Explained: ಮಕ್ಕಳು ಓದುವ ಪುಸ್ತಕದಲ್ಲೂ ಯಾಕೆ ವಿವಾದ? ಪರಿಷ್ಕರಣೆಗೆ ವಿರೋಧ ವ್ಯಕ್ತವಾಗಿದ್ದೇಕೆ?

ಶಾಲೆಗಳೇನೋ ಶುರುವಾಗಿದೆ. ರಜೆ ಮೂಡ್‌ನಲ್ಲಿದ್ದ ಮಕ್ಕಳೆಲ್ಲ ಈಗ ಓದೋ ಮೂಡ್‌ಗೆ ಮರಳಿದ್ದಾರೆ. ಆದರೆ ಏನು ಕಲಿಸಬೇಕು ಎನ್ನುವ ಟೆನ್ಶನ್ ಶಿಕ್ಷಕರಿಗೆ ಶುರುವಾಗಿದೆ. ಯಾಕೆಂದ್ರೆ ಪಠ್ಯ ಪುಸ್ತಕ ಪರಿಷ್ಕರಣೆ ಗಲಾಟೆಯಲ್ಲಿ ಶಾಲೆಗಳಿಗೆ ಪುಸ್ತಕಗಳು ಇನ್ನೂ ತಲುಪಿಲ್ವಂತೆ. ಹಾಗಾದ್ರೆ ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ಯಾಕಾಯ್ತು? ಇದರ ಪರ-ವಿರೋಧ ವಾದಿಸುವವರ ಅಭಿಪ್ರಾಯವೇನು? ಈ ಬಗ್ಗೆ ಇಲ್ಲಿದೆ ಮಾಹಿತಿ…

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ

  • Share this:
ಕರ್ನಾಟಕದಲ್ಲಿ (Karnataka) ಈಗೊಂದಿಷ್ಟು ಸಮಯದಿಂದ ವಿವಾದ (Controversy), ಘರ್ಷಣೆಗಳೇ (Friction) ನಡೆಯುತ್ತಿವೆ. ಹಿಜಾಬ್ (Hijab Controversy) ವಿವಾದ, ಆಜಾನ್ ವಿವಾದ (Azan Controversy), ಹಲಾಲ್ ಕಟ್-ಜಟ್ಕಾ ಕಟ್ ವಿವಾದ (Halal Cut, Jatka Cut Controversy), ಮಂದಿರ ಮಸೀದಿ ವಿವಾದ (Mandir Masjid Controversy), ಪಿಎಸ್ಐ ಪರೀಕ್ಷಾ ಗೋಲ್ಮಾಲ್ (PSI Exam Golmal) ಹೀಗೆ ಒಂದಿಲ್ಲೊಂದು ವಿವಾದಗಳು ಆಗ್ತಾನೇ ಇವೆ. ಇದೀಗ ಶಾಲಾ ಮಕ್ಕಳ (School Students) ಪಠ್ಯ ಪುಸ್ತಕ ಪರಿಷ್ಕರಣೆಯೂ (Textbook revision) ವಿವಾದದ ರೂಪ ಪಡೆದಿದೆ. ಇದೇ ವಿಚಾರ ಈಗ ದೇಶಾದ್ಯಂತ ಚರ್ಚೆಯಾಗ್ತಿದೆ. ಕರ್ನಾಟಕದಲ್ಲಿ ಶಾಲೆಗಳೇನೋ ಶುರುವಾಗಿದೆ. ರಜೆ ಮೂಡ್‌ನಲ್ಲಿದ್ದ ಮಕ್ಕಳೆಲ್ಲ ಈಗ ಓದೋ ಮೂಡ್‌ಗೆ ಮರಳಿದ್ದಾರೆ. ಆದರೆ ಏನು ಕಲಿಸಬೇಕು ಎನ್ನುವ ಟೆನ್ಶನ್ ಶಿಕ್ಷಕರಿಗೆ (Teachers) ಶುರುವಾಗಿದೆ. ಯಾಕೆಂದ್ರೆ ಪಠ್ಯ ಪುಸ್ತಕ ಪರಿಷ್ಕರಣೆ ಗಲಾಟೆಯಲ್ಲಿ ಶಾಲೆಗಳಿಗೆ ಪುಸ್ತಕಗಳು ಇನ್ನೂ ತಲುಪಿಲ್ವಂತೆ. ಹೀಗಾಗಿ ಕಲಿಸೋಕೆ ಪಠ್ಯ ಇಲ್ಲದೇ ಶಿಕ್ಷಕರು ಸುಮ್ಮನಿದ್ದಾರೆ. ಹಾಗಾದ್ರೆ ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ಯಾಕಾಯ್ತು? ಇದರ ಪರ-ವಿರೋಧ ವಾದಿಸುವವರ ಅಭಿಪ್ರಾಯವೇನು? ಈ ಬಗ್ಗೆ ಇಲ್ಲಿದೆ ಮಾಹಿತಿ…

ಹಿಂದೆ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪರಿಷ್ಕರಣೆ

2017-18ನೇ ಸಾಲಿನಲ್ಲಿ ಅಂದಿನ ಸಿದ್ದರಾಮಯ್ಯ ಸರ್ಕಾರ ಆಡಳಿತದಲ್ಲಿದ್ದಾಗ ಶಾಲಾ ಮಕ್ಕಳ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗಿತ್ತು. ಆಗ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕವನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಲಾಗುತ್ತಿದೆ. ಇದೇ ಪರಿಷ್ಕೃತ  ಪಠ್ಯ ಪುಸ್ತಕವೇ ವಿವಾದಕ್ಕೆ ಕಾರಣವಾಗಿದೆ.

ಮತ್ತೆ ಪಠ್ಯ ಪುಸ್ತಕ ಪರಿಷ್ಕರಣೆಗೆ ನಿರ್ಧರಿಸಿದ್ದೇಕೆ?

ಈ ಹಿಂದಿನ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯಿಂದ ಹೊರತರಲಾದ ಪಠ್ಯದಲ್ಲಿ ಕೆಲವು ಲೋಪದೋಷಗಳಿವೆ ಅಂತ ಸರ್ಕಾರ ಹೇಳಿದೆ. ಹೀಗಾಗಿ ಯುವ ಲೇಖಕ ರೋಹಿತ್ ಚಕ್ರತೀರ್ಥ ಅವರ ನೇತೃತ್ವದಲ್ಲಿ ಹೊಸದಾಗಿ ಸಮಿತಿ ರಚಿಸಿ, ಪಠ್ಯ ಪುಸ್ತಕ ಪರಿಷ್ಕರಣೆಗೆ ಸರ್ಕಾರ ನಿರ್ಧರಿಸಿತ್ತು. ಈ ಸಮಿತಿಗೆ 6 ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆ, 6 ರಿಂದ 10ನೇ ತರಗತಿವರೆಗಿನ ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ಹಾಗೂ 3ನೇ ತರಗತಿಯ ಪರಿಸರ ಅಧ್ಯಯನ ಪಠ್ಯ ಪುಸ್ತಕಗಳ ಪರಿಷ್ಕರಣೆಯ ಜವಾಬ್ದಾರಿ ನೀಡಲಾಗಿತ್ತು.

ಪರಿಷ್ಕೃತ ಪಠ್ಯಕ್ಕೆ ವಿರೋಧವೇಕೆ?

ಪಠ್ಯ ಪುಸ್ತಕದ ಹೆಸರಲ್ಲಿ ಕೇಸರಿಕರಣ ತುಂಬಲಾಗುತ್ತಿದೆ. ಮಕ್ಕಳ ಮನಸ್ಸಲ್ಲಿ ಬ್ರಾಹ್ಮಣತ್ವದ ಬೀಜ ಬಿತ್ತಲಾಗುತ್ತಿದೆ ಎಂಬುವುದು ಪ್ರಗತಿಪರ ಚಿಂತಕರು, ಸಾಹಿತಿಗಳ ಗಂಭೀರ ಆರೋಪ.

ರೋಹಿತ್ ಚಕ್ರತೀರ್ಥ ಮೇಲಿರುವ ಆರೋಪಗಳೇನು?

ಹಿಂದೊಮ್ಮೆ ರೋಹಿತ್ ಚಕ್ರತೀರ್ಥ ಅವರು ಅಂಬೇಡ್ಕರ್ ಹಾಗೂ ಕುವೆಂಪು ಅವರನ್ನು ಅವಮಾನಿಸುವ ಬರಹಗಳನ್ನು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು ಎಂಬ ಆರೋಪ ಇದೆ.

ಇದನ್ನೂ ಓದಿ: PM Cares: ಮಕ್ಕಳಿಗಾಗಿ ಪಿಎಂ ಕೇರ್ಸ್‌ನಲ್ಲಿ ಹೊಸ ಯೋಜನೆಗಳು; ಇದರಿಂದ ಯಾರಿಗೆಲ್ಲ ಲಾಭ ಅಂತ ತಿಳಿದುಕೊಳ್ಳಿ

ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದರಾ ರೋಹಿತ್?

"ಅಂಬೇಡ್ಕರ್ ಜಗತ್ತಿನ ಅತಿದೊಡ್ಡ ಜಲತಂತ್ರಜ್ಞರು, ವಾಯು ತಂತ್ರಜ್ಞರು, ಕಂಪ್ಯೂಟರ್ ತಜ್ಞರು, ಪ್ರಾಧ್ಯಾಪಕರು, ವಕೀಲರು, ರಾಕೇಟ್ ತಂತ್ರಜ್ಞರು ಆಗಿದ್ದರು. ಪ್ರಪಂಚದ ಚಕ್ರ ಮತ್ತು ಬೆಂಕಿಯ ಉಪಯೋಗವನ್ನು ಕಂಡು ಹಿಡಿದವರು ಇವರೇ, ಜೈಭೀಮ್'' ಎಂದು ವ್ಯಂಗ್ಯವಾಗಿ ಅಂಬೇಡ್ಕರ್ ಬಗ್ಗೆ ರೋಹಿತ್ ಚಕ್ರತೀರ್ಥ ಮಾಡಿದ್ದರು ಎನ್ನಲಾದ ಸ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಟಿಪ್ಪುವನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪ

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಪಠ್ಯ ಪುಸ್ತಕಗಳ ಪರಿಷ್ಕರಣೆ ಮಾಡುವ ವೇಳೆ ಟಿಪ್ಪು ಸುಲ್ತಾನ್‌ ಕುರಿತಾಗಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಅನ್ನೋದು ಮೊದಲ ಆರೋಪ. ಈ ಮೂಲಕ ರಾಜ್ಯದ ಶ್ರೇಷ್ಠ ರಾಜನನ್ನು ಕೀಳಾಗಿ ಬಿಂಬಿಸಲಾಗುತ್ತದೆ ಅಂತ ಆರೋಪಿಸಲಾಗಿದೆ.

ಆರ್‌ಎಸ್ಎಸ್ ತತ್ವ ತುಂಬುವ ಹುನ್ನಾರ

ಇನ್ನು ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್ ಅವರ ಕುರಿತಾದ ಲೇಖನ ಸೇರ್ಪಡೆ ಆರ್‌ಎಸ್‌ಎಸ್‌ ತತ್ವಗಳನ್ನು ಮಕ್ಕಳಲ್ಲಿ ಬಿತ್ತುವ ಹುನ್ನಾರ ಅಂತ ಆರೋಪಿಸಲಾಗಿದೆ. ವಾಗ್ಮಿ, ಲೇಖಖ ಚಕ್ರವರ್ತಿ ಸೂಲಿಬೆಲೆ ಬರೆದಿರುವ ‘ತಾಯಿ ಭಾರತಿಯ ಅಮರ ಪುತ್ರರು’ ಎಂಬ ಅಧ್ಯಾಯವನ್ನು ಸೇರ್ಪಡೆ ಮಾಡಿರೋದು ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಖ್ಯಾತ ನಾಮರ ಪಾಠಗಳಿಗೆ ಪುಸ್ತಕದಿಂದ ಕೊಕ್

ಇನ್ನು ಖ್ಯಾತ ಸಾಹಿತಿಗಳಾದ ಸಾ.ರಾ. ಅಬೂಬಕರ್ ಹಾಗೂ ಎ.ಎನ್. ಮೂರ್ತಿ ರಾವ್ ಅವರ ಕೃತಿಗಳನ್ನು ಪಠ್ಯ ಪುಸ್ತಕದಿಂದ ಕೈ ಬಿಟ್ಟಿದ್ದೇಕೆ ಎಂಬ ಆಕ್ಷೇಪವೂ ಇದೆ. ಎಲ್ಲಕ್ಕಿಂತಾ ಹೆಚ್ಚಾಗಿ ಕುವೆಂಪು ವಿರಚಿತ ನಾಡಗೀತೆಯನ್ನು ರೋಹಿತ್ ಚಕ್ರತೀರ್ಥ ಅವರು ಈ ಹಿಂದೆ ವಿರೂಪಗೊಳಿಸಿದ್ದರು ಎಂಬ ಆರೋಪ ವಿಚಾರವಂತೂ ವಿವಾದ ಭುಗಿಲೇಳುವಂತೆ ಮಾಡಿದೆ. ಇದು ಜ್ಞಾನಪೀಠ ಪುರಸ್ಕೃತ, ರಾಷ್ಟ್ರಕವಿಗೆ ಮಾಡಿದ ಅಪಮಾನ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.

ಬಸವಣ್ಣನವರಿಗೂ ಅಪಮಾನವಾಗಿದೆ ಎಂಬ ಆರೋಪ

9ನೇ ತರಗತಿಯ 'ಸಮಾಜ ವಿಜ್ಞಾನ' ಪಠ್ಯಪುಸ್ತಕ (ಪರಿಷ್ಕೃತ-2022) ಭಾಗ-1ರಲ್ಲಿ ಬಸವಣ್ಣನ ಕುರಿತು ಒಂದು ಪಾಠವಿದೆ. ಕಳೆದ ವರ್ಷವೂ ಈ ಪಾಠವಿತ್ತು. ಆದರೆ, ಅದರಲ್ಲಿನ ಪ್ರಮುಖ ಸಾಲುಗಳನ್ನು ತೆಗೆದು ರೋಹಿತ್ ಚಕ್ರತೀರ್ಥ ಸಮಿತಿ ತಮಗೆ ಬೇಕಾದವುಗಳನ್ನು ಸೇರಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಬಸವಣ್ಣನವರ ಕುರಿತಾದ ಪಠ್ಯದಲ್ಲಿ ಲೋಪ ಎಸಗಲಾಗಿದೆ ಎಂದೂ ಆರೋಪಿಸಲಾಗಿದೆ. ಇದೂ ಕೂಡಾ ದೊಡ್ಡ ವಿವಾದದ ರೂಪ ಪಡೆದಿದೆ.

“ಬಸವಣ್ಣನವರ ಕುರಿತು ತಪ್ಪು ಮಾಹಿತಿ”

ಪಠ್ಯಪುಸ್ತಕದಲ್ಲಿ ಉಪನಯನದ ಬಳಿಕ ಬಸವಣ್ಣನವರು ಕೂಡಲಸಂಗಮಕ್ಕೆ ನಡೆದರು ಎಂದು ಬರೆದಿದ್ದು ತಪ್ಪು. ಬಸವಣ್ಣನವರು ತಮ್ಮ ಸಹೋದರಿಗೆ ಇಲ್ಲದ ಉಪನಯನ ತಮಗೇಕೆ ಎಂದು ಧಿಕ್ಕರಿಸಿ ಕೂಡಲಸಂಗಮಕ್ಕೆ ಹೋಗಿದ್ದರು. ಶೈವ-ಗುರುಗಳ ಸಾನ್ನಿಧ್ಯದಲ್ಲಿ ಲಿಂಗ ದೀಕ್ಷೆ ಪಡೆದರು ಎಂದು ಬರೆದಿರುವುದು ತಪ್ಪು ಅಂತ ಹೇಳಲಾಗಿದೆ.

ಮಹಾತ್ಮರ ಪಾಠಗಳನ್ನು ಕೈಬಿಡಲಾಗಿದೆಯೆ?

ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್, ಖ್ಯಾತ ಸಮಾಜ ಸುಧಾರಕ ನಾರಾಯಣಗುರುಗಳು ಮುಂತಾದವರ ಕುರಿತಾದ ಪಠ್ಯ ಕೈ ಬಿಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ದೇವನೂರು ಮಹಾದೇವ ವಿರೋಧ

ಸಾಹಿತಿ ದೇವನೂರು ಮಹಾದೇವರವರು ತಮ್ಮ ಪಠ್ಯ ಸೇರ್ಪಡೆಗೆ ಅನುಮತಿ ನಿರಾಕರಿಸಿದ್ದು, ತಮ್ಮ ಪಾಠ ಕೈಬಿಡಬೇಕೆಂದು ಶಿಕ್ಷಣ ಸಚಿವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಹಿಂದೆ ಪಠ್ಯಗಳಲ್ಲಿದ್ದ ಎಲ್.ಬಸವರಾಜು, ಎ.ಎನ್. ಮೂರ್ತಿರಾವ್, ಪಿ. ಲಂಕೇಶ್, ಸಾರಾ ಅಬೂಬಕರ್ ಮುಂತಾದವರ ಕತೆ, ಲೇಖನಗಳನ್ನು ಕೈ ಬಿಡಲಾಗಿದೆ ಎಂದರೆ, ಯಾರು ಕೈ ಬಿಟ್ಟಿದ್ದಾರೋ ಅವರಿಗೆ ಕನ್ನಡ ನಾಡು-ನುಡಿ-ಸಂಸ್ಕೃತಿ ಬಗ್ಗೆ ಏನೇನೂ ತಿಳಿದಿಲ್ಲ ಎಂತಲೇ ಅರ್ಥ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಪಾಠ ಸೇರಿಸದಂತೆ ಹಲವು ಸಾಹಿತಿಗಳ ಆಗ್ರಹ

ಇನ್ನು ಹೊಸ ಪಠ್ಯ ಪುಸ್ತಕದಲ್ಲಿ ತಮ್ಮ ಪಾಠಗಳನ್ನು ಸೇರಿಸಬಾರದು ಅಂತ ಹಲವು ಸಾಹಿತಿಗಳು ಸರ್ಕಾರಕ್ಕೆ ಪತ್ರ ಬರೆದು, ಆಗ್ರಹಿಸಿದ್ದಾರೆ. ಬೊಳುವಾರು ಮಹಮದ್ ಕುಂಞಿ, ಚಂದ್ರಶೇಖರ್ ತಾಳ್ಯ, ರೂಪ ಹಾಸನ್ ಮುಂತಾದ ಲೇಖಕರು ತಮ್ಮ ಪಾಠವನ್ನು ಪುಸ್ತಕದಲ್ಲಿ ಬಳಸದಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ರೋಹಿತ್ ಚಕ್ರತೀರ್ಥ ವಿರುದ್ಧ ಪ್ರತಿಭಟನೆ

ಇನ್ನು ರೋಹಿತ್ ಚಕ್ರತೀರ್ಥ ಅವರನ್ನು ಸಮಿತಿಯಿಂದ ವಜಾ ಮಾಡಬೇಕು, ಅವರನ್ನು ಗಡಿಪಾರು ಮಾಡಬೇಕು ಅಂತ ಹಲವು ಸಂಘಟನೆಗಳು ಆಗ್ರಹಿಸಿವೆ. ಅಲ್ಲದೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಯ್ತು.

ರೋಹಿತ್ ಚಕ್ರತೀರ್ಥ ಹೇಳುವುದೇನು?

ವಿರೋಧಿಗಳ ಆರೋಪವನ್ನು ರೋಹಿತ್ ಚಕ್ರತೀರ್ಥ ಅಲ್ಲಗಳೆದಿದ್ದಾರೆ. “ಹಲವರ ಆರೋಪದಂತೆ ಕುವೆಂಪು ಅವರ ಬಗ್ಗೆ ಲೇಖಕನಾಗಿ ನನಗೆ ಗೌರವವಿಲ್ಲದಿದ್ದರೆ ಅವರ ಕೃತಿಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸುತ್ತಿದ್ದೆನಾ? ಅಲ್ಲದೇ ಫೇಸ್‌ಬುಕ್‌  ಪೋಸ್ಟ್‌ ನನಗೆ ಸಿಕ್ಕಿರುವ ಫಾರ್ವರ್ಡ್‌ ಎಂದು ನಾನು ಹಲವು ಬಾರಿ ಪುನರುಚ್ಚರಿಸಿದೆ  ಎಂದು ಚಕ್ರತೀರ್ಥ ಹೇಳಿದ್ದಾರೆ.

ಇದನ್ನೂ ಓದಿ: Explained: ವಿದ್ಯಾರ್ಥಿಗಳೇ, ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕೆಂದು ಹೇಗೆ ನಿರ್ಧರಿಸಬೇಕು?

ಶಿಕ್ಷಣ ಸಚಿವ ನಾಗೇಶ್ ಹೇಳುವುದೇನು?

ಶಾಲಾ ಪಠ್ಯದಲ್ಲಿ ಸಿದ್ಧಾಂತವನ್ನು ತುಂಬಿಸುವುದು ತಪ್ಪು ಅನ್ನೋದೇ ನಮ್ಮ ನಿಲುವು ಅಂತ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಯಾವುದನ್ನು ಮಕ್ಕಳು ಓದುತ್ತಾರೋ ಅದೇ ಪಠ್ಯದಲ್ಲಿ ಇರಬೇಕೇ ಹೊರತು, ಯಾವುದೇ ಸಿದ್ದಾಂತವನ್ನು ಪಠ್ಯದಲ್ಲಿ ತುಂಬಿಸುವುದು ತಪ್ಪು ಎಂದರು. ಪಠ್ಯ ಪರಿಷ್ಕರಣೆ ಮಾಡಿದ್ದು ಮಕ್ಕಳ ಮೇಲೆ ಸಿದ್ಧಾಂತ ಹೇರಲು ಅಲ್ಲ ಎಂದ ಬಿ. ಸಿ. ನಾಗೇಶ್, ಹೆಡ್ಗೆವಾರ್ ಭಾಷಣ ಸಿದ್ಧಾಂತವಲ್ಲ. ಒಂದು ವೇಳೆ ಅದು ಸಿದ್ದಾಂತವಾದರೆ, ನೆಹರು ಬರೆದಿದ್ದ ಪತ್ರವನ್ನು ಪಠ್ಯದಲ್ಲಿ ಸೇರಿಸಿದ್ದು ಸಿದ್ದಾಂತವಲ್ಲವೇ ಎಂದು ತಿರುಗೇಟು ಕೊಟ್ಟಿದ್ದಾರೆ.

ರಾಜ್ಯ ಸರ್ಕಾರದಿಂದ ಸ್ಪಷ್ಟನೆ

ಇನ್ನು ವಿವಾದದ ಕುರಿತಂತೆ ರಾಜ್ಯ ಸರ್ಕಾರ 36 ಪುಟಗಳ ಸ್ಪಷ್ಟನೆ ನೀಡಿದೆ. ಶಿಕ್ಷಣ ಇಲಾಖೆಯ ಸಾಧನೆಗಳನ್ನು ಸಹಿಸದೆ ಪಠ್ಯಪುಸ್ತಕ ಪರಿಷ್ಕರಣೆಯನ್ನು ರಾಜಕೀಯಗೊಳಿಸಲಾಗುತ್ತಿದೆ, ಪಠ್ಯ ಪುಸ್ತಕ ಪರಿಕ್ಷಕರಣೆ ಸಮರ್ಪಕವಾಗಿ ನಡೆದಿದೆ. ರೋಹಿತ್‌ ಚಕ್ರತೀರ್ಥ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ರಾಜ್ಯ ಸರ್ಕಾರ ಟಿಪ್ಪಣಿ ಬಿಡುಗಡೆ ಮಾಡುವ ಮೂಲಕ ಸಮರ್ಥಿಸಿಕೊಂಡಿದೆ.
Published by:Annappa Achari
First published: