಿಗೆ ಹಗ್ಗಜಗ್ಗಾಟ; ಠಾಕ್ರೆ ಹೆಸರಿಡಲು ವಿರೋಧ

ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳೀಯ ನಾಯಕ ಡಿ. ಬಿ. ಪಾಟೀಲ್ ಅವರ ಹೆಸರನ್ನು ಇಡಬೇಕೆಂದು ಪ್ರತಿಭಟನೆಗಳು ನಡೆಯುತ್ತಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Navi Mumbai International Airport) ಹೆಸರಿಡುವ ಬಗ್ಗೆ ಸ್ಥಳೀಯವಾಗಿ ಭಾರಿ ಜಟಾಪಟಿ ನಡೆಯುತ್ತಿದೆ. ವರ್ಷಗಳಿಂದ ಡಿ. ಬಿ. ಪಾಟೀಲ್ (DB Patil) ಮತ್ತು ಬಾಳಾಸಾಹೇಬ್ ಠಾಕ್ರೆ ಬೆಂಬಲಿಗರ ನಡುವೆ ಹೆಸರಿನ ಕೆಸರೆರಚಾಟ ನಡೆಯುತ್ತಿದೆ. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳೀಯ ನಾಯಕ ಡಿ. ಬಿ. ಪಾಟೀಲ್ ಅವರ ಹೆಸರನ್ನು ಇಡಬೇಕೆಂದು ಪ್ರತಿಭಟನೆಗಳು (Protest) ನಡೆಯುತ್ತಿವೆ. ಜೂನ್ 24 ಅಂದರೆ ಶುಕ್ರವಾರ ನವಿ ಮುಂಬೈನ ಬೇಲಾಪುರದಲ್ಲಿರುವ CIDCO ಪ್ರಧಾನ ಕಛೇರಿಗೆ ಸಾವಿರಾರು ಪ್ರತಿಭಟನಾಕಾರರು ಆಗಮಿಸಿ ಪ್ರತಿಭಟನೆ ನಡೆಸಿ ಪಾಟೀಲ್ ಅವರ ಹೆಸರನ್ನು ಇಡಬೇಕೆಂದು ಒತ್ತಾಯಿಸಿದ್ದಾರೆ. ಏಕೆ ಈ ವಿವಾದ ಹಬ್ಬುತ್ತಿದೆ? ಇಲ್ಲಿದೆ ವಿವರ.

ವಿಶ್ವದ ಅತಿದೊಡ್ಡ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆ
ನವಿ ಮುಂಬೈನಲ್ಲಿ ನಿರ್ಮಾಣವಾಗುತ್ತಿರುವ ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹಲವು ವಿಶೇಷತೆಗಳಿಂದ ಕೂಡಿದೆ ಎನ್ನಬಹುದು. ಇದನ್ನು ವಿಶ್ವದ ಅತಿದೊಡ್ಡ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಪನ್ವೇ ಲ್ ನಲ್ಲಿ ನಿರ್ಮಾಣವಾಗುತ್ತಿರುವ ಈ ವಿಮಾನ ನಿಲ್ದಾಣದ ನಿರ್ವಹಣೆ ಹೊಣೆ ಅದಾನಿ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಹೆಚ್ಎಲ್) ನಿಭಾಯಿಸುತ್ತಿದೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರುವ ಜನದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಇಟ್ಟುಕೊಂಡು ಈ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಈದೀಗ ವಿಶ್ವದ ಅತಿದೊಡ್ಡ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗೆ ಹೆಸರಿನ ರಾಜಕೀಯದ ಕರಿ ನೆರಳು ಬೀರುತ್ತಿದೆ. ಈ ಮೊದಲು ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಹೆಸರಿಡಲು ಪ್ರಸ್ತಾಪಿಸಲಾಗಿತ್ತು. ಆದರೆ ಈ ಪ್ರಸ್ತಾಪಕ್ಕೆ ಹಲವಾರು ವಿರೋಧಗಳು ಉಂಟಾಗಿದ್ದು, ಸ್ಥಳೀಯ ನಾಯಕ ಡಿ. ಬಿ. ಪಾಟೀಲ್ ಅವರ ಹೆಸರನ್ನು ಇಡಬೇಕೆಂದು ಪ್ರತಿಭಟನೆ ಮೂಲಕ ಒತ್ತಾಯಿಸಲಾಗುತ್ತಿದೆ.

ವರ್ಷಗಳಿಂದ ನಡೆಯುತ್ತಿವೆ ಪ್ರತಿಭಟನೆಗಳು
ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಠಾಕ್ರೆ ಹೆಸರಿಡುವ ಪ್ರಸ್ತಾಪದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ನಿನ್ನೆ, ಮೊನ್ನೆಯದಲ್ಲ. ನವಿ ಮುಂಬೈ, ರಾಯಗಢ, ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಸುಮಾರು ಒಂದು ವರ್ಷದಿಂದ ಪ್ರಸ್ತಾಪದ ವಿರುದ್ಧ ದೊಡ್ಡ ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿವೆ. ಡಿಸೆಂಬರ್ 2020ರಲ್ಲಿ, ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ - ಶಿವಸೇನಾ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನಡೆಯುತ್ತಿರುವ ಬಂಡಾಯದ ನಾಯಕ, ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (CIDCO) ಪತ್ರ ಬರೆದು ವಿಮಾನ ನಿಲ್ದಾಣಕ್ಕೆ ಬಾಳಾಸಾಹೇಬ್ ಹೆಸರಿಡಲು ಪ್ರಸ್ತಾಪಿಸುವಂತೆ ಕೇಳಿದ್ದರು. CIDCO ಶಿಂಧೆಯವರು ಬರೆದ ಪತ್ರವನ್ನು ಅನುಸರಿಸಿ ಪ್ರಸ್ತಾಪವನ್ನು ಒಪ್ಪಿಕೊಂಡಿತ್ತು.

ಇದನ್ನೂ ಓದಿ:   Texas: ಕಂಟೈನರ್​ನಲ್ಲಿ 46 ಜನರ ಮೃತದೇಹ ಪತ್ತೆ! ಆಗಿದ್ದೇನು?

ಸ್ಥಳೀಯ ಜನರ ಪ್ರಕಾರ, ರಾಜಕೀಯ ಮುಖಂಡರು ಮೊದಲಿನಿಂದಲೂ ವಿಮಾನ ನಿಲ್ದಾಣಕ್ಕೆ ಡಿ.ಬಿ. ಪಾಟೀಲ್ ಹೆಸರಿಡಲು ಒಪ್ಪಿಕೊಂಡಿದ್ದರು. ಮತ್ತು ಈ ವಿಷಯ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರಕ್ಕೆ ಸಹ ತಿಳಿದಿತ್ತು. ಆದರೂ, ಸರ್ಕಾರವು ಇದ್ದಕ್ಕಿದ್ದಂತೆ ಮತ್ತು ಸ್ಥಳೀಯ ಜನರನ್ನು ಸಂಪರ್ಕಿಸದೆ, ವಿಮಾನ ನಿಲ್ದಾಣಕ್ಕೆ ಠಾಕ್ರೆ ಹೆಸರಿಡಲು ನಿರ್ಧರಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನವಿ ಮುಂಬೈ ವಿಮಾನ ನಿಲ್ದಾಣ ಸರ್ವಪಕ್ಷ ಕ್ರಿಯಾ ಸಮಿತಿ, ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ಕೆಲಸವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿದೆ. ಹಾಗಾದರೆ ಸ್ಥಳೀಯ ಜನರು ನವಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಾಳಾಸಾಹೇಬ್ ಠಾಕ್ರೆ ಹೆಸರಿನ ಬದಲು ಡಿ.ಬಿ. ಪಾಟೀಲ್ ಅವರ ಹೆಸರನ್ನು ಏಕೆ ಇಡಬೇಕೆಂದು ಬಯಸುತ್ತಿದ್ದಾರೆ. ಡಿ. ಬಿ. ಪಾಟೀಲ್ ಯಾರು, ಏನು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ಡಿ. ಬಿ. ಪಾಟೀಲ್ ಅವರ ಪರಿಚಯ ಇಲ್ಲಿದೆ
ಡಿ ಬಿ ಪಾಟೀಲ್ ಎಂದು ಕರೆಯಲ್ಪಡುವ ದಿನಕರ್ ಬಾಲು ಪಾಟೀಲ್ ಅವರು ರಾಯಗಡ ಜಿಲ್ಲೆಯ ಉರಾನ್ ತಾಲೂಕಿನ ಜಸಾಯಿ ಎಂಬ ಗ್ರಾಮದಲ್ಲಿ ಜನಿಸಿದರು. ಅವರು ರೈತರು ಮತ್ತು ಕಾರ್ಮಿಕರ ಪಕ್ಷದೊಂದಿಗೆ (PWP) ಸಂಬಂಧ ಹೊಂದಿದ್ದರು. ರೈತ ಕುಟುಂಬದಲ್ಲಿ ಜನಿಸಿದ ಪಾಟೀಲ್, 1951 ರಲ್ಲಿ ಎಲ್ಎಲ್ಬಿ ಮುಗಿಸಿ ಮತ್ತು ಒಂದು ವರ್ಷದ ನಂತರ ಕೊಲಾಬಾ ಜಿಲ್ಲಾ ಸ್ಥಳೀಯ ಮಂಡಳಿಗೆ ಸ್ಫರ್ಧಿಸಿ ಚುನಾವಣೆಯಲ್ಲಿ ಗೆದ್ದರು. ನಂತರ ಅವರು 1957 ಮತ್ತು 1980 ರ ನಡುವೆ ಐದು ಅವಧಿಗೆ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಪನ್ವೇಲ್ ಅನ್ನು ಪ್ರತಿನಿಧಿಸಿದರು.

ಪಾಟೀಲ್ 1977 ಮತ್ತು 1984ರಲ್ಲಿ ಕೊಲಾಬಾದಿಂದ ಸಂಸದರಾಗಿದ್ದರು, ಜೊತೆಗೆ 1992ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಅವರು 1972 ರಿಂದ 1977 ರವರೆಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು ಮತ್ತು ನಂತರ 1982-83ರಲ್ಲಿ ಮತ್ತೊಮ್ಮೆ ಆಯ್ಕೆಯಾದರು. ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಇವರನ್ನು 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿಸಲಾಯಿತು.

ರೈತರ ಪರ ಜೀವನ ಮುಡುಪಾಗಿಟ್ಟಿದ್ದ ನಾಯಕ
1970 ಮತ್ತು 1980ರ ದಶಕದಲ್ಲಿ ಸಿಡ್ಕೋ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಪನ್ವೇಲ್ ಜಿಲ್ಲೆಯ ರೈತರು ಮತ್ತು ಭೂ ಮಾಲೀಕರಿಗಾಗಿ ಪಾಟೀಲ್ ಹಲವಾರು ಪ್ರತಿಭಟನೆಗಳನ್ನು ನಡೆಸಿದರು. 1984ರಲ್ಲಿ ನಡೆದ ಬೃಹತ್ ಪ್ರತಿಭಟನೆಯ ಸಂದರ್ಭದಲ್ಲಿ, ನಾಲ್ವರು ರೈತರು ಕೊಲ್ಲಲ್ಪಟ್ಟರು, ಇದು ಅಂತಿಮವಾಗಿ ರಾಜ್ಯ ಸರ್ಕಾರವು ಸ್ಥಳೀಯ ರೈತರಿಗೆ 12.5 ರಷ್ಟು ಅಭಿವೃದ್ಧಿ ಪಡಿಸಿದ ಭೂಮಿ ಯೋಜನೆಯನ್ನು ತರಲು ಒತ್ತಾಯಿಸಿತು, ಈ ನಿಯಮ ಈಗಲೂ ಸಹ ರಾಜ್ಯಾದ್ಯಂತ ಅನ್ವಯವಾಗುತ್ತಿದೆ.

ಉರಾನ್ ಪ್ರದೇಶದ ಗ್ರಾಮಸ್ಥರ ಪರ ಪಾಟೀಲ್ ಹೋರಾಟ
ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಗೆ (ಜೆಎನ್‌ಪಿಟಿ) ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಉರಾನ್ ಪ್ರದೇಶದ ಗ್ರಾಮಸ್ಥರ ಪರ ಪಾಟೀಲ್ ಹೋರಾಡಿದರು ಮತ್ತು 86ನೇ ವಯಸ್ಸಿನಲ್ಲೂ ಸಹ ಹಲವಾರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪಾಟೀಲ್ 2012 ರಲ್ಲಿ 87 ನೇ ವಯಸ್ಸಿನಲ್ಲಿ ನಿಧನರಾದರು.

ಇದನ್ನೂ ಓದಿ:   Assam flood relief: ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ 25 ಕೋಟಿ ದೇಣಿಗೆ ನೀಡಿದ ಮುಖೇಶ್ ಅಂಬಾನಿ!

“ರೈತರು, ಕಾರ್ಮಿಕರು ಅಥವಾ ಭೂಮಾಲೀಕರಿಗೆ ತೊಂದರೆಯಾಗುವ ಸಮಸ್ಯೆ ಇದ್ದಾಗ, ಪಾಟೀಲ್ ಅವರ ಕಲ್ಯಾಣಕ್ಕಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದರು ಮತ್ತು ಅವರಿಗಾಗಿ ಹೋರಾಡುತ್ತಿದ್ದರು. ಇವರಿಂದಾಗಿಯೇ ಸಾವಿರಾರು ಭೂಮಾಲೀಕರು, ರೈತರಿಗೆ ನ್ಯಾಯ ಮತ್ತು ಹಕ್ಕು ದೊರಕಿದೆ. ಜನರ ಕಲ್ಯಾಣವೇ ಅವರ ಮನಸ್ಸಿನ ಮೇಲಿತ್ತು" ಎಂದು ನವಿ ಮುಂಬೈ ವಿಮಾನ ನಿಲ್ದಾಣದ ಸರ್ವಪಕ್ಷ ಕ್ರಿಯಾ ಸಮಿತಿಯ ಅಧ್ಯಕ್ಷ ದಶರತ್ ಪಾಟೀಲ್ ಈ ಹಿಂದೆ ತಿಳಿಸಿದ್ದರು.

“ಅವರು ಭೂ ಮಾಲೀಕರು, ಕಾರ್ಮಿಕರು, ರೈತರು ಮತ್ತು ಪ್ರದೇಶದ ಇತರ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಡುತ್ತಾ ತಮ್ಮ ಜೀವನವನ್ನು ತ್ಯಾಗ ಮಾಡಿದರು. ಈಗ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರುವ ಭೂಮಿಯಲ್ಲಿ ದುಡಿದ ನಾಯಕನಿಗೆ ವಿಮಾನ ನಿಲ್ದಾಣದ ಯೋಜನೆ ಸಮರ್ಪಿಸಬೇಕು' ಎಂಬ ಒತ್ತಾಯ ಕೇಳಿ ಬರುತ್ತಿದೆ.

ರೈತರು ಮತ್ತು ಭೂಮಾಲೀಕರಲ್ಲದೆ ಒಬಿಸಿಗಳ ಹಕ್ಕುಗಳಿಗಾಗಿಯೂ ಹೋರಾಟ
ಪನ್ವೇಲ್‌ನ ಬಿಜೆಪಿ ಶಾಸಕ ಪ್ರಶಾಂತ್ ಠಾಕೂರ್ ಹೇಳಿವ ಪ್ರಕಾರ, “ನವಿ ಮುಂಬೈ ಅಥವಾ ರಾಯಗಡ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಮುಖ ಯೋಜನೆಯನ್ನು ದಿವಂಗತ ಡಿ ಬಿ ಪಾಟೀಲ್ ಅವರಿಗೆ ಅರ್ಪಿಸಲಾಗಿಲ್ಲ, ಅವರು ತಮ್ಮ ಜೀವನದುದ್ದಕ್ಕೂ ರೈತರ ಕಲ್ಯಾಣಕ್ಕಾಗಿ ಹೋರಾಡಿದರು. ಹೀಗಾಗಿ ಅವರ ಕೆಲಸವನ್ನು ಗೌರವಿಸಲು ಉತ್ತಮ ಸಮಯ ಬಂದಿದೆ ,ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡುವುದು ಸೂಕ್ತ ಎಂದಿದ್ದಾರೆ.
ಸಂಮೃದ್ಧಿ ಹೆದ್ದಾರಿಗೆ ಬಾಳಾಸಾಹೇಬ್ ಠಾಕ್ರೆ ಅವರ ಹೆಸರನ್ನು ಈಗಾಗಲೇ ನೀಡಲಾಗಿದೆ ಮತ್ತು ಆದ್ದರಿಂದ ವಿಮಾನ ನಿಲ್ದಾಣಕ್ಕೆ ಪಾಟೀಲ್ ಹೆಸರಿಡುವುದು ಸೂಕ್ತ. ಸ್ಥಳೀಯರ ಬೇಡಿಕೆಗಳನ್ನು ಸರ್ಕಾರನಿರ್ಲಕ್ಷಿಸಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ:   Shocking Report: ಹೊಸ ಬ್ಯಾಕ್ಟೀರಿಯಾದಿಂದ ಕರುಗುತ್ತಿವೆಯಾ ಹಿಮರಾಶಿ? ವರದಿಯಲ್ಲಿ ಆತಂಕಕಾರಿ ಮಾಹಿತಿ

ಒಟ್ಟಾರೆ ಸ್ಥಳೀಯ ಜನರ ಒತ್ತಾಯ ಮತ್ತು ಉದ್ದೇಶ ರೈತರಿಗಾಗಿ ಹಲವಾರು ವರ್ಷಗಳಿಂದ ತಮ್ಮ ಜೀವವನ್ನೇ ಮುಡುಪಾಗಿಟ್ಟಿರುವ ಡಿ. ಬಿ. ಪಾಟೀಲ್ ಅವರಿಗೆ ಗೌರವ ಸಲ್ಲಿಸಬೇಕೆಂಬುದು ಆಗಿದೆ. ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇವರ ಹೆಸರನ್ನು ಇಡುವ ಮೂಲಕ ಗೌರವ ಮತ್ತು ಅವರ ಕೆಲಸಗಳನ್ನು ಸ್ಮರಿಸಿದಂತಾಗುತ್ತದೆ ಎಂಬುವುದು ಸ್ಥಳೀಯರ ಆಸೆ.
Published by:Ashwini Prabhu
First published: