Explained: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚುತ್ತಿರೋದೇಕೇ? 4ನೇ ಅಲೆ ಬಗ್ಗೆ ಆತಂಕಪಡಬೇಕೆ?

ಭಾರತದಲ್ಲಿ ಪ್ರಕರಣ ಸಂಖ್ಯೆಗಳಲ್ಲಿ ಪ್ರಸ್ತುತ ಹೆಚ್ಚಳವಾಗಿದ್ದರೂ, ಆ ಏರಿಕೆ ಎಲ್ಲ ರಾಜ್ಯಗಳಲ್ಲಿ ಕಂಡುಬರುತ್ತಿದೆ ಅನ್ಕೋಬೇಡಿ. ಏಕೆಂದರೆ, ಪ್ರಸ್ತುತ ದೆಹಲಿ ಮತ್ತು ಅದರ ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ.

ಕೋವಿಡ್‌

ಕೋವಿಡ್‌

 • Share this:
  ಡಿಸೆಂಬರ್ 2019ರಲ್ಲಿ ಚೀನಾದ (China) ವುಹಾನ್‌ನಲ್ಲಿ (Wuhan) ಮೊದಲ ಬಾರಿಗೆ ಕೋವಿಡ್ - 19 (Covid 19) ವರದಿಯಾದಾಗಿನಿಂದ ಇಡೀ ಜಗತ್ತನ್ನೇ ಬಾಧಿಸುತ್ತಿದೆ. ದೇಶದಲ್ಲೂ ಕೊರೊನಾ ವೈರಸ್‌ಗೆ (Corona Virus) ಲಕ್ಷಾಂತರ ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡ್ರು. ಇನ್ನೂ, ಅನೇಕರು ತಮ್ಮ ಕುಟುಂಬವನ್ನೇ ಕಳೆದುಕೊಂಡು ಅನಾಥರಾದರು. ಅಲ್ಲದೆ, ಇನ್ನೇನು ಕೊರೊನಾ ಹೋಯ್ತಪ್ಪ ಅಂತ ನಿಟ್ಟುಸಿರು ಬಿಡುವಷ್ಟರಲ್ಲಿ ರೂಪಾಂತರದ ರೂಪದಲ್ಲಿ ಆಗಾಗ್ಗೆ ಕಾಡುತ್ತಲೇ ಇದೆ. ದೇಶದಲ್ಲೂ ಈಗಾಗಲೇ ಮೂರನೇ ಅಲೆಗಳನ್ನು (3rd Wave) ಕಂಡಿರುವ ಕೋವಿಡ್ - 19 ಈಗ ನಾಲ್ಕನೇ ಅಲೆಯ (4th Wave) ಮೂಲಕ ಅಟ್ಟಹಾಸ ಬೀರಲಿದೆ ಎಂಬ ಆತಂಕ ಶುರುವಾಗಿದೆ. ಭಾರತವು ಕಳೆದ ವಾರದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವನ್ನು ಕಂಡಿದೆ. ಹಿಂದಿನ ಸೋಮವಾರ (ಏಪ್ರಿಲ್ 18) ವರದಿಯಾದ 2,183 ಪ್ರಕರಣಗಳಿಗೆ ಹೋಲಿಸಿದರೆ ಈ ಸೋಮವಾರ 2,514 ಹೊಸ ಪ್ರಕರಣಗಳು ವರದಿಯಾಗಿವೆ.

  ದಿನ ದಿನಕ್ಕೂ ಏರುತ್ತಲೇ ಇದೆ ಕೋವಿಡ್ ಕೇಸ್

  ಸಕ್ರಿಯ ಪ್ರಕರಣಗಳ ಸಂಖ್ಯೆ ಏಪ್ರಿಲ್ 18 ರಂದು 11,542 ಕ್ಕೆ ಹೋಲಿಸಿದರೆ, ಈ ಸೋಮವಾರ (ಏಪ್ರಿಲ್ 25) 16,522 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇನ್ನು, ಸಾಪ್ತಾಹಿಕ ಸಕಾರಾತ್ಮಕತೆಯ ದರ ಏಪ್ರಿಲ್ 18 ರಂದು 0.32% ರಿಂದ ಈ ಸೋಮವಾರ 0.54% ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಅಲ್ಲದೆ, ಪರೀಕ್ಷೆಗಳ ಸಂಖ್ಯೆ ಸಹ ಹೆಚ್ಚಿದ್ದು, ಏಪ್ರಿಲ್ 18 ರಂದು 2.6 ಲಕ್ಷದಿಂದ ಏಪ್ರಿಲ್ 25 ರಂದು 3.02 ಲಕ್ಷಕ್ಕೆ ಏರಿಕೆಯಾಗಿದೆ.

  ದೇಶಾದ್ಯಂತ ಎಲ್ಲಾ ಕೋವಿಡ್ -19 ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಿದ ವಾರಗಳ ನಂತರ ಪ್ರಕರಣಗಳು ಮತ್ತು ಸಕಾರಾತ್ಮಕತೆಯ ಹೆಚ್ಚಳವು ಕಂಡು ಬರುತ್ತದೆ.

  ಕೋವಿಡ್-19 ಪ್ರಕರಣಗಳು ಎಲ್ಲಿ ಹೆಚ್ಚುತ್ತಿವೆ?

  ಭಾರತದಲ್ಲಿ ಪ್ರಕರಣ ಸಂಖ್ಯೆಗಳಲ್ಲಿ ಪ್ರಸ್ತುತ ಹೆಚ್ಚಳವಾಗಿದ್ದರೂ, ಆ ಏರಿಕೆ ಎಲ್ಲ ರಾಜ್ಯಗಳಲ್ಲಿ ಕಂಡುಬರುತ್ತಿದೆ ಅನ್ಕೋಬೇಡಿ. ಏಕೆಂದರೆ, ಪ್ರಸ್ತುತ ದೆಹಲಿ ಮತ್ತು ಅದರ ನೆರೆಯ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ವರದಿಯಾಗಿರುವ 2,541 ಪ್ರಕರಣಗಳ ಪೈಕಿ, ಸುಮಾರು 1,000 ಪ್ರಕರಣಗಳು ದೆಹಲಿಯಲ್ಲೇ ವರದಿಯಾಗಿದೆ.

  ಇದನ್ನೂ ಓದಿ: Explained: ಪ್ರತಿ ಬಾರಿಯೂ ಕೋವಿಡ್‌ಗೆ ಬೆಂಗಳೂರೇ ಟಾರ್ಗೆಟ್ ಆಗುವುದೇಕೆ? ಈ ಬಾರಿಯೂ ಇದೆಯಾ 'ಹೆಣ'ಗಾಟ?

  ಅನ್‌ ಲಾಕ್‌ನಿಂದ ಹೆಚ್ಚಾಯ್ತಾ ಕೇಸ್?

  ಮಾಸ್ಕ್ ಆದೇಶಗಳನ್ನು ತೆಗೆದುಹಾಕಿದ ಸುಮಾರು ಎರಡು ವಾರಗಳ ನಂತರ ಅಂದರೆ, ಏಪ್ರಿಲ್ ಮಧ್ಯ ಭಾಗದಲ್ಲಿ ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿತು.

  ದೆಹಲಿ ಸೇರಿ ಹಲವೆಡೆ ನಿರ್ಬಂಧ

  ಈ ಹಿನ್ನೆಲೆ ಈಗ ದೆಹಲಿಯಲ್ಲಿ ಮತ್ತು ಹರಿಯಾಣದ ನಾಲ್ಕು ಜಿಲ್ಲೆಗಳು ಹಾಗೂ ದೆಹಲಿಯ ಸುತ್ತಮುತ್ತಲಿನ ಉತ್ತರ ಪ್ರದೇಶದ ಐದು ಜಿಲ್ಲೆಗಳಲ್ಲಿ ಮಾಸ್ಕ್‌ ಕಡ್ಡಾಯ ಆದೇಶವನ್ನು ಮರುಪರಿಚಯಿಸಲಾಗಿದೆ. ಅದೇ ರೀತಿ, ರಾಜ್ಯದಲ್ಲೂ ಸ್ವಲ್ಪ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಸೋಮವಾರ ಕರ್ನಾಟಕ ಸರ್ಕಾರ, ಮಾಸ್ಕ್‌ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

  ದೆಹಲಿಯಲ್ಲಿ ಮತ್ತೆ ಕೇಸ್ ಏರಿಕೆ

  ಜನವರಿಯಿಂದ ರಾಷ್ಟ್ರ ರಾಜಧಾನಿಯಲ್ಲಿ ಇಳಿಕೆಯಾಗುತ್ತಿದ್ದ ಪ್ರಕರಣಗಳು ಏಪ್ರಿಲ್‌ ಮಧ್ಯಭಾಗದಲ್ಲಿ ಹೆಚ್ಚಳವಾಗುತ್ತಿದೆ. ಕಳೆದ ಐದು ದಿನಗಳಿಂದ ಸುಮಾರು 1,000 ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಮತ್ತಷ್ಟು ಹೆಚ್ಚಳವಾಗುವ ಆತಂಕವೂ ಮೂಡುತ್ತಿದೆ.

  ಕೋವಿಡ್‌ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದ ಹಿನ್ನೆಲೆ ದೆಹಲಿಯಲ್ಲಿ ಶಾಲೆಗಳನ್ನು ಪುನಃ ತೆರೆಯಲಾಯಿತು ಮತ್ತು ಏಪ್ರಿಲ್ ಆರಂಭದಲ್ಲಿ ಮಾಸ್ಕ್‌ ಕಡ್ಡಾಯ ಆದೇಶಗಳನ್ನು ತೆಗೆದುಹಾಕಲಾಯಿತು. ಆದರೂ, ಏಪ್ರಿಲ್ ಮಧ್ಯ ಭಾಗದಿಂದ, ರಾಷ್ಟ್ರ ರಾಜಧಾನಿಯಲ್ಲಿ ಪ್ರಕರಣಗಳ ಸಂಖ್ಯೆಯು ಸುಮಾರು ಎರಡು ವಾರಗಳಲ್ಲಿ ಸುಮಾರು 100 ರಿಂದ 1,000 ಕ್ಕೆ ಏರಿತು.

  ಹಿಂದಿನಂತೆ ಒಂದೇ ಸಮನೆ ಏರುತ್ತಿಲ್ಲ ಸೋಂಕು?

  ಆದರೂ, ಈ ಹೆಚ್ಚಳವು ದೆಹಲಿಯು ಮೊದಲು ನೋಡಿದಷ್ಟು ಭೀಕರವಾಗಿಲ್ಲ. ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ 16 ದಿನಗಳಲ್ಲಿ ಪ್ರಕರಣಗಳು ಕೇವಲ 100 ರಿಂದ 1,000 ಕ್ಕೆ ಏರಿದೆ. ಆದರೆ, ಇದಕ್ಕೆ ಹೋಲಿಸಿದರೆ, ಡಿಸೆಂಬರ್-ಜನವರಿಯಲ್ಲಿ ಪ್ರಕರಣಗಳಲ್ಲಿ ಇದೇ ರೀತಿಯ ಹೆಚ್ಚಳಕ್ಕೆ (ಪ್ರತಿನಿತ್ಯ ಸುಮಾರು 100 ರಿಂದ) ಕೇವಲ 10 ದಿನಗಳನ್ನು ತೆಗೆದುಕೊಂಡಿತ್ತು.

  12 ದಿನಗಳಲ್ಲಿ ಪ್ರಕರಣಗಳು 2,000 ಗಡಿ ದಾಟಿದ್ದವು ಮತ್ತು 15 ದಿನಗಳಲ್ಲಿ 5,000 ಪ್ರಕರಣಗಳ ಆಸುಪಾಸಿಗೆ ಹೆಚ್ಚಳವಾಗಿತ್ತು. ನಂತರ, 5,000 ದಿಂದ ಒಂದು ದಿನದಲ್ಲಿ ಪ್ರಕರಣಗಳ ಸಂಖ್ಯೆ 10,000 ಕ್ಕೆ ಏರಿತ್ತು. ಬಳಿಕ 8 ದಿನಗಳಲ್ಲಿ 28,867 ಪ್ರಕರಣಗಳು ದಾಖಲಾಗಿದ್ದವು.

  ಪ್ರಕರಣಗಳ ಹೆಚ್ಚಳದ ಬಗ್ಗೆ ನಾವು ಚಿಂತಿಸಬೇಕೇ?

  ಈ ಸಂಬಂಧ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಡಾ. ಲಲಿತ್‌ ಕಾಂತ್‌, “ಜನರು ಮಾಸ್ಕ್‌ಗಳನ್ನು ತೆಗೆಯಲು ಪ್ರಾರಂಭಿಸಿದ ನಂತರ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ನಿರೀಕ್ಷಿಸಲಾಗಿತ್ತು. ಪ್ರಕರಣಗಳ ಸಂಖ್ಯೆಯಲ್ಲಿ ಸಮಯಕ್ಕನುಗುಣವಾಗಿ ಏರಿಳಿತಗಳು ಕಂಡುಬರುತ್ತವೆ. ಆದರೆ, ನಾವು ಕೋವಿಡ್‌ನಿಂದ ಸಾವಿಗೀಡಾಗುವವರ ಸಂಖ್ಯೆ ಹಾಗೂ ಹೆಚ್ಚು ತೀವ್ರವಾದ ಪ್ರಕರಣಗಳ ಬಗ್ಗೆ ಹೆಚ್ಚಾಗಿ ಗಮನ ವಹಿಸಬೇಕಿದೆ’’ ಎಂದು ಹೇಳಿದ್ದಾರೆ.

  ಕೊರೋನ ಜೊತೆಗೆ ಸಾಮಾನ್ಯ ಕಾಯಿಲೆ ಅಬ್ಬರ

  ಆದರೆ, ದೆಹಲಿಯ ಆಸ್ಪತ್ರೆಗಳು ಇಲ್ಲಿಯವರೆಗೆ ಕೆಲವೇ ಕೆಲವು ದಾಖಲಾತಿಗಳನ್ನು ವರದಿ ಮಾಡಿವೆ. ಲೋಕನಾಯಕ್ ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಂತಹ ದೊಡ್ಡ ಆಸ್ಪತ್ರೆಗಳು ಬೆರಳೆಣಿಕೆಯಷ್ಟು ದಾಖಲಾತಿಗಳನ್ನು ಮಾತ್ರ ವರದಿ ಮಾಡುತ್ತಿವೆ. ಹೆಚ್ಚಿನವರಿಗೆ ಜ್ವರ, ಕೆಮ್ಮು, ನೆಗಡಿ ಮತ್ತು ಗಂಟಲು ನೋವು ಕಾಣಿಸಿಕೊಳ್ಳುತ್ತಿದ್ದು, 3 - 5 ದಿನಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಾರೆ.

  ಸಾವಿನ ಸಂಖ್ಯೆಯಲ್ಲಿ ಅಲ್ಪ ಹೆಚ್ಚಳ

  ರಾಷ್ಟ್ರ ರಾಜಧಾನಿಯಲ್ಲಿ ಸಾವಿನ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳವನ್ನು ಕಂಡಿದೆ. ಕಳೆದ 14 ದಿನಗಳಲ್ಲಿ ಕೋವಿಡ್ -19 ನಿಂದ ಪ್ರತಿದಿನ ಅಂದಾಜು 10 ಸಾವುಗಳು ವರದಿಯಾಗಿವೆ. ಆದರೆ, ಅದಕ್ಕೂ 2 ವಾರಗಳ ಮೊದಲು ಪ್ರತಿದಿನ ಅಂದಾಜು ಆರು ಸಾವುಗಳು ವರದಿಯಾಗುತ್ತಿದ್ದವು.

  4ನೇ ಅಲೆಯ ಮುನ್ಸೂಚನೆಯೇ?

  ಆದರೂ, ಕೋ - ಮಾರ್ಬಿಡಿಟಿ ಹೊಂದಿರುವವರು ಮತ್ತು ವಯಸ್ಸಾದ ರೋಗಿಗಳಲ್ಲಿ ಮಾತ್ರ ಸಾವುಗಳು ಸಂಭವಿಸುತ್ತಿವೆ ಎಂದು ವೈದ್ಯರು ಹೇಳುತ್ತಾರೆ. ಈ ಹಿನ್ನೆಲೆ ಕೋವಿಡ್ - 19 ನಾಲ್ಕನೇ ಅಲೆ ಹಾಗೂ ವೈರಾಣು ಬಗ್ಗೆ ನಾವು ಈಗಲೇ ಹೆಚ್ಚು ಚಿಂತಿಸುವುದನ್ನು ಪ್ರಾರಂಭಿಸಲು ಇದು ಇನ್ನೂ ಸಮಯವಲ್ಲ, ಆದರೂ, ನಾವು ವೈರಸ್ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಜಾಗರೂಕರಾಗಿರಬೇಕು ಎಂಬುದನ್ನು ಮಾತ್ರ ಮರೆಯುವಂತಿಲ್ಲ.

  ಹೆಚ್ಚಿನ ನಿರ್ಬಂಧಗಳ ಅಗತ್ಯವಿದೆಯೇ?

  ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದ ನಂತರ, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹೊರಾಂಗಣದಲ್ಲಿ ಮಾಸ್ಕ್‌ಗಳನ್ನು ಧರಿಸದಿದ್ದರೆ 500 ರೂ. ದಂಡವನ್ನು ಪುನಃ ಪರಿಚಯಿಸಿದೆ. ಆದರೆ, ಕಡ್ಡಾಯ ಆದೇಶಗಳ ಬದಲಿಗೆ ಆರೋಗ್ಯ ಶಿಕ್ಷಣದೊಂದಿಗೆ ಮಾಸ್ಕ್‌ ಹಾಕಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಜ್ಞರು ಹೇಳುತ್ತಾರೆ.

  ಮಾಸ್ಕ್ ತಪ್ಪದೇ ಹಾಕಿ ಅಂತಾರೆ ತಜ್ಞರು

  ಇನ್ನು, ಮಾಸ್ಕ್‌ ಕಡ್ಡಾಯ ಹೊರತುಪಡಿಸಿ, ಈ ಹಂತದಲ್ಲಿ ನಿರ್ಬಂಧಗಳನ್ನು ಹೆಚ್ಚಿಸುವ ಅಗತ್ಯವಿಲ್ಲ ಎಂದೂ ಅವರು ಹೇಳುತ್ತಾರೆ.

  ಇದನ್ನೂ ಓದಿ: Explained: Paxlovid ಎಂದರೇನು? WHO ಏಕೆ ಇದನ್ನು ಕೊರೋನಾ ರೋಗಿಗಳಿಗೆ ಶಿಫಾರಸ್ಸು ಮಾಡುತ್ತಿದೆ ಗೊತ್ತಾ?

  “ನಾವು ಎಷ್ಟು ದಿನ ಮಾಸ್ಕ್‌ ಕಡ್ಡಾಯ ಆದೇಶಗಳು ಮತ್ತು ಇತರ ನಿರ್ಬಂಧಗಳನ್ನು ಮುಂದುವರಿಸಬಹುದು..? ಪ್ರಸ್ತುತ, ಜನರು ಸೋಂಕಿಗೆ ಒಳಗಾದರೂ ಸಹ, ರೋಗವು ಸೌಮ್ಯವಾಗಿರುತ್ತದೆ ಮತ್ತು ಲಾಕ್‌ಡೌನ್‌ಗಳನ್ನು ಜಾರಿಗೊಳಿಸುವ ಅಥವಾ ಶಾಲೆಗಳನ್ನು ಮುಚ್ಚುವ ಅಗತ್ಯವಿಲ್ಲ’’ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ. ಚಂದ್ರಕಾಂತ್ ಲಹರಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
  Published by:Annappa Achari
  First published: