Hindi Diwas: ಹಿಂದಿ ದಿವಸ್ ಆಚರಣೆ ಹಿಂದಿ ಹೇರಿಕೆಯ ಹುನ್ನಾರವೇ? ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದ್ದೇಕೆ?

ಈ ಹಿಂದೆಯೂ ಹಿಂದಿ ರಾಷ್ಟ್ರ ಭಾಷೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಾದ್ಯಂತ ಚರ್ಚೆ ನಡೆದಿದ್ದವು. ಆಗಲೂ ಕನ್ನಡಿಗರು ಇದರ ವಿರುದ್ಧ ಸಿಡಿದೆದ್ದಿದ್ದರು. ನಟ ಕಿಚ್ಚ ಸುದೀಪ್ ಸೇರಿದಂತೆ ಹಲವು ಖ್ಯಾತನಾಮರು, ಜನಸಾಮಾನ್ಯರು ಹಿಂದಿ ವಿರುದ್ಧ ತಿರುಗಿ ಬಿದ್ದಿದ್ದರು. ಇದೀಗ ಹಿಂದಿ ದಿವಸ್ಗೆ ಮತ್ತೆ ವಿರೋಧ ವ್ಯಕ್ತವಾಗಿದೆ. ಪ್ರಮುಖವಾಗಿ ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು, ಜನಸಾಮಾನ್ಯರು ಹಿಂದಿ ದಿವಸ್ ಆಚರಣೆಗೆ ಕಿಡಿಕಾರಿದ್ದಾರೆ.

ಹಿಂದಿ ದಿವಸ್

ಹಿಂದಿ ದಿವಸ್

  • Share this:
ಇಂದು ದೇಶಾದ್ಯಂತ ಹಿಂದಿ ದಿವಸ್ (Hindi Diwas) ಆಚರಿಸಲಾಗುತ್ತಿದೆ. ಅದರಲ್ಲೂ ಹಿಂದಿ (Hindi) ಮಾತನಾಡುವ ರಾಜ್ಯಗಳಲ್ಲಿ ಪ್ರಮುಖವಾಗಿ ಸೆಪ್ಟೆಂಬರ್ 14ರಂದು ಹಿಂದಿ ಭಾಷಾ ದಿವಸ್ (Hindi Bhasha Diwas) ಆಚರಿಸಲಾಗುತ್ತದೆ. ಆದರೆ ಇದಕ್ಕೆ ಕರ್ನಾಟಕದಲ್ಲಿ (Karnataka) ಭಾರೀ ವಿರೋಧ ವ್ಯಕ್ತವಾಗಿದೆ. ಈ ಹಿಂದೆಯೂ ಹಿಂದಿ ರಾಷ್ಟ್ರ ಭಾಷೆ (Hidi is National Language) ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರಾದ್ಯಂತ ಚರ್ಚೆ ನಡೆದಿದ್ದವು. ಆಗಲೂ ಕನ್ನಡಿಗರು (Kannadigas) ಇದರ ವಿರುದ್ಧ ಸಿಡಿದೆದ್ದಿದ್ದರು. ನಟ ಕಿಚ್ಚ ಸುದೀಪ್ (Kichcha Sudeep) ಸೇರಿದಂತೆ ಹಲವು ಖ್ಯಾತನಾಮರು, ಜನಸಾಮಾನ್ಯರು ಹಿಂದಿ ವಿರುದ್ಧ ತಿರುಗಿ ಬಿದ್ದಿದ್ದರು. ಇದೀಗ ಹಿಂದಿ ದಿವಸ್‌ಗೆ ಮತ್ತೆ ವಿರೋಧ ವ್ಯಕ್ತವಾಗಿದೆ. ಪ್ರಮುಖವಾಗಿ ಜೆಡಿಎಸ್ (JDS), ಕಾಂಗ್ರೆಸ್ (Congress) ಸೇರಿದಂತೆ ರಾಜಕೀಯ ಪಕ್ಷಗಳು, ಜನಸಾಮಾನ್ಯರು ಹಿಂದಿ ದಿವಸ್ ಆಚರಣೆಗೆ ಕಿಡಿಕಾರಿದ್ದಾರೆ.

ಸೆಪ್ಟೆಂಬರ್ 14ರಂದು ಹಿಂದಿ ದಿವಸ್ ಆಚರಣೆ

ಪ್ರತಿ ವರ್ಷ ಸೆಪ್ಟೆಂಬರ್ 14 ರಂದು ಹಿಂದಿ ದಿವಸ್‌ ಅನ್ನು ಆಚರಿಸಲಾಗುತ್ತದೆ. ಹಿಂದಿ ರಾಷ್ಟ್ರೀಯ ಭಾಷೆ ಆಗಬೇಕು ಅಂತ ಬೋಹರ್ ರಾಜೇಂದ್ರ ಸಿಂಹ ಎಂಬುವರು ಹೆಚ್ಚಾಗಿ ಹೋರಾಟ ಮಾಡಿದ್ದರು. ಅವರ 50ನೇ ಹುಟ್ಟುಹಬ್ಬವಾದ ಸೆಪ್ಟೆಂಬರ್ 14, 1949 ರಲ್ಲಿ ಹಿಂದಿಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯಾಗಿ ಘೋಷಿಸಲಾಯಿತು. ಬೋಹರ್ ರಾಜೇಂದ್ರ ಸಿಂಹ ಅವರ ಸ್ಮರಣಾರ್ಥವಾಗಿ ಪ್ರತಿವರ್ಷ ಸೆಪ್ಟೆಂಬರ್ 14 ರಂದು ಹಿಂದಿ ದಿವಸ್ ಅನ್ನು ಆಚರಣೆ ಮಾಡಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.

ಹಿಂದಿ ರಾಷ್ಟ್ರಭಾಷೆಗಾಗಿ ಬೋಹರ್ ರಾಜೇಂದ್ರ ಸಿಂಹ ಹೋರಾಟ

1949ರ ಸೆಪ್ಟೆಂಬರ್ 14ರಂದು ರಾಷ್ಟ್ರದ ಅಧಿಕೃತ ಆಡಳಿತ ಭಾಷೆಯನ್ನಾಗಿ ಹಿಂದಿಯನ್ನು ಘೋಷಿಸಲಾಯಿತು. ಅದರಂತೆ ಸಂಸತ್ತಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಆರ್ಟಿಕಲ್ 343ರ ಪ್ರಕಾರ ಆಡಳಿತ ಭಾಷೆಯನ್ನಾಗಿ ಹಿಂದಿಯನ್ನು ಅಳವಡಿಸಿಕೊಳ್ಳಲಾಯಿತು. ಮೂಲ ದೇವನಾಗರಿ ಲಿಪಿಯಲ್ಲಿ ರಚಿತವಾಗಿರುವ ಹಿಂದಿಯೇ ಸದ್ಯದ ಕೇಂದ್ರದ ಆಡಳಿತ ಭಾಷೆ. ಆಗ ಹಿಂದಿ ರಾಷ್ಟ್ರಭಾಷೆಯನ್ನಾಗಿ ಜಾರಿಗೆ ತರಬೇಕು ಎಂಬ ಹೋರಾಟವನ್ನು ಹುಟ್ಟು ಹಾಕಿದವರಲ್ಲಿ ಬೋಹರ್ ರಾಜೇಂದ್ರ ಸಿಂಹ, ಹಜಾರಿ ಪ್ರಸಾದ್ ದ್ವಿವೇದಿ, ಕಾಕಾ ಕಲೇಲ್ಕರ್, ಮೈಥಿಲಿ ಶರಣ ಗುಪ್ತ ಮತ್ತು ಸೇಠ್ ಗೋವಿಂದ ದಾಸ್ ಪ್ರಮುಖರು. ಇವರು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಜಾರಿಗೆ ತರಬೇಕೆಂದು ಸಂಸತ್ತಿನ ಹೊರಗೆ, ಒಳಗೆ ಹೋರಾಟ ಮಾಡಿದರು.

ಇದನ್ನೂ ಓದಿ: Explained: ರಾಷ್ಟ್ರೀಯ ಭಾಷೆ ಎಂದರೇನು? ಹಿಂದಿ ನಮ್ಮ ರಾಷ್ಟ್ರ ಭಾಷೆಯೇ?

ಬೋಹರ್ ರಾಜೇಂದ್ರ ಸಿಂಹ ಸ್ಮರಣಾರ್ಥ ಹಿಂದಿ ಭಾಷಾ ದಿವಸ್ ಆಚರಣೆ

ಸೆಪ್ಟೆಂಬರ್ 14, 1949ರಂದು ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಸ್ವೀಕರಿಸಿ ಆದೇಶ ಹೊರಡಿಸಲಾಯಿತು. ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಜಾರಿಗೆ ತರಬೇಕು ಎಂಬ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪ್ರಮುಖರು ಬೋಹರ್ ರಾಜೇಂದ್ರ ಸಿಂಹ. ಹಿಂದಿ ಹೋರಾಟಗಾರರು ಸೆಪ್ಟೆಂಬರ್ 14, 1949ರಲ್ಲಿ ಇವರ 50ನೇ ಹುಟ್ಟುಹಬ್ಬವನ್ನು ಆಚರಿಸಿದರು. ಇವರ ಹೋರಾಟದ ಫಲವೇ ಹಿಂದಿಯನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಸ್ವೀಕರಿಸಲು ಕಾರಣ. ಅದೇ ಕಾರಣಕ್ಕಾಗಿ ಇವರ ಜ್ಞಾಪಕಾರ್ಥವಾಗಿ ಸೆಪ್ಟೆಂಬರ್ 14 ಅನ್ನು 'ಹಿಂದಿ ದಿವಸ್' ಆಚರಣೆ ಮಾಡಬೇಕೆಂದು ಒತ್ತಾಯಿಸಿದರು. ಒತ್ತಾಯಕ್ಕೆ ಮಣಿದ ಸರ್ಕಾರ ಆದೇಶ ಹೊರಡಿಸಿ ಜಾರಿಗೆ ತಂದಿತು. ಅಂದಿನಿಂದ ಸೆಪ್ಟೆಂಬರ್ 14 ಅನ್ನು 'ಹಿಂದಿ ದಿವಸ್' ಎಂದು ಆಚರಿಸಲಾಗುತ್ತಿದೆ.

ಹಿಂದಿ ಎಲ್ಲೆಲ್ಲಿ ಅಧಿಕೃತ ಭಾಷೆಯಾಗಿದೆ?

ಹಿಂದಿ ಭಾರತದಾದ್ಯಂತ ಮಾತನಾಡುವ ಅತ್ಯಂತ ಜನಪ್ರಿಯ ಭಾಷೆಯಾಗಿದೆ. ಬಿಹಾರ, ಛತ್ತೀಸ್‌ಗಢ, ದೆಹಲಿ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ಸುಮಾರು 366 ಮಿಲಿಯನ್ ಜನ ಹಿಂದಿ ಮಾತನಾಡುವವರಿದ್ದಾರೆ.

ಹಿಂದಿ ದಿವಸ್‌ಗೆ ದಕ್ಷಿಣ ರಾಜ್ಯಗಳಲ್ಲಿ ವಿರೋಧ

ಇನ್ನು ಹಿಂದಿ ದಿವಸ್ ಆಚರಣೆಗೆ ದಕ್ಷಿಣ ಭಾರತದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ಪ್ರಮುಖವಾಗಿ ಕರ್ನಾಟಕ, ತಮಿಳುನಾಡು, ಆಂಧ ಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಿಂದಿ ದಿವಸ್ ಆಚರಣೆಗೆ ವಿರೋಧ ವ್ಯಕ್ತವಾಗಿದೆ.

ಸ್ವಾತಂತ್ರ್ಯಪೂರ್ವದಿಂದಲೂ ಹಿಂದಿ ಹೇರಿಕೆಗೆ ವಿರೋಧ

ಸ್ವಾತಂತ್ರ್ಯ ಬಂದಾಗಿನಿಂದ ದೇಶವಾಳಿದ ಎಲ್ಲಾ ಉತ್ತರ ಭಾರತೀಯರ ಪ್ರಭುತ್ವದ ಸರ್ಕಾರಗಳು ಪ್ರಯತ್ನ ನಡೆಸುತ್ತಲೇ ಇವೇ. ಹಿಂದಿ ಹೇರಿಕೆ ವಿರುದ್ಧದ ಮೊದಲ ಪ್ರತಿಭಟನೆ ಈ ದೇಶದಲ್ಲಿ ನಡೆದಿದ್ದು ಸ್ವಾತಂತ್ರ್ಯ ಪೂರ್ವದಲ್ಲೇ ಅಂದರೆ 1937 ರಲ್ಲೇ ಇದರ ಮೂಲ ಮತ್ತು ಸಾರಥ್ಯ ತಮಿಳುನಾಡಿನದೇ ಆದರು ಅದು ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲು ಇದು ವ್ಯಾಪಿಸಿತ್ತು. 1965 ಹಿಂದಿ ಹೇರಿಕೆ ವಿರುದ್ಧದ ಹೋರಾಟದ ಬಿಸಿಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಗೆ ಅಧಿಕಾರ ಬಿಟ್ಟು ಕೊಟ್ಟ ನಂತರ ಕಾಂಗ್ರೆಸಿಗೆ ಮತ್ತೆಂದೂ ಅಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ.

1937ರಲ್ಲಿ ಹಿಂದಿ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ

1937 ರಲ್ಲಿ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಹಿಂದಿ ವಿರುದ್ಧ ಚಳುವಳಿ ಕಂಡುಬಂದಿತು. ಆ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಆಜ್ಞೆಯ ಮೇರೆಗೆ ದಕ್ಷಿಣದಲ್ಲಿ ಹಿಂದಿ ಕಲಿಸುವ ಬಗ್ಗೆ ಮಾತನಾಡಲಾಯಿತು. ಜನರು ಸುಮಾರು ಮೂರು ವರ್ಷಗಳ ಕಾಲ ಪ್ರತಿಭಟನೆ ನಡೆಸಿದರು ಮತ್ತು ಪ್ರತಿಭಟನೆಗಳು ಹಲವಾರು ಬಾರಿ ಹಿಂಸಾಚಾರಕ್ಕೆ ತಿರುಗಿದವು.

ಕೇಂದ್ರ ಸರ್ಕಾರದಿಂದ ಹಿಂದಿಗೆ ಆದ್ಯತೆ

ಹಿಂದಿಯನ್ನು ಹೆಚ್ಚು ಪ್ರಚುರ ಪಡಿಸಲು ಕೇಂದ್ರ ಸರ್ಕಾರ ಅದಕ್ಕೆ ರಾಜಭಾಷೆಯ ಸ್ಥಾನ ನೀಡಿ ಹಿಂದಿ ದಿವಸ, ಹಿಂದಿ ಸಪ್ತಾಹ ಮುಂತಾದ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದೆ. ಇದಲ್ಲದೆ ಹಿಂದಿ ಪ್ರಚಾರ ಪರಿಷತ್ ಮುಂತಾದ ಆಯೋಗಗಳನ್ನು ರಚಿಸಿ ಹಿಂದಿಯೇತರ ಪ್ರದೇಶಗಳಲ್ಲಿ ಹಿಂದಿ ಭಾಷೆಯ ಪ್ರಚಾರಕ್ಕೆ ಇವುಗಳನ್ನು ಬಳಸುತ್ತಿದೆ.

ಕರ್ನಾಟಕದಲ್ಲಿ ಭಾರೀ ವಿರೋಧ

ಇತ್ತ ಕರ್ನಾಟಕದಲ್ಲಿ ಕನ್ನಡಿಗರು ತಿರುಗಿ ಬಿದ್ದಿದ್ದಾರೆ. ಪ್ರಮುಖವಾಗಿ ಜೆಡಿಎಸ್ ಹಿಂದಿ ದಿವಸ್ ವಿರುದ್ಧ ರಣಕಹಳೆ ಊದಿದೆ. ಇದು ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ಹುನ್ನಾರ ಅಂತ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇದನ್ನೂ ಓದಿ: Explained: ಕಿಚ್ಚ ಸುದೀಪ್-ಅಜಯ್ ದೇವಗನ್ ಮಧ್ಯೆ 'ಹಿಂದಿ' ವಾರ್! ಶುರುವಾಗಿದ್ದು ಹೇಗೆ, ಬಂದು ನಿಂತಿದ್ದೆಲ್ಲಿಗೆ?

ಸಾಮಾಜಿಕ ಜಾಲತಾಣಗಳಲ್ಲೂ ವಿರೋಧ

ಸಾಮಾಜಿಕ ಜಾಲತಾಣಗಳಲ್ಲೂ ಹಿಂದಿ ದಿವಸ್‌ಗೆ ವಿರೋಧ ವ್ಯಕ್ತವಾಗಿದೆ. ಇದು ಹಿಂದಿ ಹೇರಿಕೆಯ ಹುನ್ನಾರ ಅಂತ ನೆಟ್ಟಿಗರು ಕಿಡಿಕಾರಿದ್ದಾರೆ. ಹಿಂದಿ ರಾಜ್ಯಗಳ ಜನರು ಇಲ್ಲಿ ಕೆಲಸ ಅರಸಿ ಬರುತ್ತಾರೆ. ನಾವು ಎಂದಿಗೂ ನಮ್ಮ ಭಾಷೆ ಅಥವಾ ಸಂಸ್ಕೃತಿಯನ್ನು ಅವರ ಮೇಲೆ ಹೇರುವುದಿಲ್ಲ. ಅವರ ಭಾಷೆಯನ್ನು ನಾವು ಗೌರವಿಸುತ್ತೇವೆ. ಆದರೆ ಹಿಂದಿ ರಾಜ್ಯಗಳ ಈ ಜನರು ನಾವು ಅವರ ಭಾಷೆಯಲ್ಲಿ ಮಾತನಾಡಬೇಕೆಂದು ನಿರೀಕ್ಷಿಸುತ್ತಾರೆ. ಅವರು ನಮ್ಮ ಭಾಷೆ ಅಥವಾ ಸಂಸ್ಕೃತಿಯನ್ನು ಗೌರವಿಸುವುದಿಲ್ಲ ಅಂತ ಕಿಡಿಕಾರುತ್ತಿದ್ದಾರೆ.
Published by:Annappa Achari
First published: